ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ!

ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ!

ಬರಹ

ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು.

ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು.



ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದುಳುದ ಸಾಮಾನುಗಳಿಗಾಗಿ ತಡಕಾಡುವುದು ಸಮಾನ್ಯವಾಗಿತ್ತು. ಮಕ್ಕಳು ಶಾಲೆ ಮುಖ ನೋಡದೆ ವಾರವಾಗಿತ್ತು. ಊರಲ್ಲಿದ್ದ ಒಂದು ಪ್ರಾಥಮಿಕ ಶಾಲೆಯಲ್ಲಿ ಜನ ತುಂಬಿಕೊಂಡಿದ್ದರು. ಇರಲು ಮನೆಯೂ ಇಲ್ಲದೆ, ತಿನ್ನಲು ಕಾಳು ಇಲ್ಲದೆ ಇರುವಾಗಲೂ ಮತ್ತೆ ಹೊಸ ಜೀವನ ಆರಂಭಿಸಲು ಜನ ಹೆಣಗಾಡುತ್ತಿದ್ದರು. ಇಳುವರಿಗೆ ಅಂತ ತಂದಿಟ್ಟ ಗೊಬ್ಬರ ನೀರು ಪಾಲಾಗಿತ್ತು. ಅಷ್ಟರಲ್ಲಿ ದೂರದ ಆಂದ್ರದ ಯಾವುದೋ ಯೋಗ ಕೇಂದ್ರದವರು ಬಿಸ್ಕತ್‌ಗಳನ್ನು ತಂದು ಹಂಚಲು ಆರಂಭಿಸಿದರು.

ಈ ಕಾರಣಕ್ಕೊ ಏನೋ ಪ್ರತಿಯೊಬ್ಬರ ಬಾಯಲ್ಲೂ ಆಂದ್ರ ಪ್ರದೇಶದ ಗುಣಗಾನ ಕೇಳಿ ಬರುತ್ತಿತ್ತು. ನಮ್ಮನ್ನು ಆಂದ್ರಕ್ಕೆ ಸೇರಿಸಿ ಎಂದು ಯಾವುದೇ ಮುಜುಗರವಿಲ್ಲದೆ ತಲೆಮಾರಿಯ ಜನ ತಮ್ಮ ಬೇಡಿಕೆ ಮುಂದಿಡುತ್ತಿದ್ದರು. ಆತಂಕದಲ್ಲಿದ್ದ ಜನರ ಸಹಜ ಮನಸ್ಥಿತಿಯಂತೆ ಇದು ಕಾಣುತ್ತಿದ್ದರು ಮುಂದೊಮ್ಮೆ ಗಡಿಯ ಸಮಸ್ಯೆಯ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳು ಕಾಣುತ್ತಿತ್ತು ಜನರ ಸಿಟ್ಟಿನ ಆಭಿವ್ಯಕ್ತಿ.



ಮಧ್ಯಾನದ ವರೆಗೂ ತಲೆಮಾರಿಯಲ್ಲಿ ಕಳೆದು ರಾಯಚೂರಿಗೆ ಮರಳಿದೆವು. ರಾಯಚೂರಿನ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ತಲೆಮಾರಿಗೆ ತುರ್ತಾಗಿ ಕನಿಷ್ಠ ಬ್ಲೀಚಿಂಗ್‌ಪೌಡರ್ ಆದ್ರೂ ಕಳುಹಿಸಿ ಸ್ವಾಮಿ ಎಂದು ಹೇಳಲು ಫೋನು ಮಾಡಿದರೆ ಕೇಳಲು ಯಾರು ಇರಲಿಲ್ಲ. ಹೇಳಲು ನಾವಾದರೂ ಯಾರು?