ನಿಫ್ಟಿ ಟ್ವಿಟರಿನಲ್ಲಿ

ನಿಫ್ಟಿ ಟ್ವಿಟರಿನಲ್ಲಿ

ಬರಹ

ನಿಫ್ಟಿ ಟ್ವಿಟರಿನಲ್ಲಿ


ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿವೆ.ಈಗ ಶೇರು ಮಾರುಕಟ್ಟೆಯ ಸರದಿ.ಭಾರತದ ಪ್ರಮುಖ ಶೇರು ಮಾರುಕಟ್ಟೆಯಾದ ಎನ್.ಎಸ್.ಇ.ಯು ತನ್ನ ಶೇರು ಸಂವೇದನಾ ಸೂಚ್ಯಂಕವಾದ,ನಿಫ್ಟಿಯ ಏರಿಳಿತವನ್ನು ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೂಲಕ ನೀಡುತ್ತಿದೆ.ಅದನ್ನು ಹಿಂಬಾಲಿಸಲು http://twitter.com/NSE_NIFTY ಈ ಖಾತೆಗೆ ಹೋಗಬೇಕಾಗುತ್ತದೆ.ಒಂದೇವಾರದಲ್ಲಿ ಹತ್ತಿರ ಸಾವಿರ ಜನ ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೊಮ್ಮೆ ನಿಫ್ಟಿಯ ಮಟ್ಟವನ್ನು ತಿಳಿಸುವ ವ್ಯವಸ್ಥೆಯಿದೆ.ಟ್ವಿಟರ್ ಖಾತೆಯನ್ನು ಮೊಬೈಲ್ ಸೇವೆಯ ಮೂಲಕ ಪಡೆಯುವವರಿಗೆ,ವಿವರಗಳು ಮೊಬೈಲಿನಲ್ಲಿಯೇ ಸಿಗುತ್ತದೆ.ಜಗತ್ತಿನ ಪ್ರಮುಖ ಶೇರು ಮಾರುಕಟ್ಟೆಯ ವಿವರಗಳು ಇದೀಗಾಗಲೇ ಟ್ವಿಟರಿನ ಮೂಲಕ ಲಭ್ಯವಿತ್ತು.ಈಗ ಎನ್.ಎಸ್.ಇ.ಯೂ ಅದನ್ನು ನೀಡುವುದರ ಮೂಲಕ,ಭಾರತದ ಮಟ್ಟಿಗೆ ನಾವೀನ್ಯತೆ ನೀಡುವುದರಲ್ಲಿ ತಾನು ಮುಂದೆ ಎಂದು ತೋರಿಸಿಕೊಟ್ಟಂತಾಗಿದೆ.
ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.
------------------------------------------------------------------
ಗೂಗಲ್ ಕ್ರೋಮ್:ತಂತ್ರಾಂಶ ಸಾಲುಗಳೀಗ ಬಹಿರಂಗ
ಗೂಗಲ್ ಕ್ರ‍ೋಮ್ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ತಂತ್ರಾಂಶದ ಸಾಲುಗಳೀಗ ಬಹಿರಂಗ.ಇನ್ನೂ ಅಭಿವೃದ್ಧಿಗೊಳ್ಳುತ್ತಿರುವ ಈ ತಂತ್ರಾಂಶವನ್ನು,ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದರೂ,ಅದು ಸಾಮಾನ್ಯರಿಗೆ ಸುಲಭವಲ್ಲ.ಮಾತ್ರವಲ್ಲ, ಈ ಗೂಗಲ್ ಕ್ರೋಮ್ ಹಾರ್ಡ್‌ಡಿಸ್ಕ್ ಇಲ್ಲದ ಕಂಪ್ಯೂಟರುಗಳಿಗೆ ಎಂದು ಸಿದ್ಧವಾಗಿದೆ.ಯಾವಾಗಲೂ ಅಂತರ್ಜಾಲದಲ್ಲೇ ಇರುವವರಿಗಷ್ಟೇ ಇದು ಉಪಯೋಗಕ್ಕೆ ಬರುತ್ತದೆ.ಆದರೆ ಅದರ ಪ್ರಯೋಜನವೆಂದರೆ,ಬರೇ ಏಳು ಸೆಕೆಂಡಿನಲ್ಲಿ ಚಾಲೂ ಆಗುತ್ತದೆ.ಅಂತರ್ಜಾಲದಲ್ಲಿ ಪದಸಂಸ್ಕರಣದಿಂದ ಹಿಡಿದು,ಸ್ಮರಣಕೋಶದವರೆಗೆ ಪ್ರತಿಯೊಂದೂ ಉಚಿತವಾಗಿ ಲಭ್ಯವಾಗುವುದರಿಂದ,ಇಂತಹ ಅಂತರ್ಜಾಲ ಜಾಲಾಡುವ ನೆಟ್‌ಬುಕ್ ಅಂತಹ ಸಾಧನಗಳಿಗೆ ಕ್ರೋಮ್ ಓ.ಎಸ್. ಹೇಳಿ ಮಾಡಿಸಿದ ಹಾಗಿದೆ.ಸಾಮಾನ್ಯ ಬಳಕೆದಾರರಿಗಾಗಿ ಮೊದಲ ಆವೃತ್ತಿ ಲಭ್ಯವಾಗಲು ಮುಂದಿನ ವರ್ಷದವರೆಗೂ ಕಾಯುವುದು ಅನಿವಾರ್ಯ.ಈಗ ಪರೀಕ್ಷಾರ್ಥ ಕ್ರೋಂ ಬಳಸುವವರು ವರ್ಚುವಲ್ ಬಾಕ್ಸ್ ಅಂತಹ ಮಿಥ್ಯಾಯಂತ್ರವನ್ನು ಸೃಷ್ಟಿಸುವ ತಂತ್ರಾಂಶವನ್ನು ಬಳಸಬೇಕು.
