ಜನಶಕ್ತಿಯ ಮುಂದೆ ರೆಡ್ಡಿ ಯಾವ ಲೆಕ್ಕ?
ಎದುರಾದ ಕಂಟಕವೊಂದನ್ನು ನಿವಾರಿಸಿಕೊಂಡು ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಮುಂದುವರಿದಿದೆ. ಸಿಡುಕುಮುಖದ ಮುಖ್ಯಮಂತ್ರಿಯು ನಗುವಿನ ಪಾಠ ಕಲಿತಂತಾಗಿದೆ. ತಾನು ಇನ್ನುಮುಂದೆ ಹೇಗೆ ವರ್ತಿಸಬೇಕು, ಸರ್ಕಾರವನ್ನು ಯಾವ ರೀತಿ ನಡೆಸಬೇಕು ಮತ್ತು ಯಾರ್‍ಯಾರನ್ನು ಎಲ್ಲೆಲ್ಲಿ ಇಟ್ಟಿರಬೇಕು ಎಂದು ಬಿ.ಎಸ್.ವೈ. ಮನನ ಮಾಡಿಕೊಂಡು ಸಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚು ಸ್ಫುಟವಾಗಿದೆ. ತನ್ನ ಮುಖ್ಯಮಂತ್ರಿ ಪದವಿ ಸುರಕ್ಷಿತವಾಗಿ ಉಳಿಯಲು ಮಾತ್ರವಲ್ಲ, ಬಿ.ಜೆ.ಪಿ. ಪಕ್ಷದ ಆಡಳಿತದಮೇಲೆ ಜನರಲ್ಲಿರುವ ವಿಶ್ವಾಸಕ್ಕೆ ಚ್ಯುತಿಯುಂಟಾಗದಿರಲು ಕೂಡ ಅಂಥ ಮನನವೀಗ ಯಡಿಯೂರಪ್ಪನವರಲ್ಲಿ ಜಾಗೃತವಾಗಬೇಕಾಗಿದೆ.
ಸಿದ್ಧಾಂತವೇ ಸಾಧನ
ಜೀವನಮಾರ್ಗದಲ್ಲಿ ನಮ್ಮನ್ನು ಕೈಹಿಡಿದು ಮುಂದೆ ಕರೆದುಕೊಂಡುಹೋಗುವುದು ನಾವು ನಂಬಿದ ಸಿದ್ಧಾಂತವೇ ಹೊರತು ಹಣವಾಗಲೀ ಅಧಿಕಾರವಾಗಲೀ ಬಂಧುಮಿತ್ರರ ಕೂಟವಾಗಲೀ ಅಲ್ಲ. ಈ ಪರಮಸತ್ಯವನ್ನು ಇನ್ನಾದರೂ ಅರಿತು ಮಾನ್ಯ ಯಡಿಯೂರಪ್ಪನವರು ಸಿದ್ಧಾಂತಬದ್ಧರಾಗಿ ಮುಂದಡಿಯಿಡಬೇಕು. ಜನರು ತನ್ನನ್ನೂ ತನ್ನ ಪಕ್ಷವನ್ನೂ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದು ತಾನು ಮತ್ತು ತನ್ನ ಪಕ್ಷವು ಸಾರಿಕೊಂಡುಬಂದಿರುವ ಸಿದ್ಧಾಂತವನ್ನು ಒಪ್ಪಿಕೊಂಡು ಎಂಬುದನ್ನವರು ಸದಾಕಾಲ ನೆನಪಿನಲ್ಲಿಟ್ಟುಕೊಂಡು ಆ ಸಿದ್ಧಾಂತಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಸಿದ್ಧಾಂತಕ್ಕಿಂತ ಗದ್ದುಗೆಯೇ ಮುಖ್ಯವಾದರೆ ಕಂಟಕಗಳು ಮತ್ತೆಮತ್ತೆ ಎದುರಾಗುತ್ತಲೇ ಇರುತ್ತವೆ. ಜೊತೆಗೆ ಅಧಿಕಾರದ ಅಮಲು ನೆತ್ತಿಗೇರಿ ಅಹಂಕಾರವು ಧುಮ್ಮಿಕ್ಕತೊಡಗಿದರೆ ಕ್ರಮೇಣ ಆಪ್ತರೂ ವೈರಿಗಳಾಗುತ್ತಾರೆ.
