‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

ಬರಹ

ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು ಕತ್ತರಿಸಿ ಪಂಜರದೊಳಿಟ್ಟು, ಇಲ್ಲವೆ ಕಾಲಿಗೆ ಹುರಿ ಅಥವಾ ನೈಲಾನ್ ದಾರದಿಂದ ಬಿಗಿದು, ಬಂಧಿಸಿಟ್ಟು ಸಾಕುವುದು ಪಕ್ಷಿ ಪ್ರೇಮವೇ? ಅಥವಾ ನಿಸರ್ಗವನ್ನು ಬಗ್ಗು ಬಡಿದು ಅಭಿವೃದ್ದ್ಧಿ ಸಾಧಿಸ ಹೊರಟ ನಮ್ಮ ಪೌರುಷದ ಪ್ರತೀಕವೇ?

ನಮ್ಮ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ವಿನಿಯೋಗಿಸಿದರೂ ಅಡ್ಡಿ ಇಲ್ಲ; ಆದರೆ ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಮೂಕ ಪಕ್ಷಿಗಳಿಗಿದೆ. ಬಾನಾಡಿಗಳಿಗಿರುವ ಈ ನ್ಯಾಯಯುತವಾದ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ‘ನಾಗರಿಕ’ ಲಕ್ಷಣವೇ?


‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ ಖ್ಯಾತಿಯ ಸಂತೋಷ ಕೌಲಗಿ ನಮ್ಮ ‘ನಿದ್ದೆ’ಗೆಡಿಸುವ ಮಾತೊಂದನ್ನು ಹೇಳುತ್ತಾರೆ. "ನಮ್ಮಲ್ಲಿ ಮೂರು ವರ್ಗದ ಜನರಿದ್ದಾರೆ. ಅವರನ್ನು ಸರ್ವ ಭಕ್ಷಕ, ಪರಿಸರಾವಲಂಬಿ ಹಾಗೂ ಪರಿಸರ ನಿರಾಶ್ರಿತ ಎಂದು ವರ್ಗೀಕರಿಸಬಹುದು. ಅವರುಗಳಲ್ಲಿ ‘ಹಳ್ಳಿ ಮನಸ್ಸು’ ಮತ್ತು ‘ಪಟ್ಟಣದ ಮನಸ್ಸು’ ಎಂದು ಎರಡು ಉಪ ವಿಭಾಗಗಳು. ಪಟ್ಟಣದಲ್ಲಿ ವಾಸವಾಗಿರುವ ಜನಗಳಿಗೆ ಹಳ್ಳಿಗಳಲ್ಲಿ ಜೀವಿಸುವ ಮನಸ್ಸಿದೆ; ಹಳ್ಳಿಗಳಲ್ಲಿ ಬದುಕಿರುವ ಜನರಿಗೆ ಪಟ್ಟಣಗಳಿಗೆ ಗುಳೆ ಹೋಗುವ ತುಡಿತವಿದೆ. ಹಾಗಾಗಿ ಆಯಾ ಮನಸ್ಸುಗಳು ಅನಿವಾರ್ಯವೆಂಬಂತೆ ಬೇಡವಾದ ಸ್ಥಳಗಳಲ್ಲಿ ಒಲ್ಲದ ಮನಸ್ಸಿನಿಂದ ಬದುಕಿವೆ. ಜೊತೆಗೆ ಅಲ್ಲಿ ಇಲ್ಲದ್ದನ್ನು ತಾವು ಇರುವಲ್ಲಿ ಸೃಷ್ಟಿಸಲು ಹೊರಟಿವೆ"! ಒಟ್ಟಾರೆ ಮನಸೋ ಇಚ್ಛೆ ಸವಾರಿ.

