ಅರೇಬಿಯಾದ ಒಂದು ಅನುಭವ

ಅರೇಬಿಯಾದ ಒಂದು ಅನುಭವ

ಬರಹ

ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ.  ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸಿಗ್ನಲ್ ನ ಹಾವಳಿಯಿಲ್ಲ. ಸುಮಾರು ೨೫ ಕಿಲೋಮೀಟರು ವರೆಗೆ ಏಕ ರಸ್ತೆ. ರಸ್ತೆಯ ಮಧ್ಯ ಭಾಗದಲ್ಲಿ ಖರ್ಜೂರದ ಮರಗಳು, ಭರ್ರೋ ಎಂದು ಘಂಟೆಗೆ ೧೨೦ ಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಕ್ಷಿಪಣಿಗಳಂತೆ ತೂರಿಕೊಂಡು  ಹೋಗುವ  ಕಾರುಗಳು. ಬ್ಯಾಂಕ್ ಸಮೀಪಿಸುತ್ತಿದ್ದಂತೆ ಹತ್ತಿರದ ಜುಫ್ಫಾಲಿ ಮಸೀದಿಯ ವಿಶಾಲವಾದ ಆವರಣದ ಬಳಿ ಒಂದಿಷ್ಟು ಚಟುವಟಿಕೆಗಳು ಕಂಡುಬಂದವು. ಕೃತಕ ಸರೋವರದ ದಡದಲ್ಲಿ ಕಟ್ಟಿದ ಜುಫ್ಫಾಲಿ ಮಸೀದಿ ತುಂಬಾ ಸುಂದರ.  ಪುಟ್ಟ, ಪುಟ್ಟ  ಹತ್ತಾರು ಗುಮ್ಮಟಗಳ ನಡುವೆ ಆಗಸಕ್ಕೆ ಏಕದೇವೋಪಾಸನೆಯನ್ನು ಮುಗಿಲಿಗೆ ಮುಟ್ಟಿಸುವ ಕಾತುರದಲ್ಲಿ ತುದಿಗಾಲಿನಲ್ಲಿ ನಿಂತ ಮಿನಾರ್  (ಮಸೀದಿಯ ಸ್ತಂಭ ಗೋಪುರ). ಮಸೀದಿಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದರು, ಒಂದು ಕಂಬಕ್ಕೆ ಧ್ವನಿ ವರ್ಧಕಗಳನ್ನು ಕಟ್ಟಿದ್ದರು, ಶಸ್ತ್ರಧಾರಿ ಪೋಲೀಸರ ಗಸ್ತು, ನೀರಿನ ಟ್ಯಾಂಕರ್ ಹೀಗೆ ಒಂದು "eerie" ಚಟುವಟಿಕೆ, ಏರ್ಪಾಡು ಕಾಣಲು ಸಿಕ್ಕಿತು. ಕೌತುಕದಿಂದ ಕಾರನ್ನು ನಿಲ್ಲಿಸಿ ಏನೆಂದು ವಿಚಾರಿಸಿದಾಗ ತಲೆ ಕಡಿಯುವ ಪ್ರೋಗ್ರಾಮ್ ಇದೆ ಎಂದು ಒಬ್ಬ ಹೇಳಿದ. ಇದನ್ನು ಕೇಳಿ ನನ್ನ ಮೈ ನಡುಗಿತು. ಹೆಂಡತಿಗೆ ಫೋನ್ ಮಾಡಿ ಇದನ್ನು ಹೇಳಿದಾಗ ಅವಳು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ, ಮೊದಲೇ ಪುಕ್ಕರು ನೀವು, ಅದನ್ನು ನೋಡಿ ಹೆದರಿ ಬಂದರೆ ರಾತ್ರಿ ಪೂರ್ತಿ ನಿಮ್ಮನ್ನು ಕಾಯುತ್ತಾ ಕೂರಲು ನನ್ನಿಂದ ಸಾಧ್ಯ ಇಲ್ಲ ಎಂದು ಹೆದರಿಸಿದಾಗ ಈಕೆ ಹೇಳೋದೂ ಸರಿ ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಇಂಥ ಒಳ್ಳೆ ಮಾತನಾಡುತ್ತಾಳೆ ಎಂದು ಮನದಲ್ಲೇ ವಂದಿಸಿ  ಇನ್ನು ಇಲ್ಲಿ ನಿಲ್ಲುವುದು ಬೇಡ ಎಂದು ಕೂಡಲೇ ಅಲ್ಲಿಂದ ಕಾಲನ್ನು ಕಿತ್ತೆ.

