"ದಿವ್ಯ" ನಿರ್ಲಕ್ಷ್ಯ
"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ ಒಮ್ಮಿಂದೊಮ್ಮೆಗೇ ಗೋಚರವಾಗತೊಡಗುತ್ತದೆ....
ನಾವು ನಮ್ಮ ಬದುಕಿನಲ್ಲಿ ಅನೇಕ ವಿಷಯಗಳನ್ನೂ, ಅನೇಕ ಜನರನ್ನೂ ನಿರ್ಲಕ್ಷಿಸಿರುತ್ತೇವೆ, ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಕೆಲವೊಮ್ಮೆ ಅರಿವಿಲ್ಲದೆಯೂ..... ಘಟನೆಗಳನ್ನು ಕಹಿಯಾಗಿದ್ದರೆ ಮರೆಯಬಹುದು... ಆದರೆ ಪ್ರಾಮುಖ್ಯವಲ್ಲದವನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಕೆಲವೊಮ್ಮೆ ನಾವು ಇದು ಸಾಧಾರಣ ಗುಣ ಮಟ್ಟದ್ದು, ಇದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ಲಕ್ಷಿಸಿದ್ದ ಕೆಲವು ವಿಷಯಗಳು, ಮುಂದೊಂದು ದಿನ ನಮ್ಮ ನಿರೀಕ್ಷೆಗೆ ಮೀರಿ, ಹಠಾತ್ತಾಗಿ ಫೀನಿಕ್ಸಿನಂತೆ ಮೇಲೆದ್ದು ಬಿಡತ್ತೆ ಪ್ರಾಮುಖ್ಯತೆ ಪಡೆದು... ವಿಷಯ ಅದೇ ಆಗಿದ್ದರೂ ಸಮಯ ಬದಲಾದಾಗ ಅದರ ಪ್ರಾಮುಖ್ಯತೆಯೂ ಬದಲಾಗಿ ಬಿಟ್ಟಿರುತ್ತದೆ. ಅದು ನಮ್ಮನ್ನು ಮೂರ್ಖರನ್ನಾಗಿಸಿ, ಮೆರೆಯುತ್ತದೆ... ಇದೆಲ್ಲಾ ಘಟನೆಗಳೋ / ವಿಷಯಗಳೋ ಆದವು...
ಆದರೆ ನಾನೀಗ ಹೇಳುತ್ತಿರುವುದು ಮನುಷ್ಯರ ಬಗ್ಗೆ, ಸಂಬಂಧಗಳ ಬಗ್ಗೆ.. ಈ ಸಂಬಂಧಗಳ ಕದಂಬ ಬಾಹುವಿನಲ್ಲಿ ಸಿಲುಕಿ ಪ್ರಮುಖವಾದ ವಿಷಯವೊಂದು ನರಳಿದ ಬಗ್ಗೆ.... ತಪ್ಪು ತಿಳುವಳಿಕೆ, ಅಹಂ ಅಥವಾ ಸ್ವಪ್ರತಿಷ್ಠೆಗೆ ಸಿಲುಕಿ ನರಳಿದ ನವಿರಾದ ಸಂಬಂಧದ ಬಗೆಗೆ...
"ನಿರ್ಲಕ್ಷ್ಯ" ಎನ್ನುವುದು ವ್ಯಕ್ತಿ ತಾನೇ ಅನುಭವಿಸಿದಾಗ ಮಾತ್ರ ಅರ್ಥ ಮಾಡಿಕೊಳ್ಳಲಿಕ್ಕಾಗುವಂತಹ ಸೂಕ್ಷ್ಮ ವಿಚಾರ. ಅದೂ ತನ್ನವರೆಂದು ಕೊಂಡು, ತುಂಬಾ ಬೇಕಾದವರೆಂದು ಕೊಂಡಿದ್ದ ಒಬ್ಬ ವ್ಯಕ್ತಿಯಿಂದ, ನಾವು ದಿವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಆಗುವ ನೋವು, ತುಡಿತ ಅನುಭವಿಸಿದ ಮನಸ್ಸಿಗಲ್ಲದೆ ಬೇರೆಯವರಿಗೆ ತಿಳಿಯುವುದು ಸ್ವಲ್ಪ ಕಷ್ಟವೇ...
