ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ.

ವ್ಯತ್ಯಾಸ ಇಷ್ಟೇ: ಮೊದಮೊದಲು ಆ ಪಾಠಗಳನ್ನು ಬಹಳ ಕಷ್ಟಪಟ್ಟು ಕಲಿಯುತ್ತಿದ್ದೆವು. ಕಣ್ಣೀರಿಡುತ್ತ ಕಲಿಯುತ್ತಿದ್ದೆವು. ವೃತ್ತಿಯ ಸವಾಲುಗಳೇನೇ ಇರಲಿ, ಅವು ನಮ್ಮ ಕೈಯೊಳಗೆ ಇರುವಂಥವು. ಅವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಆದರೆ ಕೆಲವು ಸವಾಲುಗಳು ನಮ್ಮ ವ್ಯಾಪ್ತಿಯಾಚೆಗೂ ಇರುತ್ತವೆ ಎಂಬ ಮಹಾಪಾಠವನ್ನು ಮಾತು ಬಾರದ, ಇದುವರೆಗೂ ಮಾತನ್ನು ಆಡದ ಮಗಳು ಕಲಿಸುವಾಗ ಅದನ್ನು ಜೀರ್ಣಿಸಿಕೊಳ್ಳಲು ನಿಜಕ್ಕೂ ತುಂಬ ಕಷ್ಟಪಟ್ಟೆವು.

ಅವು ನಿಜಕ್ಕೂ ಯಾತನಾಮಯ ದಿನಗಳು.

ಆ ದಿನಗಳಲ್ಲಿ ಆಕೆ ಪೂರ್ತಿ ಕಣ್ಣರಳಿಸಿ ನಮ್ಮನ್ನು ನೋಡುತ್ತಿರಲಿಲ್ಲ. ‘ನಾಲ್ಕು ತಿಂಗಳ ಮಗು ಹಾಗೆ ನೋಡಬೇಕಂತ ಏನು ಅರ್ಜೆಂಟಿದೆ?’ ಎಂದು ಕೇಳಿದವರು ಕೊಪ್ಪಳದ ಮಕ್ಕಳ ಡಾಕ್ಟರ್.

‘ಇಲ್ಲ, ಆಕೆ ಎಲ್ಲ ಮಕ್ಕಳಂತಿಲ್ಲ. ಕಣ್ರೆಪ್ಪೆಗಳು ನಿದ್ರೆಯಿಂದ ಜೋಲುವಂತಿವೆ. ಜೊಲ್ಲು ನಿಲ್ಲುತ್ತಿಲ್ಲ. ಕುಡಿದ ಹಾಲು ಸುಲಭವಾಗಿ ಹೊರಬಂದುಬಿಡುತ್ತದೆ. ಗೋಣು ನಿಂತಿಲ್ಲ...’- ನಮ್ಮ ದೂರುಗಳ ಪಟ್ಟಿ ದೊಡ್ಡದಿತ್ತು.

ಆದರೆ, ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರಲಿಲ್ಲ. ಅವರೊಬ್ಬರೇ ಅಲ್ಲ, ಕಳೆದ ಏಳು ವರ್ಷಗಳಲ್ಲಿ ನಾವು ಕಂಡ ಬಹಳಷ್ಟು ವೈದ್ಯರಲ್ಲಿ ಈ ಅಗತ್ಯ ಗುಣ ಕಂಡುಬರಲಿಲ್ಲ. ‘ಮಗು ಚಿಕ್ಕದು. ಆರು ತಿಂಗಳು ತುಂಬಿದಾಗ ಎಲ್ಲ  ಸರಿಹೋಗುತ್ತದೆ’ ಎಂದು ಅವರು ಮಾತು ಮುಗಿಸಿದರು.

ನನ್ನ ಮನದಲ್ಲಿ ನೂರಾರು ಪ್ರಶ್ನೆಗಳ್ದಿದವು. ಆದರೆ, ಯಾರನ್ನು ಕೇಳಬೇಕು? ಆದರೂ ಒಂದು ಭರವಸೆಯಿತ್ತು. ಮಗು ಚಿಕ್ಕದಿದೆ. ಇನ್ನೆರಡು ತಿಂಗಳು ಹೋಗಲಿ, ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತು ಮನದಲ್ಲಿ ಕೂತಿತು.

