ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?

ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?

"ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ ಘೋಷಣೆಗಳು ಯಾರಿಗೆ?


ಕನ್ನಡಿಗರೇ ಈ ಘೋಷಣೆಗಳನ್ನು ಓದಿದರೆ ಈ ಘೋಷಣೆಗಳ ಸಾರ್ಥಕ್ಯವಾದರೂ ಏನು?


ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಬ್ಬರು ಅಲ್ಲಿನ ಕನ್ನಡದ ಸ್ಥಿತಿಗತಿಯನ್ನು, ಕನ್ನಡಿಗರ ಕೀಳರಿಮೆಯನ್ನು 'ವಿಜಯ ಕರ್ನಾಟಕ'ದಲ್ಲಿ ಈಚೆಗೆ ಮನಮುಟ್ಟುವಂತೆ ವಿವರಿಸಿದ್ದರು. ಅವರ ವಿವರಣೆಯಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಅನ್ಯ ಭಾಷಿಕರು ಬಾಯಿ ತೆರೆಯುವ ಮುನ್ನವೇ


ಅವರು ಯಾವ ಭಾಷೆ ಮಾತನಾಡುತ್ತಾರೆ ಎಂಬುದನ್ನು ಗ್ರಹಿಸುವ ನಮ್ಮ ಕನ್ನಡಿಗರು ಅವರ ಭಾಷೆಯಲ್ಲೇ ಉಲಿಯಲು ಆರಂಭಿಸಿಬಿಡುತ್ತಾರೆ. ಹೀಗಾಗಿಯೇ ಬೆಂಗಳೂರಿಗೆ ಬಂದ ತಕ್ಷಣ ಬೇರೆ ಭಾಷಿಕರು "ಕನ್ನಡ ಗೋತಿಲ್ಲ" ಎಂಬ ಮಂತ್ರ ಕಲಿತುಬಿಡುತ್ತಾರೆ. ಮುಂದೆ ಹತ್ತು ವರ್ಷ ಇದೇ ಊರಲ್ಲೇ ನೆಲೆಸಿದರೂ ಈ ಮಂತ್ರ ಬಿಟ್ಟು ಅವರಿಗೆ ಬೇರೇನೂ 'ಗೋತಿರುವುದೇ' ಇಲ್ಲ.


ಸಮಸ್ಯೆಯ ಮೂಲ ಕೆದಕುತ್ತ ಹೋದರೆ ಕರ್ನಾಟಕದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಈ ದುಃಸ್ಥಿತಿ ಬರಲು ಕನ್ನಡಿಗರೇ ಕಾರಣ ಎಂಬ ಮಾತು ಸತ್ಯವೆನಿಸುತ್ತದೆ.


ತಮಿಳರು, ಮಲಯಾಳಿಗಳು, ತೆಲುಗರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಪ್ರೀತಿಯನ್ನು ದುರಭಿಮಾನ ಎಂದು ಜರೆಯುವ ನಾವು ಇದರಿಂದ ಪಾಠವನ್ನು ಏಕೆ ಕಲಿಯುವುದಿಲ್ಲ? ಈ ಮೂರೂ ಭಾಷೆಯವರೂ ಬೆಂಗಳೂರಷ್ಟೇ ಅಲ್ಲ ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ತಮ್ಮ ಭಾಷೆ-ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ತಮ್ಮ  ಭಾಷೆಯ ಜೊತೆ ಬಾಂಧವ್ಯ ಬೆಸೆಯುವ ಪುಸ್ತಕ, ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳನ್ನು ಓದುವುದನ್ನು-ನೋಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಕನ್ನಡಿಗರಾದ ನಾವು ಅನ್ಯಭಾಷೆಯನ್ನು ಮಾತನಾಡುವುದನ್ನೇ ದೊಡ್ಡಸ್ತಿಕೆಯಾಗಿಸಿಕೊಂಡಿದ್ದೇವೆ.


