ಶಾರ್ಜಾ: ಮಹಾಬಲಮೂರ್ತಿ ಕೊಡ್ಲೆಕೆರೆಯವರೊಂದಿಗೆ ಒಂದು ಆತ್ಮೀಯ ಘಳಿಗೆ

ಶಾರ್ಜಾ: ಮಹಾಬಲಮೂರ್ತಿ ಕೊಡ್ಲೆಕೆರೆಯವರೊಂದಿಗೆ ಒಂದು ಆತ್ಮೀಯ ಘಳಿಗೆ

 

 

ವಿಶೇಷ ಸಂದರ್ಶನ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ. ೧೬-೧೧-೨೦೦೯

ಶಾರ್ಜಾ, ನವೆಂಬರ್ ೧೬:  ಕಳೆದ ಶುಕ್ರವಾರ ಶಾರ್ಜಾ ಕರ್ನಾಟಕ ಸಂಘ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಗೋಪೀನಾಥರಾವ್ ರವರ ಪ್ರಥಮ ಕಥಾ ಸಂಕಲನ ’ಸಾರ್ವಭೌಮ’ ಸಹಾ ಬಿಡುಗಡೆಗೊಂಡಿತು. ಈ ಕಥಾಸಂಕಲನಕ್ಕೆ ಮುನ್ನುಡಿ ಬರೆದ ಕನ್ನಡ ಲೇಖಕರಾದ ಶ್ರೀ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಂದು ವಾರದ ಅವಧಿಯಲ್ಲಿ ಯು.ಎ.ಇ.ಯಲ್ಲಿ ಉಪಸ್ಥಿತರಿರುವ ಅವರನ್ನು ಬಳಿಕ ಭೇಟಿಯಾಗುವ ಹಾಗೂ ಕೆಲವು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವ ಸದವಕಾಶ ನಿನ್ನೆ ಒದಗಿಬಂದಿತ್ತು.

 

ಕನ್ನಡ ಕಥೆಗಳಿಗಾಗಿಯೇ ಮೀಸಲಾಗಿರುವ ’ಒಂದಲ್ಲಾ ಒಂದೂರಿನಲ್ಲಿ’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆಯವರು ಕನ್ನಡದ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿ ಅನುಭವವುಳ್ಳವರು. ವೃತ್ತಿಯಿಂದ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಇವರು ಈಗ ಸ್ವಯಂ ನಿವೃತ್ತಿ ಪಡೆದುಕೊಂಡು ತಮ್ಮ ಎಲ್ಲಾ ಸಮಯವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿರಿಸಿದ್ದಾರೆ.  ಅವರೊಂದಿಗೆ ನಡೆಸಿದ ಸಂವಾದದ ಮುಖ್ಯಾಂಶಗಳು ಈ ಕೆಳಗಿನಂತಿವೆ:

 

ಅರ್ಶದ್: ಮಾನ್ಯ ಮಹಾಬಲಮೂರ್ತಿಯವರಿಗೆ ನಮಸ್ಕಾರಗಳು. ತಮಗೆ ಯು.ಎ.ಇ.ಯಲ್ಲಿರುವ ಸಕಲ ಕನ್ನಡಿಗರ ಪರವಾಗಿ ಸ್ವಾಗತ.

ಮಹಾಬಲಮೂರ್ತಿ: ನಮಸ್ಕಾರ, ಧನ್ಯವಾದಗಳು.

 

ಅ: ತಮ್ಮ ಈ ಯು.ಎ.ಇ. ಪ್ರಯಾಣ ಹೊಸ ಅನುಭವಗಳನ್ನು ತೆರೆದಿಟ್ಟಿತೇ?

