ನಾವ್ಯಾಕೆ ತಪ್ಪು ಮಾಡುತ್ತೇವೆ?

ನಾವ್ಯಾಕೆ ತಪ್ಪು ಮಾಡುತ್ತೇವೆ?

ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾನೆ. ಇಲ್ಲಿ ತಪ್ಪು ಯಾರು ಹೇಗೆ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ ಯಾಕಾಗಿ ಆ ತಪ್ಪು ಆಗಿ ಹೋಯಿತು? ಅದನ್ನು ತಿದ್ದುವುದಾದರೂ ಹೇಗೆ ಎಂಬುದು ಚಿಂತಿಸಬೇಕಾದ ವಿಷಯ. ಚಿಕ್ಕವರಿರುವಾಗ ನಾವು ಅದೆಷ್ಟೋ ತಪ್ಪುಗಳನ್ನು ಮಾಡುತ್ತೇವೆ. ಆವಾಗ ನಮ್ಮ ಹೆತ್ತವರು, ಹಿರಿಯರು, ಟೀಚರ್್ಗಳು ಕೆಲವೊಮ್ಮೆ ಗುದ್ದು ನೀಡಿ ಮತ್ತೊಮ್ಮೆ ಮುದ್ದು ಮಾಡಿ ಆ ತಪ್ಪುಗಳನ್ನು ತಿದ್ದಲು ಸಹಕರಿಸುತ್ತಾರೆ. ನಮ್ಮ ಅಪ್ಪ ಅಮ್ಮ ನಾವು ಚಿಕ್ಕದಿರುವಾಗ ಮಾಡಿದ ಅದೆಷ್ಟೋ ತಪ್ಪುಗಳನ್ನು ಕ್ಷಣ ಮಾತ್ರದಲ್ಲಿ ಕ್ಷಮಿಸಿ ಬಿಡುತ್ತಾರೆ. ಆದರೆ ನಾವು ದೊಡ್ಡವರಾದಾಗ ನಮ್ಮ ಅಪ್ಪ ಅಮ್ಮ ( ವೃದ್ಧರಾಗಿರುತ್ತಾರೆ) ಯಾವುದಾದರೂ ಚಿಕ್ಕ ತಪ್ಪು ಮಾಡಿದರೆ ಗುರ್ರ್ ಅನ್ನುತ್ತೇವೆ. ಇದ್ಯಾಕೆ ಹೀಗೆ? ತಪ್ಪು ಮಾಡಿದ್ದು ಯಾರೇ ಆಗಿರಲಿ ಅದನ್ನು ಪ್ರೀತಿಯಿಂದ ಕ್ಷಮಿಸುವುದರಲ್ಲಿ ಒಂದು ರೀತಿಯ ತೃಪ್ತಿಯಿದೆ.


ಕೆಲವೊಮ್ಮೆ ಪ್ರೀತಿ ಮಾಡಿದ್ದೇ ತಪ್ಪು ಅಂತಾ ನಾವು ಅಂದುಕೊಳ್ಳುತ್ತೇವೆ. ನಿಜವಾಗಿಯೂ ಪ್ರೀತಿ ಎಂಬುದು ತಪ್ಪಲ್ಲ. ಆದರೆ ಯಾವಾಗ ಲವ್ ಬ್ರೇಕ್ ಅಪ್ ಆಗುತ್ತದೋ ಆವಾಗ ನಾನು ಮಾಡಿದ್ದು ತಪ್ಪು ಎಂಬ ಅನುಭವ ತಂತಾನೆ ಬಂದುಬಿಡುತ್ತದೆ. 'From break up to Wake up' ಅಂತಾ ಇದಕ್ಕೆ ಹೇಳಬಹುದೇನೋ. ಆ ಪ್ರೀತಿ ಮುರಿದು ಬೀಳುವಾಗ ಅತ್ತು ಕಂಗಾಲಾಗಿದ್ದ ಒಬ್ಬ ಮನುಷ್ಯ ಆಮೇಲೆ ಆ ಪ್ರೀತಿಯಿಂದಲೇ ಸಾಕಷ್ಟು ಪಾಠ ಕಲಿತಿರುತ್ತಾನೆ. ಜೀವನದಲ್ಲಿ ಬರುವಂತಹ ಪ್ರತಿಯೊಂದು ಕಹಿ ಘಟನೆಗಳು ಆತನನ್ನು ಶಕ್ತಿಶಾಲಿಯಾಗುವಂತೆ ಮಾಡುತ್ತದೆ. ಪ್ರೀತಿಸಿದ ಹುಡುಗಿ ತಾನು ಮನೆಯವರು ಹೇಳಿದ ಹುಡುಗನ ಜೊತೆ ಮದುವೆಯಾಗುತ್ತೇನೆ ಎಂದು ಹೇಳಿ ದೂರ ಹೋದಾಗ, ಪ್ರೀತಿಸಿದ ಹುಡುಗ ಇನ್ನೊಬ್ಬಳತ್ತ ಆಕರ್ಷಿತನಾಗಿ ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟಾಗ ಅಂತಹಾ ಕ್ಷಣದಲ್ಲಿ ಕಣ್ಣೀರು ಹರಿಸಿದರೂ, ಆಮೇಲೆ ಆಕೆಯನ್ನೋ ಆತನನ್ನೋ ಕ್ಷಮಿಸಿಬಿಡುವುದಾದರೆ ಆ ಮುರಿದು ಬಿದ್ದ ಪ್ರೀತಿಯಲ್ಲಿಯೂ ಸಂತೋಷವನ್ನು ಕಾಣಬಹುದು.