ಕಳೆದ ಬುಧವಾರ ಧಾರವಾಡದ ಕೆಲಗೇರಿ ಕೆರೆಯ ಪಕ್ಕದ ಗುಡ್ಡದ ಮೇಲಿರುವ ಟೈವಾಕ್ ಫ್ಯಾಕ್ಟರಿ ಹಿಂಭಾಗದಲ್ಲಿ ಕೆಲ ಯುವ ಹವ್ಯಾಸಿ ಚಾರಣಿಗರು ಚಾರಣ ಕೈಗೊಂಡಿದ್ದರು. ಆಘಾತಕಾರಿ ಎಂದರೆ ಈ ಚಾರಣಿಗರು ಹವ್ಯಾಸಿ ಶಿಕಾರಿಗಳೂ ಕೂಡ! ಬಲೆ ಬೀಸಿ ಪ್ರಾಣಿಯೋ-ಪಕ್ಷಿಯೋ ಒಟ್ಟು ಒಂದನ್ನು ಸೆರೆ ಹಿಡಿಯಲು ಹವಣಿಸಿದ್ದರು. ಇವರ ಲೆಕ್ಕಾಚಾರ ತಲೆ ಕೆಳಗಾಗಲಿಲ್ಲ. ಕೆಲವೇ ತಾಸುಗಳಲ್ಲಿ ಆಕರ್ಷಕವಾದ ಬಿಳಿ ಗರುಡ Brahminy Kite ಈ ದುರುಳರ ಬಲೆಗೆ ಸಿಲುಕಿ ಕೈ ವಶವಾಯಿತು. ಸೆರೆ ಸಿಕ್ಕ ಪಕ್ಷಿಯನ್ನು ಏನು ಮಾಡುವುದು?

ಮೊದಲು ಅದು ಹಾರಿ, ಕೈ ತಪ್ಪಿಸಿಕೊಂಡು ಹೋಗದಂತೆ ರೆಕ್ಕೆಯ ಪುಕ್ಕಗಳನ್ನು ಕತ್ತರಿಸಿ ಬಿಡುವುದು. ನಂತರ ಹಾರಲಾಗದ ಮೊಂಡು ರೆಕ್ಕೆಗಳ ಪಕ್ಷಿಯನ್ನು ಮನೆಗೆ ಕೊಂಡೊಯ್ದು ಏನೋ ಸಬೂಬು ಹೇಳಿ ಬಿದಿರಿನ ಬುಟ್ಟಿಯಲ್ಲಿ ಕೋಳಿಯಂತೆ ಮುಚ್ಚಿಡುವುದು. ಅಥವಾ ಕಾಲಿಗೆ ಹುರಿ-ಕಾತಿ, ನೈಲಾನ್ ವಾಯರ್ ಹೀಗೆ ಕೈಗೆ ಸುಲಭವಾಗಿ ಸಿಗುವ ವಸ್ತುವಿನಿಂದ ಕಾಲಿಗೆ ಬಿಗಿಯುವುದು. ಅದು ಯಾವ ಜಾತಿಯ ಪಕ್ಷಿ, ಯಾವ ಪ್ರಜಾತಿಗೆ ಸೇರಿದ್ದು, ಆಹಾರ-ವಿಹಾರ ರೀತಿಗಳೇನು? ಅದು ಪಾರಿವಾಳದಂತೆ ಸಾಕಲು ಯೋಗ್ಯ ಪಕ್ಷಿಯೇ? ಏನೂ ಗೊತ್ತಿಲ್ಲ! ಆದರೆ ಸೆರೆ ಹಿಡಿದು ಇವರು ಸಾಕಬೇಕು ಎಂಬ ವಿಘ್ನಸಂತೋಷಿ ಖಯಾಲಿ.