ಮ: ಪ್ರತಿಕ್ಷಣವೂ ಪ್ರಯಾಣದ ಸಂದರ್ಭವೇ ಆಗಿದೆ.  ಹಲವಾರು ವ್ಯಕ್ತಿಗಳು, ವಿಧವಿವಿಧ ಘಟನೆಗಳು, ವ್ಯಕ್ತಿಗಳೆಲ್ಲಾ ಸಂದರ್ಭದ ನಾಯಕನೋ, ನಾಯಕಿಯೋ, ಖಳನಾಯಕನೋ, ಖಳನಾಯಕಿಯೋ, ಮೂಕ ಪ್ರೇಕ್ಷಕರೋ, ಪ್ರತಿಭಟಿಸುವ ಹೋರಾಟಗಾರರೋ, ಇಷ್ಟೇ ಇದು ಎಂದು ಸೋಲನ್ನೊಪ್ಪಿಕೊಳ್ಳುವ ಅಸಹಾಯಕರೋ ಅಥವಾ ಒದಗಿಬಂದ ಯಶಸ್ಸಿನ ಕಾರಣಕ್ಕಾಗಿನ ಸಂತೋಷಚಿತ್ತರೋ ಆಗಿ ನಮ್ಮನ್ನು ಸಂಧಿಸುತ್ತಲೇ ಇರುತ್ತಾರೆ.  ಇನ್ನೊಬ್ಬನಿಗೆ ನಾನೂ ಈ ಹಲವಾರು ವ್ಯಕ್ತಿಗಳ ನಡುವೆ ಒಬ್ಬನಾಗಿರುತ್ತೇನೆ. ಇದು ನನ್ನ ಜೀವನ ದೃಷ್ಟಿ.  ಜೀವನವನ್ನು ನೋಡುವ, ಸ್ವೀಕರಿಸುವ ಕ್ರಮ.  ಆದರೆ ಯು.ಎ.ಇ.ಗೆ ನಾನೀಗ ಈ ನೆಲವನ್ನು ಸಂದರ್ಶಿಸಲೆಂದೇ ಸಮಯ ಮೀಸಲಿರಿಸಿ ಬಂದಿದ್ದರಿಂದ ಇದುವರೆಗಿನ ಸಮಯ ಒಳ್ಳೆಯ ಅನುಭವಗಳನ್ನೇ ಕೊಟ್ಟಿದೆ.  ಹಿಂದೊಮ್ಮೆ ಯು.ಎ.ಇ.ಗೆ ಭೇಟಿ ನೀಡಿದ್ದರೂ ಇಂಗ್ಲೆಂಡ್, ಅಮೇರಿಕಾ ದೇಶಗಳಿಗೆ ಪ್ರಯಾಣಿಸಬೇಕಾದಾಗ ನಡುವಿನ ಒಂದು ನಿಲ್ದಾಣವಾಗಿ ಮಾತ್ರ ನನ್ನ ಬೊಗಸೆಗೆ ಜಿಗಿದಿತ್ತು.  ಅದರಲ್ಲೂ ಶಾರ್ಜಾ ಬಗೆಗೆ ಅತೀವ ಕುತೂಹಲವಿತ್ತು. ಏಕೆಂದರೆ ಸುಮಾರು ಎರೆಡೂವರೆ ದಶಕಗಳ ಹಿಂದೆ ಪಾಕಿಸ್ತಾನದ ಮಿಯಾಂದಾದ್ ಅಂತಿಮ ಎಸೆತಕ್ಕೆ ಹೊಡೆದ ಸಿಕ್ಸರ್ ಏಟಿಗೆ ಭಾರತ ಸ್ವೀಕರಿಸಿದ್ದ ಸೋಲು ಶಾರ್ಜಾ ಕ್ರಿಕೆಟ್ ಅಂಗಣದಲ್ಲಿತ್ತು.  ಅಲ್ಲದೇ ದುಬೈ ಹಾಗೂ ಅಬುಧಾಬಿ ನಗರಗಳು ಜಗತ್ತಿಗೇ ಪೂರ್ತಿಯಾಗಿ ಕಟ್ಟಿಕೊಟ್ಟ ಕನಕ (ಚಿನ್ನದ) ಕೋಶ!  ಓಹ್ ಇದು ಅದ್ಭುತ ಎಂದು ಇದ್ದ ಭಾವನೆ - ಇವೆಲ್ಲಾ ಆಗ ಈ ದೇಶವನ್ನು ಹಾದುಹೋಗುವಾಗ ಇದ್ದ ನನ್ನೊಳಗಿನ ಸಂವೇದನೆಗಳು.  ನಿಜಕ್ಕೂ ಈಗ ಸುಮಾರಾಗಿ ತಿರುಗಾಡಿದ ಬಳಿಕ ಈ ದೇಶಗಳ ಒಕ್ಕೂಟದ ಬಗೆಗೆ, ಆಡಳಿತದ ಬಗೆಗೆ ಗೌರವ ಹುಟ್ಟುತ್ತದೆ.  ಜನರು ಸುಖವಾಗಿರಬೇಕೆಂಬ ನಿಟ್ಟಿನಲ್ಲಿ ಆಡಳಿತದಲ್ಲಿರುವ ವ್ಯಕ್ತಿಗಳು ಕಾರ್ಯಪ್ರವೃತ್ತರಾಗುವುದಿದೆಯೆಲ್ಲಾ....? ಅದು ದೊಡ್ಡದು.  ಹೀಗಾಗಿ ಈ ಪ್ರವಾಸ ಒಂದು ನೆಲೆಯಲ್ಲಿ ಪೂರ್ತಿ ಒಳ್ಳೆಯ ಅನುಭವ.  ಇನ್ನೊಂದು ನೆಲೆಯಲ್ಲಿ ನನ್ನ ದೇಶ ಈ ದಾರಿಯಲ್ಲಿ ಬಾರದಿರಲು ಇರುವ ಬಿಕ್ಕಟ್ಟುಗಳ ಬಗೆಗಿನ ದುಃಖ. ಬಿಡಿ, ಆ ಸುಂದರ ದಿನಗಳು ಬರಲೂಬಹುದು.

