ಕಲಾಂ ಧೀಮಂತಿಕೆ

ಕಲಾಂ ಧೀಮಂತಿಕೆ

ಬರಹ

  ೨೦೧೨ರಲ್ಲಿ ಮಹಾಪ್ರಳಯವೇನೂ ಸಂಭವಿಸುವುದಿಲ್ಲವೆಂದು ಸಾರಿ ಸಾರಿ ಹೇಳುತ್ತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಯಭೀತರ ಮನಸ್ಸಿನಲ್ಲಿ ಧೈರ್ಯ ತುಂಬುತ್ತಿದ್ದಾರೆ. ತಾನೊಬ್ಬ ಮಾಜಿ ರಾಷ್ಟ್ರಪತಿ ಮತ್ತು ’ಭಾರತರತ್ನ’ ಬಿರುದಾಂಕಿತ ಎಂದು ದೊಡ್ಡಸ್ತಿಕೆಯ ಧೋರಣೆಯಿಂದ ಮೋಡಗಳಲ್ಲಿ ತೇಲಾಡದೆ ಕಲಾಂ ಅವರು ತಾನೊಬ್ಬ ವಿಜ್ಞಾನಿ ಮತ್ತು ಜನರಿಗೆ ಧೈರ್ಯ ಹೇಳುವುದು ತನ್ನ ಕರ್ತವ್ಯ ಎಂದು ಭಾವಿಸಿ ಈ ಧೈರ್ಯ ಹೇಳುವ ಕಾರ್ಯ ಮಾಡುತ್ತಿದ್ದಾರೆ. ಅವರ ಕರ್ತವ್ಯಪ್ರಜ್ಞೆ, ಸರಳತೆ ಮತ್ತು ಸಾಮಾಜಿಕ ಕಳಕಳಿ ಇವು ನಿಜಕ್ಕೂ ಪ್ರಶಂಸಾರ್ಹ.
  ಈ ಸಂದರ್ಭದಲ್ಲಿ ನನಗೆ ಕಲಾಂ ಅವರೊಡನೆ ನನ್ನ ಪತ್ರವ್ಯವಹಾರದ ಘಟನೆಯೊಂದು ನೆನಪಿಗೆ ಬರುತ್ತಿದೆ. ೨೦೦೮ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಧಾನಮಂಡಲದ ಉಭಯ ಸದನಗಳ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಪ್ರಶಿಕ್ಷಣ ಶಿಬಿರಕ್ಕೆ ಆಗಮಿಸಿ ಕಲಾಂ ಅವರು ನಮ್ಮ ಶಾಸಕರಿಗೆ ಪಾಠ ಹೇಳಿ ಹೋದರಷ್ಟೆ. ಅದಕ್ಕೆ ಪೂರ್ವಭಾವಿಯಾಗಿ ಅವರು ಪ್ರಶ್ನಾವಳಿಯೊಂದನ್ನು ಶಾಸಕರಿಗೆಲ್ಲ ಕಳಿಸಿದ್ದರು. ನಾನು ಶಾಸಕನಲ್ಲದಿದ್ದರೂ ಆ ಪ್ರಶ್ನಾವಳಿಯ ಎಲ್ಲ ಒಂಬತ್ತು ಪ್ರಶ್ನೆಗಳಿಗೂ ವಿಡಂಬನಾತ್ಮಕ ಉತ್ತರ ಬರೆದು ಕಲಾಂ ಅವರಿಗೆ ಮಿಂಚಂಚೆ (ಇಮೇಲ್) ಮೂಲಕ ರವಾನಿಸಿದ್ದೆ. ಅದನ್ನೋದಿದ ಕಲಾಂ ಅವರು ನನ್ನ ವಿಚಾರಲಹರಿಯ ಬಗ್ಗೆ ಆಸಕ್ತಿ ತಳೆದು ನನಗೆ ತಿರುಗಿ ಮಿಂಚಂಚೆ ಪತ್ರ ಬರೆದರು.
