ಶಿಲ್ಪಾಳ ಆರಾಧ್ಯ ದೈವ ಜೇಡ್ ಗುಡಿ

ಶಿಲ್ಪಾಳ ಆರಾಧ್ಯ ದೈವ ಜೇಡ್ ಗುಡಿ

ಒಬ್ಬೊಬ್ಬರ ಅದೃಷ್ಟ ಯಾವ ಯಾವ ರೀತಿ ಖುಲಾಯಿಸುತ್ತದೆ ನೋಡಿ. ಅಪ್ರತಿಮ ಪ್ರತಿಭೆ ಇದ್ದರೂ ಓರ್ವ ಮೇರು ನಟ ಮೂಲೆಗುಂಪು ಆಗುತ್ತಾನೆ, ನಂತರ ಒಂದು ಟಿವಿ ಷೋ ಮೂಲಕ ಜನರ ಮನ ಗೆದ್ದು ಇನ್ನಷ್ಟು ಸಂಪಾದಿಸಿ ಮರಳಿ ಪ್ರಖ್ಯಾತಿ ಪಡೆಯುತ್ತಾನೆ  ಸೌಂದರ್ಯ ಮತ್ತು ಪ್ರತಿಭೆಯಲ್ಲಿ ದೊಡ್ಡ ಅಲೆಗಳನ್ನೇನೂ ಎಬ್ಬಿಸದ ಓರ್ವ ನಟಿ ದೂರದ ದೇಶಕ್ಕೆ ಹೋಗಿ ಅಲ್ಲಿ ಒಂದು ಚರ್ಚೆಯಲ್ಲಿ ಭಾಗವಹಿಸಿ ಬಿಳಿ ಹೆಣ್ಣು ಮಗಳಿಂದ ಹಿಗ್ಗಾ ಮುಗ್ಗಾ ಪ್ರೋಕ್ಷಣೆ ಮಾಡಿಸಿಕೊಂಡ ನಂತರ ತನಗರಿವಿಲ್ಲದೆಯೇ ಕೀರ್ತಿ ಸಂಪಾದಿಸುತ್ತಾಳೆ. ಮೇಲೆ ವಿವರಿಸಿದ ವ್ಯಕ್ತಿಗಳೇ ನಮ್ಮ ಬಾಲಿವುಡ್ ನ ಅಮಿತಾಬ್ ಬಚ್ಚನ್ ಮತ್ತು ಶಿಲ್ಪಾ ಶೆಟ್ಟಿ. 

 

ಜೇಡ್ ಗುಡಿ ಲಂಡನ್ನಿನ ರಿಯಾಲಿಟಿ ಶೋ ದಲ್ಲಿ ಶಿಲ್ಪಾಳ ಬಗ್ಗೆ ಜೇನು ಒಸರುವ ಮಾತನ್ನಾಡದೇ ಮುಖ ಮೂತಿ ನೋಡದೆ ಗುಡಿಸಿ ಹಾಕಿದ ಫಲ ಶಿಲ್ಪಾಳ ಈಗಿನ ಯಶಸ್ಸಿನ ಗುಟ್ಟು. ಆ ಶೋ ದಲ್ಲಿ ಭಾಗವಹಿಸುವವರೆಗೂ ಶಿಲ್ಪಾ ಯಾರೆಂದು ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಜೇಡ್ ಗುಡಿಯ ಅವ್ಯಾಹತ ವಾಗ್ದಾಳಿಗೆ ತೋರಿ ಹೋಗದೆ ಅಪ್ರತಿಮ ಸಹನೆ ಪ್ರದರ್ಶಿಸಿದ ಶಿಲ್ಪಾ ಬಿಳಿಯರ ಸಹಾನುಭೂತಿ ಪಡೆದರು. ಕಲಾವಿದರು, ರಾಜಕಾರಣಿಗಳು ಅಷ್ಟೇಕೆ ಇಂಗ್ಲೆಂಡಿನ ರಾಣಿ ಸಹ ಶಿಲ್ಪಾರ ಪರ ಮಾತನ್ನಾಡಿ ಬಿಳಿಯರೆಲ್ಲಾ ಸಾರಾಸಗಟಾಗಿ ರೇಸಿಸ್ಟ್ ಅಲ್ಲ ಎಂದು ವಿಶ್ವಕ್ಕೆ ಪ್ರತ್ಯೇಕವಾಗಿ ಏಷಿಯಾ ಖಂಡದವರಿಗೆ   ಮನವರಿಕೆ ಮಾಡಿಕೊಡಲು ಹೆಣಗಾಡಿದರು.  ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ವಿಶ್ವಕ್ಕೆ ಗೊತ್ತು ಬಿಳಿಯರಲ್ಲದವರ ಬಗೆಗಿನ ಬಿಳಿಯರ ನೀತಿ. ಹಳದಿ ಹಲ್ಲನ್ನು ಪ್ರದರ್ಶಿಸಿ oh, you have wonderful 5000 year old culture ಎಂದು ಉಲಿದಾಕ್ಷಣ ನಮಗೆ  ಸ್ವರ್ಗ ಮೂರೇ ಗೇಣು.  