ಕೈಯಲ್ಲಿನ ಬ್ಲೇಡ್ (ಕತ್ತರಿಯೂ ಅಲ್ಲ..ಎಂತಹ ಉಪದ್ರವಕಾರಿ ಹಾಗೂ ಅಷ್ಟೇ ಅಪಾಯಕಾರಿ ಕೂಡ) ಸೆರೆ ಸಿಕ್ಕ ಪಕ್ಷಿಯ ರೆಕ್ಕೆಗಳ ಮೇಲೆ ಹರಿತಾದ ಬ್ಲೇಡ್ ಚಕ..ಕಚ..ಓಡಿದ್ದೇ ತಡ..ನಿಸರ್ಗದತ್ತ ಸೌಂದರ್ಯದ ಖಣಿಯಾಗಿದ್ದ ಬಿಳಿ ಗರುಡ, ಬ್ಯೂಟಿ ಪಾರ್ಲರ್ ಹೂಕ್ಕು ಹೊರಬಿದ್ದ ನಮ್ಮವರಂತೆ ಅಂದಗೇಡಿಯಾಗಿ ಕಾಣುತ್ತಿತ್ತು. ನಾಲ್ಕಾರು ಜನರ ಗುಂಪು ಈ ನಿರ್ಜನ ಪ್ರದೇಶದಲ್ಲಿ ಹೀಗೆ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದನ್ನು ಸಂದೇಹದಿಂದ ನೋಡಿದ ಮೂಕ ಪಕ್ಷಿಗಳ ಪ್ರತಿ ಕಾಳಜಿ ಇರುವ ವ್ಯಕ್ತಿಯೋರ್ವರು ಕೂಡಲೇ ಪ್ರೊಫೆಸರ್ ಗಂಗಾಧರ ಕಲ್ಲೂರ್ ಅವರಿಗೆ ವಿಷಯ ತಿಳಿಸಿದರು. ಯಾರಿಗೂ ಕಾಯದೆ ತಮ್ಮ ಸೈಕಲ್ ಮೇಲೆ ಸುಮಾರು ೭ ಕಿಲೋ ಮೀಟರ್ ಕ್ರಮಿಸಿ ಹತ್ತೇ ನಿಮಿಷದಲ್ಲಿ ಆ ವ್ಯಕ್ತಿ ತಿಳಿಸಿದ ಜಾಗೆ ತಲುಪಿದರು. ಅಲ್ಲಿ ಕೇವಲ ಮಿರಿ-ಮಿರಿ ಮಿಂಚುವ ಕೆಮ್ಮಣ್ಣು ಬಣ್ಣದ ಪುಚ್ಛಗಳು ಚದುರಿ ಬಿದ್ದಿದ್ದವು. ನಮ್ಮ ಮಾಂಸಾಹಾರಿ ಹೋಟೆಲ್ ನವರು ಕೋಳಿ ಪುಚ್ಛ ಕಿತ್ತು ರಸ್ತೆಯ ಮೇಲೆ ಅಸಹ್ಯಕರ ರೀತಿಯಲ್ಲಿ ಬಿಸಾಕುತ್ತಾರಲ್ಲ ಆ ದೃಶ್ಯ ನೆನಪಿಸುವಂತಿತ್ತು. ಈ ಹವ್ಯಾಸಿ ‘ಚಾರಣಿಗರು’ ನಡೆದು ಹೋದ ದಾರಿಯಲ್ಲಿ ಕಲ್ಲೂರ್ ಅವರು ಆತಂಕದಿಂದ ಸಾಗುತ್ತಿದ್ದರೆ ತುಸು ದೂರದಲ್ಲಿ ಈ ಗ್ಯಾಂಗ್ ಅವರ ಕಣ್ಣಿಗೆ ಬಿತ್ತು.

