ನಾಯಿಗಳಿಗೂ ಓಂದ್ ಶೌಚಾಲಯ ಕಟ್ಟಿಸ್ಬಾರ್ದಾ?

ನಾಯಿಗಳಿಗೂ ಓಂದ್ ಶೌಚಾಲಯ ಕಟ್ಟಿಸ್ಬಾರ್ದಾ?

ಬರಹ

 

ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪಿಸುರುತ್ತಾರೋ ಏನೋ?

 

ಅದೇನಾದ್ರೂ ಇರಲಿ, ಈ ಸಾಕಿರೋ ನಾಯಿಗಳನ್ನೆಲ್ಲಾ ಕರ್ಕೊಂಡು ಬಂದು ಬೀದೀಲಿ ಒಂದು ಎರಡೂ - ಎರಡನ್ನೂ ಮಾಡಿಸ್ತಾರಲ್ಲ, ಅದರ ಬಗ್ಗೆ ನನ್ನ ವಿರೋಧವಿದೆ. ಇವರು ಸಾಕಿರೋ ನಾಯಿಗೆ ಎಷ್ಟೆಲ್ಲಾ ಖರ್ಚು ಮಾಡ್ತಾರೆ. ದಿನಕ್ಕೆ ಅರ್ಧ ಕೆಜಿ ಮಾಂಸ, ಹಾಲು, ಮೊಟ್ಟೆ ಎಲ್ಲಾ ಹಾಕ್ತಾರೆ. ಅದರ ಖರ್ಚೇ ತಿಂಗಳಿಗೆ ಐದಾರು ಸಾವಿರ ದಾಟುವ ಸಾಧ್ಯತೆ ಇದೆ. 

ಕೆಲವು ಚೂಟಿಯಾದ ಮುದ್ದಾದ ನಾಯಿಗಳನ್ನೂ ಸಾಕುವವರಿದ್ದಾರೆ. ನಮ್ಮ ಹಳ್ಳಿಯಲ್ಲಿ ನಾಯಿಗಳನ್ನು ಜಗುಲಿಗೂ ಬಿಟ್ಟುಕೊಳ್ಳುವುದಿಲ್ಲ. ಆದರೆ ಇಲ್ಲಿ ಮಲಗುವ ಕೋಣೆಯಲ್ಲೇ ಅವೂ ಮಲಗುತ್ತವೆ. ಅಡುಗೆ ಕೋಣೇಗೂ ಅವು ಲಗ್ಗೆ ಇಡುತ್ತವೆ. ಇವರು ಊಟ ಮಾಡುವಾಗಲೇ ಪಕ್ಕದಲ್ಲೇ ಕುಳಿತು ಅವೂ ತಿನ್ನುತ್ತವೆ. ಇವರಿಗೆ ಹುಷಾರಿಲ್ಲ ಅಂದರೂ ಒಂದೊಮ್ಮೆ ವೈದ್ಯರ ಬಳಿ ಹೋಗದಿದ್ದಾರು, ಆದರೆ ನಾಯಿಗಳಿಗೆ ಕೊಂಚ ಏನಾದರೂ ಎತ್ತಿಕೊಂಡು ವೈದ್ಯರ ಬಳಿಗೋಡುತ್ತಾರೆ.

ಹೆತ್ತವರಿಗೆ ಹೆಗ್ಗಣ ಮುದ್ದಾದರೆ ಬೆಂಗಳೂರಲ್ಲಿ ಮಾತ್ರ ಹೆತ್ತವರಿಗೂ ಹೆರದಿದ್ದವರಿಗೂ ನಾಯಿಗಳೇ ಮುದ್ದು.

 

ಅದೆಲ್ಲಾ ಅವರವರ ಸ್ವಂತ ವಿಚಾರ ಬಿಡಿ ನಮಗ್ಯಾಕೆ. ಆದ್ರೆ ಮುಖ್ಯವಾದ ವಿಷಯ ಏನಂದ್ರೆ ನಾಯಿ ಸಾಕೋರೆಲ್ಲಾ ಯಾಕೆ ಅವನ್ನು ತಂದು ರಸ್ತೇ ಬದೀಲಿ ಮಲ ಮೂತ್ರ ವಿಸರ್ಜನೆ ಮಾಡಿಸ್ತಾರೆ ಅನ್ನೋದು? ನಾಯಿಗಾಗಿ ಸಾವಿರಾರು ಖರ್ಚು ಮಾಡುವ ಬಂಗಲೆ ಮನೆಯವರೂ ಸಹ ಅವನ್ನು ದಿನಾ ಕರ್ಕೊಂಡು ಬರೋದು ರಸ್ತೆಗೇ. ಎಲ್ಲೆಂದರಲ್ಲಿ ಹೊಲಸು ಮಾಡಿಸಲಿಕ್ಕೇ ಇವರ ಒಂದರ್ಧ ಗಂಟೆ ಸಮಯವನ್ನು ವ್ಯರ್ಥ ಮಾಡ್ತಾರೆ! 