------------------------------------------------------------------------------------
ಯುಟ್ಯೂಬಿನ ವಿಡಿಯೋಗಳಿಗೆ ಸಬ್‌ಟೈಟ್ಲಸ್
ವಿಡಿಯೋಗಳನ್ನು ನೋಡುವಾಗ,ಅದರಲ್ಲಿ ಬರುವ ಧ್ವನಿಯನ್ನು ಆಲಿಸಲು ಅಸಮರ್ಥವಾಗಿರುವವರಿಗೆ ಸಹಾಯ ಮಾಡಲು ಯುಟ್ಯೂಬ್ ಬಯಸಿದೆ.ಅದಕ್ಕಾಗಿ ಗೂಗಲ್ ತನ್ನ ತಂತ್ರಜ್ಞಾನವನ್ನು ಬಳಸಿ,ವಿಡಿಯೋಗೆ ಅಡಿಬರಹಗಳನ್ನು ನೀಡಲು ಆರಂಭಿಸಿದೆ.ಮೊದಲಾಗಿ ಶೈಕ್ಷಣಿಕ ವಿಡಿಯೋಗಳಿಗೆ ಈ ಅಡಿಬರಹವನ್ನು ನೀಡಲು ಆದ್ಯತೆ ನೀಡುವುದು ಗೂಗಲ್ ಯೋಚನೆ.ಅಡಿ ಬರಹಗಳು ಇಂಗ್ಲೀಷಿನಲ್ಲಿರುವುದಾದರೂ,ಅದನ್ನು ಗೂಗಲ್‌ನ ಅನುವಾದ ಸೇವೆ ಬಳಸಿ,ಬೇರೆ ಭಾಷೆಗಳಿಗೆ ಬದಲಿಸುವುದೂ ಸಾಧ್ಯವಿದೆ. ಹೀಗೆ ಭಾಷೆ ಬಲ್ಲದವರಿಗೂ ವಿಡಿಯೋ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.ಧ್ವನಿಯನ್ನು ಲಿಪಿಯಾಗಿ ಮಾರ್ಪಡಿಸುವ ತಂತ್ರಾಂಶ ಆಧಾರಿತ ವಿಧಾನವನ್ನಿದಕ್ಕೆ ಬಳಸಲಾಗಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದಾತನಿಗೆ ಕಿವುಡಿನ ಸಮಸ್ಯೆಯಿತ್ತು.ಹ್ಯಾರೆನ್ಸ್‌ಟೀನ್ ಎನ್ನುವಾತ ಇದನ್ನು ಅಭಿವೃದ್ಧಿ ಪಡಿಸಿದ್ದಾನೆ.ಯುಟ್ಯೂಬಿಗೆ ವಿಡಿಯೋಗಳನ್ನು ಸೇರಿಸುವವರು,ಅದಕ್ಕೆ ಸರಿಯಾದ ಅಡಿಬರಹಗಳನ್ನು ಲಿಪಿರೂಪದಲ್ಲಿ ಸೈಟಿಗೆ ಏರಿಸಬಹುದು.ಆ ಅಡಿಬರಹಗಳನ್ನು ಗೂಗಲ್ ಸ್ವತ: ವಿಡಿಯೋಗೆ ಸರಿಯಾದ ಸಂದರ್ಭದಲ್ಲಿ ಸೇರಿಸುವ ತಂತ್ರಜ್ಞಾನ ಬಳಸಿ ಮಾಡುತ್ತದೆ.ಸರಿಯಾದ ಕ್ಷಣದಲ್ಲಿ ಅಡಿಬರಹ ಮೂಡಿಸಲು ಗೂಗಲ್ ತಂತ್ರಜ್ಞಾನ ಸಹಕಾರಿ. ಈ ತಂತ್ರಜ್ಞಾನ ಪೂರ್ತಿ ನಿಖರವಾಗಿಲ್ಲ.ಸ್ಟಾನ್‌ಫರ್ಡ್,ಯಾಲೇ,ಎಂಐಟಿಯಂತಹ ವಿಶ್ವವಿದ್ಯಾಲಯಗಳ ವಿಡಿಯೋಗಳು ಮೊದಲಾಗಿ ಅಡಿಬರಹ ಪಡೆಯಲಿದ್ದಾವೆ.
-----------------------------------------------------------------------------------------
ಮುಂದಿನ ಜನಪ್ರಿಯ ತಾಣ ಪೋರ‍್‌ಸ್ಕ್ವೇರ್