 

ಅ: ಮುಖ್ಯವಾಗಿ ತಮ್ಮ ಒಲವುಗಳು, ನಿಮ್ಮ ಕಾರ್ಯಕ್ಷೇತ್ರಗಳು ಹೇಗೆಲ್ಲಾ ವಿಸ್ತರಿಸಿಕೊಂಡಿವೆ?

ಮ: ನಾನೂ ನಿಮ್ಮಂತೆ ಮುಖ್ಯವಾಗಿ ಬರಹಗಾರ. ಪ್ರೊ. ಗೋಪಾಲಕೃಷ್ಣ ಅಡಿಗ, ಲಂಕೇಶ್, ಪ್ರಜಾವಾಣಿಯ ಆಗಿನ ಮುಖ್ಯಸಂಪಾದಕರಾಗಿದ್ದ ವೈ‌ಎನ್ಕೆ ಮೊದಲಾದವರು ನನ್ನ ಬರಹಗಳನ್ನು ಮೆಚ್ಚಿಕೊಂಡಿದ್ದರಿಂದ ಧೈರ್ಯ ಬಂತು.  ಮುಖ್ಯವಾಗಿ ವೈ‌ಎನ್ಕೆ, ಲಂಕೇಶ್ ರವರು ನನ್ನನ್ನು ಓರ್ವ ಕಥೆಗಾರ ಎಂದು ಪರಿಗಣಿಸಿ ಹುರಿದುಂಬಿಸಿದರು.  ಅಡಿಗರು ಅಪರೂಪದ, ಕಿವಿಗೆ ಹಿತವೆನಿಸುವಂತಹ ಭಾಷೆಯನ್ನು ಬಳಸುವ ಕವಿ ಎಂದು ಕರೆದರು. ಇವೆಲ್ಲವೂ ನನ್ನ ಪಾಲಿನ ಸೌಭಾಗ್ಯ.  ಕವಿತೆ, ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಪತ್ರಿಕೆಗಳಲ್ಲಿ ಅಂಕಣ, ರೇಡಿಯೋ ನಾಟಕ, ಮೆಗಾ ಧಾರಾವಾಹಿಗಳ ಬಗ್ಗೆ ಟೀವಿಯಲ್ಲಿ ಕಥಾ ವಿಸ್ತರಣೆ, ಸಂಭಾಷಣೆ, ಧಾರಾವಾಹಿಗಳಲ್ಲಿ ಅಭಿನಯ, ಸಿನೇಮಾಗಳಿಗೆ ಹಾಡು, ನನ್ನದೇ ಕಥೆಗಳನ್ನು ಆಧರಿಸಿದ ಸಿನೇಮಾಗಳಿಗೆ ಸಂಭಾಷಣೆ ಇತ್ಯಾದಿ, ಇತ್ಯಾದಿ ನನಗೆ ಸಾಧ್ಯವಾಯ್ತು.  ನಾನೊಬ್ಬ ಹವ್ಯಸಿ ಯಕ್ಷಗಾನ ಕಲಾವಿದ.  ನಾಟಕ ಕಲಾವಿದನಾಗಿ, ನಾಗತಿಹಳ್ಳಿ ಚಂದ್ರಶೇಖರ್, ಕವಿತಾ ಲಂಕೇಶರ ಸಿನೆಮಾ, ಟೀವಿ ಧಾರಾವಾಹಿಯಲ್ಲೂ ಅಭಿನಯಿಸಿದ್ದೇನೆ.  ಟೀವಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ.  ನನ್ನ ಕಥೆಗಳಿಗೆ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕ್ಯಾಡೆಮಿ, ಆರ್ಯಭಟ ಪುರಸ್ಕಾರ, ಮುದ್ದಣ ಕಾವ್ಯ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ, ಉತ್ಥಾನ, ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳ ಕಥಾ ಸ್ಪರ್ಧೆ ಪುರಸ್ಕಾರ ಮೊದಲಾದವು ಸಿಕ್ಕಿವೆ.  ಸುಮಾರು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಐವತ್ತು ಪ್ರಸಿದ್ಧ ಯಕ್ಷಗಾನ ಕಲಾವಿದರ ಸಲುವಾಗಿ ಚಂದನ ಟೀವಿ ವಾಹಿನಿಗೆ ಸಾಕ್ಷ್ಯಚಿತ್ರವನ್ನೂ ತಯಾರಿಸಿಕೊಟ್ಟಿದ್ದೇನೆ.  ಅವು ಪ್ರದರ್ಶನಗೊಂಡ ಬಳಿಕ ಹಲವು ಆಸಕ್ತರ ಮೆಚ್ಚುಗೆ ಪಡೆದಿವೆ.  ಸುಮಾರು ಮೂವತ್ತೈದು ಕನ್ನಡ ಸಾಂಸ್ಕೃತಿಕ ಜಗತ್ತಿನ ಹಿರಿಯರನ್ನು ಪರಿಚಯಿಸಿದ, ಸಂದರ್ಶಿಸಿದರ್ ’ಸಂಸ್ಕೃತಿ ಸಂವಹನ’ ಎಂಬ ಕಾರ್ಯಕ್ರಮವನ್ನು ಸಹಾ ಚಂದನವಾಹಿನಿಗೆ ನಡೆಸಿಕೊಟ್ಟಿದ್ದೇನೆ.  ಹೀಗೆ ಯಕ್ಷಗಾನದ ಮೂಲಕ ಕರಾವಳಿಯವನು ಎಂದು ಗುರುತಿಸಿಕೊಂಡ, ಇತರ ಸಾಂಸ್ಕೃತಿಕ ವಲಯಗಳಲ್ಲಿನ ಕಾರಣ ಇಡೀ ಕರ್ನಾಟಕಕ್ಕೆ ಸಂವೇದಿಸಿಕೊಂಡ ಕಿಂಚಿತ್ ಸಮಾಧಾನ ನನ್ನ ಪಾಲಿಗೆ ಒದಗಿಬಂತು.  ಹಲವು ಅವಕಾಶಗಳು ತಾವಾಗಿಯೇ ಹುಡುಕೊಂಡು ಬಂದುದು ನನ್ನ ಅದೃಷ್ಟ.  ಹಲವರ ಮೆಚ್ಚುಗೆಯನ್ನು ಪಡೆದಿದ್ದರಿಂದ ಹಾಂ.... ಪರವಾಗಿಲ್ಲ ಎಂಬ ಒಂದು ಸಂತೋಷವೂ ಇದೆ.  ಯಕ್ಷಗಾನ ಕಲಾವಿದನಾಗಿ ಇಂಗ್ಲೆಂಡ್, ಅಮೇರಿಕಾದಲ್ಲಿ ಸುಮಾರು ಹದಿನೆಂಟು ಸ್ಥಳಗಳಲ್ಲಿ ಪ್ರದರ್ಶನ ನೀಡುವ ಭಾಗ್ಯವೂ ನನ್ನದಾಯಿತು.

