ಕಳೆದ ರಾತ್ರಿಯ ಮಳೆಯಲ್ಲಿ

ಕಳೆದ ರಾತ್ರಿಯ ಮಳೆಯಲ್ಲಿ

ಬರಹ

‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರ ಕನ್ನಡ ಅನುವಾದ ಇಲ್ಲಿದೆ.


ನಿನ್ನೆ ರಾತ್ರಿಯ ತುಂತುರು ಮಳೆಯಲ್ಲಿ ನೆನೆದುಕೊಂಡೇ ಬಂದು
ನಿನ್ನ ಮನೆಯ ಬಾಗಿಲು ಬಡಿದೆ
ನಿದ್ದೆಗಣ್ಣಲ್ಲೊಮ್ಮೆ ನನ್ನ ನೋಡಿ
ಕರುಣಾಜನಕವಾಗಿ ನಕ್ಕು ಒಳಗೆ ಬರ ಹೇಳಿದೆ
ಮಬ್ಬುಗತ್ತಲೆಯ ಚಂದಿರ ಕತ್ತಲನ್ನು ಸೀಳಿಕೊಂಡುಬಂದು
ನನ್ನ ಕಣ್ಣೊಳಗೆ ಮಿನುಗಿದ
ಹೂ ಮೇಲಿನ ಪರಾಗವೊಂದು ಹಾರಿಬಂದು
ನನ್ನೆದೆಗೆ ಬಡಿದು ಕೆಳಗೆಬಿತ್ತು
ನಾಚಿಕೆಯಿಂದ ತಲೆತಗ್ಗಿಸಿದೆ ನಿನ್ನತ್ತ ನೋಡಲಿಲ್ಲ
ಅವಸರವಸರವಾಗಿ ಕೋಣೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ
ಆ ಕತ್ತಲ ರಾತ್ರಿಯ ಏಕಾಂತದಲ್ಲಿ
ಎತ್ತೆಂದೆರತ್ತ ಒಬ್ಬಂಟಿಯಾಗಿ ಓಡಾಡಿದೆ
ಎಷ್ಟೊಂದು ನೋವುಗಳು! ಎಷ್ಟೊಂದು ನಿಟ್ಟುಸಿರುಗಳು!
ಥಟ್ಟನೆ ನನ್ನೊಳಗಿನ ನಿನಾದ ನಿಂತುಹೋಯಿತು
ಆ ರಾತ್ರಿ ನನ್ನ ಅಖಂಡ ಪ್ರೀತಿಯನ್ನು ಸಾದರಪಡಿಸಲೆಂದೇ
ಸುಮಧುರ ಗೀತೆಗಳ ಗುಚ್ಚವೊಂದನ್ನು
ಉಡುಗೊರೆಯಾಗಿ ಕೊಡಲು ತಂದಿದ್ದೆ
ಊಹೂಂ, ಕೊಡಲಾಗಲಿಲ್ಲ ಹಾಗೆ ಹೊರಟುಹೋದೆ
ಊರೂರು ಅಲೆಯುತ್ತಾ ಕಾಡು-ಮೆಡುಗಳನ್ನು ದಾಟುತ್ತಾ
ನಭದ ನಕ್ಷತ್ರಗಳಿಗೆ ರಾಗ ಹಾಕುತ್ತಾ
ಅನಂತಾನಂತ ಜಗದ ಗಡಿಗಳನ್ನು ಹುಡುಕುತ್ತಾ
ಅತ್ತ ಇತ್ತ ಒಬ್ಬಂಟಿಯಾಗಿ ಅಲೆದಾಡಿದೆ
ಆ ಕತ್ತಲ ರಾತ್ರಿಯ ಏಕಾಂತದಲ್ಲಿ
ಎಲ್ಲಿ ನೋಡಿದರಲ್ಲಿ ಶೋಚನೀಯ ಕಣ್ಣುಗಳ ಪ್ರಶ್ನೆಗಳು
ಮೂಕ ವೇದನೆಗಳ ಕರೆಗಳು ಗೋಳಿಡುವ ಪ್ರಲಾಪನೆಗಳು
ನೋವಿನ ಬೇಗೆಯಲ್ಲಿ ಬೆಂದುಹೋದ ಜೀವಗಳು
ಬರಿ ಇಂಥವೇ ದೃಶ್ಯಗಳು ಕಾಣಿಸಿದವು!

ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ
ಇಂಗ್ಲೀಷಗೆ: ಜೆ. ಸತ್ಯಾನಂದ ಕುಮಾರ
ಕನ್ನಡಕ್ಕೆ: ಉದಯ ಇಟಗಿ