’ಹಿತೋಪದೇಶ’ದ ಒಂದು ಸೂಕ್ತಿ ಈ ಕೆಳಗಿನಂತಿದೆ:
"ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ
ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಂ"
’ಯೌವನ, ಐಶ್ವರ್ಯ, ಒಡೆತನ ಮತ್ತು ಅವಿವೇಕ ಇವು ಒಂದೊಂದೂ ಅನರ್ಥಕಾರಿ. ನಾಲ್ಕೂ ಒಂದೆಡೆ ಸೇರಿದವೆಂದರೆ ಹೇಳುವುದೇನಿದೆ?!’
ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಬಿ.ಜೆ.ಪಿ. ಸರ್ಕಾರಕ್ಕೆ ಈ ನಾಲ್ಕು ವಿಷಯಗಳೇ ಕಂಟಕಗಳಾದವು. ಯೌವನ ಮತ್ತು ಅವಿವೇಕ ಇವು ಶ್ರೀರಾಮುಲುವನ್ನು ದಿಕ್ಕುತಪ್ಪಿಸಿದರೆ ಐಶ್ವರ್ಯ ಮತ್ತು ಒಡೆತನಗಳು ಗಣಿರೆಡ್ಡಿ ಸಹೋದರರ ಕಣ್ಣುಗಳನ್ನು ನೆತ್ತಿಗೇರಿಸಿದವು. ಒಡೆತನ ಮತ್ತು ಅವಿವೇಕ ಇವು ಯಡಿಯೂರಪ್ಪನವರ ಕಣ್ಣುಗಳನ್ನು ಕುರುಡಾಗಿಸಿ ಬುಡಕ್ಕೆ ಬಿಸಿನೀರು ಕಾಸಿದವು.
ಗಣಿರೆಡ್ಡಿ ಹಗ’ರಣ’ದ ತರುವಾಯ ಈಗ ಯಡಿಯೂರಪ್ಪನವರ ’ಅಹಂರೂಪಿ ಅವಿವೇಕ’ ದೂರಾಗಿದೆ. ಅವರಿಗೀಗ ತಿಳಿವುಂಟಾಗಿದೆ. ಈ ತಿಳಿವನ್ನು ಅವರು ಕೊನೆತನಕ ಕಾಯ್ದುಕೊಂಡುಹೋಗಬೇಕು. ಆಗ ಅವರಿಂದ ಸ್ಥಿರ ಮತ್ತು ಜನೋಪಯೋಗಿ ಆಡಳಿತ ರಾಜ್ಯಕ್ಕೆ ದೊರಕುತ್ತದೆ. ರೈತಚಳವಳಿಯ ಹಿನ್ನೆಲೆ ಹೊಂದಿರುವ, ಸ್ವಯಂ ರೈತಕುಟುಂಬದಿಂದ ಬಂದಿರುವ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಡನಾಟದಿಂದಾಗಿ ರಾಷ್ಟ್ರೀಯತೆಯ ಮೌಲ್ಯವನ್ನು ಅರಿತಿರುವ ಮತ್ತು ಶಾಸಕನಾಗಿ, ವಿರೋಧಪಕ್ಷದ ನಾಯಕನಾಗಿ ಸುದೀರ್ಘಕಾಲದ ಅನುಭವ ಹೊಂದಿರುವ ಯಡಿಯೂರಪ್ಪನವರು ಅಹಂಕಾರ ತೊರೆದು, ಎಲ್ಲರೊಡನೆ ಬೆರೆತು, ಸಿದ್ಧಾಂತಕ್ಕೆ ಬದ್ಧರಾಗಿ ಮುಂದುವರಿದರೆಂದರೆ ಆಗ ಅವರು ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಬಲ್ಲರು.
