ಭ್ರಷ್ಟ ವ್ಯವಸ್ಥೆ ಮತ್ತು ನಾವು! (ಅನುಭವ ಕಥನ)

ಭ್ರಷ್ಟ ವ್ಯವಸ್ಥೆ ಮತ್ತು ನಾವು! (ಅನುಭವ ಕಥನ)

ಬರಹ

  ೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫ ರೂಪಾಯಿ ’ಖುಷಿ’ ಹಣದ ಡಿಮಾಂಡ್ ಬಂತು. ನಾನು ಒಪ್ಪಲಿಲ್ಲ. ನನ್ನ ಮನೆಗೆ ಇನ್‌ಸ್ಪೆಕ್ಷನ್‌ಗೆ ಬರುವುದಾಗಿ ತಿಳಿಸಲಾಯಿತು. ಅದೂ ಮುಗಿಯಿತು. ಆದರೂ ಪಡಿತರ ಚೀಟಿ ಸಿಗಲಿಲ್ಲ. ಮತ್ತೆ ನಾಲ್ಕು ತಿಂಗಳು ಓಡಾಡಿದೆ. ಪ್ರಯೋಜನವಾಗಲಿಲ್ಲ. ರೋಸಿಹೋದ ನಾನು ಕಚೇರಿಯ ಹೊರಗೆ ಒಂದು ಸಣ್ಣ ಗಲಾಟೆ ಮಾಡಿ ಬಂದೆ. ಅದಾದ ಎರಡೇ ದಿನದಲ್ಲಿ, ಪಡಿತರ ಚೀಟಿ ಕೊಂಡೊಯ್ಯಬಹುದೆಂಬ ಸೂಚನೆ ಬಂತು!

  ಇನ್ನೊಂದು ಘಟನೆ ಭಿನ್ನರೀತಿಯದು. ಇದು ನಡೆದದ್ದು ಆಂಧ್ರಪ್ರದೇಶದ ಯೆಮ್ಮಿಗನೂರಿನಲ್ಲಿ. ಒಂದು ದಿನ ಬೆಳಗ್ಗೆ ನನ್ನ ಮನೆಗೆ ಯುವಕನೊಬ್ಬ ಬಂದ. ಮೂರು ದಿನಗಳ ಕೆಳಗಷ್ಟೇ ಈ ಯುವಕ ನಾನು ಮೇನೇಜರ್ ಆಗಿದ್ದ ಬ್ಯಾಂಕ್ ಶಾಖೆಗೆ ಬಂದು ಯಾವುದಾದರೂ ನೌಕರಿ ಕೊಡಿಸುವಂತೆ ಕೇಳಿಕೊಂಡಿದ್ದ. ಬ್ಯಾಂಕ್‌ನಲ್ಲಿ ತಾತ್ಕಾಲಿಕವಾಗಿ ಅಟೆಂಡರ್ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆಂದು ಇವನಿಗೆ ಯಾರೋ ಹೇಳಿದ್ದರಂತೆ. ನನ್ನ ಶಾಖೆಯಲ್ಲಿ ಅಂಥ ಅವಕಾಶವೇನೂ ಇಲ್ಲವೆಂದು ಈತನಿಗೆ ಹೇಳಿ ವಾಪಸು ಕಳಿಸಿದ್ದೆ.

  ಈಗ ಮನೆಗೆ ಬಂದ ಈ ಯುವಕ ಮತ್ತೆ ಅದೇ ಬೇಡಿಕೆಯನ್ನಿಟ್ಟ. ಸಾಧ್ಯವಿಲ್ಲವೆಂದು ಆತನಿಗೆ ನಾನು ವಿವರಿಸುತ್ತಿದ್ದಂತೆಯೇ ಆತ ತನ್ನ ಪ್ಯಾಂಟ್ ಕಿಸೆಯೊಳಗಿಂದ ಹತ್ತರ ನೂರು ನೋಟುಗಳ ಒಂದು ಕಟ್ಟು ಹೊರತೆಗೆದು ಎರಡೂ ಕೈಗಳಿಂದ ಅತಿ ದೀನನಾಗಿ ನನಗೆ ಕೊಡಲು ಬಂದ. ಅದನ್ನು ನಿರಾಕರಿಸಿದ ನಾನು ಅವನಿಗೆ ತಿಳಿಹೇಳತೊಡಗಿದೆ. ಆದರೆ ನನ್ನ ಮಾತಿಗೆ ಗಮನ ಕೊಡದೆ ಆತ ತನ್ನ ಪ್ರಯತ್ನ ಮುಂದುವರಿಸಿದ. ಕೆಲವು ದಿನಗಳ ಅವಕಾಶ ಕೊಟ್ಟರೆ ಇನ್ನೊಂದು ಸಾವಿರ ರೂಪಾಯಿಯನ್ನು ಹೊಂದಿಸಿ ತರುತ್ತೇನೆಂದೂ ಹೇಳಿದ!

