ಆ ಸ್ನಿಗ್ದ ನಗೆಯ... ಮುದ್ದು ಮುಖದ ಹುಡುಗಿ..

ಆ ಸ್ನಿಗ್ದ ನಗೆಯ... ಮುದ್ದು ಮುಖದ ಹುಡುಗಿ..

ಬರಹ

ಮೈಸೂರಿನ ರೈಲು ನಿಲ್ದಾಣ....

ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್ಲಿ.

ಅಂತೂ ಸಿಕ್ತು.....

ಕುಂತ್ ತಕ್ಷಣ ಕಿವಿಗೆ ಹಿಯರ್ ಫೋನ್ ಹಾಕ್ಕೋಂಡ್ ಕಿಟಕಿಯೊಳಗಿಂದ ಪ್ಲಾಟ್ ಫಾರಂ ಮೇಲಿರುವರನ್ನೆಲ್ಲಾ ನೋಡ್ತಾ ಇದ್ದಾಗ ಯಾರೊ ಕರೆದಂತಾಯ್ತು... ಹಿಂದೆ ತಿರುಗಿ ನೋಡ್ದೆ..

೪೦ ರ ಆಸುಪಾಸಿನ ಇಂದಿನ ಆಧುನಿಕ ಮಹಿಳೆ...(ಆಧುನಿಕ ಯಾಕೆ ಅಂತಂದ್ರೆ ೪೦ ರ ವಯಸ್ಸಿನ ಮಹಿಳೆ ಚೂಡಿದಾರ್ ಹಾಕಿರೋದ್ರಿಂದ ನನಗೆ ಮಾಡ್ರನ್ ಅನಿಸಿರಬೇಕು)

ರಿನನ್ದ್ಬ್ಫ಼್ಬ್ಸಾಬಸ್ದ್....ಚಕ್ಜ್ದಹಸ್ಜಹ್ಜ್ಕ್ದಸ್ಧಚ್ವ್....

ಸರಿಯಾಗಿ ಕೇಳಿಸಲಿಲ್ಲ

ಕಿವಿಯಲ್ಲಿದ್ದ ಇಯರ್ಫೋನ್ ತೆಗೆದೆ...

ರಿಸರ್ವೇಶನ್ ಇಲ್ದೇ ಇದ್ರು ಇಲ್ಲಿ ಕುತ್ಕೋಬಹುದಾ....

ಬೆಂಗಳೂರ್ ವರೆಗೂ ಕುತ್ಕೋಬಹುದು..

ಹಾಗಾದ್ರೆ ಓಕೆ.. ನಾವ್ ಮದ್ದೂರು ಇಳ್ಕಂತೀವಿ...

ಆ ಕಡೆಯಿಂದ ಒಂದು :)

ನಾನೂ ಒಂದ್ :) ಕೊಟ್ಟೆ.

ಆಕೆ ಮಗಳನ್ನು ಕರೆದು( ಬಹುಶಃ ಆಕೆ ಇನ್ನೊಂದು ಕಡೆ ಕಿಟಕಿಯನ್ನು ಹುಡುಕುತ್ತಿದ್ದಳೇನೋ) ನನ್ನ ಮುಂದೆ ಕೂರಿಸಿ ತಾನು ಪಕ್ಕ ಕೂತಳು.

ನಾನು ಮತ್ತೆ ಸಂಗೀತ ಲೋಕದಲ್ಲಿ ಮುಳುಗಿಹೋದೆ...

೦೮.೧೫

ಟ್ರೈನ್ ಹೊರಡಲು ಶುರುವಾಯ್ತು...

ಪ್ಲಾಟ್ಫಾರಂ ಮರೆಯಾಗುತ್ತಿದ್ದಂತೆ ಕಿಟಕಿಯ ಪಕ್ಕ ಅಂಧಕಾರ ಆವರಿಸಿಕೊಳ್ಳತೊಡಗಿತು... ದೂರದಲ್ಲಿ ಲೈಟ್ಸ್ ಮಿಂಚಿ ಮರೆಯಾಗುತ್ತಿದ್ದವು.

ಇನ್ನಷ್ಟು ದೂರ ಹೋಗುತ್ತಿದ್ದಂತೆ ರೈಲಿನ ವೇಗ ಹೆಚ್ಚಾದಂತೆ ಗಾಳಿಯು ಜೋರಾಗಿ ಕಿಟಕಿಯೊಳಗಿಂದ ಒಳ ನುಗ್ಗತೊಡಗಿತು...