ರೆಡ್ಡಿ ಎಫೆಕ್ಟ್
ಗಣಿರೆಡ್ಡಿ ಪ್ರಕರಣದ ನಂತರ ತಮ್ಮ ಅಹಮ್ಮಿಗೆ ಅಂಕುಶ ಹಾಕಿರುವ ಯಡಿಯೂರಪ್ಪನವರಲ್ಲೀಗ ಎಲ್ಲರೊಡನೆ ಬೆರೆಯುವ ಲಕ್ಷಣಗಳು ಕಂಡುಬರುತ್ತಿವೆ. ಇದನ್ನವರು ಕೊನೆತನಕ ಕಾಪಾಡಿಕೊಂಡುಹೋಗಬೇಕು. ಅಷ್ಟೇ ಮುಖ್ಯವಾಗಿ ಅವರು ಅನುಷ್ಠಾನ ಮಾಡಬೇಕಾದ ಇನ್ನೊಂದು ಕಾರ್ಯವೆಂದರೆ ಪಕ್ಷದ ಸಿದ್ಧಾಂತಕ್ಕೆ ಬದ್ಧತೆ ತೋರುವುದು. ಸಿದ್ಧಾಂತದ ಅನುಷ್ಠಾನಕ್ಕೆಂದು ಜನರು ಅಧಿಕಾರ ನೀಡಿರುವಾಗ ಸಿದ್ಧಾಂತಕ್ಕೇ ತಿಲಾಂಜಲಿಯಿತ್ತರೆ ಆಗ ಕಾರ್ಯಕರ್ತರ ಮತ್ತು ಜನರ ಬೆಂಬಲ ಇಲ್ಲವಾಗುತ್ತದೆ. ಈ ಬೆಂಬಲ ಇಲ್ಲದ ಯಾವ ರಾಜಕಾರಣಿಯೂ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಲಾರ. ಸಿದ್ಧಾಂತಕ್ಕೆ ಬದ್ಧನಾಗಿ ಸಾಗುವ ನಾಯಕನನ್ನು ಪಕ್ಷದ ಕಾರ್ಯಕರ್ತರು ಮತ್ತು ನಾಡಿನ ಜನರು ಬೀದಿಗಿಳಿದು ಹೋರಾಡಿಯಾದರೂ ಉಳಿಸಿಕೊಳ್ಳುತ್ತಾರೆ. ಈ ವಾಸ್ತವವನ್ನು ಯಡಿಯೂರಪ್ಪನವರು ಅರಿತುಕೊಳ್ಳಬೇಕು.
ಉತ್ತಮ ಆಡಳಿತ ನೀಡುವುದು ಮತ್ತು ರಾಷ್ಟ್ರೀಯ ಮನೋಧರ್ಮವನ್ನು ಜಾಗೃತಗೊಳಿಸುವುದು ಇವೆರಡು ಬಿ.ಜೆ.ಪಿ. ಪಕ್ಷದ ಪ್ರಮುಖ ಸಿದ್ಧಾಂತಗಳು.
ಉತ್ತಮ ಆಡಳಿತ ನೀಡುವ ದಿಸೆಯಲ್ಲಿ ಪ್ರಾಮಾಣಿಕ ಯತ್ನವಾಗಿ ಯಾವುದೇ ಸರ್ಕಾರವು ಭ್ರಷ್ಟಾಚಾರಮುಕ್ತವಾಗಿರಬೇಕಾದ್ದು ಅಪೇಕ್ಷಣೀಯ. ಯಡಿಯೂರಪ್ಪನವರ ಸರ್ಕಾರದ ವಿಷಯದಲ್ಲೂ ಜನತೆ ಇದನ್ನೇ ನಿರೀಕ್ಷಿಸುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಭ್ರಷ್ಟಾಚಾರದಿಂದ ದೂರವಿಡುವುದರ ಜೊತೆಗೆ ಲೋಕಾಯುಕ್ತಕ್ಕೆ ಕಾನೂನಿನ ಪರಮಾಧಿಕಾರ ನೀಡಿದರೆಂದರೆ ಯಡಿಯೂರಪ್ಪನವರು ಜನರ ಮನವನ್ನು ಅರ್ಧಪಾಲು ಗೆದ್ದಂತೆಯೇ. ಇನ್ನರ್ಧಪಾಲು ರಾಷ್ಟ್ರೀಯತೆಗೆ ಸಂಬಂಧಿಸಿದುದು.
ಜಾತಿನೀತಿಯ ಬದಲು ರಾಷ್ಟ್ರೀಯತಾ ನೀತಿಯನ್ನು ಅನುಸರಿಸುವುದು, ವರ್ಗ ತುಷ್ಟೀಕರಣದ (ಅ)ನೀತಿ ಕೈಬಿಟ್ಟು ಸಮಾನತೆಯ ನೀತಿಯನ್ನು ಜಾರಿಗೆ ತರುವುದು ಮತ್ತು ಈ ವಿಷಯದಲ್ಲಿ, ’ಹೇಳುವುದೊಂದು, ಮಾಡುವುದು ಮತ್ತೊಂದು’, ಎಂಬಂತೆ ವರ್ತಿಸದೆ, ನುಡಿದಂತೆಯೇ ನಡೆಯುವುದು, ಒಟ್ಟಾರೆ, ಪಕ್ಷದ ಸಿದ್ಧಾಂತವನ್ನು ದಿಟ್ಟತನದಿಂದ ಚಾಚೂ ತಪ್ಪದಂತೆ ಪಾಲಿಸುವುದು ಈ ನಡೆಗಳಿಂದಾಗಿ ಯಡಿಯೂರಪ್ಪನವರು ಜನರ ವಿಶ್ವಾಸವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ.