ಈ ಘಟನೆಯ ಮುಖ್ಯ ಪಾತ್ರಧಾರಿ ಒಮ್ಮೆ ನನಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದರು.... ನನಗೆ ಸಂಬಂಧದಲ್ಲೂ ಅತೀ ಹತ್ತಿರದವರೇ.... ಕಾರಣಾಂತರಗಳಿಂದ ನನ್ನಿಂದ ದೂರವಾಗಿ ಮಾತು-ಕತೆ ಕೂಡ ನಿಂತು ಹೋದಾಗಲೂ ನನಗಿಷ್ಟೊಂದು ನೋವು ಆಗಿರಲಿಲ್ಲವೇನೋ... ಈಗ ತನ್ನ ಒಬ್ಬನೇ ಮಗನಿಗೆ ಮದುವೆ ಗೊತ್ತಾದ ಸಂಭ್ರಮದಲ್ಲಿ ಕೂಡ... ಅವರಿಗೆ ನನ್ನ ನೆನಪೂ ಬಾರದಿದ್ದಾಗ... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ವಾಸ್ತವ ನನಗರ್ಥವಾಯಿತು.... ಊರಿಗೆಲ್ಲಾ ತಾನೇ ದೂರವಾಣಿ ಮೂಲಕ ಮದುವೆ ಸಮಾಚಾರ ಹೇಳುವಾಗ, ತನ್ನ ಸಂತೋಷ ಹಂಚಿಕೊಂಡಾಗ ಕೂಡ, ನನ್ನ ನೆನಪೂ ಆ ವ್ಯಕ್ತಿಗೆ ಆಗಿಲ್ಲವೆಂದರೆ ನನ್ನ ಈ ಹುಚ್ಚು ಮನಸ್ಸೇಕೋ ಒಪ್ಪುತ್ತಲೇ ಇಲ್ಲ.... ಯಾರಿಗೋ ದೂರದವರಿಗೆ ಹೇಳಿದಂತೆ ಹೇಳಿದ್ದರೂ ಪರವಾಗಿರಲಿಲ್ಲ... ಒಂದೇ ಒಂದು ಕರೆ ನನ್ನನ್ನು ಈ ದಿನ ಈ ತರಹದ ನೋವಿನಿಂದ ಪಾರುಮಾಡಿರುತ್ತಿತ್ತು. ಈಗ ನನಗಾಗುತ್ತಿರುವ ನೋವು ಹೆಪ್ಪುಗಟ್ಟಿ ಈ ಸಾಧಾರಣ ಶಬ್ದ ನಿರ್ಲಕ್ಷ್ಯಕ್ಕೆ ದಿವ್ಯ, ಭವ್ಯ, ಮಹತ್ತರ ಎಂಬೆಲ್ಲಾ ಗುಣವಾಚಕ ಬಾಲಗಳನ್ನು ಅಂಟಿಸುವಂತೆ ಮಾಡಿದೆ... ನಿರ್ಲಕ್ಷ್ಯ ಎಂಬ ಶಬ್ದ ಸಾಧಾರಣವಾಗಿದ್ದರೂ, ಇದನ್ನು ಅನುಭವಿಸಿದಾಗ ಆಗುವ ನೋವಿಗೆ ಆಳ, ಅಳತೆ ಎಂಬ ಯಾವ ಮಾಪನಗಳೂ ಉಪಯೋಗವಾಗೊಲ್ಲ....
ಏನಾಗುತ್ತಿದೆ ನಮ್ಮ ಸಂಬಂಧಗಳ ಬೆಸುಗೆಗೆ..... ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.... ಎಲ್ಲಾ ಶಿಷ್ಟಾಚಾರಗಳನ್ನೂ ಮರೆತೇಬಿಟ್ಟಿದ್ದೇವಾ..... ಪ್ರೀತಿ-ವಿಶ್ವಾಸ-ನಂಬಿಕೆ ಎಂಬೆಲ್ಲಾ ಶಬ್ದಗಳೂ ಎಲ್ಲಿ ಹೋದವು.... ಎಂದು ಒಂಟಿಯಾಗಿ ಕುಳಿತು ನನ್ನ ಮನಸ್ಸು ...... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾರದೇ ಮೂಕವಾಗಿ ರೋದಿಸುತ್ತಿದೆ......
Comments
ಉ: "ದಿವ್ಯ" ನಿಲ್ಲಕ್ಷ್ಯ
In reply to ಉ: "ದಿವ್ಯ" ನಿಲ್ಲಕ್ಷ್ಯ by sandhya venkatesh
ಉ: "ದಿವ್ಯ" ನಿಲ್ಲಕ್ಷ್ಯ
In reply to ಉ: "ದಿವ್ಯ" ನಿಲ್ಲಕ್ಷ್ಯ by Shamala
ಉ: "ದಿವ್ಯ" ನಿಲ್ಲಕ್ಷ್ಯ
ಉ: "ದಿವ್ಯ" ನಿಲ್ಲಕ್ಷ್ಯ
ಉ: "ದಿವ್ಯ" ನಿರ್ಲಕ್ಷ್ಯ
ಉ: "ದಿವ್ಯ" ನಿರ್ಲಕ್ಷ್ಯ
ಉ: "ದಿವ್ಯ" ನಿರ್ಲಕ್ಷ್ಯ
ಉ: "ದಿವ್ಯ" ನಿರ್ಲಕ್ಷ್ಯ