ಇಷ್ಟು ವರ್ಷ ಸೌದಿ ಅರೇಬಿಯದಲ್ಲಿ ಇದ್ದರೂ ನಾನು ಎಂದೂ ಇಂಥ ಸನ್ನಿವೇಶವನ್ನು ಎದುರಿಸಿರಲಿಲ್ಲ. ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ, ಮಾದಕ ವಸ್ತು ಮಾರುವವರಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೊತ್ತಿತ್ತು. ಮತ್ತು ತಲೆಕಡಿಯುವುದನ್ನು ನೋಡಲು ಹೋಗಿ ಒಂದಿಷ್ಟು ದಿನ ನಿದ್ದೆ ಮಾಡಲಾಗದೆ ಒದ್ದಾಡಿದ ಜನರ ಕತೆ ಸಹ ಕೇಳಿದ್ದೆ.  ಆದರೆ ಧುತ್ತನೆ ಇಂಥ ಸನ್ನಿವೇಶ ನನಗೆದುರಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ.

ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಮರಳಿ ಮಸೀದಿ ದಾಟಿ ನೇರವಾಗಿ ನೋಡಲಾಗದೆ ಕದ್ದು ನೋಡಿದಾಗ ಇನ್ನೂ ಅಪರಾಧಿಯನ್ನು ತಂದಿರಲಿಲ್ಲ. ಒಂದಿಷ್ಟು ದೂರ ಸಾಗುತ್ತಿದ್ದಂತೆ ನಾಲ್ಕಾರು ಪೋಲಿಸ್ ಕಾರುಗಳು ಮತ್ತು ಅಪರಾಧಿಯನ್ನು ಹೊತ್ತ ಜೈಲಿನ ವ್ಯಾನ್ ಯಾತನಾಮಯವಾಗಿ ಸೈರನ್ ಬಾರಿಸುತ್ತಾ ವೇಗವಾಗಿ ಮಸೀದಿಯ ಕಡೆ ಹೋಗುತ್ತಿದ್ದವು.

ಆಫೀಸ್ ತಲುಪಿ ಮಿತ್ರರಿಗೆ ಈ ವಿಷಯ ಹೇಳಿ ಅಲ್ಲಾ ನೀರಿನ ಟ್ಯಾಂಕರ್ಗೆ ಅಲ್ಲೇನು ಕೆಲಸ ಎಂದು ಕೇಳಿದಾಗ ಸಿಕ್ಕಿದ ಉತ್ತರ, ತಲೆಕಡಿದ ನಂತರ ಹರಿಯುವ ರಕ್ತ ತೊಳೆಯಳಂತೆ. ಅಯ್ಯೋ, ಇದನ್ನು ಕೇಳಿ ತಲೆ ಗಿರ್ರನೆ ಸುತ್ತಿ ಕೆಳಕ್ಕುರುಳುವುದೊಂದು ಬಾಕಿ.  

 

ಮಾನವ ಹಕ್ಕುಗಳ, ಇನ್ನಿತರ ಮುಂದುವರಿದ ರಾಷ್ಟ್ರಗಳ ಮನವಿಯನ್ನು ಕಿವಿಗೆ ಹಾಕಿ ಕೊಳ್ಳದೆ ಮೇಲೆ ಹೇಳಿದ ಅಪರಾಧ ಮಾಡಿದವರಿಗೆ ತಲೆ ಕಡಿದು ಶಿಕ್ಷೆ ನೀಡುವ ಸೌದಿ ಅರೇಬಿಯಾದ ವ್ಯವಸ್ಥೆ ಅಮಾನವೀಯವಾಗಿ ಕಂಡರೂ ತಮ್ಮ ನಿರ್ದಯೀ, ಅಮಾನುಷ   ಕೆಲಸಗಳಿಂದ, ಕರುಣೆ ತೋರೆಂದು ಬೇಡುವ ಜನರ ರೋದನ ಲೆಕ್ಕಿಸದೆ ಕೊಲ್ಲುವ, ಅತ್ಯಾಚಾರ ಎಸಗುವ, ಯುವಕರನ್ನ ಮಧ್ಯ ವ್ಯಸನಿಗಳನ್ನಾಗಿ ಮಾಡುವ, ಸಮಾಜವನ್ನು ಕಂಗೆಡಿಸುವ ಕಿಡಿಗೇಡಿಗಳಿಗೆ ಈ ಶಿಕ್ಷೆ ಕೊಡಬೇಕಾದ್ದೆ.  