ಆ ಗಾಳಿಗೆ ಆಕೆಯ ಮುಂಗುರುಳು ಆಕೆಯ ಮುದ್ದು ಮುಖದೊಂದಿಗೆ ಆಟವಾಡತೊಡಗಿತು... ಮೊದ ಮೊದಲು ಮುಂಗುರುಳ ತುಂಟಾಟವನ್ನು ತೋರು ಬೆರಳನಿಂದ ಹಿಂದಕ್ಕೆ ತಳ್ಳುತ್ತಿದ್ದವಳು.. ಇನ್ನು ಆಗದು ಎಂಬಂತೆ ಮುಂಗುರಳನ್ನು ಹಿಂದಕ್ಕೆ ಎಳೆದು ಕೂದಲಿನೊಂದಿಗೆ ಗಟ್ಟಿಯಾಗಿ ಬಿಗಿದು ಗಂಟಾಕಿದಳು. ತನ್ನಾಟ ಇನ್ನು ಸಾಗದಂತೆ ಮಾಡಿದ.. ಆ ಟ್ರೈನ್ ಡ್ರೈವರ್ ನನ್ನು ಶಪಿಸುತ್ತಾ.. ಅಲ್ಲಿಯವರೆಗು ತಾನು ಸವಿದ, ಸವರಿದ ಆ ಮುದ್ದು ಮುಖವನ್ನು ನೆನೆಯುತ್ತಾ ಮುಂಗುರುಳು ಆ ಗಂಟಿನೊಳಗೆ ಮುದುಡಿ ಮಲಗಿತು.

ಆಕೆ ಕೂದಲನ್ನು ಗಂಟಾಕುವಾಗ ಕಂಡಿತು ಮುದ್ದು ಮುಖದ, ಸ್ನಿಗ್ದ ನಗುವಿನ ಆಕೆಯ ಮುಖ... ನನ್ನ ಹಿಂದಿನ ಗರ್ಲ್ ಫ್ರೆಂಡ್ಸ್ ರಷ್ಟು ಆಕರ್ಶಕವಲ್ಲದಿದ್ದರು. ವಿಶೇಷವಾಗಿ ಕಂಡಳು...

ಅಂಗೈ ಚಡಪಡಿಸತೊಡಗಿತು...

ಏನೋ ಕಳೆದು ಹೋದದ್ದನ್ನು ಹುಡುಕುವಂತೆ... ಮರೆತುಹೋದದ್ದನ್ನು ನೆನೆಪಿಸಿಕೊಳ್ಳುವಂತಿತ್ತು ಆ ಚಡಪಡಿಕೆ... ನನಗೆ ಗೊತ್ತಿಲ್ಲದಂತೆ ಕೈ ಬ್ಯಾಗ್ ಕಡೆಗೋಯ್ತು... ಬ್ಯಾಗಲ್ಲಿ ಏನೋ ಹುಡುಕತೊಡಗಿತು

ಏನು..?

.....?

ಆ ಸಿಕ್ತು ... ಸ್ಕೆಚ್ ಬುಕ್...

ಹೌದು ಟ್ರೈನ್ ಪ್ರಯಾಣ ಕಡಿಮೆ ಆದದ್ದೇ ಪ್ರಯಾಣದಲ್ಲಿ ಡ್ರಾಯಿಂಗ್ ಮಾಡೋ ಅಭ್ಯಾಸವೇ ಬಿಟ್ಟೋಗಿತ್ತು...

ನೆನಪಿಸಿಕೊಂಡು ಕೊನೆಯದಾಗಿ ಯಾವಾಗ ಮಾಡಿದ್ದು..

ಹೌದು.. ಮೂರು ವರ್ಷಗಳ ಹಿಂದೆ ದೆಹಲಿಗೆ ಹೋದಾಗ ಮಾಡಿದ್ದೇ ಮತ್ತೆ ಮಾಡೇ ಇಲ್ಲ...

ಅಷ್ಟೊತ್ತಿಗೆ ಸ್ಕೆಚ್ ಬುಕ್ .. ಪೆನ್ ಕೈಗೆ ಬಂದಾಗಿತ್ತು.

ಮೊದಲೆಲ್ಲ ಮುಂದೆ ಯಾರೇ ಕುಂತಿರ್ಲಿ.. ಮುಲಾಜಿಲ್ಲದೆ ಅವರ ಡ್ರಾಯಿಂಗ್ ಮಾಡ್ತಾ ಇದ್ದೆ...

ಅವ್ರ ಪರ್ಮೀಶನ್ ಇರ್ಲಿ ಇಲ್ದೇ ಇರ್ಲಿ....

ಆದ್ರೆ ಇವತ್ತ್ಯಾಕೋ ಆಗ್ತಾ ಇಲ್ಲ..

ಏನ್ ಮಾಡ್ಲಿ...

ಸರಿ ಸುಮ್ನೆ ಡ್ರಾಯಿಂಗ್ ಮಾಡೋಣ... ಹಂಗಾದ್ರು ಆ ಹುಡುಗೀನ inspire ಮಾಡೋಣ...