ರಸ್ತೆಗಳಲ್ಲಿ ಏನಿರತ್ತೆ ಏನಿರಲ್ಲ ಅನ್ನಲು ಸಾಧ್ಯ ಇಲ್ಲ. ಅಶಿಸ್ತಿನ ಹಲವರು ರಸ್ತೆಯೇನೋ ತಮ್ಮ ಆಜನ್ಮ ವೈರಿಯೇನೋ ಅನ್ನುವಂತೆ ಕ್ಯಾಕರಿಸಿ ತುಪ್ಪಿಕೊಂಡೇ ಓಡಾಡುತ್ತಿರುತ್ತಾರೆ. ಅದರ ನಡುವೆ ಶಿಸ್ತಿನ ಈ ಮನುಷ್ಯರ ನಾಯಿಗಳ ಹಾವಳಿ ಬೇರೆ.

 

ಫುಟ್‌ಪಾತ್‌ಗಳು ಸರಿ ಇರುವುದೇ ಅಪರೂಪ. ಯಾವಾಗಲಾದರೂ ಒಮ್ಮೆ ಪಾಲಿಕೆಯವರು ಉತ್ತಮ ಫುಟ್‌ಪಾತ್ ಹಾಕಿಕೊಂಡು ಹೋದರೆಂದಿಟ್ಟುಕೊಳ್ಳಿ, ಅವರ ಹಿಂದೇನೇ ಇವರು ನಾಯಿಗಳ ಹತ್ತಿರ ಹಿಕ್ಕೆ ಹಾಕಿಸಿಕೊಂಡು ಹಾಜರಾಗುತ್ತಾರೆ. 

ನನಗೆ ತಿಳಿದಂತೆ ಈ ವಿಷಯದಲ್ಲಿ ಬೀದಿ ನಾಯಿಗಳೇ ವಾಸಿ. ಅವು ಬಹಿರ್ದೆಸೆಗೆ ಮೂಲೆ ಹುಡುಕುತ್ತವೆ. ಖಾಲಿ ನಿವೇಶನ ಮುಂತಾದೆಡೆ ಹೋಗಿ ತಮ್ಮ ಕೆಲಸ ಮುಗಿಸುತ್ತವೆ. ಆದರೆ ಈ ಸುಶಿಕ್ಷಿತ ನಾಯಿಗಳು (ಕೆಲವು ತರಬೇತಿ ಪಡೆದಿರುತ್ತವಲ್ಲ?) ಮಾತ್ರ ಎಲ್ಲೆಂದರಲ್ಲಿ ನಾಚಿಕೆಯಿಲ್ಲದೇ ಬಹಿರ್ದೆಸೆಗೆ ಕುಳಿತುಬಿಡುತ್ತವೆ.

 

ಸಿಂಗಾಪುರ್ ಮುಂತಾದೆಡೆ ನಾಯಿಗಳನ್ನು ಬೀದಿಗೆ ಕರೆದೊಯ್ದರೆ ಜೊತೆಗೆ ಒಂದು ಪ್ಲಾಸ್ಟಿಕ್ ಕೊಟ್ಟೆ ಮತ್ತು ಅವು ಮಲ ವಿಸರ್ಜಿಸಿದರೆ ಎತ್ತಲು ಸೌಟು ಜೊತೆಗೆ ಒಯ್ದಿರಬೇಕಂತೆ. ಎಲ್ಲೆಂದರಲ್ಲಿ ಗಲೀಜು ಮಾಡಿದರೆ ದಂಡ ಹಾಕ್ತಾರೆ. ಆದರೆ ನಮ್ಮಲ್ಲಿ ನಿಯಮಗಳನ್ನು ಮನುಷ್ಯರೇ ಪಾಲಿಸುವುದಿಲ್ಲ... ಇನ್ನು ನಾಯಿಗಳಿಗೆ ಹೇಳಿ ಉಪ್ಯೋಗವಿಲ್ಲ.

 

ನಾಯಿ ಸಾಕೋರೆಲ್ಲ ಅವುಗಳಿಗೂ ಒಂದೊಂದು ಶೌಚಾಲಯ ಕಟ್ಟಿಸಿಕೊಳ್ಳಲಿ. ಅಥವಾ ಕನಿಷ್ಟ ಪಕ್ಷ ರಸ್ತೆಯಲ್ಲೇ, ಅಥವಾ ಫುಟ್‌ಪಾತ್ ಮೇಲೆ ಎಲ್ಲಾ ಮಾಡಿಸೋದಕ್ಕಿಂತಾ ಯಾರಿಗೂ ತೊಂದರೆ ಆಗದಂತೆ ಜಾಗ ಹುಡುಕಿ ಅಲ್ಲಿ ಗಲೀಜು ಮಾಡಿಸಲಿ.

 

- ಶ್ರೀಪತಿ ಮ. ಗೋಗಡಿಗೆ