 

ಅ: ಜ್ಯೋತಿಷ್ಯದ ಬಗೆಗೂ ತಮಗೆ ಒಲವು ಇದೆ ಎಂದು ತಿಳಿದುಬಂದಿತು. ಅತೀವ ಶ್ರದ್ಧೆ, ಪರಿಶ್ರಮ ಬೇಡುವ ಈ ವಿದ್ಯೆಯನ್ನು ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆ ಹೇಗೆ ನಿಭಾಯಿಸುತ್ತೀರಿ?

ಮ: ಹೌದು, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಜ್ಯೋತಿಷ್ಯದ ಕುರಿತು ಅಂಕಣ ಬರೆಯುತ್ತೇನೆ. ಹಲವು ರಾಜಕಾರಣಿಗಳು ಸಾಂಸ್ಕೃತಿಕ ಜಗತ್ತಿನ ವ್ಯಕ್ತಿಗಳು, ಉದ್ಯಮಿಗಳು ಜಾತಕ ವಿಶ್ಲೇಷಣೆಗಾಗಿ ನನ್ನನ್ನು ಭೇಟಿಯಾಗುತ್ತಾರೆ. ಎಷ್ಟೇ ವ್ಯಸ್ತರಾಗಿದ್ದರೂ ನಿಮಗೊಂದು ವಿಷಯದ ಮೇಲೆ ಒಲವು ಇದ್ದರೆ ಅದಕ್ಕಾಗಿ ದಿನದಲ್ಲಿ ಎಲ್ಲಿಯಾದರೂ ಒಂದು ಸಮಯ ಸಿಕ್ಕೇ ಸಿಗುತ್ತದೆ. 

ಅ: ಸಾಹಿತ್ಯ, ಸಿನೇಮಾ, ನಾಟಕ, ಟೀವಿ, ... ಸಾಂಸ್ಕೃತಿಕವಾಗಿ ಒಂದು ಆಕೃತಿಯನ್ನು ಕಟ್ಟಿಕೊಡಬಲ್ಲುದೇ?