ಉಹುಂ..

ಆ ಹುಡುಗೀ ಮುಖಾನೆ ಬರ್ತಾ ಇದೆ...

ಅವ್ರಮ್ಮ ನೋಡಿ ಗಲಾಟೇ ಮಾಡಿದ್ರೆ... ಆ ಮುಖಾನ ಹಾಗೇ manuplate ಮಾಡ್ತಾ ಹೋದೆ... ಆ ಚಿತ್ರಕ್ಕೆ ಮತ್ತಷ್ಟು ರೇಖೆಗಳು ಸುತ್ತಿಕೊಂಡವು....

 

ಸಾಕೆನಿಸಿತು

ಅಲ್ಲೇ ಬರೆಯಲು ಪ್ರಾರಂಭಿಸಿದೆ

"ಪಯಣದ ಪಯಣಿಗನಿಗೆ

ಮುಖಾಮುಖಿಯಾಗುವುವು

ಹಲವು ಮುಖಗಳು.

ನೆನಪಿನ ಸೌದಕ್ಕೆ

ಹಲವು ಸ್ತಂಬಗಳು

ಸ್ತಂಬಕ್ಕಿಲ್ಲ ಯಾವುದೇ

ಅಡಿಪಾಯಗಳು....

ಆದರು ನಿಂತಿರುತ್ತದೆ

ನೆನಪುಗಳ ಸೂರಿನಡಿಯಲ್ಲಿ

ಸೌದದ ಸೆರಗಲ್ಲಿ

ಕನಸುಗಳ ಕಾನನದಲ್ಲಿ

ಕಾರ್ಗತ್ತಲಲ್ಲಿ ಕಾಣುವ ನೆರಳಂತೆ

ಕಂಡೂ ಕಾಣದಂತೆ.

ಅಷ್ಟರಲ್ಲಾಗಲೇ ಮಂಡ್ಯ ದಾಟಿ ಮದ್ದೂರು ಹತ್ತಿರವಾಗುತ್ತಿತ್ತು...

ಎಷ್ಟೇ ಪ್ರಯತ್ನ ಪಟ್ಟರು ಆಕೆಯ ಮುಖವನ್ನು ನೋಡದೇ ಇರಲಾಗಲಿಲ್ಲ...

ಮತ್ತೆ ಆಕೆಯ ಚಿತ್ರಬರೆದು ಸೆರೆಹಿಡಿಯಲು ಪ್ರಯತ್ನಿಸಿದೆ... ಮೂರು ವರ್ಶಗಳ "ಅಂತರ" ತನ್ನ ಅಂತರವನ್ನು ನೆನಪಿಸಿತು.. ನನ್ನ ರೇಖೆ ವಕ್ರವಾಯಿತು.. ಅದನ್ನು ಕಂಡು ಆ "ಅಂತರ" ಕಿಸಕ್ಕನೆ ಕಿಸಿಯಿತು... ಮತ್ತೆ ಪದಗಳ ದಾಸ್ಯಕ್ಕೆ ಶರಣಾದೆ...

ಮುಂದಿನ ಕೆಲವು ಕ್ಷಣಗಳಲ್ಲಿ

ಮಾಯವಾಗಲಿದೆ ಆ ಮುದ್ದು ಮುಖವು....

ಅದರ ಸೂಚನೆಯೋ ಎಂಬಂತೆ

ಬೆಳಕಿನಡಿಯಲ್ಲಿನ ಕಿಟಕಿಯೊಳಗಿಂದ

ಕಾಣುತ್ತಿದೆ ಬರೀ ಕತ್ತಲು....

ಕತ್ತಲೊಳಗಿಂದ ಬರುತ್ತಿರುವ ತಂಗಾಳಿಯು

ನೆನಪಿಸುತ್ತಿದೆ ಆ ಸ್ನಿಗ್ದ ನಗೆಯ.

ಮತ್ತೆ ಮುಂದುವರೆಯಲಿದೆ

ನೆನಪಿನ ನಗಾರಿಯ ಸದ್ದಿನೊಂದಿಗೆ

ಮುಂದಿನ ನನ್ನೀ ಪಯಣವು...

ಆ ನೆನಪುಗಳನ್ನು ಮೆಲುಕಾಕ್ತಾ ಇನ್ನೊಂದೆರೆಡು ಚಿತ್ರಗಳ ರಚಿಸುವುದರಲ್ಲಿ ಮುಳುಗಿಹೋದೆ...


 


ಕಿವಿಯಲ್ಲಿ ಸೋನು ನಿಗಂ "ಕಲ್ ಹೋನ ಹೋ" ಎಂದು ಶುರುವಿಟ್ಟುಕೊಂಡ...