ಕೊನೆಗೂ ಗೆದ್ದರು!
ಕ್ರಿಕೆಟ್ ತಪ್ಪದೇ ಫಾಲೋ ಮಾಡುವವರಿಗೆ ಈ season ಮೊದಲಿಗೇ ಬೇಸರ ತಂದಿಟ್ಟ ಸೀಝನ್ನು. ಮೊದಲಿಗೆ ಅತ್ತ ಇಂಗ್ಲೆಂಡಿನಲ್ಲಿ ಬಾಲ್ ಟ್ಯಾಂಪರಿಂಗ್ ಅಂತ ಎಲ್ಲರೂ ಕಿತ್ತಾಡುತ್ತ ಕ್ರಿಕೆಟ್ಟಿಗಿಂತ ಹೆಚ್ಚು ಗೊಂದಲ ಗಲಾಟೆ ನಡೆಸಿದರೆ, ಇತ್ತ ಮಳೆಯಿಂದಾಗಿ ಮ್ಯಾಚುಗಳೇ ನಡೆಯಲಿಲ್ಲ. ಮೊನ್ನೆ ಮಲೇಶಿಯದಲ್ಲೂ ಭಾರತ ಆಡಿದ ಆಟಗಳು ಮಳೆ ಪಾಲಾದಾಗ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ "ಛೆ!" ಅನ್ನಿಸಿರಲಿಕ್ಕೂ ಸಾಕು.
ಕೊನೆಗೊಂದು ದಿನ, ಅದೂ ಇವತ್ತು "ದಿಸ್ ಇಸ್ ಎ ಟ್ರೆಮೆಂಡಸ್ ಡೇ ಫಾರ್ ಕ್ರಿಕೆಟ್, ಹಾಟ್ ಎಂಡ್ ಹ್ಯೂಮಿಡ್ ವೆದರ್" ಅನ್ನುತ್ತ ಟೋನಿ ಗ್ರೆಗ್ ತನ್ನ ಟ್ರೇಡ್ ಮಾರ್ಕ್ ಧ್ವನಿಯಲ್ಲಿ ಹೇಳುತ್ತಿದ್ದಾಗ ಕೊನೆಗಾದರೂ ಒಂದು ಒಳ್ಳೆಯ ಕ್ರಿಕೆಟ್ ಆಟ ನೋಡಲು ಸಿಗುತ್ತದೆ ಎಂದು ಸಂತಸವಾಯಿತು. ಕಂಪ್ಯೂಟರಿನಲ್ಲಿ ಟಿ ವಿ ತಂತ್ರಾಂಶ ತೆರೆದು LCD ಸ್ಕ್ರೀನಿನ ಕೋನೆಯ ಒಂದು ಚಿಕ್ಕ ಚೌಕಟ್ಟಿನಲ್ಲಿ display ಆಗುವಂತೆ ಝೀ ಸ್ಪೋರ್ಟ್ಸ್ ಹಾಕಿಕೊಂಡು ಕುಳಿತಿದ್ದೆ.
ದ್ರಾವಿಡ್ ಟಾಸ್ ಗೆದ್ದ ವರದಿ ಬರುತ್ತಿತ್ತು. 'ಶುಭಾರಂಭ' ಎಂದುಕೊಂಡೆ.
ಭಾರತದವರು ಬ್ಯಾಟಿಂಗ್ ಪ್ರಾರಂಭಿಸಿದರು. ಇತ್ತ ನಾನು ಅದನ್ನೇ ನೋಡುತ್ತ ಕುಳಿತರೆ ಎಲ್ಲ ವಿಕೆಟ್ಟುಗಳು ಬಿದ್ದು ಹೋಗುವುವು ಎಂಬ ನನ್ನ ಮೂಢನಂಬಿಕೆಯಂತೆ ನನ್ನ ಕೆಲಸ ಮುಂದುವರೆಸಿಕೊಂಡು ಆಗಾಗ ಸ್ಕೋರು ನೋಡಲು ಟಿವಿ ತಂತ್ರಾಂಶದ ಚೌಕಟ್ಟಿನತ್ತ ಕಣ್ಣು ಹಾಯಿಸುತ್ತಿದ್ದೆ. (ಒಂದು ರೀತಿಯಲ್ಲಿ ಈ ಮೂಢನಂಬಿಕೆ ನಾನೇ ಕಟ್ಟಿಟ್ಟುಕೊಂಡ ನಂಬಿಕೆ ಎನ್ನಬಹುದು - ಅದಿಲ್ಲದಿದ್ದರೆ ನನ್ನ ಕೆಲಸಗಳು ಮುಂದೆ ಸಾಗವು!) ನನ್ನ ಮೂಢನಂಬಿಕೆ ಇಂದು ಸುಳ್ಳಾಯ್ತು! ವಿಕೆಟ್ಟುಗಳು ಒಂದೇ ಸಮನೆ ಬಿದ್ದವು. ಸಚಿನ್ ತೆಂಡೂಲ್ಕರನೂ ಪೆವಿಲಿಯನ್ನಿಗೆ ತೆರಳಿದಾಗ 'ತತ್ತರೀಕಿ! ಇವರದ್ದು ಯಾವಾಗಲೂ ಇದೇ ಹಣೇ ಬರಹ" ಎಂದು ನೊಂದುಕೊಂಡು ಟಿ ವಿ ಚೌಕಟ್ಟು ಕ್ಲೋಸ್ ಮಾಡಿ ನಮ್ಮ ಕ್ರಿಕೆಟ್ ಟೀಮಿನವರನ್ನು ಶಪಿಸಿ ಸುಮ್ಮನೆ ಕೆಲಸ ಮುಂದುವರೆಸಿಕೊಂಡು ಹೋದೆ.
****
ಸಾಯಂಕಾಲ ನ್ಯೂಸ್ ಕೇಳಿದ ಮೇಲೆ ತಿಳಿದುಬಂದದ್ದು ಭಾರತದವರು ಕೇವಲ ೧೬ ರನ್ನುಗಳಿಂದ ಗೆದ್ದುಬಿಟ್ಟಿದ್ದಾರೆಂದು! ಬಾಪುರೇ!
ಬೆಳಿಗ್ಗೆ ಕೇವಲ ೧೬೫ ರನ್ ಹೊಡೆದ ಭಾರತ ಗೆಲ್ಲುವುದು ದೂರದ ಮಾತು ಎಂಬಂತಿದ್ದುದು, ಸಾಯಂಕಾಲ ಗೆದ್ದು ಬಿಟ್ಟಿದ್ದಾರೆಂಬ ಸುದ್ದಿ. ಇದೇ ಅಲ್ಲವೇ ಕ್ರಿಕೆಟ್ ಆಟವನ್ನು ಇಷ್ಟೊಂದು ಸ್ವಾರಸ್ಯಕರವಾಗಿಸುವುದು? ಭಾರತ ಗೆದ್ದಾಗಲಲ್ಲವೇ ಕ್ರಿಕೆಟ್ ಚೆಂದವಾಗಿರುವುದು? ;-)