ಇದು ಪ್ರೀತಿಯ ವಿಷಯವಾದರೆ ಸಂಸಾರದಲ್ಲಿ ಕಂಡುಬರುವ ಚಿಕ್ಕ ತಪ್ಪುಗಳು ಸಂಬಂಧಗಳನ್ನೇ ಹಾಳು ಮಾಡಬಹುದು. ಒಂದು ಸಣ್ಣ ತಪ್ಪಿನಿಂದಾಗಿ ಜೀವನವೇ ಅಂತ್ಯವಾಗಬಹುದು. ಅದಕ್ಕಾಗಿಯೇ ಸಂಸಾರದಲ್ಲಿ ಯಾವುದೇ ತಪ್ಪುಗಳು ಕಂಡುಬಂದರೆ ಆ ತಪ್ಪುಗಳನ್ನು ನೋಡಿ ತಿದ್ದಿಕೊಳ್ಳಬೇಕು ಇಲ್ಲವಾದರೆ ಅದನ್ನು ಕಡೆಗಣಿಸಬೇಕು ಅಂತಾ ಹೇಳ್ತಾರೆ. ಕೆಲವೊಂದು ಬಾರಿ ಚಿಕ್ಕ ಚಿಕ್ಕ ತಪ್ಪುಗಳನ್ನು ಕಡೆಗಣಿಸಿದರೇ ಒಳ್ಳೆಯದು ಎಂದು ಬಲ್ಲವರು ಹೇಳುತ್ತಾರೆ. ಇದು ಮಾತ್ರವಲ್ಲದೆ ನಾವು ಅತಿಯಾಗಿ ಪ್ರೀತಿಸುವ ಯಾವುದೇ ಒಬ್ಬ ವ್ಯಕ್ತಿಯಲ್ಲಿ ನಾವು ಯಾವತ್ತೂ ತಪ್ಪುಗಳನ್ನು ಕಂಡು ಹುಡುಕುವುದೇ ಇಲ್ಲ. ಅದೇ ವೇಳೆ ನಮಗಿಷ್ಟವಿಲ್ಲದವರಾಗಿದ್ದರೆ, ನಾವು ಮೊದಲು ಅವರ ತಪ್ಪುಗಳನ್ನು ಹುಡುಕಲು ಯತ್ನಿಸುತ್ತೇವೆ. ಅವರಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ನಮಗೆ ಅವರ ತಪ್ಪುಗಳು ಮಾತ್ರ ಹೈಲೈಟ್ ಆಗಿ ಕಾಣುತ್ತವೆ. ಆದಾಗ್ಯೂ, ತಮ್ಮ ಪ್ರೀತಿ ಪಾತ್ರರಾಗಿದ್ದವರ ತಪ್ಪುಗಳು ಯಾವುದೂ ನಮ್ಮ ಕಾಣಿಗೆ ಕಾಣುವುದೇ ಇಲ್ಲ. ಅದಕ್ಕಲ್ಲವೇ ಪ್ರೀತಿ ಕುರುಡು ಅಂತಾ ಅಂದಿದ್ದು?