ಮ: ನಿಜ, ಸಂಸ್ಕೃತಿಯ ಅಂಗಗಳಾದ ಸಾಹಿತ್ಯ, ಕಲೆ, ಸಂಗೀತ, ನಾಟಕ, ಸಿನೇಮಾ ಹಾಗೂ ಟೀವಿ ಆಕೃತಿಯನ್ನು ಕಟ್ಟಿಕೊಡುತ್ತದೆ.  ಸಧ್ಯ ನಾನೊಂದು ಕಾದಂಬರಿಯನ್ನು ಬರೆಯುತ್ತಿದ್ದೇನೆ.  ಅದನ್ನು ನನ್ನ ಹಿರಿಯ ಮಿತ್ರರಾದ, ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಹಿರಿಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿರುವ ಶ್ರೀ ಸಿ. ಸೀತಾರಾಂ ಅವರೊಂದಿಗೆ ಆಂಗ್ಲಭಾಷೆಗೂ ಅನುವಾದಿಸುವ ಕನಸನ್ನು ಇಟ್ಟುಕೊಂಡಿದ್ದೇನೆ.  ಇದು ಮರುಭೂಮಿಯ ಒಳ ವಲಯಗಳ ನಿರ್ವಾತ, ಫಲವಂತಿಕೆ ಹೀಗೆ ಎರಡನ್ನೂ ಸಂಯೋಜಿಸಿಕೊಂಡು ಬರೆಯಲು ತೊಡಗಿದಂತಹ ಕಥಾಹಂದರವುಳ್ಳ ಕಾದಂಬರಿ.  ಪೌಲ್ ಕೊಹ್ಲೆ ಎಂಬ ಕಾದಂಬರಿಕಾರನ ’ಅಲ್ ಕೆಮಿಸ್ಟ್’ ಎಂಬ ಕಾದಂಬರಿ ಓದಿದ ಬಳಿಕ ಈ ಕಾದಂಬರಿಯ ಕಥಾವಸ್ತುವೊಂದು ಮೊಳೆತು ರೆಕ್ಕೆಪುಕ್ಕ ಬೆಳೆತು ಹೆಚ್ಚಿನ ಮಿಸುಕಾಟ, ಜೀವಂತಿಕೆ ಪಡೆಯಿತು. ನನ್ನ ದೇಶ, ಕನ್ನಡ ಭಾಷೆ, ನಮ್ಮ ಯಕ್ಷಗಾನ, ನಮ್ಮ ಪುರಾಣ, ಸಂಸ್ಕೃತಿ ಇತ್ಯಾದಿಗಳನ್ನೆಲ್ಲಾ ಒಳಗೊಂಡ ಕಥಾ ಕೋಶ ಈ ಕಾದಂಬರಿಯದು.  ಈ ಕಾದಂಬರಿಗೂ ಪ್ರಾಯೋಜಕರನ್ನು ಹುಡುಕುತ್ತಿದ್ದೇನೆ.  ಹೊರಗಿನ ಕೆಲಸ, ಕಾದಂಬರಿ ಮುಂದುವರಿಕೆ ಎರಡನ್ನೂ ಒಗ್ಗೂಡಿಸಿಕೊಂಡು ಹೋಗುವುದು ಕಷ್ಟಕರ.  