ಚರ್ಚ್ ದಾಳಿ
ಕೆಲ ಸಮಯದ ಕೆಳಗೆ ರಾಜ್ಯದಲ್ಲಿ ನಡೆದ ಚರ್ಚ್‌ಮೇಲಿನ ದಾಳಿ ಸಂದರ್ಭದಲ್ಲಿ ಯಡಿಯೂರಪ್ಪನವರ ನಿಲುವು ದಿಟ್ಟತನದ್ದಾಗಿರಲಿಲ್ಲ. ಒಂದು ವರ್ಗಕ್ಕವರು ಅನವಶ್ಯ ಶರಣಾಗತಿ ತೋರಿದರು.
ದಾಳಿಗಳು ಈ ದೇಶದಲ್ಲಿಂದು ಚರ್ಚ್ ಮತ್ತು ಮಸೀದಿಗಳಮೇಲೆ ಮಾತ್ರ ಸೀಮಿತವಾಗಿಲ್ಲ. ಹಿಂದೂ ದೇವಾಲಯಗಳಮೇಲೂ ದಾಳಿಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ವಿವಿಧ ಸರ್ಕಾರಗಳು ಪಾಲಿಸಿಕೊಂಡುಬಂದಿರುವ ’ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ’ ನೀತಿ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೂಕ್ತ ವಿದ್ಯೆ ಮತ್ತು ಉತ್ತಮ ಆರೋಗ್ಯದ ವ್ಯವಸ್ಥೆ ಮಾಡುವ ಬದಲು ವೋಟುಗಳ ಗಳಿಕೆಯ ಉದ್ದೇಶದಿಂದ ಅವರಿಗೆ ಮೀಸಲಾತಿ, ಸಹಾಯಧನ, ಸಣ್ಣಪುಟ್ಟ ಯೋಜನೆಗಳು ಇಂಥವುಗಳಿಗೇ ರಾಜಕೀಯ ಪಕ್ಷಗಳು ಒತ್ತು ಕೊಡುತ್ತ ಸಾಗಿದ್ದರಿಂದಾಗಿ ಸ್ವಾತಂತ್ರ್ಯೋತ್ತರ ಭಾರತದ ಬಹುಸಂಖ್ಯಾತರಲ್ಲಿ ಅಸಹನೆ ಬೆಳೆಯಲಾರಂಭಿಸಿತು. ಇದರ ಜೊತೆಗೆ, ಧರ್ಮ ಮತ್ತು ಸಂಪ್ರದಾಯದ ಆಚರಣೆಯ ವಿಷಯದಲ್ಲೂ ಸರ್ಕಾರಗಳು ತೋರುತ್ತಬಂದಿರುವ ಪಕ್ಷಪಾತವು ಬಹುಸಂಖ್ಯಾತರ ಅಸಹನೆಯನ್ನು ಹೆಚ್ಚಿಸಿತು.
ಅನೇಕ ಧಾರ್ಮಿಕ-ಸಾಮಾಜಿಕ ಅಸಮಾನತೆಗಳು ಇಂದು ಬಹುಸಂಖ್ಯಾತ ಹಿಂದೂಗಳ ಚಿತ್ತಕ್ಷೆಭೆಗೆ ಕಾರಣವಾಗಿವೆ. ಆದ್ದರಿಂದ, ನಮ್ಮ ಸರ್ಕಾರಗಳು ಅಲ್ಪಸಂಖ್ಯಾತರ ತುಷ್ಟೀಕರಣವನ್ನು ’ಕೈ’ಬಿಡಬೇಕು. ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸಬಾರದು. ಧರ್ಮದೊಳಗಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರಿಗೆ, ಮೀಸಲಾತಿ, ಚಿಲ್ಲರೆ ಯೋಜನೆಗಳು ಮತ್ತು ಹಣ ಇವುಗಳ ಆಮಿಷ ತೋರುವ ಬದಲು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡಬೇಕು. ಅವರು ಈ ದೇಶದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ನೋಡಿಕೊಳ್ಳಬೇಕು. ಆಗ ಈ ನೆಲದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಶಾಂತಿ ಬೇರೂರುತ್ತದೆ.
ಈ ನಿಟ್ಟಿನಲ್ಲಿ ನೋಡಿದಾಗ, ಚರ್ಚ್‌ಮೇಲಿನ ದಾಳಿಯ ಪ್ರಕರಣದಲ್ಲಿ ಯಡಿಯೂರಪ್ಪನವರ ಕ್ರಮವು ಇನ್ನಷ್ಟು ನ್ಯಾಯಯುತವಾಗಿರಬೇಕಾಗಿತ್ತೆಂದು ಜನರಿಗೆ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ.