  ನನ್ನನ್ನು ಅಪಾರ್ಥ ಮಾಡಿಕೊಂಡ ಆತನಮೇಲೆ ನನಗೆ ಎಲ್ಲಿಲ್ಲದ ಸಿಟ್ಟು ಬಂತು. ಅವನ ಕೈಯಿಂದ ನೋಟಿನ ಕಟ್ಟನ್ನು ಕಿತ್ತುಕೊಂಡು ಮನೆಯಿಂದ ಹೊರಗೆಸೆದೆ. ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕೂಡಲೇ ಹೊರಕ್ಕೆ ಧಾವಿಸಿ ಆತ ನೋಟುಗಳನ್ನು ಬಾಚಿಕೊಳ್ಳತೊಡಗಿದ. ಜೊತೆಗೇ ಭೋರೆಂದು ಅಳತೊಡಗಿದ!

  ನೋಟೆಲ್ಲವನ್ನೂ ಹೆಕ್ಕಿ ವಾಪಸು ಕಿಸೆಯೊಳಗಿಟ್ಟುಕೊಂಡಮೇಲೂ ಆತನ ಅಳು ನಿಲ್ಲಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ನಿಂತು ಒಂದೇಸವನೆ ಅಳತೊಡಗಿದ. ಆ ಅಳುವಿನಲ್ಲಿ ಪಶ್ಚಾತ್ತಾಪದ ಜೊತೆಗೆ ತೀವ್ರ ಅಸಹಾಯಕತೆಯೂ ನನಗೆ ಗೋಚರವಾದ್ದರಿಂದ ಆತನನ್ನು ಒಳಗೆ ಕರೆದು ಆತನ ಪೂರ್ವಾಪರ ವಿಚಾರಿಸಿದೆ. ಕೃಷಿ ಕಾರ್ಮಿಕ ತಂದೆಯ ಅಕಾಲಮರಣದಿಂದಾಗಿ ಓದು ಮೊಟಕುಗೊಳಿಸಿ ಕೂಲಿ ಕೆಲಸಕ್ಕಿಳಿದಿದ್ದ ಆತನಿಗೆ ತಾಯಿ ಮತ್ತು ಮೂವರು ತಮ್ಮ-ತಂಗಿಯರ ಜವಾಬ್ದಾರಿ ನೋಡಿಕೊಳ್ಳಲಿಕ್ಕಾಗಿ ನೌಕರಿಯೊಂದರ ತೀವ್ರ ಅವಶ್ಯಕತೆ ಇತ್ತು! ತಾಯಿಯನ್ನು ದುಡಿಮೆಗೆ ಹಚ್ಚಲು ಆತನ ಮನಸ್ಸು ಒಪ್ಪುತ್ತಿರಲಿಲ್ಲ!

  ಪರಿಚಿತರಲ್ಲಿ ಆತನಿಗೊಂದು ಕೆಲಸ ಕೊಡಿಸಿ ಓದಿನ ವ್ಯವಸ್ಥೆಯನ್ನೂ ಮಾಡಿದೆ. ಲಂಚ ಕೊಡಲು ಬರುವವರೆಲ್ಲಾ ಧೂರ್ತರಲ್ಲ ಎಂಬ ಸತ್ಯದ ಅರಿವು ಅಂದು ನನಗಾಗಿತ್ತು. ಜೊತೆಗೆ, ’ಭ್ರಷ್ಟಾಚಾರಮುಕ್ತ ವ್ಯವಸ್ಥೆಯಿದ್ದಿದ್ದರೆ ಈ ಯುವಕ ಹಣ ಹಿಡಿದು ಏಕೆ ಬರುತ್ತಿದ್ದ, ಬರಿಗೈಯಲ್ಲಿ ಬಂದು ನೇರವಾಗಿ ತನ್ನ ದುಃಖ ಹೇಳಿಕೊಳ್ಳುತ್ತಿದ್ದ’, ಎಂದೂ ಅನ್ನಿಸಿತು.
 