ಪ್ರಾಯೋಜಕರಿದ್ದರೆ ಏಕೆ ಜಗತ್ತಿನ ಸಾಹಿತ್ಯ ವಲಯದ ದಿಗ್ಗಜರೊಡನೆ ಸ್ಪರ್ಧೆಗಿಳಿಯಬಾರದು ಎಂದು ನನ್ನ ತರ್ಕ, ನಾನೇ ನಿರ್ಮಿಸಿಕೊಂಡ ಒಂದು ಸವಾಲು. ಬಂಜರು ಭೂಮಿಯ ಒಳಪದರುಗಳನ್ನು ಧಿಕ್ಕರಿಸಿ ಫಲವಂತಿಕೆಯಿಂದ ಹೊರಜಿಗಿದ ದುಬೈ, ಅಬುಧಾಬಿ, ಶಾರ್ಜಾ ಸಂಸ್ಥಾನಗಳು ನನ್ನನ್ನು ಹುರಿದುಂಬಿಸುತ್ತಿವೆ.  ನೀನು ಬರೆಯಲೇಬೇಕು ಎಂದು ಹೇಳುತ್ತಿರುವ ಈ ದೇಶಗಳು ಒದಗಿಸುತ್ತಿರುವ ಪ್ರೇರಣೆ ನನಗೆ ಬಲ ತಂದಿದೆ.  ಈ ದೇಶಗಳಿಗೆ ಪ್ರಮುಖವಾಗಿ ಅನುಭವಕ್ಕಾಗಿ ಬಂದೆ.

 

ಇಲ್ಲಿ ಬರುವ ಮುನ್ನ ಈ ಸಂಸ್ಥಾನಗಳಲ್ಲಿದ್ದುಕೊಂಡು ಕನ್ನಡದಲ್ಲಿ ಬರೆಯುತ್ತಿರುವ ಗೋಪೀನಾಥ ರಾವ್, ಪ್ರಕಾಶ್ ರಾವ್ ಪಯ್ಯಾರ್, ನೀವು, ಇರ್ಶಾದ್ ಮೂಡಬಿದ್ರಿ ಎಲ್ಲರೂ ನನಗೆ ಮುಖ್ಯರಾಗಿ ಕಾಣುತ್ತಿದ್ದೀರಿ.  ನಾನು ಇಲ್ಲಿ ಬಂದಿದ್ದಾಗಲೇ ಗೋಪಿನಾಥರಾವ್ ರವರ ಪ್ರಥಮ ಕಥಾಸಂಕಲನ ಬಿಡುಗಡೆಗೊಂಡಿದ್ದು ಸಂತೋಷ ತಂದಿದೆ. ಅವರ ಕಥಾಸಂಕಲನದ ಎಲ್ಲಾ ಕಥಗಳನ್ನು ಓದಿದ ಬಳಿಕ ಅವರೊಬ್ಬ ಸಮರ್ಥ ಕಥೆಗಾರ ಎಂದು ಮನದಟ್ಟಾಗಿದೆ.  ಬಿಡುಗಡೆಯ ಸಂದರ್ಭದಲ್ಲಿ ಈ ಸಂಕಲನದ ಬಗ್ಗೆ ವೇದಿಕೆಯಲ್ಲಿ ಕೆಲವು ಮಾತನಾಡುವ ಅವಕಾಶ ನನಗೆ ಒದಗಿಬಂದಿದ್ದು ಮರೆಯಲಾಗದ ಅನುಭವ.  ದೂರದಲ್ಲಿರುವ ಲೇಖಕ, ಅದೂ ಕನ್ನಡ ಲೇಖಕನ ಬಗ್ಗೆ, ನಾನೊಬ್ಬ ಕನ್ನಡ ಲೇಖಕನಾಗಿ ನನಗೆ ಅತೀವ ಸಂತೋಷವಾಗಿದೆ. 