ಆ ‘ಗ್ಯಾಂಗ್’ ಹಿಡಿದು ಕಲ್ಲೂರ್ ಅವರು ಚೆನ್ನಾಗಿ ವಿಚಾರಿಸಿದಾಗ ಒಬ್ಬ ಹುಡುಗನ ಬ್ಯಾಗಿನಲ್ಲಿ ಬಿಳಿ ಗರುಡ ಬಂಧಿಯಾಗಿರುವುದು ಗೊತ್ತಾಯಿತು. ಕೂಡಲೇ ಅವರನ್ನು ಬೆದರಿಸಿ, ಅವರಿಂದ ಮೂಕ ಪಕ್ಷಿಯನ್ನು ಕಸಿದುಕೊಂಡು ಇನ್ನೊಮ್ಮೆ ಹೀಗೆ ಮಾಡದಂತೆ ತಾಕೀತು ಮಾಡಿ, ಮರುಗುತ್ತ ಸೈಕಲ್ ಏರಿ ಅಸಹಾಯಕ Brahminy Kite ದೊಂದಿಗೆ ಮನೆಗೆ ಬಂದರು. ಬೆದರಿ, ಜೀವದ ಆಸೆಯನ್ನು ಕೈಬಿಟ್ಟು ಬಳಲಿದ್ದ ಅದು, ಸದ್ಯ ೩ ದಿನಗಳು ಅವರ ಸುಪರ್ದಿಯಲ್ಲಿ ಆರೈಕೆಗೊಂಡು ತುಸು ಚೇತರಿಸಿಕೊಂಡಿದೆ. ಮುದುಡಿ ಮೂಲೆಯಲ್ಲಿರುತ್ತಿದ್ದ, ಕೀರಲು ಧ್ವನಿಯಲ್ಲಿ ಕಿರುಚಿ ತನ್ನನ್ನು ಮುಟ್ಟದಂತೆ, ಹಾರಿ ಹೋಗಲು ಬಿಟ್ಟು ಬಿಡುವಂತೆ ಅಂಗಲಾಚುತ್ತಿದ್ದ ಬಿಳಿ ಗರುಡ ಕಲ್ಲೂರ್ ಸರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಸದ್ಯ ಅವರ ಆಜ್ಞೆಯನ್ನು ಪಾಲಿಸುತ್ತಿದೆ.

ಪ್ರೊಫೆಸರ್ ಗಂಗಾಧರ ಕಲ್ಲೂರ್ ಹೇಳಿದಂತೆ.. "Brahminy Kite ಅರ್ಥಾತ್ ಬಿಳಿಗರುಡ ಬೆಳೆದಾಗ ಸುಮಾರು ಕೋಳಿ ಅಥವಾ ಹುಂಜದಷ್ಟು ದೊಡ್ದದಾಗಬಲ್ಲ ಹಕ್ಕಿ. ಇದು ಇನ್ನೂ ಯೌವನಾವಸ್ಥೆಯಲ್ಲಿರುವ ಮರಿ". ಕೈಯಲ್ಲಿ ಎತ್ತಿ ಹಿಡಿದು ಅವರು ವಿವರಿಸಿದರು. "ಮೈ ಬಣ್ಣ ಮ್ಯಾಂಗನೀಸ್ ಅದುರಿನಂತೆ, ಕೆಮ್ಮಣ್ಣಿನಂತೆ ಮಿಂಚುವ ಕೆಂಪು. ತಲೆ ಹಾಗೂ ಕುತ್ತಿಗೆ ಸೇರಿದಂತೆ ಎದೆಯವರೆಗೂ ಬಿಳಿ ಬಣ್ಣ. ಈ ಬಿಳಿ ಬಣ್ಣದಲ್ಲಿ ಅಲ್ಲಲ್ಲಿ ಕಪ್ಪು ಗೀರುಗಳಿವೆ. ಪುಕ್ಕದ ತುದಿಗಳು ದುಂಡಗೆ. ಗಂಡು ಹಾಗೂ ಹೆಣ್ಣು ಗರುಡಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಗುರುತಿಸುವುದು ಸಹ ಕಷ್ಟ. ಹಿಂದಿ ಭಾಷೆಯಲ್ಲಿ ‘ಬ್ರಾಹ್ಮಿನಿ ಚೀಲ್’, ‘ಸಂಕರ ಚೀಲ್’, ‘ಧೋಬಿಯಾ ಚೀಲ್’, ‘ರೂ ಮುಬಾರಕ್’; ಬೆಂಗಾಲಿ ಭಾಷೆಯಲ್ಲಿ ‘ಶಂಖಾ ಚೀಲ್’, ಸಂಸ್ಕೃತದಲ್ಲಿ ‘ಖೇಮಂಕಾರಿ’, ತೆಲಗು ಭಾಷೆಯಲ್ಲಿ ‘ಗರುಡ ಲವಾ’ ಅಥವಾ ‘ಗರುಡ ಮಂತಾರು’; ತಮಿಳಿನಲ್ಲಿ ‘ಸೇಮ್ ಪರುಂಧು’, ‘ಕೃಷ್ಣ ಪರುಂಥು’ ಎಂದು ಬಿಳಿ ಗರುಡ ಕರೆಯಿಸಿಕೊಳ್ಳುತ್ತದೆ. ಹಿಂದುಗಳು ಇದು ವಿಷ್ಣುವಿನ ವಾಹನ ಎಂದು ಪೂಜ್ಯ ಭಾವನೆಯಿಂದ ನೋಡುತ್ತಾರೆ".

ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭರ್ಮಾಗಳಲ್ಲಿ ನೆಲೆಸಿರುವ ಹಕ್ಕಿ ಇದು. ಸ್ಥಳೀಯವಾಗಿ ವಲಸೆ ಹೋಗುವ ಈ ಹಕ್ಕಿ, ಮಳೆಗಾಲದಲ್ಲಿ ಹೊರ ಬರುವ ಮಳೆ ಹುಳುಗಳನ್ನು ಅವುಗಳ ಬಿಲದ ಬಳಿಯೇ ಒಕ್ಕರಿಸಿದ್ದು ಒಂದೊಂದಾಗಿ ಕಬಳಿಸುತ್ತದೆ. ಜಲಾವೃತ ಪ್ರದೇಶಗಳಲ್ಲಿ ನೀರಿನಿಂದ ಹೊರಬಂದು ನೆಲದ ಮೇಲೆ ಹರಿದಾಡುವ ಏಡಿ-ಕಪ್ಪೆ, ಓತಿಕ್ಯಾತ, ಕೆಲವೊಮ್ಮೆ ಹಾವು ಮುಂತಾದವುಗಳನ್ನು ಖುಷಿಯಿಂದ ಹಿಡಿದು ತಿನ್ನುತ್ತದೆ. ಕೋಳಿ ಮರಿಗಳನ್ನು ಎಗರಿಸುವಲ್ಲಿ ಇದು ನಿಷ್ಣಾತ. ಮಿಕ್ಕ ಸಂದರ್ಭಗಳಲ್ಲಿ ಸತ್ತ ಪ್ರಾಣಿಗಳನ್ನು, ಪೇಟೆಯ ಹೊರವಲಯದ ತ್ಯಾಜ್ಯ, ಹಳ್ಳಿಯ ಹೊಲಸನ್ನು ಆಹಾರವಾಗಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಿಂದ ಎಪ್ರೀಲ್ ಮಾಸಾಂತ್ಯದ ವರೆಗೆ ಜಲ ಮೂಲಗಳಿಗೆ ಸಮೀಪವಿರುವ ಆಲ, ಅರಳಿ ಮುಂತಾದ ಮರಗಳ  ಮೇಲೆ ಅತ್ಯಂತ ಎತ್ತರಲ್ಲಿ ಕಸ-ಕಡ್ಡಿಗಳನ್ನು ಒಂದುಗೂಡಿಸಿ ಅಸ್ತವ್ಯಸ್ತವಾಗಿ ಗೂಡು ರಚಿಸುತ್ತದೆ. ಒಂದು ಬಾರಿಗೆ ತಿಳಿ ಬೂದು ಹಾಗೂ ಬಿಳಿ ಬಣ್ಣ ಮಿಶ್ರಿತವಾದ ತುಸು ಕೆಂಪು ಹಾಗೂ ಬೂದು ಬಣ್ಣದಿಂದ ಹೊಳೆಯುವ ಎರಡು ಮೊಟ್ಟೆಗಳನ್ನು Brahminy Kite ಇಡುತ್ತದೆ. ಕೌಟುಂಬಿಕ ಜವಾಬ್ದಾರಿಗಳನ್ನು ತಾಯಿ ಹಾಗೂ ತಂದೆ ಎರಡೂ ಹಕ್ಕಿಗಳು ನಿಭಾಯಿಸುತ್ತವೆ.

