ಕಾಲಚಕ್ರ, ಅದೆಷ್ಟು ಬೇಗ, ಅದೆಂಥಾ ವೇಗ!

ಕಾಲಚಕ್ರ, ಅದೆಷ್ಟು ಬೇಗ, ಅದೆಂಥಾ ವೇಗ!

ಅದೆಷ್ಟು ಬೇಗ ಓಡುತ್ತಿದೆ, ಈ ಕಾಲಚಕ್ರ.  ನಿನ್ನೆ ಮೊನ್ನೆಯಲ್ಲಿ ಬೆಂಗಳೂರಿನ ಇಂದಿರಾನಗರದ ಇ ಎಸ್ ಐ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಹುಟ್ಟಿದಂತೆ ಇನ್ನೂ ಭಾಸವಾಗುತ್ತಿದೆ.  ಹದಿನಾಲ್ಕು ವರ್ಷಗಳು ಅದೆಷ್ಟು ವೇಗವಾಗಿ ಕಳೆದು ಹೋದವು.  ಇಂದು ಹದಿನೈದನೆ ವಸಂತಕ್ಕೆ ಕಾಲಿಟ್ಟು ನಿಂತಿದ್ದಾನೆ, ನನ್ನ ಮಗ ವಿಷ್ಣು. 

ಮೂರು ತಿಂಗಳಿಗೆಲ್ಲಾ ಅಮ್ಮನ ಎದೆ ಹಾಲು ಕುಡಿಯುವುದ ಬಿಟ್ಟು ಬಾಟಲಿ ಹಾಲು ಕುಡಿಯುತ್ತಾ, ಅಮ್ಮನನ್ನು ಬಿಟ್ಟು ನನ್ನ ಜೊತೆಗೇ ಹೆಚ್ಚು ಹಚ್ಚಿಕೊಂಡು ಬಿಟ್ಟಿದ್ದ.  ನಾನು ಕೆಲಸದಿಂದ ಬಂದರೆ, ಅದೆಷ್ಟೇ ಆಯಾಸವಾಗಿದ್ದರೂ ಅವನ ಬಾಲ ಲೀಲೆಗಳಿಂದ ಎಲ್ಲಾ ಮಂಗ ಮಾಯ!  ಅವನನ್ನು  ನನ್ನ ರೋಡ್ ಕಿಂಗ್ ಗಾಡಿಯಲ್ಲೊಮ್ಮೆ ಸುತ್ತಾಡಿಸಿಕೊಂಡು ಬಂದರೆ ಕುಣಿದು ಕುಪ್ಪಳಿಸುತ್ತಿದ್ದ.  ನನ್ನ ತೋಳಿನ ಮೇಲೆ ಮಲಗಿ ಅವನ ನೆಚ್ಚಿನ ಹೀರೋ

"ಸಾಹಸ ಸಿಂಹ-ವಿಷ್ಣುವರ್ಧನ್" ಚಿತ್ರವನ್ನ ತದೇಕಚಿತ್ತನಾಗಿ ಅದೆಷ್ಟೇ ಹೊತ್ತಾದರೂ, ಮಲಗದೆ ನೋಡುತ್ತಿದ್ದ. 

ಕೇವಲ ಒಂದೂವರೆ ವರ್ಷದವನಿದ್ದಾಗ ಅವನ ಲಿವರ್ ನಲ್ಲಿ ಅದೇನೋ ತೊಂದರೆಯಾಗಿ ಬೆಂಗಳೂರಿನಲ್ಲಿನ ಎಲ್ಲಾ ಆಸ್ಪತ್ರೆಗಳಿಗೂ ಸುತ್ತಾಡಿ, ನೂರಾರು ವೈದ್ಯರಿಗೆ ತೋರಿಸಿ, ಅವರು ಹೇಳಿದ ಎಲ್ಲಾ ರಕ್ತ ಪರೀಕ್ಷೆಗಳನ್ನು ಆನಂದ್ ಹಾಗೂ ಮೆಡಿನೋವಾಗಳಲ್ಲಿ ಮಾಡಿಸುವಾಗ, ಆ ದಾದಿಯರು ಸಿರಂಜು ಚುಚ್ಚಿ ರಕ್ತ ತೆಗೆಯುವಾಗ ಅದೆಷ್ಟು ಕಣ್ಣೀರು ನನ್ನ ಕಣ್ಣಿಂದ ಹರಿದು ಹೋಗಿತ್ತೋ, ಲೆಕ್ಕವೇ ಇಲ್ಲ.  ಕೊನೆಗೆ ಎಲ್ಲೂ ವಾಸಿಯಾಗದೆ, ನೀನೇ ಗತಿಯೆಂದು ಧರ್ಮಸ್ಥಳಕ್ಕೆ ಹರಕೆ ಹೊತ್ತು, ಅವನು ಹುಷಾರಾದ ಮೇಲೆ ಬೆಲ್ಲದಲ್ಲಿ ಅವನ ತುಲಾಭಾರ ಮಾಡಿಸಿ ಹರಕೆ ತೀರಿಸಿದ್ದೆ.  ಈಗ ಯಾವ ಖಾಯಿಲೆಯಿಲ್ಲದೆ ನನಗಿಂತ ಒಂದಿಂಚು ಹೆಚ್ಚೇ ಎತ್ತರವಾಗಿ ಬೆಳೆದು ನಿಂತಿದ್ದಾನೆ.