ಆ ಎರಡು ತಿಂಗಳುಗಳೂ ಕಳೆದು ಹೋದವು. ಆದರೆ ಮಗುವಿನಲ್ಲಿ ನಾವು ಗುರುತಿಸಿದ್ದ ದೋಷಗಳು ಮಾತ್ರ ಕಳೆದು ಹೋಗಲಿಲ್ಲ. ವೈದ್ಯರು ಮತ್ತೆರಡು ತಿಂಗಳಿನ ಭರವಸೆ ನೀಡಿದರು.

ಮಗಳು ಗೌರಿಯ ಕತ್ತು ಸ್ಥಿರವಾಗಿದ್ದು ಹುಟ್ಟಿದ ಆರು ತಿಂಗಳಿನ ನಂತರ. ಆಗಲೂ ಆಕೆ ನಮ್ಮ ಮುಖ ನೋಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಖುಷಿಯಾಗಿ ಕೈಕಾಲು ಆಡಿಸುತ್ತ ಇರುತ್ತಿದ್ದಳು. ಯಾವಾಗಾದರೊಮ್ಮೆ ಬಹಳ ಕಷ್ಟಪಟ್ಟು ಬೋರಲು ಬೀಳುತ್ತಿದ್ದಳು. ಆದರೆ, ಮತ್ತೆ ಬೆನ್ನ ಮೇಲೆ ಹೊರಳಲು ಆಗುತ್ತಿರಲ್ಲಿಲ.

‘ಮಗು ಕೊಂಚ ದಪ್ಪ ಇರುವುದರಿಂದ ಹೀಗಾಗುತ್ತದೆ’ ಎಂಬ ಇನ್ನೂ ಒಂದು ಭರವಸೆ ವೈದ್ಯರಿಂದ ಬಂದಿತು. ಹತ್ತಿರದ ಸಂಬಂಧಿಗಳೂ ಇದನ್ನು ಒಪ್ಪಿದರು. ನನಗೆ ಏನೋ ಅನುಮಾನ.

ಆ ಎರಡು ತಿಂಗಳುಗಳೂ ಗತಿಸಿದವು. ಆದರೆ ಪರಿಸ್ಥಿತಿ ಹಾಗೇ ಇತ್ತು. ಮಗು ದೈಹಿಕವಾಗಿ ಬೆಳೆದಿತ್ತು. ಬೋರಲು ಬೀಳುವ ಪ್ರಮಾಣ ಜಾಸ್ತಿಯಾಗಿದ್ದು ಬಿಟ್ಟರೆ ಅದು ಒಂದು ತಿಂಗಳಿನ ಮಗುವಿನಂತೆ. ಮುಖ ಮಾತ್ರ ತಿಳಿಯಾಗಿತ್ತು. ಮಾನಸಿಕ ವೈಕಲ್ಯದ ಯಾವೊಂದು ಸುಳಿವೂ ಅಲ್ಲಿರಲಿಲ್ಲ.

ಗೌರಿಗೆ ಎಂಟು ತಿಂಗಳಾದ ನಂತರವೂ ಕೊಪ್ಪಳದ ವೈದ್ಯರ ಭರವಸೆಯ ಮಾತುಗಳನ್ನು ನಂಬುವುದು ಕಷ್ಟವೆನಿಸತೊಡಗಿ ಪಕ್ಕದ ನಗರ ಹೊಸಪೇಟೆಗೆ ಹೋದೆವು. ಅಲ್ಲಿಯ ವೈದ್ಯರು ಮಗುವನ್ನು ಕೊಂಚ ಹೆಚ್ಚೇ ಪರೀಕ್ಷಿಸಿ ನೋಡಿದರು. ತಲೆಯ ಗಾತ್ರ ಅಳೆದರು. ದೈಹಿಕ ಚಟುವಟಿಕೆಗಳ ಮಾಹಿತಿ ಕೇಳಿ ಗುರುತು ಹಾಕಿಕೊಂಡರು. ಯಾವುದಕ್ಕೂ ಇರಲಿ ಎಂದು ನೇತ್ರ ತಜ್ಞರ ಹತ್ತಿರ ಕಳಿಸಿದರು. ಪಾಪ, ಅವರು ಕೂಡ ಸಮಾಧಾನದಿಂದಲೇ ವಿವರವಾಗಿ ಪರೀಕ್ಷಿಸಿ ಘೋಷಿಸಿದರು:

‘ಈಕಿ ಕಣ್ಣು ನಾರ್ಮಲ್ ಅದಾವ...!’

ಮುಳುಗುವವರ ಕೈಗೆ ಹುಲ್ಲು ಕಡ್ಡಿ ಸಿಕ್ಕಿತ್ತು.

ಆದರೆ, ಹೊಸಪೇಟೆ ಡಾಕ್ಟರರ ವರದಿ ಆ ಸಣ್ಣ ಕಡ್ಡಿಯನ್ನೂ ಉಳಿಸಲಿಲ್ಲ. ‘ಈಕೆಯ ಬೆಳವಣಿಗೆ ನಿಧಾನವಾಗಿದೆ. ಮೆದುಳು ಪೂರ್ತಿ ವಿಕಾಸವಾಗಿಲ್ಲ. ನೀವು ದೊಡ್ಡ ಡಾಕ್ಟರರಿಗೆ ತೋರಿಸಿ’ ಎಂದಾಗ ನಾವಿಟ್ಟ ಕಣ್ಣೀರಿನ ನೆನಪು ಇವತ್ತಿಗೂ ಕಣ್ಣೀರು ತರಿಸುತ್ತದೆ.

ಮಗು ಮಾತ್ರ ಹಾಗೇ ಇತ್ತು. ಕುಡಿಸಿದ ಹಾಲು ಅನಾಯಾಸವಾಗಿ ಹೊರಬರುತ್ತಿತ್ತು. ಕಂಕುಳಕ್ಕೆ ಕೈಹಾಕಿ ನೆಲದ ಮೇಲೆ ನಿಲ್ಲಿಸಹೋದರೆ ಸಹಜವಾಗಿ ಕಾಣುತ್ತಿದ್ದ ಕಾಲುಗಳು ಜೋಲುತ್ತಿದ್ದವು. ದೃಷ್ಟಿ ಸ್ಥಿರವಾಗಿರುತ್ತಿದ್ದಿಲ್ಲ. ಆದರೆ, ದೋಷ ಕಾಲಿನದಾಗಲಿ, ಕಣ್ಣಿನದಾಗಲಿ ಆಗಿರಲಿಲ್ಲ. ಈ ಅಂಗಗಳನ್ನು ಬೆಂಬಲಿಸಬೇಕಾದ ಮೆದುಳಿನದಾಗಿತ್ತು.

ಇನ್ನೊಬ್ಬ ಡಾಕ್ಟರಿಗೆ ತೋರಿಸಿ ನೋಡೋಣ ಎಂದು ಹೊಸಪೇಟೆಯಿಂದ ಧಾರವಾಡಕ್ಕೆ ಹೋದೆವು. ಇದ್ದುದರಲ್ಲಿಯೇ  ಕೊಂಚ ಹೆಸರು ಪಡೆದಿದ್ದ ಇನ್ನೊಬ್ಬ ಮಕ್ಕಳ ಡಾಕ್ಟರಿಗೆ ತೋರಿಸಿದೆವು. ಮೊದಲ ಬಾರಿ ಗೌರಿಯ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು.

ಚಿತ್ರಗಳು ಸ್ಪಷ್ಟವಾಗಿದ್ದವು. ಗೌರಿಯ ಮೆದುಳಿನ ಕೆಲವು ಭಾಗಗಳು ವಿಕಾಸವಾಗಿರಲಿಲ್ಲ.