ಸುಮಾರು ಹತ್ತು ವರ್ಷಗಳ ಕಾಲ ಚೆನ್ನೈನಲ್ಲಿ ನೆಲೆಸಿದ್ದ ನನಗೆ ಭಾಷೆಯ ಬಗ್ಗೆ ಅಲ್ಲಿನ ತಮಿಳರಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂಬ ಅನಿಸಿಕೆ ಇದೆ. ನಮ್ಮ ರಾಜ್ಯದಲ್ಲಿ ಇರುವ ಹಾಗೆ ಭಾಷೆಗೊಂದು ಕಾವಲು ಸಮಿತಿ, ಅದಕ್ಕೊಬ್ಬ ಅಧ್ಯಕ್ಷ, ಅವರಿಗೊಂದು ಗೂಟದ ಕಾರು ಇವೆಲ್ಲ ರಗಳೆಗಳು ಅಲ್ಲಿಲ್ಲ. ಅಲ್ಲಿನ ಜನರೇ ದಿನನಿತ್ಯದ ಜೀವನದಲ್ಲಿ ಅಭಿಮಾನದಿಂದ ತಮ್ಮ ಭಾಷೆಯನ್ನು ಬಳಸುತ್ತಿರುವಾಗ, ಅನ್ಯ ಭಾಷಿಕರು ತಮಿಳು ಕಲಿಯದೇ ಅಲ್ಲಿ ಜೀವನ ಮಾಡುವುದು ದುಸ್ತರವೆನಿಸುವ ಸ್ಥಿತಿಯನ್ನು ನಿರ್ಮಿಸಿರುವಾಗ ನಮ್ಮ ರಾಜ್ಯದಲ್ಲಿರುವಂತೆ ಕನ್ನಡವನ್ನು ರಕ್ಷಣೆ ಮಾಡುವ ವೇದಿಕೆಗಳಾಗಲೀ, ಸಂಘಟನೆಗಳಾಗಲೀ ಅಲ್ಲಿ ಇಲ್ಲವೇ ಇಲ್ಲ. ನಮಗಿರುವಂತೆ ತಮಿಳರಿಗೂ ನವೆಂಬರ್ ಒಂದನೇ ತಾರೀಖು ರಾಜ್ಯೋತ್ಸವ. ಆದರೆ ಅಲ್ಲಿ ಎಲ್ಲಿಯೂ ನಮ್ಮಲ್ಲಿರುವಂತೆ ಅದ್ದೂರಿ ಸಮಾರಂಭಗಳಾಗಲೀ, ತಮಿಳು ಬಾವುಟಗಳನ್ನಾಗಲೀ ನೋಡಿದ ನೆನಪಿಲ್ಲ. ಸವಾರಿ ಕೈ ತಪ್ಪಿದರೂ ಚಿಂತೆಯಿಲ್ಲ ಅಪ್ಪಿ ತಪ್ಪಿಯೂ ತಮಿಳು ಬಿಟ್ಟು ಅನ್ಯ ಭಾಷೆ ಮಾತನಾಡಲಾರ ಅಲ್ಲಿನ ಆಟೋಗಾರ. ಆದರೆ ಭಾರಿ ಗಾತ್ರದ ಕನ್ನಡ ಬಾವುಟ  ಹಾರಿಸುವ ನಮ್ಮ ಆಟೊ ಅಣ್ಣಂದಿರು ಮಾತು ಆರಂಭಿಸುವುದೇ ಅನ್ಯ ಭಾಷೆಯಿಂದ. 'ನಾವೂ ಕನ್ನಡದವ್ರೇ ಕಣ್ರೀ' ಎಂದರೆ ಮಾತ್ರ 'ಏನ್ಮಾಡೋದ್ ಸಾರ್ ಬೆಂಗ್ಳೂರಲ್ಲಿ ಎಲ್ಲಾ ಬೇರೆ ಲಾಂಗ್ವೆಜ್ ನೋರೇ ತುಂಬ್ಕೊಂಡ್ ಬಿಟ್ಟಿದಾರೆ' ಎಂದು ಕನ್ನಡಕ್ಕೆ ವಾಲುತ್ತಾರೆ.


ಚೆನ್ನೈನ ಐಟಿ ಕಂಪನಿಗಳಲ್ಲೂ ಕೂಡ ತಮಿಳರ ಭಾಷಾ ಪ್ರೇಮ ಕಡಿಮೆಯೇನಿಲ್ಲ. ಕಚೇರಿಯ ಸಮಯದಲ್ಲಿ ಸಮೂಹ ಭಾಷೆಯಾದ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು ಎಂಬ ನಿಯಮವಿದ್ದಾಗಲೂ ಅನ್ಯಭಾಷಿಕರಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮಿಳಿನಲ್ಲೇ ಸಂಭಾಷಣೆ ಸಾಗುತ್ತದೆ.


ಅಷ್ಟೇ ಅಲ್ಲ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಥಾನದಲ್ಲಿನ ಅಧಿಕಾರಿ ತಮಿಳು ಭಾಷಿಕನಿದ್ದರೆ ಮುಗಿದೇ ಹೋಯ್ತು; ತಮ್ಮದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನೂ ಮರೆತು ಒಂದು ನಿರ್ದಿಷ್ಟ ಕೇಂದ್ರದ ಒಟ್ಟು ತಲೆ ಎಣಿಕೆ (ಹೆಡ್ ಕೌಂಟ್)ಯಲ್ಲಿ ಪ್ರಸಕ್ತ ವರ್ಷ ಶೇಕಡಾ 30 ರಷ್ಟು ಸ್ವಭಾಷಿಕರನ್ನು ನೇಮಕ ಮಾಡಿಕೊಂಡಿರುವುದಾಗಿ ಹೇಳಿ ಸ್ವಾಭಿಮಾನ(!)  ಪ್ರದರ್ಶಿಸಿದ್ದನ್ನೂ ಗಮನಿಸಿದ್ದೇನೆ.


ಆದರೆ ನಮ್ಮ ಬೆಂಗಳೂರಿನಲ್ಲಿ?