ಅಂತರ್ಜಾಲದಲ್ಲಿ ಟ್ವಿಟರ್ ಈ ವರ್ಷ ಮಾಡಿದಷ್ಟು ಸುದ್ದಿ ಯಾವ ತಾಣವೂ ಮಾಡಲಿಲ್ಲ.ಮುಂದಿನ ವರ್ಷ ಆ ಹೆಗ್ಗಳಿಕೆ ಪೋರ್‌ಸ್ಕ್ವೇರ್ ಎನ್ನುವ ತಾಣಕ್ಕೆ ಹೋಗಲಿದೆಯೇ?ಮಾಧ್ಯಮ ಪಂಡಿತರ ಪ್ರಕಾರ ಹೌದು. ಅಂದಹಾಗೆ ಏನಿದು ಫೋರ್‌ಸ್ಕ್ವೇರ್ ಅಂದಿರಾ? ಇದು ಜನರು ಯಾವ ಸ್ಥಳದಲ್ಲಿ ಇದ್ದಾರೆ ಎಂದು ಅವರ ಜಿಪಿಎಸ್ ಸೌಲಭ್ಯವಿರುವ ಮೊಬೈಲ್ ಸಾಧನದ ನೆರವಿನ ಮೂಲಕ ಪತ್ತೆ ಹಚ್ಚಿ,ಉಳಿದವರಿಗೆ ಅವರ ಸ್ಥಾನ ತಿಳಿಸುತ್ತದೆ.ಇದನ್ನು ಒಂದು ಆಟವಾಗಿಸಲೂ ತಾಣ ಪ್ರಯತ್ನಿಸುತ್ತದೆ.ಆ ಸ್ಥಳದ ಬೇರೆ ಬೇರೆ ಕಡೆಯ ನಿಶ್ಚಿತ ಸ್ಥಳಗಳಲ್ಲಿರುವವರಿಗೆ ಅವರಿರುವ ಸ್ಥಳದ ಆಧಾರದಲ್ಲಿ ಅಂಕಗಳನ್ನು ನೀಡಿ,ಅವರ ಒತ್ತು ಅಂಕಗಳನ್ನು ಲೆಕ್ಕ ಹಾಕಿ,ಅದರ ಆಧಾರದಲ್ಲಿ,ಪ್ರತಿ ಸ್ಥಾನದಲ್ಲಿರುವವರನ್ನು ಮೇಯರ್ ಎಂದು ಕರೆದು ಗೌರವ ನೀಡುವಂತಹ ಆಟವನ್ನು ಬಳಸುವುದು ಅಂತರ್ಜಾಲ ತಾಣದ ಯೋಜನೆ.ಆದರೆ ತಾಣ ಯಶಸ್ವಿಯಾಗಲು ಅದಕ್ಕೆ ಸಾಕಷ್ಟು ಬಳಕೆದಾರರು ಸಿಗಬೇಕು.ಟ್ವಿಟರ್ ಮೂರು ವರ್ಷದ ಹಿಂದೆ ಆರಂಭವಾದಾಗ,ಅದು ಯಾವ ಉತ್ಸಾಹವನ್ನೂ ಉಂಟು ಮಾಡಲಿಲ್ಲ. ಬಳಕೆದಾರರ ಸಂಖ್ಯೆ ಹೆಚ್ಚಿದಂತೆ,ಅದು ಹೆಚ್ಚಿನ ಉತ್ಸಾಹ,ಆಸಕ್ತಿಯನ್ನು ಉಂಟು ಮಾಡುತ್ತಿದೆ.ಒಂದು ವೇಳೆ ಟ್ವಿಟರ್‌ನಲ್ಲೇ ಪೋರ್‌ಸ್ಕ್ವೇರ್ ನೀಡುವ ಸೇವೆಯನ್ನು ನೀಡಲು ಆರಂಭಿಸಿದರೆ,ಆ ತಾಣ ಯಶಸ್ವಿಯಾಗುವುದು ಅಷ್ಟರಲ್ಲೇ ಇದೆ.
----------------------------------------------------------------------
ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್‌ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ,ನಮ್ಮ ಕೆಲಸ ಸಲೀಸಾಗಿದೆ.ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ.ಸೆಲ್‌ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು.ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ,ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com,www.phonetic.com,www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು.ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ,ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.ಈ ವಿಧಾನ ಬಳಸಿದಾಗ,ಉದಯವಾಣಿಯ ಸಂಪಾದಕೀಯ ವಿಭಾಗದ ದೂರವಾಣಿ ಸಂಖ್ಯೆಯಾದ 2570841 belroti,akroti ಇತ್ಯಾದಿಯಾಗಿ ಬದಲಾಗಿ ಬಿಡುತ್ತದೆ! ಉದಯವಾಣಿ

*ಅಶೋಕ್‌ಕುಮಾರ್ ಎ