  ನನ್ನ ಮುವ್ವತ್ತು ವರ್ಷಗಳ ಬ್ಯಾಂಕಿಂಗ್ ವೃತ್ತಿಯಲ್ಲಿ ಮತ್ತು ಐವತ್ತೆಂಟು ವರ್ಷಗಳ ಜೀವನದಲ್ಲಿ ಎಂದೂ ಲಂಚ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಅರ್ಧ ದೇಶ ತಿರುಗಾಡಿದ್ದೇನೆ, ನಾನಾ ರಾಜ್ಯಗಳಲ್ಲಿ ಜೀವಿಸಿದ್ದೇನೆ, ಲಂಚದ ಅನೇಕ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಿದ್ದೇನೆ, ಎದುರಿಸಿ ಲಂಚವಿಲ್ಲದೆ ಕೆಲಸ ಮಾಡಿಸಿಕೊಳ್ಳುವಲ್ಲಿಯೂ ಮತ್ತು ಲಂಚದ ವಿರುದ್ಧ ಸೆಣಸಾಡುವಲ್ಲಿಯೂ ಯಶಸ್ವಿಯಾಗಿದ್ದೇನೆ.

  ಸಮಯ, ಬುದ್ಧಿ, ದೇಹಾರೋಗ್ಯ ಮತ್ತು ಒಂದಷ್ಟು ಹಣ ವ್ಯಯವಾಗಿದೆ, ನಿಜ. ಕೆಲ ಕಷ್ಟ ನಷ್ಟಗಳೂ ಆಗಿವೆ. ಆದರೆ, ಈ ಹೊತ್ತು ಸಂತೃಪ್ತಿಯ ಜೀವನ ನನ್ನದಾಗಿದೆ; ಸಾರ್ಥಕ ಬಾಳು ನನ್ನದೆಂಬ ಅಭಿಮಾನ ನನಗಿದೆ. ಈ ಸಂತೋಷವು ಮಿಕ್ಕೆಲ್ಲ ಸಂತೋಷಗಳಿಗಿಂತಲೂ ಬಹಳ ದೊಡ್ಡದು. ಜೊತೆಗೆ, ಲಂಚವನ್ನು ತೆಗೆದುಕೊಳ್ಳದೇ ಮತ್ತು ಕೊಡದೇ ಇದ್ದುದರಿಂದ ನನಗೇನೂ ಹೊಟ್ಟೆಬಟ್ಟೆಗೆ ಕಡಿಮೆಯಾಗಲಿಲ್ಲ; ಆಯುಷ್ಯ ಕುಂದಲಿಲ್ಲ. ಉಪಭೋಗ ಕಡಿಮೆಯಾಗಿರಬಹುದು, ಆದರೆ, ಜೀವನಸಂತೃಪ್ತಿ ಮತ್ತು ಸಂತಸ ನನ್ನದಾಗಿದೆಯಲ್ಲಾ!

  ನಾನೊಬ್ಬ ಶ್ರೀಸಾಮಾನ್ಯ. ನನಗೆ ಸಾಧ್ಯವಾದದ್ದು ಈ ನಾಡಿನ ಎಲ್ಲಾ ಜನರಿಗೂ ಖಂಡಿತ ಸಾಧ್ಯ. ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕು, ಅಷ್ಟೆ. ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಉಂಟಾದಲ್ಲಿ ಮನಸ್ಸು ಸಿದ್ಧವಾಗುತ್ತದೆ. ಜೀವನವು ಕೊನೆಗಾಲದಲ್ಲಿ ಸಂತೃಪ್ತಿ ನೀಡಬೇಕೆಂದರೆ ನಾವು ಇಂದೇ ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಮಾಡಬೇಕಾದ್ದು ಅವಶ್ಯ. ಇಲ್ಲದಿದ್ದಲ್ಲಿ, ಕೊನೆಗಾಲದಲ್ಲಿ ಮನಸ್ಸು ವಿಹ್ವಲಗೊಳ್ಳುತ್ತದೆ; ಬಾಳು ವ್ಯರ್ಥವಾಯಿತೆಂಬ ಕಡು ಸಂಕಟ ಆವರಿಸುತ್ತದೆ.

  ಇಷ್ಟಕ್ಕೂ, ಲಂಚ ನೀಡದಿರುವುದರಿಂದ ಹಾಗೂ ಪಡೆಯದಿರುವುದರಿಂದ ತತ್ಕಾಲಕ್ಕೆ ನಷ್ಟವೆಂದು ತೋರಿದರೂ ಕಾಲಾಂತರದಲ್ಲಿ ಮತ್ತು ದೀರ್ಘಕಾಲೀನವಾಗಿ ಏನೂ ನಷ್ಟವಿಲ್ಲ, ಮಾತ್ರವಲ್ಲ, ಲಾಭವೇ. ನನ್ನ ಶುದ್ಧ ನಡೆಯಿಂದ ನನ್ನ ಮಗ, ಮೊಮ್ಮಗ, ಮಾತ್ರವಲ್ಲ, ಕಾಲಾಂತರದಲ್ಲಿ ನಾನೂ ಲಾಭಾನುಭವಿಯೇ ಆಗುವುದು ನಿಶ್ಚಿತ. ಅಲ್ಲಿಯತನಕ ಸಹನೆ ಮತ್ತು ವಿಶ್ವಾಸ ಬೇಕು, ಅಷ್ಟೆ. ವ್ಯಕ್ತಿಯ ಮಟ್ಟಿಗಷ್ಟೇ ಅಲ್ಲ, ಸಮಾಜದ ಮಟ್ಟಿಗೂ ಈ ಮಾತು ಅನ್ವಯ.