ಕನ್ನಡ ಓದು-ಬರಹವಷ್ಟೇ ಅಲ್ಲ, ಕನ್ನಡದಲ್ಲಿ ಕತೆ-ಕವನ ಬರೆಯುವ ಅನೇಕ ಬರೆಹಗಾರರು ಐಟಿ ಕಂಪನಿಗಳ ಉನ್ನತ ಹುದ್ದೆಗಳಲ್ಲಿದ್ದಾರೆ. ಆದರೆ ಅವರು ಎಂದಾದರೂ ಕನ್ನಡದ ಯುವ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದ ಅಥವಾ ಕನ್ನಡದ ಉದ್ಯೋಗಿಗಳ ಹೆಚ್ಚಳಕ್ಕೆ ಶ್ರಮಿಸಿದ ನಿದರ್ಶನ ತುಂಬಾ ದುರ್ಲಭ. ಇನ್ನು ಬೇರೆ ರಾಜ್ಯಗಳಲ್ಲಿ ಸಂಸ್ಥೆಯ ವಾತಾವರಣದಲ್ಲಿ ಅಲ್ಲಿನ ಭಾಷೆಗೆ ಪ್ರೋತ್ಸಾಹ ನೀಡಿದಂತೆ ಕನ್ನಡದ ಕಂಪನ್ನು ಇವರು ಬೀರುವುದಂತೂ ದೂರವೇ ಉಳಿಯಿತು. ಇನ್ನು ನಮ್ಮ ಕನ್ನಡಿಗ ಉದ್ಯೋಗಿಗಳಂತೂ ಕನ್ನಡ ಮಾತನಾಡುವುದು, ಕನ್ನಡ ಪತ್ರಿಕೆಗಳನ್ನು ಓದುವುದೇ ಒಂದು ಕೀಳರಿಮೆ ಎಂಬ ಮಟ್ಟಿಗೆ ಬಂದಿದ್ದಾರೆ.


ನೆರೆ ರಾಜ್ಯಗಳಲ್ಲಿ ಅಲ್ಲಿನ ಭಾಷಾ ಪರ ಸಂಘಟನೆಗಳಿಲ್ಲ ಎಂದ ಮಾತ್ರಕ್ಕೆ ನಮ್ಮ ರಾಜ್ಯದಲ್ಲೂ ಅವು ಬೇಡವೆಂದಲ್ಲ. ರಾಜ್ಯದ ರಾಜಧಾನಿಯಲ್ಲಿ ರಾರಾಜಿಸಬೇಕಾಗಿದ್ದ ಕನ್ನಡ ಅವುಡುಗಚ್ಚಿ ಕುಳಿತಿರುವ ಈ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಹಾಗೂ ಅವರ ಹೋರಾಟ ಅನಿವಾರ್ಯ. ಅನೇಕ ಸಂದರ್ಭಗಳಲ್ಲಿ ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿಯೇ ಅನೇಕ ಕನ್ನಡಿಗರಿಗೆ ನ್ಯಾಯ ದೊರೆತಿದೆ. ಕನ್ನಡದ ಗಂಧದಾಳಿಯೂ ಸೋಕದ ಕೆಲ ಕಚೇರಿಗಳ ಎದುರು ರಾಷ್ಟ್ರಧ್ವಜಕ್ಕೆ ಸಮಾನವಾಗಿ ಕನ್ನಡ ಧ್ವಜ ಹಾರಾಡುತ್ತಿದೆ. ಸಿಸ್ಕೊ, ಐಬಿಎಂ, ಇಎಂಸಿ, ಆಕ್ಸೆಂಚರ್ ನಂಥ ಬಹುರಾಷ್ಟ್ರೀಯ ಕಂಪನಿಗಳ ಗ್ರಂಥಾಲಯಗಳಲ್ಲಿ ಕನಿಷ್ಠ ಒಂದು ಕನ್ನಡ ಪತ್ರಿಕೆ ಕಡ್ಡಾಯವಾಗಿ ಬರುತ್ತಿದೆ.


ಕನ್ನಡದ ಉಳಿವಿಗೆ-ಉನ್ನತಿಗೆ ಸರಕಾರ-ಸಂಘಟನೆಗಳು ಮಾಡಬಹುದಾದ ಕಾರ್ಯಗಳನ್ನೆಲ್ಲ ಶಕ್ತಿಮೀರಿ ಮಾಡಿವೆ-ಮಾಡುತ್ತಿವೆ. ಆದರೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಕನ್ನಡಿಗರೇ ಅಭಿಮಾನಶೂನ್ಯರಾದರೆ 'ಎನ್ನಡ-ಎಕ್ಕಡಗಳ ಮಧ್ಯೆ ಕನ್ನಡ ಕಳೆದುಹೋಗಿದೆ' ಎಂಬ ಕ್ಷೀಷೆ ಇನ್ನೂ ಹತ್ತಾರು ವರ್ಷ ಸರಿದರೂ ಜೀವಂತವಾಗಿರುತ್ತದೆ.

Rating
No votes yet

Comments