ಮನೆಗೆ ಗೋಡೆಗಳಿಲ್ಲ

ಮನೆಗೆ ಗೋಡೆಗಳಿಲ್ಲ

ಬಾಗಿಲಂತೂ ಮಜಬೂತು,
ಅಂದದ ಕೆತ್ತನೆ, ಚಂದದ ಕುಸುರಿ,
ತೇಗದ ಮರ ಬಿಡು, ಭಾರಿ ದುಬಾರಿ.

ಅರೆ!
ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?
ಒಳಗೆ ಬಾ ಗೆಳೆಯಾ.
ನಗಬೇಡ,
ಈ ನನ್ನ ಮನೆಗೆ ಗೋಡೆಗಳಿಲ್ಲ!

ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;
ಎಡಕಿಹುದು ಮಂಚ, ಅಲ್ಲಿಯೆ ಪ್ರಣಯದಾಟ.
ಏನಯ್ಯ ಬಾಯ್ಬಿಡುವೆ, ಹೇಳಲಿಲ್ಲವೆ?
ನಮ್ಮ ಮನೆಗೆ ಗೋಡೆಗಳಿಲ್ಲ.

ಊಟ-ತಿಂಡಿ, ಜಳಕ,
ಶೃಂಗಾರ, ರತಿಯ ಪುಳಕ,
ಉಂಡು ಮಲಗೋ ತನಕ

ಮಾರಾ-ಮಾರಿ, ಜಗಳ-ಕದನ,
"ಅದಿಲ್ಲ-ಇದಿಲ್ಲ"ಗಳ ಅನುದಿನದ ಕಾಷ್ಟ-ವ್ಯಸನ,
ಇಲ್ಲಿ ಎಲ್ಲವು ಮುಕ್ತ, ನೋಡುಗರಿಗೆ.

ಯಾಕಯ್ಯ ಸಂಕೋಚ?
ಕೂಡು, ಇದು ನಿಮ್ಮ ಮನೆಯೇ
ಅಂತ ತಿಳಿ.
ತುಸು ವಿಶ್ರಮಿಸಿಕೋ ಕೂತು.
ಕೇಳಿಲ್ಲವೇ ಮಾತು?
"ಎಲ್ಲರ ಮನೆ ದೋಸೆ ತೂತು"
ಇಲ್ಲಿ ಹೊಸದಿನ್ನೇನಿದ್ದೀತು?

ತೆರೆದ ಮನೆ ನೋಡು, ನಮ್ಮಂತೆಯೇ ಇಲ್ಲಿ
ವಾಸ್ತವ್ಯ ಹೂಡಿಹವು ಹಾವು-ಹಲ್ಲಿ.
ಗೋಡೆಯಿಲ್ಲದ ಮೇಲೆ ಬಾಗಿಲೇಕೆಂದೆಯಾ?
ತಾತನ ಕಾಲದ್ದೋ ಅದು,
'ಮನೆ'ತನದ ಮರ್ಯಾದಿ!

ಮನದಂತೆಯೇ ನನ್ನ ಮನೆಯ ಬಾಗಿಲು ಕೂಡ,
ಸದಾ ತೆರೆದದ್ದೇ, ಮಾನವರ ಸ್ವಾಗತಕ್ಕೆ.
ಆದರೂ ಒಮ್ಮೊಮ್ಮೆ ಜಂತುಗಳೂ ಕೂಡ
ನುಸುಳುವುದೂ ಉಂಟು ಬಾಗಿಲ ಮುಖಾಂತರವೇ!
ಹಾಗೆಂದು ಬಾಗಿಲನು ಮುಚ್ಚಿಬಿಡಲಾದೀತೇ?
ನೆಗಡಿ ಬಂತೆಂದು ಮೂಗನೇ ಕೊಯ್ಯುವಂತೆ!

ಮನೆಗೆ ಗೋಡೆಗಳಿಲ್ಲವೆಂದು ಚಿಂತಿಸಬೇಡ,
ನೆರೆಹೊರೆಯ ಗೋಡೆಗಳೆ ನಮ್ಮವೂ ಕೂಡ.
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ.

ಹೊರಟೇಬಿಟ್ಟೆಯಾ? ಆಯ್ತು, ಬಾರೋ ಆಗಾಗ.
ಏನೆಂದೆ?... ಸಿಕ್ಕೇ ಸಿಗುವೆನು, ನನಗೆ ಮತ್ತಾವ ಜಾಗ?
"ಕತ್ತೆ ಸತ್ತರೆ ಹಾಳು ಗೋಡೆ" ಅನ್ನುವೆಯಾ?
ಆ ಮಾತುಗಳಿಗಿಲ್ಲಿ ಅರ್ಥವಿಲ್ಲ;
ನಮ್ಮ ಮನೆಗೆಲ್ಲಿಯೂ ಗೋಡೆಗಳೆ ಇಲ್ಲ!

- ೦೩/೦೬/೧೯೯೮

Rating
No votes yet

Comments