ಶಿವಮೊಗ್ಗದಲ್ಲಿ ಮತ್ತೊಮ್ಮೆ ‘ಆ ದಶಕ’

ಶಿವಮೊಗ್ಗದಲ್ಲಿ ಮತ್ತೊಮ್ಮೆ ‘ಆ ದಶಕ’

ಬರಹ

‘ಆ ದಶಕ’ ಪುಸ್ತಕ ಲೋಕದಲ್ಲಿ ಒಂದು ಹೊಸ ಪ್ರಯೋಗ.
ನಟರಾಜ್ ಹುಳಿಯಾರ್ ಪ್ರಕಾರ, ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಪ್ರಯತ್ನ. ನಾವು ಇದ್ದ, ನಾವು ಹುಟ್ಟಿದ, ನಾವಿನ್ನೂ ಹುಟ್ಟೇ ಇರದ ದಶಕದ ಚಳವಳಿಗಳು, ಹೋರಾಟಗಳು, ವಾಗ್ವಾದಗಳು, ತಾತ್ವಿಕ ಸಂಘರ್ಷಗಳು, ಕ್ಷುಲ್ಲಕ ಜಗಳಗಳು, ತಪ್ಪು ತಿಳವಳಿಕೆಗಳು ಸಂಭವಿಸಿದ್ದವು ಎಂದು ಇಲ್ಲಿನ ಬರಹಗಳು ವಿವಿಧ ತಲೆಮಾರುಗಳಿಗೆ ನಿರೂಪಿಸುತ್ತವೆ. ಈ ಮೂಲಕ ‘ಆ ದಶಕ’ದ ಸೊಬಗನ್ನು ಕಟ್ಟಿಕೊಡುತ್ತವೆ....
ಪ್ರೆ. ಎಂಡಿಎನ್, ರಾಮದಾಸ್, ರುದ್ರಪ್ಪ, ತೇಜಸ್ವಿ ಮುಂತಾದವರ ಜೊತೆಯಲ್ಲೇ ರೈತ ಸಂಘ ಕಟ್ಟಿದ ಕಡಿದಾಳು ಶಾಮಣ್ಣ ೮೦ರ ದಶಕದಲ್ಲಿ ಬರೆದ ಲೇಖನಗಳು, ಪತ್ರಗಳು ಇದರಲ್ಲಿವೆ. ರೈತ ಸಂಘದ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ, ನಾಗಸಮುದ್ರದ ಗೋಲಿಬಾರ್, ರಾಜಕಾರಣಿಗಳು ಹಿತಾಸಕ್ತಿ, ತೀರ್ಥಹಳ್ಳಿ ರೈತರ ಕರ ನಿರಾಕರಣೆ, ರೈತಸಂಘದಿಂದ ಶಾಮಣ್ಣ ಉಚ್ಚಾಟನೆ ಮತ್ತಿತರ ಘಟನೆಗಳು ನಮ್ಮೆದುರು ತೆರೆದುಕೊಳ್ಳುತ್ತವೆ.
ಇಂಥ ಒಂದು ಸೃಜನಶೀಲ ಪ್ರಯತ್ನ ನಡೆಸಿರುವುದು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ. ೨೯ರ ಭಾನುವಾರ ಸಂಜೆ ೫.೩೦ಕ್ಕೆ ನಡೆಯಲಿರುವ ಸಮಾರಂಭದಲ್ಲಿ ದೇವನೂರು ಮಹಾದೇವ ಕೃತಿ ‘ಆ ದಶಕ’ ಬಿಡುಗಡೆ ಮಾಡಲಿದ್ದಾರೆ.
ಕೃತಿ ಕುರಿತು ಪ್ರೆ. ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆ. ಪ್ರೆ. ರವಿವರ್ಮ ಕುಮಾರ್ ಉಪಸ್ಥಿತರಿರುತ್ತಾರೆ. ಕರ್ನಾಟಕ ಸಂಘದಲ್ಲಿ ನಡೆಯುವ ಇಂಥ ