ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!
ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ ಬರೆದಿದ್ದಾರೆ.
ತಮ್ಮ ವಿಚಿತ್ರ ತೆವಲುಗಳಿಗೆ ಮಾಧ್ಯಮಗಳನ್ನು ಮಾಧ್ಯಮವಾಗಿ ಉಪಯೋಗಿಸುವ ಪತಕರ್ತರ ಜಾಯಮಾನ ಇಂದು ನಿನ್ನೆಯದಲ್ಲ (ಬೇಸರವೆನಿಸಿದರೂ ಪತ್ರಕರ್ತರ ಬಗ್ಗೆ ಈ ಮಾತು ಹೇಳಲೇಬೇಕಿನಿಸಿದೆ). ಸಾರ್ವಜನಿಕ ಜೀವನದಲ್ಲಿರುವವರೂ ನಮ್ಮಂತೆಯೇ ಮನುಷ್ಯರು ಅವರಿಗೂ ನಮ್ಮ ಮನೆಗಳಲ್ಲಿರುವಂತೆಯೇ ಸಮಸ್ಯೆಗಳಿರುತ್ತವೆ ಎಂಬ ಕನಿಷ್ಠ ಜ್ಞಾನ ನಮ್ಮ ಪತ್ರಕರ್ತರಿಗೆ ಏಕೆ ಇರುವುದಿಲ್ಲ?
ಪ್ರಕಾಶ್ ರೈ ಇನ್ನೊಬ್ಬರನ್ನು ಮದುವೆಯಾಗಿರುವುದು, ನಟನೊಬ್ಬ ಹೇರ್ ಡೈ ಮಾಡಿಸಿಕೊಂಡಿರುವುದು, ನಟಿಯೊಬ್ಬಳು ಸ್ತನ ಚಿಕಿತ್ಸೆ ಮಾಡಿಕೊಂಡಿರುವುದು sheer personal matters! ಇದಕ್ಕೆ TV 1 to 10 ಪತ್ರಕರ್ತರ ಅಪ್ಪಣೆ ಬೇಕೆ?
ಇಂಥ ಸುದ್ದಿಗಳನ್ನು ವರದಿ ಮಾಡುವಾಗ ಇದರಿಂದ ಆಗಬಹುದಾದ ಪರಿಣಾಮ ಅಥವಾ ಜನರಿಗೆ ಯಾವ ರೀತಿಯಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂಬ ಪತ್ರಿಕೋದ್ಯಮದ ಮೂಲ ಪಾಠದ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಅಚಾತುರ್ಯಗಳು ನಡೆಯುವುದಿಲ್ಲ.
ಟಿಆರ್ ಪಿ, ಪ್ರಸರಣ ಸಂಖ್ಯೆ ಏರಿಸಿಕೊಳ್ಳಬೇಕೆಂಬ ಒಂದಂಶದ ಕಾರ್ಯಸೂಚಿಯೇನಾದರೂ ನಮ್ಮ ಮಿತ್ರರಿಗೆ ಇದ್ದರೆ ತಮ್ಮ ಚಾನೆಲ್-ಪತ್ರಿಕೆಗೆ ಅಂಟಿಕೊಂಡಿರುವ ಸುದ್ದಿ ಎಂಬ ಪದವನ್ನು ತೆಗೆದು ಬೇರೆ ಹೆಸರಿನ್ನಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ನಾನು ಓದಿದ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಓದುಗರು ಬಯಸುವ ಎರಡು ವಿಷಯಗಳೆಂದರೆ ಸೆಕ್ಸ್ ಮತ್ತು ಜ್ಯೋತಿಷ್ಯ. ಸುದ್ದಿ ಹೆಸರಿನಲ್ಲಿ ಇಂಥ ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಿದರೆ-ಬಿತ್ತರಿಸಿದರೆ ತಮ್ಮ ಪತ್ರಿಕೆ-ಚಾನೆಲ್ ನ ಹೆಸರನ್ನೂ ಪತ್ರಕರ್ತರು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಕಿರಾಣಿ ಅಂಗಡಿ ಲೈಸನ್ಸ್ ಪಡೆದು ಸಾರಾಯಿ ಮಾರಿದಂತಾಗುತ್ತದೆ!