ನಮಗೆ ಧಿಕ್ಕಾರವಿರಲಿ!

ನಮಗೆ ಧಿಕ್ಕಾರವಿರಲಿ!

ಬರಹ

  ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿರುವ ಇವರು ಸಮಾಜದ ಗಣ್ಯ ವ್ಯಕ್ತಿಗಳು.
  ಇವರ ವೃತ್ತಿ ದಲ್ಲಾಳಿ ಕೆಲಸ. ಯಾರೋ ಉತ್ಪಾದಿಸಿದ್ದನ್ನು ಇನ್ನಾರಿಗೋ ದಾಟಿಸಿ ಅದಕ್ಕಾಗಿ ಕಮಿಷನ್ ಬಾಚುವ ಮಧ್ಯವರ್ತಿ ಇವರು. ಅತ್ತ ಉತ್ಪಾದಕರನ್ನೂ ಇತ್ತ ಗ್ರಾಹಕರನ್ನೂ ಸುಲಿದು ತಾವು ಸಂಪತ್ತು ಕೂಡಿಹಾಕುತ್ತಿದ್ದಾರೆ. ಇವರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿಲ್ಲ. ವೃತ್ತಿ ತೆರಿಗೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಸಂಪತ್ತು ತೆರಿಗೆ ಎಲ್ಲವನ್ನೂ ವಂಚಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಲಂಚ ಕೊಟ್ಟು ’ಅಡ್ಜಸ್ಟ್’ ಮಾಡುತ್ತಿದ್ದಾರೆ. ಇದೆಲ್ಲ ನಮಗೆ ಗೊತ್ತು.
  ಆದರೂ ನಾವು ಇವರನ್ನು ದೊಡ್ಡಮನುಷ್ಯರೆಂದು ಪರಿಗಣಿಸಿ ವಿಶೇಷ ಮನ್ನಣೆ ನೀಡುತ್ತೇವೆ! ಇವರ ಮುಖ ಕಂಡರೆ ಹಲ್ಲುಕಿರಿಯುತ್ತೇವೆ! ಇವರ ನಾಯಿಯನ್ನೂ ಬೆರಗುಗಣ್ಣಿನಿಂದ ನೋಡುತ್ತೇವೆ!
  ***
  ಸರ್ಕಾರಿ ಕಚೇರಿ. ಹವಾನಿಯಂತ್ರಿತ ಕೊಠಡಿಯೊಳಗೆ ಉನ್ನತಾಧಿಕಾರಿ. ನಗರದ ಸಕಲ ಉಸ್ತುವಾರಿ ಆತನ ಹೊಣೆ. ಆತನನ್ನು ಕಾಣಬೇಕೆಂದರೆ ನಾವು ಕೊಠಡಿಯ ಹೊರಗೆ ಗಂಟೆಗಟ್ಟಲೆ ಕಾಯಬೇಕು. ಆತ ನಮ್ಮೊಡನೆ ಅರ್ಧ ನಿಮಿಷ ಮಾತಾಡಿದರೆ ಅದು ನಮ್ಮ ಸೌಭಾಗ್ಯ!
  ಕೋಟಿಗಟ್ಟಲೆಯ ಆಸ್ತಿಯನ್ನು ಈ ಅಧಿಕಾರಿ ಮಾಡಿಕೊಂಡಿದ್ದಾನೆ. ಇವನ ಸಂಬಳ ಇವನ ಮನೆಯ ಬೆಕ್ಕು-ನಾಯಿ ಸಾಕಲಿಕ್ಕೂ ಸಾಲದು! (ಅಂಥ ರಾಜಭೋಗ ಅವುಗಳಿಗೆ!) ಇವನ ಆಸ್ತಿಸಂಚಯ, ಸಂಸಾರದ ಅಯ್ಯಾಷ್ ಎಲ್ಲ ನಡೆದಿರುವುದು ಗಿಂಬಳದ ಹಣದಿಂದ! ಅತ್ತ ಸರ್ಕಾರವು ಜನೋಪಯೋಗಿ ಯೋಜನೆಗಳಿಗೆ ಬಿಡುಗಡೆ ಮಾಡಿದ ಹಣವನ್ನೂ ಈತ ತಿನ್ನುತ್ತಾನೆ, ಇತ್ತ ಜನರಿಂದಲೂ ಎಂಜಲು ತಿನ್ನುತ್ತಾನೆ.