  ಈ ಸಂದರ್ಭದಲ್ಲಿ ನಾನು ಲೋಕಾಯುಕ್ತದ ಉಲ್ಲೇಖ ಮಾಡಬಯಸುತ್ತೇನೆ. ಲೋಕಾಯುಕ್ತಕ್ಕೆ ಸರ್ಕಾರವು ಹಲವು ಅಧಿಕಾರಗಳನ್ನು ನೀಡಿದೆ. ಆದರೆ, ಭ್ರಷ್ಟಾಚಾರ ನಿರ್ಮೂಲನದ ನಿಟ್ಟಿನಲ್ಲಿ ಕಾನೂನಿನ ಪರಮಾಧಿಕಾರವನ್ನು ಯಾವ ಸರ್ಕಾರವೂ ಇದುವರೆಗೆ ನೀಡಿಲ್ಲ. ಪರಮಾಧಿಕಾರ ಕೊಡುವ ಪ್ರಾಮಾಣಿಕತೆ ನಮ್ಮ ಕಡುಭ್ರಷ್ಟ ಸರ್ಕಾರಗಳಿಗೆ ಸರ್ವಥಾ ಇಲ್ಲ. ಇಂಥ ಪ್ರಾಮಾಣಿಕತೆಯನ್ನೇನಾದರೂ ನಮ್ಮ ಸರ್ಕಾರಗಳು ತೋರಿಬಿಟ್ಟರೆ ಮರುದಿನದಿಂದ ಲೋಕಾಯುಕ್ತದ ಅಗತ್ಯವೇ ಇರುವುದಿಲ್ಲ!

  ಈಚೆಗೆ ನಾನು ಮಧ್ಯ ಕರ್ನಾಟಕದ ನನ್ನ ಸ್ವಂತ ಊರಿಗೆ ಹೋಗಿದ್ದೆ. ನನ್ನ ಬಂಧುವಿನೊಡನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಆಗ ಎದುರಾದ ಹಿರಿಯ ಗಣ್ಯ ವ್ಯಕ್ತಿಯೊಬ್ಬರನ್ನು ನನ್ನ ಬಂಧು ನನಗೆ ಪರಿಚಯಿಸಿದರು. ಸೌಮ್ಯ ಕಳೆಯ ಆ ಹಿರಿಯರು ತುಂಬ ಗೌರವದಿಂದ ನನ್ನೊಡನೆ ಮಾತನಾಡಿದರು. ನನ್ನ ಬಂಧುವೂ ಆ ವ್ಯಕ್ತಿಗೆ ತುಂಬ ಗೌರವ ಕೊಟ್ಟು ಮಾತನಾಡಿಸಿದರು. ಅದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಕೂಡ ನಿಂತು ಆ ಹಿರಿಯ ವ್ಯಕ್ತಿಗೆ ವಂದಿಸಿ ಮುನ್ನಡೆದರು. ಆ ವ್ಯಕ್ತಿ ಆಚೆ ಹೋದಮೇಲೆ ನನ್ನ ಬಂಧು ನನಗೆ ಹೇಳಿದರು, ’ಕೆಲ ತಿಂಗಳ ಕೆಳಗೆ ಇಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿತ್ತಲ್ಲಾ, ಭಾರೀ ತಿಮಿಂಗಿಲ, ಸಾರಿಗೆ ಇಲಾಖೆ ಅಧಿಕಾರಿ, ಇವರೇ. ಕೋಟಿಗಟ್ಟಲೆ ಮೊತ್ತದ ಅಕ್ರಮ ಆಸ್ತಿ ಪತ್ತೆಯಾದರೂ ಇವರ ಕೂದಲೂ ಕೊಂಕಿಲ್ಲ!’ ಇದು ನಮ್ಮ ವ್ಯವಸ್ಥೆ!

