ನಿನ್ನ ಪ್ರೀತಿಸುವದೇ ಒಂದು ಹಿಂಸೆ!

ನಿನ್ನ ಪ್ರೀತಿಸುವದೇ ಒಂದು ಹಿಂಸೆ!

ಬರಹ

ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿ
ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ
ಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!
ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆ
ಎಷ್ಟೊಂದನ್ನು ಸಹಿಸಿಕೊಂಡೆ ನಾನು
ನಿನ್ನ ಈಟಿಯಂಥ ಇರಿತದ ಮಾತುಗಳನ್ನು,
ಅಹಂಕಾರವನ್ನು, ಕೋಪ ತಾಪಗಳನ್ನು, ಸಿಟ್ಟು ಸೆಡುವುಗಳನ್ನು!
ನೀನಿತ್ತ ನೋವುಗಳಿಗೆ ಲೆಕ್ಕವುಂಟೇ?
ಒಮ್ಮೊಮ್ಮೆ ಅದ್ಭುತವಾಗಿ ಪ್ರೀತಿಸುತ್ತೀಯಾ
ಒಮ್ಮೊಮ್ಮೆ ಸುಕಾಸುಮ್ಮನೆ ಶರಂಪರ ಜಗಳ ಕಾಯುತ್ತೀಯ
ಒಮ್ಮೊಮ್ಮೆ ನಕ್ಕು ನಗುಸುತ್ತೀಯಾ
ಒಮ್ಮೊಮ್ಮೆ ಕಾರಣವಿಲ್ಲದೆ ಕೆರಳಿ ಕೆಂಡವಾಗುತ್ತೀಯಾ
ಒಮ್ಮೊಮ್ಮೆ ಸುಸುಮ್ಮನೆ ಮುಲುಮುಲು ಅತ್ತು
ಮನೆ ಮನಗಳನ್ನು ಮಸಣವಾಗಿಸುತ್ತೀಯಾ
ನೀನೊಬ್ಬಳೇ ಹೀಗೇನಾ? ಅಥವಾ ಹುಡುಗಿಯರೆಲ್ಲಾ ಹೀಗೇನಾ?
ಉತ್ತರ ಹುಡುಕುತ್ತಿದ್ದೇನೆ; ಹೇಳುವರ್ಯಾರು?
ಎಷ್ಟೆಲ್ಲಾ ಮಾಡಿದೆ ನಾ ನಿನಗೋಸ್ಕರ
ನನ್ನತನವನ್ನು ಬಿಟ್ಟೆ ನನ್ನವರನ್ನು ಬಿಟ್ಟೆ
ನನ್ನನ್ನು ನಾನು ಬದಲಾಯಿಸಿಕೊಂಡೆ
ಕೊನೆಗೆ ನೀ ನಡೆದ ಹಾದಿಯಲ್ಲಿ ನಾನೂ ನಡೆದೆ
ಆದರೂ ನಿನಗೆ ಕರುಣೆ ಬರಲಿಲ್ಲ!
ಪ್ರತಿಸಲ ನಾನು ಸೋಲುತ್ತಲೇ ಹೋದೆ
ನೀನು ಗೆಲ್ಲುತ್ತಲೇ ಬಂದೆ
ನಿನಗೆ ನಿನ್ನ ಗೆಲುವಿನ ಹಟವೇ ಹೆಚ್ಚಾಯಿತು
ಈಗೀಗ ನನ್ನ ಗಮನಿಸುವದಿರಲಿ
ನನ್ನ ಬಗ್ಗೆ ಯೋಚಿಸುವದಿಲ್ಲ ಕೂಡ
ಯಾಕೆ ಇಷ್ಟೊಂದು ಕೄರಿಯಾದೆ? ಏನು ಕಾರಣ?
ಹೇಳು ನನ್ನರಗಿಣಿ ಏನಾದರು ಹೇಳು
ಈಗಲಾದರೂ ಅಂದುಕೊಳ್ಳುತ್ತೇನೆ
ನನಗೆ ನಿನ್ನ ಪ್ರೀತಿಯಲ್ಲಿ ಮರುಭರವಸೆಯಿದೆಯೆಂದು
ಇಲ್ಲವಾದರೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು ಬಿಟ್ಟುಹಾಕುತ್ತೇನೆ!

(ಪ್ರೇರಣೆ ಅರೇಬಿ ಕವನವೊಂದರ ಶೀರ್ಷಿಕೆ)
- ಉದಯ ಇಟಗಿ