ಜನರಿಟ್ಟ ವಿಶ್ವಾಸಕ್ಕೆ ಧಕ್ಕೆ ತಂದುಕೊಳ್ಳುವಂಥ ಇನ್ನೊಂದು ಕೆಲಸ ಮಾನ್ಯ ಯಡಿಯೂರಪ್ಪನವರು ಮಾಡಿದ್ದೆಂದರೆ ತಥಾಕಥಿತ ’ಆಪರೇಷನ್ ಕಮಲ’ದ ಅನವಶ್ಯ ಮುಂದುವರಿಕೆ. ಸಾಕಷ್ಟು ಸಂಖ್ಯೆಯ ಸದಸ್ಯಬಲ ಹೊಂದಿದಮೇಲೂ ಪಕ್ಷಾಂತರ ಕಾರ್ಯಕ್ರಮವನ್ನು ಮುಂದುವರಿಸಿಕೊಂಡುಹೋದದ್ದು, ಅದಕ್ಕಾಗಿ ಗಣಿರೆಡ್ಡಿಗಳಿಗೆ ಅತಿ ಅತೀ ಪ್ರಾಮುಖ್ಯ ನೀಡುವ ಅಸಹಾಯಕತೆಗೆ ಒಳಗಾದದ್ದು ಮತ್ತು ಪಕ್ಷನಿಷ್ಠರನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಸಚಿವಪದವಿ ನೀಡುವ ಅನಿವಾರ್ಯಕ್ಕೆ ಈ ಪಕ್ಷಾಂತರಕಾರ್ಯದ ದೆಸೆಯಿಂದಾಗಿ ಕಟ್ಟುಬಿದ್ದದ್ದು ಈ ಕ್ರಮಗಳಿಂದಾಗಿ ಯಡಿಯೂರಪ್ಪನವರು ಜನರ ವಿಶ್ವಾಸವನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡರು. ಆದ್ದರಿಂದಲೇ ಪ್ರಸ್ತುತ ಗಣಿರೆಡ್ಡಿ ಹಗರಣದ ವೇಳೆ ರಾಜ್ಯದ ಜನತೆ ಯಡಿಯೂರಪ್ಪನವರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಲಿಲ್ಲ. ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದಿದ್ದರೆ ರೆಡ್ಡಿಗಳು ಯಡಿಯೂರಪ್ಪನವರ ಕೂದಲು ಕೊಂಕಿಸಲೂ ಆಗುತ್ತಿರಲಿಲ್ಲ.
ಗಣಿರೆಡ್ಡಿ ಹಗರಣ ಯಡಿಯೂರಪ್ಪನವರಿಗೊಂದು ದೊಡ್ಡ ಪಾಠ. ಈ ಹಗರಣದಿಂದ ಪಾಠ ಕಲಿತಿರುವ ಅವರು ಇನ್ನಾದರೂ ತಮ್ಮನ್ನು ತಿದ್ದಿಕೊಳ್ಳಬೇಕು. ತಿದ್ದಿಕೊಂಡು ಸಾಗುವ ಮೂಲಕ ಜನಬೆಂಬಲವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಆಗ ಅವರ ಕುರ್ಚಿಯೂ ಸುಭದ್ರ, ಸರ್ಕಾರವೂ ಸುಭದ್ರ.
ಜನಸೇವಕ ತಾನೆಂದು ಬರಿದೆ ಹೇಳುವುದಷ್ಟೇ ಅಲ್ಲ; ಜನಾದೇಶಕ್ಕೆ ತಕ್ಕುದಾಗಿ ಸಾಗಿ ತೋರಿಸಬೇಕು. ಆಗ, ರೆಡ್ಡಿ ಕಂಪನಿಯ ಮೂರು ಜನ ಅಲ್ಲ, ನೂರು ಜನ ತನ್ನ ವಿರುದ್ಧ ಕತ್ತಿ ಮಸೆದರೂ ಯಡಿಯೂರಪ್ಪ ಹೆದರಬೇಕಾಗಿಲ್ಲ. ಈ ನಾಡಿನ ಜನರೇ ಬೀದಿಗಿಳಿದು ಯಡಿಯೂರಪ್ಪನವರನ್ನು ಉಳಿಸಿಕೊಳ್ಳುತ್ತಾರೆ. ಮತ್ತೆ ಚುನಾವಣೆ ನಡೆದರೂ ಯಡಿಯೂರಪ್ಪನವರನ್ನೇ ಅಧಿಕಾರಕ್ಕೆ ತರುತ್ತಾರೆ. ಜನಶಕ್ತಿಯ ಮುಂದೆ ರೆಡ್ಡಿ ಯಾವ ಲೆಕ್ಕ?