  ಲೋಕಾಯುಕ್ತ ದಾಳಿಯನ್ನು ನಾವು ಟಿವಿಯಲ್ಲಿ ನೋಡಿ, ಪತ್ರಿಕೆಗಳಲ್ಲಿ ಓದಿ ಖುಷಿಪಡುತ್ತೇವೆ. ಆದರೆ ಭ್ರಷ್ಟ ಸರ್ಕಾರಗಳು ದಾಳಿಯ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಮೂಲಕ ನಮ್ಮನ್ನು ವಂಚಿಸುತ್ತಲೇ ಇವೆ! ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡದಿರುವ ಮೂಲಕ ಸರ್ಕಾರಗಳು ಲೋಕಾಯುಕ್ತದ ಪರಿಶ್ರಮವೆಲ್ಲ ಗುಡ್ಡಕ್ಕೆ ಮಣ್ಣು ಹೊತ್ತಂತಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ!

   ನಾಳಿನ ಪ್ರಜೆಗಳಾದ ಇಂದಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರಮುಕ್ತ ಸಮಾಜದ ಅವಶ್ಯಕತೆಯ ಬಗ್ಗೆ ನೈತಿಕ-ಆಧ್ಯಾತ್ಮಿಕ ನೆಲೆಯಲ್ಲಿ ಅರಿವು ಮೂಡಿಸುವ ಕಾರ್ಯವು ಈ ಸಮಸ್ಯೆಗೆ ಪರಿಹಾರವೆಂದು ನನ್ನ ಅಭಿಪ್ರಾಯ. ನಮ್ಮ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವುದು ಪ್ರಸಂಸಾರ್ಹ. ನನ್ನ ಮಿತಿಯಲ್ಲಿ ನಾನೂ ಸ್ವಯಂಪ್ರೇರಣೆಯಿಂದ ಈ ಕಾರ್ಯವನ್ನು ವರ್ಷಗಳಿಂದಲೂ ಮಾಡಿಕೊಂಡುಬಂದಿದ್ದೇನೆ.

  ಈಗ ನಾನು ವಿಷಯದ ಇನ್ನೊಂದು ಮಗ್ಗುಲಿಗೆ ಬರುತ್ತೇನೆ.

  ಭ್ರಷ್ಟಾಚಾರವೂ ಸೇರಿದಂತೆ ವ್ಯವಸ್ಥೆಯ ಸಕಲ ದೋಷಗಳಿಗೂ ನಾವು ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ದೂಷಿಸುತ್ತೇವೆ, ಸರಿಯೇ. ಆದರೆ ಪ್ರಜೆಗಳಾದ ನಾವೆಂಥವರು?

  * ೯೦ರ ದಶಕ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದೆ. ಸರ್ಕಾರದ ಬೃಹತ್ ಯೋಜನೆಯೊಂದರ ಅನುಷ್ಠಾನದಿಂದಾಗಿ ಕೋಟಿಗಳ ವ್ಯವಹಾರ ನಾನಾ ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆದಿತ್ತು. ಸರ್ಕಾರದ ಉನ್ನತಾಧಿಕಾರಿಗಳು ಭರ್ಜರಿಯಾಗಿ ಕಬಳಿಸುತ್ತಿದ್ದರು. ಸಾಕ್ಷ್ಯಾಧಾರಗಳಿಲ್ಲದಿದ್ದರೂ ಇದು ಊರಿಗೆಲ್ಲ ಗೊತ್ತಿರುವ ಸಂಗತಿಯಾಗಿತ್ತು. ಇಂಥ ಸಂದರ್ಭದಲ್ಲಿ ನಾನು ಭ್ರಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ನಿರಾಕರಿಸಿದೆನಲ್ಲದೆ ಸರ್ಕಾರದ ಆಡಳಿತಾಂಗ ವ್ಯವಸ್ಥೆಯ ಭ್ರಷ್ಟತನವನ್ನು ಬಹಿರಂಗವಾಗಿ ವಿರೋಧಿಸಿದೆ. ಪರಿಣಾಮ, ಸರ್ಕಾರದ ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದೆ. ಸ್ಥಳೀಯ ಭ್ರಷ್ಟ ಪುಢಾರಿಯೊಬ್ಬ ನನ್ನನ್ನು ಮಗ್ಗುಲ ಮುಳ್ಳಿನಂತೆ ಕಾಣತೊಡಗಿದ. ಅತ್ಯಂತ ವಿಷಾದದ ಸಂಗತಿಯೆಂದರೆ, ಆ ಊರಿನ ಸಾರ್ವಜನಿಕರು ಯಾರೂ ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಬದಲಾಗಿ, ಚುನಾವಣೆಯಲ್ಲಿ ಆ ಪುಢಾರಿಯನ್ನು ವಿಧಾನಸಭೆಗೆ ಆರಿಸಿ ಕಳಿಸಿದರು!