  ಈತನ ಉಸ್ತುವಾರಿಯಲ್ಲಿ ನಗರವೆಲ್ಲ ಗಬ್ಬೆದ್ದುಹೋಗಿದೆ! ಎಲ್ಲಿ ನೋಡಿದರೂ ಕಸದ ರಾಶಿ! ಊರಿಡೀ ಕೊಳಚೆ ಗುಂಡಿ! ವಿಪರೀತ ಸೊಳ್ಳೆ! ರೋಗರುಜಿನ ಯಥೇಚ್ಛ! ಕೆರೆ, ಉದ್ಯಾನ, ಕೊನೆಗೆ ಪಾದಚಾರಿ ಮಾರ್ಗ ಕೂಡ ಭೂಗಳ್ಳರ ಮತ್ತು ಅತಿಕ್ರಮಣಕಾರರ ಪಾಲು! ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯಗಳೇ.
  ಆದರೂ ನಾವು ಈ ಅಧಿಕಾರಿಗೆ ಸಲಾಂ ಹೊಡೆಯುತ್ತೇವೆ! ಈತನೆದುರು ಹಲ್ಲು ಗಿಂಜಿಕೊಂಡು ನಿಲ್ಲುತ್ತೇವೆ! (ಹಲವರು ದಕ್ಷಿಣೆಯನ್ನೂ ಸಲ್ಲಿಸುತ್ತೇವೆ!) ಈತನ ಮಕ್ಕಳು-ಮರಿಗಳಿಗೆ, ಕೊನೆಗೆ ಈತನ ಮನೆಯ ನಾಯಿಗೂ ಎಲ್ಲಿಲ್ಲದ ಗೌರವ ಕೊಡುತ್ತೇವೆ!
  ***
  ಆರಕ್ಷಕ ಠಾಣೆ. ಅಲ್ಲಿರಬೇಕಾದವರು ಆರಕ್ಷಕರು. ಆದರೆ ಅಲ್ಲಿರುವವರು ಆ ರಾಕ್ಷಸರು! ನಮ್ಮ ರಕ್ಷಣೆಗೆಂದು ಸಂಬಳ ಪಡೆಯುವ ಅವರು ನಮ್ಮ ದುಡಿಮೆಯನ್ನೂ ಭಕ್ಷಿಸಿ ನಮ್ಮನ್ನೇ ಅನ್ಯಾಯವಾಗಿ ಶಿಕ್ಷಿಸುತ್ತಾರೆ! ಅವರನ್ನು ಕಂಡರೆ ಸುಭದ್ರತೆಯ ಭಾವ ಹೊಂದಬೇಕಾದ ನಾವು ಅವರನ್ನು ಕಂಡರೆ ಹೆದರಿ ಸಾಯುತ್ತೇವೆ!
  ***
  ಇನ್ನು, ವಿಧಾನ ಸೌಧ. ನಮ್ಮ ಸೇವಕರು ಅಲ್ಲಿದ್ದಾರೆ. ನಮ್ಮ ಸೇವೆ ಮಾಡಲೆಂದೇ ಕೋಟಿಗಟ್ಟಲೆ ಹಣ ಖರ್ಚುಮಾಡಿಕೊಂಡು ಅಲ್ಲಿ ಹೋಗಿ ಕೂತಿದ್ದಾರೆ! ಎಂಥ ಮಹಾತ್ಮರು!
  ಮೇಲೆ ಹೇಳಿದ ಎಲ್ಲ ಅನ್ಯಾಯಗಳಿಗೂ ಈ ಮಹಾತ್ಮರೇ ಕಾರಣರು! ಎಲ್ಲ ಅವ್ಯವಸ್ಥೆಗಳಿಗೂ ಇವರೇ ಮೂಲ! ಮೇಲಾಗಿ, ಎಲ್ಲರಿಗಿಂತ ದೊಡ್ಡ ನುಂಗಪ್ಪಗಳು ಇವರು! ಇಡೀ ನಾಡಿಗೇ ಇವರ ಗುಣ ಗೊತ್ತು. ಪಬ್ಲಿಕ್ಕಾಗಿಯೇ ನಾವು ಇವರ ಬಗ್ಗೆ ಆಡಿಕೊಳ್ಳುತ್ತೇವೆ.
  ಆದಾಗ್ಗ್ಯೂ, ಎದುರು ಸಿಕ್ಕರೆಂದರೆ ಇವರು ನಮಗೆ ದೇವರ ಸಮಾನ! ದೇವರಿಗಿಂತ ಮಿಗಿಲು! ಬಗ್ಗಿ ಡೊಗ್ಗಿ ಸಲಾಮು ಹೊಡೆಯುತ್ತೇವೆ! ಇವರು ಕಾಲಲ್ಲಿ ತೋರಿಸಿದ್ದನ್ನು ನಾವು ತಲೆಯಮೇಲೆ ಇಟ್ಟುಕೊಳ್ಳುತ್ತೇವೆ!
  ***
  ಛಿ! ಎಂಥ ನರಸತ್ತವರು ನಾವು! ನಮಗೆ ಧಿಕ್ಕಾರವಿರಲಿ!