ಡಾಕ್ಟರು ಇನ್ನೊಂದಿಷ್ಟು ದುಬಾರಿ ಪರೀಕ್ಷೆಗಳನ್ನು ನಡೆಸಲು ಶಿಫಾರಸು ಮಾಡಿದರು. ’ಔಷಧಿ ನೀಡುತ್ತೇವೆ. ಆದರೆ, ಗುಣವಾಗುವ ಬಗ್ಗೆ ಖಾತರಿ ನೀಡಲಾರೆವು. ಕಾಯ್ದು ನೋಡಬೇಕು’ ಎಂಬ ಹೇಳಿಕೆ ಬಂದಿತು.

ಮಗು ಕರೆದುಕೊಂಡು ವಾಪಸ್ ಕೊಪ್ಪಳಕ್ಕೆ ಬಂದೆವು. ಹಲವಾರು ಕನಸುಗಳನ್ನು ಬಿತ್ತಿದ, ಪೋಷಿಸಿದ ಊರು ಮೊದಲ ಬಾರಿ ದಿಗಿಲು ಉಕ್ಕಿಸಿತ್ತು.

‘ಬೆಂಗಳೂರಿಗೆ ಹೋಗಿ. ನಿಮ್ಹಾನ್ಸ್‌ನ್ಲಲಿ ತೋರಿಸಿ, ಆರಾಮ ಆಗಬಹುದು’ ಎಂಬ ಸಲಹೆ ಬಂದಾಗ ಊರು ಬಿಡದೆ ಬೇರೆ ದಾರಿ ಇರಲಿಲ್ಲ. ನಮ್ಮೂರಲ್ಲೇ ನೆಲೆಯಾಗಬೇಕು ಎಂದು ಹಂಬಲಿಸಿ ಹಲವಾರು ಉತ್ತಮ ಕೆಲಸಗಳನ್ನು ಹಾಗೂ ಅವಕಾಶಗಳನ್ನು ಕೈಬಿಟ್ಟು ಬಂದಿದ್ದ ನಾನು ಮತ್ತೆ ಊರು ಬಿಡಬೇಕಾಯಿತು.

ಇದ್ದ ಕೆಲಸ ಬಿಟ್ಟು, ಕೈಯಲ್ಲಿ ಬೇರೆ ಕೆಲಸ ಕೂಡ ಇಲ್ಲದೇ ಬೆಂಗಳೂರಿಗೆ ಬಂದೆ. ಆಸ್ಪತ್ರೆಗೆ ತೋರಿಸಬೇಕೆಂದರೆ ಹಣದ ಮುಗ್ಗಟ್ಟು. ಕೆಲ ಕಾಲ ಗೆಳೆಯರು ಪೋಷಿಸಿದರು. ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತ, ದೊರೆತ ಅಲ್ಪ ಹಣವನ್ನು ಬಾಡಿಗೆ, ರೇಶನ್ ಎಂದು ಖರ್ಚು ಮಾಡುತ್ತ ಏಳೆಂಟು ತಿಂಗಳು ನೂಕಿಯಾಯಿತು. ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕಾಗ, ಕೊನೆಗೂ ವೃತ್ತಿಯಲ್ಲಿ ನೆಲೆ ನಿಂತಾಯಿತು ಎಂಬ ಸಮಾಧಾನದಿಂದ ನಿಮ್ಹಾನ್ಸ್‌ಗೆ ಹೋದೆವು.

ಅಲ್ಲಿ ಮತ್ತೆ ಪರೀಕ್ಷೆಗಳು. ಅವೇ ಪ್ರಶ್ನೆಗಳು. ಅವೇ ಉತ್ತರಗಳು. ಆನುವಂಶೀಯತೆಯ ದೋಷ ಇಲ್ಲ, ಮಗು ಹುಟ್ಟಿದ ಕೂಡಲೇ ಸರಿಯಾಗಿ ಅತ್ತಿದೆ, ಮಗುವನ್ನು ಕೆಳಗೆ ಬೀಳಿಸಿಲ್ಲ, ಮೂರ್ಛೆ ರೋಗ ಇಲ್ಲ, ದೈಹಿಕ ನ್ಯೂನತೆಗಳಿಲ್ಲ, ...ಇಲ್ಲ, ...ಇಲ್ಲ. ಆದರೂ ಮಗು ನಾರ್ಮಲ್ ಇಲ್ಲ.