ಹಾಗೂ ಇತರರಿಗೂ ಪಾಠವಾಗಲಿ ಎಂದು ಇಂಥ ಶಿಕ್ಷೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟು ಭಾವಿ ಪುಂಡರಿಗೆ ಎಚ್ಚರಿಕೆಯನ್ನೂ ಸಹ ಕೊಟ್ಟು ಸಮಾಜದಲ್ಲಿ ಒಂದಿಷ್ಟು ನೆಮ್ಮದಿ ಇರುವಂತೆ ಮಾಡುತ್ತದೆ ಈ ಸಾರ್ವಜನಿಕ ಶಿಕ್ಷೆ.

ಕಳೆದ ವರ್ಷ ಓರ್ವ ಅಪ್ರಾಪ್ತ ಬಾಲಕಿಯನ್ನು ನಾಲ್ವರು ಬಾಂಗ್ಲಾದೇಶದ ತರುಣರು ಅತ್ಯಾಚಾರ ಎಸಗಿ ಓಡಿದ್ದರು. ಅಷ್ಟು ಮಾತ್ರವಲ್ಲ ತಾವು ಮಾಡಿದ ಮಹತ್ಕಾರ್ಯವನ್ನು ಮೊಬೈಲ್ ಕಮೆರದಲ್ಲಿ ಸೆರೆ ಹಿಡಿದು ಸ್ನೇಹಿತರೊಂದಿಗೆ ಹಂಚಿಕೊಂಡು ಹಿಗ್ಗಿದರು.

ಈ ಪಾತಕಿಗಳನ್ನು ಸೆರೆಹಿಡಿಯಲು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿ

ಆದರು. ನ್ಯಾಯಾಲಯ ಅವರು ಮಾಡಿದ ಕೃತ್ಯವನ್ನು ಖಾತ್ರಿ ಪಡಿಸಿಕೊಂಡು ಅವರ ತಲೆ ಕಡಿಯದೇ ಅತ್ಯಧಿಕ ಜನಸಂದಣಿ ಇರುವ ರಾಜಧಾನಿ ರಿಯಾದ್ ನಗರದಲ್ಲಿ ಅವರನ್ನು ನೇಣು ಹಾಕಲು ನ್ಯಾಯಾಲಯ ತೀರ್ಪು ನೀಡಿತು. ನೇಣು ಹಾಕಿದ ನಂತರ ದಿನ ಪೂರ್ತಿ ಅವರ ಶರೀರಗಳನ್ನು ನೇತಾಡಲು ಪೊಲೀಸರು ಬಿಟ್ಟಿದ್ದರು.    

ಕೆಲ ವರ್ಷಗಳ ಹಿಂದೆ ಪೋಲೀಸರ ತಂಡವೊಂದು ಬ್ಯಾಂಕ್ ಲೂಟಿ ಮಾಡಿ ಸಿಕ್ಕಿಹಾಕಿ ಕೊಂಡಿತು. ದರೋಡೆ ಆದ್ದರಿಂದ ಕೈ ಕಡಿಯುವ ಶಿಕ್ಷೆ. ಅಪರಾಧಿಗಳು ಸರಕಾರೀ ಸೇವಕರೂ, ಪೊಲೀಸರೂ ಆಗಿದ್ದರಿಂದ ನ್ಯಾಯಾಲಯ ಸೌದಿ ದೊರೆಗೆ ತೀರ್ಮಾನ ಮಾಡಲು ಬಿಟ್ಟಿತು. ಸಮಾಜವನ್ನು, ಸಮಾಜದ ಆಸ್ತಿಪಾಸ್ತಿಗಳನ್ನು ಕಾಯಲು ನಿಯುಕ್ತ ಗೊಂಡವರೇ ಇಂಥ ಕೆಲಸಕ್ಕೆ ಇಳಿದರೆ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಹೋಗಿಬಿಡುತ್ತದೆ ಎಂದು ಹೇಳಿದ ದೊರೆ ಸೆರೆಬಿದ್ದವರ ತಲೆಗಳನ್ನು ಕಡಿಯಲು ತೀರ್ಪು ಕೊಟ್ಟರು.  

 

 ಈ ರೀತಿಯ ಶಿಕ್ಷೆ ಇರುವುದರಿಂದ ಇಲ್ಲಿ ಅಪರಾಧಗಳು ಕಡಿಮೆ ಎಂದು ಹೇಳಬಹುದು.