ಕರುನಾಡ ಕವನ

ಕರುನಾಡ ಕವನ

ಬರಹ

 

ಕರುನಾಡ ಕವನ

 

ಪಸರಿಸಿರುವುದು ಸಿರಿಗನ್ನಡದ ಕಂಪು 

ಕಡಲ ತಡಿಲಲೂ, ಸಹ್ಯಾದ್ರಿಯ ಮಡಿಲಲೂ

ಬಯಲು ಸೀಮೆಯ ಸುತ್ತಲೂ, ಮರಳುಗಾಡಿನ ಮೈಯಲೂ

ದುಮುಕುವ ಜಲಧಾರೆಯಲೂ, ಮುದ್ದು ಕಂದಮ್ಮಗಳ ತೊದಲಲೂ

 

ಕನ್ನಡಮ್ಮನ ಒಲುಮೆ ತಟ್ಟುತಿದೆ 

ಹೃದಯಗಳ ಕದವ ಮೃದುವಾಗಿ ಬಡಿದು

ಅವನಿವನೆನ್ನದೆ, ಇಹಪರವೆನ್ನದೆ 

ಬಡಿದೆಬ್ಬಿಸಿ ಅಭಿಮಾನವ, ಮನವ ಮಿಡಿದು

 

ಹರಿಯುತಿಹುದು ಎಲ್ಲೆಲ್ಲೂ ಇತಿಹಾಸ

ಕಥೆಯಾಗಿ, ಕವನವಾಗಿ, ಕಾದಂಬರಿ, ಪುರಾಣವಾಗಿ

ಅಳಿದುಳಿದ ವೈಭವದ ಸ್ಮರಣಿಕೆಯಾಗಿ

ಕರುನಾಡ ವೀರಗಥೆಯ ಕಡಲಾಗಿ

 

ಮೈದುಂಬಿ ನಿಂತ ಕಲ್ಲಿನಲೂ, 

ಬೇಲೂರು ಹಳೆಬೀಡಿನ ಶಿಲೆಯಲೂ ಇತಿಹಾಸ

ಎಲ್ಲರ ಸೆಳೆದು ಮಾಡುತಿದೆ 

ಜನ ಮನದ ಮನ ಮುಟ್ಟುವ ಹರಸಹಾಸ

 

ಗುಡುಗು ಮಳೆಯೆನ್ನದೆ, ಬಿಸಿಲು ಕಾವೆನ್ನದೆ 

ಮೈಮರೆತು ನಿಂತಿದೆ ಸಾವಿರ ಕಂಬದ ಬಸದಿ

ಪ್ರತಿ ಸ್ಥಂಭದಲೂ ಒಂದೊಂದು ಕಥೆ

ಬರೆದಿಟ್ಟಿವೆ ಈ ಮಣ್ಣ ಕಥಾನಕದ ವರದಿ

 

ಉಕ್ಕಿಗೂ ದಕ್ಕದ ಕೋಟೆಗಳದ್ದೆ ಕಾವಲು,

ನಾಡ ಉದ್ದಗಲ

ಮರೆಯುವುದೆಂತು ಹಕ್ಕ-ಬುಕ್ಕ, 

ಹೊಯ್ಸಳರ ಬಲಾಬಲ?

 

ಒಂದೆಡೆ ಕೊಡವ, ಸಾಗರದುದ್ದಕ್ಕೂ ನಾಡವ

ಮೈಸೂರು, ಹಂಪಿಯಲಿ ಕರುನಾಡ ಗತ ವೈಭವ

ಕನ್ನಡಮ್ಮನ ಸರಸ್ವತಿ ಪುತ್ರದ್ವಯ ದಾಸರು

ಮೇಲು ಕೀಳೆಲ್ಲಾ ಮಿಥ್ಯವೆಂದ ಶರಣ ಬಸವರು

 

ಮಹಾಕಾವ್ಯಗಳ ಮಳೆಗೆರೆದರು ಕಾಳಿದಾಸ,

ಕುಮಾರವ್ಯಾಸ, ರನ್ನ, ಪಂಪ

ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತರು

ಎರೆದರು ಕೃತಿ-ಕಾವ್ಯಗಳ ತಂಪ

 

ಮುಚ್ಚಿಟ್ಟ ಪುಟಗಳ ತೆರೆದರೆ ನಡುವೆ 

ಅದೆಷ್ಟು ಇತಿಹಾಸ

ಮಿಂಚಿ ಮಿನುಗುತಿದೆ ಕನ್ನಡಮ್ಮನ 

ಮೊಗದಲಿ ಮಂದಹಾಸ

Date - 20th Aug 2007