‘ಕೆಲವೊಂದು ಮಕ್ಕಳು ಹೀಗಿರುತ್ತಾರೆ. ಇದಕ್ಕೆ ಇಂಗ್ಲಿಷ್ ಪದ್ಧತಿಯಲ್ಲಿ ಯಾವುದೇ ಔಷಧಿ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಔಷಧಿ ನೀಡುವುದಾಗಿ ಕೇಳಿದ್ದೇವೆ. ಬೇಕಾದರೆ ಪ್ರಯತ್ನಿಸಿ. ಆದರೆ, ಏನೇ ಮಾಡಿದರೂ ನೀವು ಆಕೆಗೆ ನಿಯಮಿತವಾಗಿ ಫಿಜಿಯೋ ಥೆರಪಿ ಮಾಡಿಸಬೇಕು. ನಿತ್ಯ ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತ ಹೋಗಿ. ನಿರಂತರವಾಗಿ ಆಕೆಯ ಸಂಪರ್ಕದಲ್ಲಿರಿ. ತನಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಸ್ಪರ್ಶ, ವಾಸನೆ ಹಾಗೂ ಸಾಂಗತ್ಯವನ್ನು ಆಕೆ ಅನುಭವಿಸಲಿ. ಎಲ್ಲಕ್ಕಿಂತ ಮೊದಲು ನೀವು ಧೈರ್ಯ ತಂದುಕೊಳ್ಳಬೇಕು. ನೀವು ಎಷ್ಟು ಸಮಾಧಾನಿತರಾಗುತ್ತೀರೋ, ಪ್ರಬುದ್ಧರಾಗಿ ವರ್ತಿಸುತ್ತೀರೋ, ನಿಮ್ಮ ಮಗು ಅಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.

ಕಳೆದ ಏಳು ವರ್ಷಗಳಿಂದ ಅಂಥದೊಂದು ಪ್ರಯತ್ನ ನಡೆಸುತ್ತ, ಧೈರ್ಯ ತಂದುಕೊಳ್ಳುತ್ತ, ಸಮಾಧಾನಿತರಾಗಿ ಇರಲು ಯತ್ನಿಸುತ್ತ, ಪ್ರಬುದ್ಧತೆ ಗಳಿಸುವ ದಿಕ್ಕಿನಲ್ಲಿ ಬದುಕು ಸಾಗಿದೆ. ನಾವು ಬೆಳೆದಷ್ಟೂ ನಮ್ಮ ಮಗು ಬೆಳೆಯುತ್ತದೆ. ಹೀಗಾಗಿ ನಾವು ಪ್ರಬುದ್ಧರಾಗಲೇ ಬೇಕಿದೆ. ಸಾಮಾನ್ಯ ಬದುಕು ನೀಡುವುದಕ್ಕಿಂತ ಹೆಚ್ಚಿನ ಪಾಠವನ್ನು ನಮ್ಮ ‘ಅಸಾಮಾನ್ಯ’ ಮಗಳು ಕಲಿಸಿದ್ದಾಳೆ, ಕಲಿಸುತ್ತಿದ್ದಾಳೆ.

ಪ್ರಬುದ್ಧತೆಯತ್ತ ನಮ್ಮನ್ನು ಕರೆದೊಯ್ಯುತ್ತಿದ್ದಾಳೆ.

- ಚಾಮರಾಜ ಸವಡಿ

(ಮಯೂರ ಮಾಸಿಕದ ’ಗುಬ್ಬಚ್ಚಿ ಗೂಡು ವಿಭಾಗ’ದಲ್ಲಿ ಪ್ರಕಟಿತ ಬರಹ)

Rating
No votes yet

Comments