ಮದುವೆ ಆದ ಮೇಲೆ ಸಂಸಾರದಲ್ಲಿ ಏನಾದರೂ ತಪ್ಪುಗಳು ಕಂಡರೆ ಅದನ್ನು ಕಡೆಗಣಿಸಬೇಕು ಅದನ್ನೇ ಎತ್ತಿ ಹಿಡಿದು ರಂಪ ಮಾಡಬಾರದು ಎಂದು ಹಿರಿಯರು ಉಪದೇಶ ನೀಡುವುದು ಸರ್ವೇ ಸಾಮಾನ್ಯ.ಇದಕ್ಕೆ ಸಂಬಂಧಿಸಿದ ಕತೆಯೊಂದನ್ನು ಎಲ್ಲೋ ಓದಿದ ನೆನಪು. ಆ ಕಥೆ ಹೀಗಿದೆ: ಪರಸ್ಪರ ಪ್ರೀತಿಸಿ ಮದುವೆಯಾದ ಹುಡುಗಿಯೊಬ್ಬಳು ತನ್ನ ಗಂಡನಿಗೆ ಒಂದು ದಿನ ಹೀಗೆ ಹೇಳಿದಳಂತೆ. ನೋಡಿ ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮಿಬ್ಬರಲ್ಲಿಯೂ ಬೇಕಾದಷ್ಟು ಕುಂದು ಕೊರತೆ, ತಪ್ಪುಗಳು ಇದ್ದಿರಬಹುದು. ಇದಕ್ಕಾಗಿಯೇ ನಾನೊಂದು ಐಡಿಯಾ ಹೇಳುತ್ತೇನೆ. ನೀವು ನನ್ನಲ್ಲಿರುವ ತಪ್ಪುಗಳನ್ನು ಪಟ್ಟಿ ಮಾಡಿ, ನಾನು ನಿಮ್ಮಲ್ಲಿ ಕಂಡುಕೊಂಡಂತಹ ತಪ್ಪುಗಳನ್ನು ಪಟ್ಟಿಮಾಡುತ್ತೇನೆ. ಆವಾಗ ನಮ್ಮಿಬ್ಬರಲ್ಲಿರುವ ತಪ್ಪುಗಳು ಏನೆಂದು ಗೊತ್ತಾಗುತ್ತೆ. ಅದನ್ನು ತಿದ್ದಿ ನಡೆದು ಕೊಂಡರೆ ಜೀವನ ಸುಗಮವಾಗಿರಬಹುದು. ಟ್ರೈಮಾಡಿ ನೋಡೋಣ... ಎಂದು ಆಕೆ ಹೇಳಿದಾಗ ಅವನೂ ಒಪ್ಪಿಕೊಂಡ. ಮರುದಿನ ರಾತ್ರಿ ಮಲಗಬೇಕಾದರೆ ಅವಳು ತಾನು ಆತನಲ್ಲಿ ಕಂಡ ತಪ್ಪುಗಳ ದೊಡ್ಡ ಪಟ್ಟಿಯನ್ನೇ ತಯಾರು ಮಾಡಿಕೊಂಡು ಬಂದಿದ್ದಳು. ಅದು ಸರಿ ಸುಮಾರು 3 ಪುಟಗಳಷ್ಟಿತ್ತು. ಅವಳು ಒಂದೊಂದೇ ತಪ್ಪುಗಳನ್ನು ಓದುತ್ತಿದ್ದಂತೆ ಅವನ ಕಣ್ಣಲ್ಲಿ ನೀರು ತುಂಬಿ ಬಂತು. ಅದನ್ನಾಕೆ ಗಮನಿಸಿದ್ದರೂ ಆಕೆ ಮತ್ತೆ ತನ್ನ ಪಟ್ಟಿಯನ್ನು ಓದುತ್ತಾ ಹೋದಳು. ಎಲ್ಲಾ ಮುಗಿದಾದ ಮೇಲೆ ಆಕೆ ಆತನಲ್ಲಿ ಇನ್ನು ನಿನ್ನ ಸರದಿ. ಓದು ಅಂತಾ ಹೇಳಿದಳು. ಆತ ಖಾಲಿ ಕಾಗದವೊಂದನ್ನು ಆಕೆಯತ್ತ ಚಾಚಿದ. ಆಕೆಗೆ ಗಾಬರಿಯಾಯಿತು. ತನ್ನಲ್ಲಿ ಏನೂ ತಪ್ಪಿಲ್ಲವೇ? ಎಂದು ಆಕೆ ಕೇಳಿದಾಗ "ನಿನ್ನ ತಪ್ಪು ಒಪ್ಪುಗಳನ್ನೆಲ್ಲಾ ಅರಿತುಕೊಂಡೇ ನಾನು ನಿನ್ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆದರೆ ನಿನ್ನ ಮೇಲೆ ನನಗಿರುವ ಪ್ರೀತಿ ಒಂದಿಷ್ಟೂ ಕಡಿಮೆಯಾಗಿಲ್ಲ. ಪ್ರೀತಿಯಲ್ಲಿ ತಪ್ಪುಗಳೂ ಪ್ರಿಯವಾಗಿರುತ್ತವೆ" ಎಂದು ಹೇಳಿದಾಗ ಆಕೆಗೆ ತನ್ನ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸುತ್ತಾ ಆಕೆ ಆತನ ತೆಕ್ಕೆಗೆರಗಿದಳು. ನಿಜವಾದ ಪ್ರೀತಿ ಅಂದರೆ ಇದೇ ಅಲ್ಲವೇ?

Rating
No votes yet

Comments