ಆದರೆ ಕೊಲ್ಲಲೆಂದೇ ಛೇದಗೊಳಿಸುವ ನಾವು-ನಮ್ಮ ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೆ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ..ನಮ್ಮ ಜ್ಞಾನದ ಶಾಖೆಗಳಿಗೆ ದೊರಕದೇ, ಅನಂತವಾಗಿ, ನಿಗೂಢವೆಂಬತೆ ಹಬ್ಬಿದ ಈ ಪ್ರಕೃತಿಯನ್ನು ಅರಿಯುದು ಸುಲಭವೇ? ನಮ್ಮ ಈ ಕೈಯಾಡಿಸುವ ಬುದ್ಧಿ ಜಗದ ಹದಗೆಡಿಸುವಲ್ಲಿ ಸಂಶಯವಿಲ್ಲ. ಹಾಗೆಯೇ ನಮ್ಮ ಬುಡದ ಬೇರುಗಳನ್ನು ಅಲುಗಾಡಿಸುವುದರಲ್ಲಿಯೂ ಸಂದೇಹವಿಲ್ಲ.. ಕೂಡಲೇ ನಾವು ಈಗ ಎಚ್ಚೆತ್ತುಕೊಳ್ಳದೇ ಹಳೆಯ ತಪ್ಪುಗಳನ್ನು ಮರುಕಳಿಸುವಂತೆ ಮಾಡಿದರೆ..

‘ಹ್ಯಾಂಡ್ ಗ್ಲೌಸ್’ ಹಾಕಿಕೊಂಡು ಗಂಗಾಧರ ಕಲ್ಲೂರ್ ಅವರು ನೀಡುವ ಮಾಂಸದ ತುಣುಕುಗಳನ್ನು ಹೆದರದೇ ಕೊಕ್ಕಿನಿಂದ ಎಳೆದು, ಸ್ಟೋರ್ ರೂಮಿನ ಮೂಲೆಯೊಂದಕ್ಕೆ ಕೊಂಡೊಯ್ದು ಬಿಳಿ ಗರುಡ ಜಗಿದು ನುಂಗುತ್ತಿತ್ತು. ಮುಂಬರುವ ೨೦ ದಿನಗಳಲ್ಲಿ Brahminy Kite ಪುನ: ಹಾರಲು ಶಕ್ತವಾಗುತ್ತದೆ ಎಂಬ ವಿಶ್ವಾಸ ಪ್ರೊ. ಕಲ್ಲೂರ್ ಅವರದ್ದು. ನಾವೆಲ್ಲ ಅವರ ಜೊತೆಗೂಡಿ ಕೆಲಗೇರಿ ಕೆರೆಯ ಗುಡ್ಡಕ್ಕೆ ಹೋಗಿ ಅದನ್ನು ಹಾರಿ ಬಿಟ್ಟು, ಪುನ: ಅದಕ್ಕೆ ಸ್ವಾತಂತ್ರ್ಯ ಕರುಣಿಸಲು ನಿರ್ಧರಿಸಿದ್ದೇವೆ. ಆ ಗಳಿಗೆಗಾಗಿ ಕಾತರದಿಂದ ಕಾಯ್ದಿದ್ದೇವೆ.