 

ಇಲ್ಲಿನ ಲೇಖಕರ ಕಥೆಗಳನ್ನು ಒಗ್ಗೂಡಿಸಿ ಪ್ರತಿ ವರ್ಷ ಒಂದು ಕಥಾ ಸಂಕಲನ, ಕನ್ನಡ ಕಥಾ ಸ್ಪರ್ಧೆ ಏರ್ಪಡಿಸುವ ವಿಚಾರವಿದೆ.  ಆದರೆ ನನಗೆ ಪ್ರೋತ್ಸಾಹ ಬೇಕು.  ಇಲ್ಲಿನ ಸಹೃದಯಿಗಳ ಪ್ರೋತ್ಸಾಹ ದೊರೆತರೆ ಮಾಸ್ತಿ ಪುರಸ್ಕಾರ, ಕಾರಂತ ಪುರಸ್ಕಾರ ಮಾದರಿಯಲ್ಲಿ ಕರ್ನಾಟಕ ಹಾಗೂ ಯು.ಎ.ಇ. ಸಂಯೋಜನೆಯೊಡನೆ ಕನ್ನಡ ಸಾಹಿತ್ಯದ ಹಲವು ವಿಸ್ತಾರವಾದ, ಗಮನಾರ್ಹವಾದ ಕನ್ನಡಕ್ಕೆ ಪ್ರಮುಖವಾಗಬಹುದಾದ ಮಾದರಿಯಲ್ಲಿ ನಡೆಸಿಕೊಂಡು ಬರುವುದು ನನ್ನ ವಿಚಾರವಾಗಿದೆ.  ಹಲವರ ಬಳಿ ಇಲ್ಲಿ ಮಾತನಾಡಲು ಹುರುಪೂ ಇದೆ.  ಒಂದಲ್ಲಾ ಒಂದೂರಿನಲ್ಲಿ ಎಂಬ ಕನ್ನಡ ತ್ರೈಮಾಸಿಕ - ಕಥೆಗಳ ಬಗೆಗೇ ಪ್ರಧಾನವಾಗಿ ಆವರಣಗಳನ್ನು, ಚೌಕಟ್ಟುಗಳನ್ನು ಒಳಗೊಂಡ ಪತ್ರಿಕೆಯ ಸಂಪಾದಕನೂ ನಾನೇ ಆಗಿರುವುದರಿಂದ ಕನ್ನಡ ಜನ, ಮಾಧ್ಯಮ ಹಾಗೂ ವಿಮರ್ಶಕರು ಈ ಪತ್ರಿಕೆಯನ್ನು ಶ್ಲಾಘಿಸಿರುವ ನೆಲೆಯಲ್ಲಿ ನನಗೆ ಉತ್ಸಾಹ ಚೈತನ್ಯ ಮೂದಿ ಬಂದಿರಬಹುದು.

 

ಅ: ಭಾರತ, ಅದರಲ್ಲೂ ಕರ್ನಾಟಕದಿಂದ ಜಗತ್ತು ಪಡೆಯಬಹುದಾದದ್ದು ಮುಖ್ಯವಾಗಿ ಏನೆಂಬುದನ್ನು ತಿಳಿಸಬಲ್ಲಿರಾ?