    ಈ ಪ್ರಕರಣದಲ್ಲಿ, ನನ್ನ ಬ್ಯಾಂಕಿಗೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿ ನಷ್ಟವನ್ನು ಉಳಿಸುವಲ್ಲಿ ಮಾತ್ರ ನಾನು ಸಫಲನಾದೆ. ಭ್ರಷ್ಟರಿಗೆ ಬ್ಯಾಂಕ್ ಅನುಕೂಲಗಳನ್ನು ನೀಡದಿರುವ ಮೂಲಕ, ಅರ್ಥಾತ್ ಕಟ್ಟುಬಾಕಿಗೆ ಅವಕಾಶ ಮಾಡಿಕೊಡದಿರುವ ಮೂಲಕ, ಸಾರ್ವಜನಿಕರ ಹಣವು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪುಢಾರಿಗಳ ಪಾಲಾಗದಂತೆ ನೋಡಿಕೊಂಡ ತೃಪ್ತಿ ನನ್ನದಾಯಿತು.

  * ಪಡಿತರ ಚೀಟಿ ಪ್ರಕರಣದ ಬಗ್ಗೆ ಈ ಲೇಖನದ ಆರಂಭದಲ್ಲೇ ಹೇಳಿದ್ದೇನಷ್ಟೆ. ಆ ದಿನ ಪಡಿತರ ಇಲಾಖಾ ಕಚೇರಿಯೆದುರು ನಿಂತು ನಾನು ಆ ಭ್ರಷ್ಟರ ಜನ್ಮ ಜಾಲಾಡತೊಡಗಿದ್ದಾಗ ಸಾರ್ವಜನಿಕರೆಲ್ಲ ನನ್ನನ್ನು ಮೃಗಾಲಯದ ಪ್ರಾಣಿಯಂತೆ ನೋಡತೊಡಗಿದ್ದರಾಗಲೀ ಯಾರೂ ನನ್ನೊಡನೆ ದನಿಗೂಡಿಸಲಿಲ್ಲ!

    ಪಡಿತರ ಚೀಟಿ ಕೈಸೇರುವಷ್ಟರಲ್ಲಿ ನನಗೆ ಆರು ತಿಂಗಳಿನ ಪಡಿತರ ನಷ್ಟವಾಗಿತ್ತು. ಮುಂದೆ, ಪಡಿತರ ಚೀಟಿಯ ಸೌಲಭ್ಯದ ಅರ್ಹತೆಯನ್ನು ನಾನು ದಾಟಿದ ತಕ್ಷಣ ಪಡಿತರ ಚೀಟಿಯನ್ನು ಇಲಾಖೆಗೆ ಹಿಂತಿರುಗಿಸಿದೆ. ನನ್ನ ನೆರೆಹೊರೆಯವರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಬಹುಪಾಲು ಬಂಧುಗಳೂ ಈ ಒಟ್ಟಾರೆ ವಿಷಯದಲ್ಲಿ ನನ್ನನ್ನು ಮೂರ್ಖನೆಂದು ಜರಿದರು!

  * ಕೆಲ ತಿಂಗಳುಗಳ ಹಿಂದೆ. ಇದೇ ಬೆಂಗಳೂರು. ನಾಯಿಗಳ ಉಪಟಳದ ಬಗ್ಗೆ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯೊಂದು ನಡೆಯಿತು. ಅದರಲ್ಲಿ ನಾನು ಸಕ್ರಿಯ ಪಾತ್ರ ವಹಿಸಿದ್ದೆ. ಕಾರ್ಯಯೋಜನೆಯ ನಿರ್ಧಾರ ಮತ್ತು ಅನುಷ್ಠಾನಕ್ಕಾಗಿ ಮುಂದಿನ ಸಮಾಲೋಚನಾ ಸಭೆಯ ದಿನಾಂಕ ನಿಗದಿಯಾಯಿತು. ಆದರೆ ತದನಂತರದಲ್ಲಿ ಆ ಸಭೆಯನ್ನು ಮಹಾನಗರಪಾಲಿಕೆಯು ಕಾರಣಾಂತರದಿಂದ ಮುಂದೂಡಿತು. ಹಲವು ತಿಂಗಳುಗಳುರುಳಿದರೂ ಇನ್ನೂ ಮಹಾನಗರಪಾಲಿಕೆಯು ಸಭೆಯನ್ನು ಏರ್ಪಡಿಸಿಲ್ಲ. ನನ್ನ ವಿಚಾರಣೆಗಳು ಅರಣ್ಯರೋದನವಾಗಿವೆ. ವಿಷಾದದ ಸಂಗತಿಯೆಂದರೆ, ಬಹುತೇಕ ಸಂಘಸಂಸ್ಥೆಗಳವರೇ ಈಗ ಈ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ!

  * ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ. ಬೆಂಗಳೂರಿನ ವಿದ್ಯಾರಣ್ಯಪುರ ಬಡಾವಣೆ. ವಿಳಾಸ ಬದಲಾದ ಮತದಾರರ ಗುರುತಿನ ಚೀಟಿಗಾಗಿ ಸರತಿಯಲ್ಲಿ ನಿಂತು ಫೋಟೋ ತೆಗಿಸಿಕೊಂಡೆ. ಚೀಟಿಗೆ ಹೊದಿಸುವ ಪ್ಲಾಸ್ಟಿಕ್ ಹಾಳೆ ಖಾಲಿಯಾಗಿದೆಯೆಂದು ಹೇಳಿ ಚೀಟಿಯನ್ನು ಮರುದಿನ ಮಹಾನಗರಪಾಲಿಕೆ ಕಚೇರಿಗೆ ಬಂದು ಪಡೆದುಕೊಳ್ಳುವಂತೆ ಅಲ್ಲಿದ್ದ ಸಿಬ್ಬಂದಿ ’ಆದೇಶಿಸಿದರು’. ಇನ್ನೊಮ್ಮೆ ಬರಲು ಹೇಳಿ ಎಲ್ಲರ ಸಮಯವನ್ನೂ ಪೋಲು ಮಾಡುವುದು ಉಚಿತವಲ್ಲವೆಂದೂ ಪ್ಲಾಸ್ಟಿಕ್ ಹಾಳೆಯನ್ನು ತರಿಸಿರೆಂದೂ ಸಿಬ್ಬಂದಿಯನ್ನು ಒತ್ತಾಯಿಸತೊಡಗಿದೆ. ಅಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರೇ ನನ್ನಮೇಲೆ ಹರಿಹಾಯ್ದರು! ’ಹೋಗ್ಹೋಗ್ರೀ, ಪ್ಲಾಸ್ಟಿಕ್ ಇಲ್ಲ ಅಂತ ಅವ್ರು ಹೇಳ್ತಾ ಇಲ್ವಾ? ನಾಳೆ ಆಫೀಸ್‌ಗ್ಹೋಗಿ ತಗೊಳ್ಳಿ. ಸುಮ್ನೆ ಹೋಗಿ’, ಎಂದು ನನಗೇ ದಬಾಯಿಸತೊಡಗಿದರು! ಅಷ್ಟರಲ್ಲಾಗಲೇ ಪ್ಲಾಸ್ಟಿಕ್ ಹಾಳೆಗಾಗಿ ಅದೆಲ್ಲಿಗೋ ಫೋನ್ ಮಾಡಿ ಮಾತಾಡುತ್ತಿದ್ದ ಮಹಾನಗರಪಾಲಿಕೆ ನೌಕರನು ಜನರ ಈ ಮಾತು ಕೇಳಿದವನೇ ಮೊಬೈಲ್ ಕಟ್ ಮಾಡಿ ಕಿಸೆಯೊಳಗಿಟ್ಟುಕೊಂಡು ಸುಮ್ಮನೆ ಕುಳಿತುಬಿಟ್ಟ!

    ಮರುದಿನದಿಂದ ನಾಲ್ಕು ದಿನ ಮಹಾನಗರಪಾಲಿಕೆಯ ಕಚೇರಿಗೆ ಓಡಾಡಿದರೂ ಚೀಟಿ ಸಿಗಲಿಲ್ಲ. ನನ್ನಂತೆ ಅನೇಕರು ಎಡತಾಕುತ್ತಿದ್ದರು. ಕೊನೆಗೆ ನನ್ನ ಒತ್ತಡ ಜೋರಾದಾಗ, ಜೊತೆಗೆ, ಬರಹಗಾರನಾದ ನಾನು ಪತ್ರಿಕೆಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿಯೇನೆಂಬ ಅನುಮಾನ ಸಂಬಂಧಿತ ಸಿಬ್ಬಂದಿಗೆ ಉಂಟಾದಾಗ ಗುರುತಿನ ಚೀಟಿ ನನ್ನ ಮನೆಬಾಗಿಲಿಗೇ ಬಂತು!