 

ಅಮಿತಾಬ್ ಬಹಳಷ್ಟು ಚಿತ್ರಗಳಲ್ಲಿ ನಟಿಸಿ ನಮ್ಮೆಲ್ಲರ ಮನ ಗೆದ್ದವರು. ಉತ್ತುಂಗಕ್ಕೆ ಏರಿದ ಮೇಲೆ ಅವರೋಹಣ ಸಹ ಆರಂಭವಾಗಿಬಿಡುತ್ತದೆ. ಆದರೆ ಅಮಿತಾಬ್ರ ಅವರೋಹಣ ಸ್ವಲ್ಪ ತೀವ್ರವಾಗಿಯೇ ಆಯಿತು ಎನ್ನಬಹುದು. ಬೆಂಗಳೂರಿಗೆ ವಿದೇಶಿ ಹುಡುಗಿಯರನ್ನು ಸೌಂದರ್ಯ ಸ್ಪರ್ದೆ ಎಂದು ಕರೆಸಿ ನಮ್ಮ ದೇಶಕ್ಕೆ ಬಿಕಿನಿ ಸಂಸ್ಕೃತಿ ಪರಿಚಯಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿ ಮಾತ್ರವಲ್ಲ ತಮ್ಮ ವೃತ್ತಿ ಜೀವನ ಸಂಕಷ್ಟಗಳ ಮಾಲೆ ಆಗುವುದನ್ನು ನೋಡಬೇಕಾಯಿತು. ಆದರೆ ಆ ವನವಾಸ ಬಹಳ ದಿನ ಇರಲಿಲ್ಲ. ಬಂತು ಸಂಜೀವಿನಿಯಾಗಿ ಸ್ಟಾರ್ ಟಿವಿ ಅವರ "ಕೌನ್ ಬನೇಗಾ ಕಡೋಡ್  ಪತಿ" ಕಾರ್ಯಕ್ರಮದಲ್ಲಿ ನಮ್ಮ ಗಮನ ಸೆಳೆದರು ಮಾತ್ರವಲ್ಲ ಅಮಿತಾಭಾರಿಗೆ ಮರು ಜನ್ಮ ನೀಡುವಲ್ಲಿ ಆ ಕಾರ್ಯಕ್ರಮ ದೊಡ್ಡ ಪಾತ್ರ ವಹಿಸಿತು.   

 

ಹೀಗೆ ಇನ್ನೇನು ಮೂಲೆಗುಂಪಾದ ಎಂದು ನಾವು ನಿಟ್ಟುಸಿರು ಬಿಡುತ್ತಿದ್ದಂತೆಯೇ ಮರುಜನ್ಮ ಪಡೆದು ಕೊಳ್ಳುತ್ತಾರೆ ಕೆಲವರು. ಅದರಲ್ಲಿ ರಾಜಕಾರಣಿಗಳೂ ಸೇರುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ?       
Rating
No votes yet