ಮ: ಮುಖ್ಯವಾಗಿ ಯಾವುದೇ ಕೆಲಸಕ್ಕೆ ಸರ್ಕಾರದ ಕೃಪಾಕಟಾಕ್ಷಕ್ಕಾಗಿ ಕಾಯಬಾರದು.  ನಮ್ಮ ಶಕ್ತಿಯನ್ನು ನಂಬಿ ಪ್ರಾರಂಭಿಸುವುದಾದರೆ ಭಾರತದಿಂದ ಆಧ್ಯಾತ್ಮ ಹಾಗೂ ಪುರಾಣಗಳ ಸೊಡಗನ್ನು, ಕರ್ನಾಟಕದಿಂದ ಮಾತು, ವಾದ್ಯ, ಸಂಗೀತ, ಅಭಿನಯ, ನೃತ್ಯ ಮೇಳೈಸಿದ ಯಕ್ಷಗಾನ ಸೌರಭವನ್ನು ಇನ್ನಷ್ಟು ಸಂಸ್ಕಾರಪೂರ್ಣವಾಗಿ, ವೈಜ್ಞಾನಿಕವಾಗಿ ಜಗತ್ತಿನೆಲ್ಲೆಡೆ ವಿಸ್ತರಿಸಬಹುದು.  ಯಕ್ಷಗಾನದ ವಿಷಯದಲ್ಲಿ ಕರ್ನಾಟಕದ ಕೊಡುಗೆ ಇನ್ನಷ್ಟು ಸಕಾರಾತ್ಮಕವಾಗುವ ಸಾಧ್ಯತೆ ಹೇರಳವಾಗಿದೆ.

 

ಅ: ತಮ್ಮ ಚಟುವಟಿಕೆಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದೀರಿ. ತಮ್ಮ ಮುಂಬರುವ ಕಾದಂಬರಿ, ಯಕ್ಷಗಾನ ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿ ತಾವು ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗಲಿ ಎಂದು ಯು.ಎ‌ಇ.ಯ ಸಕಲ ಕನ್ನಡಿಗರ ಪರವಾಗಿ ಹಾರೈಸುತ್ತೇವೆ. ಈ ಸಂದರ್ಭಕ್ಕಾಗಿ ತಮ್ಮ ಸಮಯವನ್ನು ವಿನಿಯೋಗಿಸಿದ ತಮಗೆ ಧನ್ಯವಾದಗಳು. ತಮ್ಮ ಕಾದಂಬರಿ ಶೀಘ್ರವೇ ಹೊರಬರಲಿ, ತಮ್ಮ ಪ್ರಯತ್ನಗಳಿಗೆ ಸಕಲ ಪ್ರೋತ್ಸಾಹ ಹಾಗೂ ಪ್ರಾಯೋಜಕರು ಸಿಗುವಂತಾಗಲಿ, ತನ್ಮೂಲಕ ಕನ್ನಡ ಸಾಹಿತ್ಯ ಜಗತ್ತು ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದು ಹಾರೈಸುತ್ತೇವೆ. ನಮಸ್ಕಾರಗಳು.

ಮ: ಧನ್ಯವಾದಗಳು. 

 

ಸೂಚನೆ: ಇಲ್ಲಿ ವಿವರಿಸಿರುವ ವಿಷಯಗಳ ಸಂಬಂಧವಾಗಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆಯವರನ್ನು ಸಮಾನ ಮನಸ್ಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.  

 

ಮೊಬೈಲ್: 00919448313270 

ಸ್ಥರ ದೂರವಾಣಿ: 00918026620771

ಈ ಮೇಲ್: mahabalamurthykodlakere@hotmail.com

 

 ಶ್ರೀ ಮಹಾಬಲಮೂರ್ತಿಯವರು ದಿನಾಂಕ 22-11-2009 ರವರೆಗೆ ಯು.ಎ.ಇ.ಯಲ್ಲಿ ವಾಸ್ತವ್ಯರಿರುತ್ತಾರೆ. ಅವರನ್ನು ಸ್ಥಳೀಯ ದೂರವಾಣಿ:  0502384070 ಮೂಲಕ ಸಂಪರ್ಕಿಸಬಹುದು.

 

Rating
No votes yet