  * ಮೇಲ್ಕಂಡ ಚುನಾವಣೆಯ ಸಂದರ್ಭದಲ್ಲೇ, ಮತದಾನದ ಕರ್ತವ್ಯದ ಬಗ್ಗೆ ನಾನು ಬರೆದಿದ್ದ ಸುದೀರ್ಘ ಲೇಖನವೊಂದು ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅನೇಕ ಕಡೆಗಳಲ್ಲಿ ನಾನು ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿಯೂ ಇದ್ದೆ. ಆದರೆ ಪರಿಣಾಮ ಮಾತ್ರ ಶೂನ್ಯ. ನನ್ನ ಬಡಾವಣೆಯೂ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಮತದಾನದ ಪ್ರಮಾಣ ಎಂದಿನಂತೆ ಶೇಕಡಾ ೪೫ರಿಂದ ೫೫ ಅಷ್ಟೆ! ವೋಟು ಹಾಕದೇ ಮನೆಯಲ್ಲೇ ಉಳಿದಿದ್ದ ವಿದ್ಯಾವಂತ ’ಗಣ್ಯ’ರೊಬ್ಬರನ್ನು ನಾನು ವಿಚಾರಿಸಿದಾಗ ಅವರ ಉತ್ತರ, ’ಇಷ್ಟು ಮಾತಾಡ್ತೀರಲ್ಲಾ, ನೀವು ವೋಟು ಹಾಕಿದ್ದೀರಾ?’ ಅವರಿಗೆ ನನ್ನ ಬೆರಳಿನ ಮಸಿ ಗುರುತನ್ನು ತೋರಿಸಿದೆ. ಅದಕ್ಕೆ ಅವರ ಮರುಪ್ರಶ್ನೆ, ’ನಿಮ್ಮ ಫ್ಯಾಮಿಲಿ ಮೆಂಬರ್‍ಸ್ ಎಲ್ರೂ ಹಾಕಿದ್ದಾರಾ?’ ’ಹೌದು, ಎಲ್ರೂ ಹಾಕಿದ್ದಾರೆ. ಬೇಕಾದರೆ ಮನೆಗೆ ಬಂದು ನೋಡಿ’, ಎಂದೆ. ಸುಮ್ಮನಾದರು. ಅವರ ಮನೆಯಲ್ಲಿ ಮೂರು ಮತಗಳಿದ್ದು ಯಾರೂ ಮತದಾನ ಮಾಡಿರಲಿಲ್ಲ!’

  ಒಟ್ಟಾರೆ ಸಾರಾಂಶ ಇಷ್ಟೆ. ಪ್ರಜೆಗಳಾದ ನಾವು ಜಾಗೃತರಾಗಬೇಕಾಗಿದೆ; ಸೋಮಾರಿತನ ಬಿಟ್ಟು ಎದ್ದೇಳಬೇಕಾಗಿದೆ; ಸ್ವಾರ್ಥ ತೊರೆದು ಭ್ರಷ್ಟರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾಗಿದೆ; ಮೊದಲು ಸ್ವಯಂ ನಾವು ಭ್ರಷ್ಟತನದಿಂದ ದೂರಾಗಬೇಕಾಗಿದೆ.

  ಚುನಾವಣೆಗಳಲ್ಲಿ ನಾವು ತಪ್ಪದೇ ಮತದಾನ ಮಾಡುವ ಮೂಲಕ ಇದ್ದುದರಲ್ಲಿಯೇ ಯೋಗ್ಯರನ್ನು (ಅಥವಾ ಕಡಿಮೆ ಅಯೋಗ್ಯರನ್ನು) ಆರಿಸಬೇಕಾಗಿದೆ. ತನ್ಮೂಲಕ ಶಾಸಕಾಂಗ ಮತ್ತು ಆಡಳಿತಾಂಗಗಳಲ್ಲಿನ ಭ್ರಷ್ಟ ವಾತಾವರಣವನ್ನು ನಿವಾರಿಸುವತ್ತ ಹೆಜ್ಜೆಯಿರಿಸಬೇಕಾಗಿದೆ.

  ಇಂದು ಶಾಸಕಾಂಗವನ್ನಾಗಲೀ ಆಡಳಿತಾಂಗವನ್ನಾಗಲೀ ನಾನಾ ಸಾಧನಗಳ ಮೂಲಕ ಕಾನೂನುಬದ್ಧವಾಗಿಯೇ ತರಾಟೆಗೆ ತೆಗೆದುಕೊಳ್ಳುವುದು ಸಾರ್ವಜನಿಕರಿಗೆ ಸಾಧ್ಯ. ಅಂಥದೊಂದು ಇಚ್ಛಾಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ’ಯಾರ ಚಿಂತೆ ನಮಗ್ಯಾಕೆ? ನಮ್ಮ ಚಿಂತೆ (ನಮ್ಮ ಸ್ವಾರ್ಥ) ನಮಗೆ ಸಾಕು’, ಎಂದುಕೊಂಡಿದ್ದರೆ ಯಾವುದೇ ಬದಲಾವಣೆ ಅಸಾಧ್ಯ. ಪರಿಣಾಮ, ಮುಂದಿನ ದಿನಗಳು ನಮ್ಮ ಮಕ್ಕಳು-ಮೊಮ್ಮಕ್ಕಳಿಗೇ ದುರ್ಭರ!