ಅಕ್ಕನ ಹಿಂದೆ ಸುತ್ತಾಡುತ್ತಾ ನಾನೂ ಧಾರಾವಾಹಿಗಳಲ್ಲಿ, ಚಿತ್ರಗಳಲ್ಲಿ ಅಭಿನಯಿಸುತ್ತೇನೆಂದು ಹುಚ್ಚು ಹಿಡಿಸಿಕೊಂಡಿದ್ದ.  ಆದರೆ ಕಳೆದ ವರ್ಷ ಅವನ ಜನ್ಮದಿನದಂದೇ ಮುಂಬೈನಲ್ಲಿ ನಡೆದ ಉಗ್ರಗಾಮಿಗಳಿಂದ ನಡೆದ ಹತ್ಯಾಕಾಂಡ, ಅದರಲ್ಲಿ ರಾಷ್ಟ್ರೀಯ ಸುರಕ್ಷತಾ ದಳದ ಕಮ್ಯಾಂಡೋಗಳು ಮೆರೆದ ಸಾಹಸ, ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ವೀರಮರಣ, ಅವನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿ, ಈಗ ಎಲ್ಲವನ್ನೂ ಬಿಟ್ಟು ನಾನು ಭಾರತೀಯ ಸೇನೆ ಸೇರುತ್ತೇನೆ, ನಾನೂ ಒಬ್ಬ ಕಮ್ಯಾಂಡೋ ಆಗುತ್ತೇನೆಂದು ಆ ದಾರಿಯಲ್ಲಿ ಪ್ರತಿದಿನ ಜಿಮ್ಮಿಗೆ ಹೋಗಿ ವ್ಯಾಯಾಮ ಮಾಡುತ್ತಿದ್ದಾನೆ.  ತನ್ನೆಲ್ಲ ಹುಡುಗಾಟಗಳನ್ನು ಬಿಟ್ಟು ಅಂದಿನಿಂದ ಬಹಳ ಗಂಭೀರವಾಗಿದ್ದಾನೆ. 

ಒಬ್ಬ ತಂದೆಯಾಗಿ, ನನಗೆ ಬಹಳ ಹೆಮ್ಮೆಯಾಗುತ್ತದೆ, ಅವನು ತನ್ನ ಗುರಿ ಸಾಧಿಸಿ, ಭಾರತೀಯ ಸೈನ್ಯ ಸೇರಿ, ದೇಶಸೇವೆ ಮಾಡಿದರೆ ಅದಕ್ಕಿಂತ ಪುಣ್ಯ ಬೇರೇನಿದೆ?  ಆ ಹಾದಿಯಲ್ಲಿ ಅವನಿಗೆ ಎಲ್ಲ ರೀತಿಯ ಯಶಸ್ಸು ಸಿಕ್ಕಿ ತನ್ನ ಗುರಿ ಸಾಧಿಸಲೆಂದು ನನ್ನ ಹೃದಯ ಪೂರ್ವಕ ಹಾರೈಕೆಗಳು.  ಇದೇ ಸಮಯದಲ್ಲಿ ಹೋದ ವರ್ಷದ ಆ ಹತ್ಯಾಕಾಂಡದಲ್ಲಿ ತಮ್ಮ ಪ್ರಾಣ ತೆತ್ತ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಸಂದೀಪ್ ಉನ್ನಿಕೃಷ್ಣನ್ ಹಾಗೂ ಇತರ ನೂರಾರು ಅಮಾಯಕರ ಆತ್ಮಕ್ಕೆ ಶಾಂತಿ ಕೋರುವೆ.

ನಮ್ಮ ಯುವ ಜನತೆಗೆ ಇದೊಂದು ಉತ್ತಮ ಪಾಠವಾಗಿ, ಅವರು ತಮ್ಮ ನಿರ್ಲಿಪ್ತತೆಯನ್ನು ಕೊಡವಿ ಮೇಲೆದ್ದು, ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಲಿ, ಈ ಕೆಟ್ಟ ಭ್ರಷ್ಟಾಚಾರಿ ರಾಜಕಾರಣಿಗಳಿಗೆ ಬುದ್ಧಿ ಕಲಿಸಲಿ, ನಮ್ಮ ಭವ್ಯ ಭಾರತವನ್ನು ಜಗತ್ತಿನ ಭೂಪಟದಲ್ಲಿ ಮೇಲ್ಮಟ್ಟಕ್ಕೇರಿಸಲಿ ಎಂದು ಎದೆ ತುಂಬಿ ಹಾರೈಸುವೆ.

 

Rating
No votes yet

Comments