  ’ಹಲವು ಅಂಶಗಳನ್ನು ತಿಳಿಸುವ ತೊಂದರೆ ತೆಗೆದುಕೊಂಡಿದ್ದೀರಿ; ಅದಕ್ಕಾಗಿ ಧನ್ಯವಾದಗಳು’, ಎಂದು ಆತ್ಮೀಯ ಸಂಬೋಧನೆಯೊಂದಿಗೆ ಬರೆದ ಆ ಪತ್ರದಲ್ಲಿ ಕಲಾಂ ಅವರು, ’ನಮ್ಮ ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲಂಥ ಕ್ಷೇತ್ರವೊಂದನ್ನು ತಿಳಿಸಿ’, ಎಂದು ನನ್ನನ್ನು ಕೇಳಿದ್ದರು. ಅದರನುಸಾರ ನಾನು, ಕೃಷಿಗೆ ಉತ್ತೇಜನ ಮತ್ತು (ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಮೂಲಕ) ಭ್ರಷ್ಟಾಚಾರ ನಿರ್ಮೂಲನ, ಈ ಎರಡು ಕ್ಷೇತ್ರಗಳನ್ನು ಅವರಿಗೆ ಸೂಚಿಸಿ ವಿವರವಾದ ಉತ್ತರ ಕಳಿಸಿದೆ.
  ಅನಂತರದಲ್ಲಿ ಶಾಸಕರಿಗೆ ನೀಡಿದ ’ಪಾಠ’ದಲ್ಲಿ ಕಲಾಂ ಅವರು ಈ ಎರಡೂ ವಿಷಯಗಳ ಬಗ್ಗೆ ಒತ್ತು ನೀಡಿದ್ದನ್ನು ತಿಳಿದು ನನಗೆ ಅತೀವ ಸಂತಸವಾಯಿತು. ನನ್ನ ಪತ್ರವಲ್ಲದಿದ್ದರೂ ಕಲಾಂ ಅವರು ಈ ವಿಷಯಗಳ ಬಗ್ಗೆ ಶಾಸಕರಿಗೆ ಹೇಳಿಯೇ ಹೇಳುತ್ತಿದ್ದರು; ಕೃಷಿಯ ಬಗ್ಗೆ ಅವರ ಪ್ರಶ್ನಾವಳಿಯಲ್ಲೇ ಪ್ರಸ್ತಾಪವಿತ್ತು; ನನ್ನ ಪತ್ರವೇನೂ ಮಹತ್ತಲ್ಲ. ಮಹತ್ತು ಯಾವುದೆಂದರೆ, ಮಾಜಿ ರಾಷ್ಟ್ರಪತಿಯೊಬ್ಬರ ವಿನಯ, ಸೌಜನ್ಯ, ಸರಳ ಸ್ವಭಾವ, ಸಮಾನತಾಭಾವ, ಸಮಾಜಹಿತಕ್ಕಾಗಿ ಅವರಲ್ಲಿರುವ ತುಡಿತ, ಕಾರ್ಯೋತ್ಸಾಹ, ತಾನೇ ಸರ್ವಜ್ಞನೆಂದುಕೊಳ್ಳದೆ ಇತರರ ಅಭಿಪ್ರಾಯಗಳನ್ನು ಕೋರುವ ನಿರಹಂಕಾರ, ವಿವೇಚಿಸುವ ವಿವೇಕ ಮತ್ತು ಸ್ವೀಕರಿಸುವ ವಿಶಾಲ ಮನೋಭಾವ, ಈ ಗುಣಗಳು ಮಹತ್ತ್ವದವು. ಇವು ಮನುಕುಲದ ಶ್ರೇಷ್ಠ ಗುಣಗಳು. ಈ ಗುಣಗಳಿಂದಾಗಿ ಕಲಾಂ ದೊಡ್ಡವರೆನಿಸಿಕೊಳ್ಳುತ್ತಾರೆ.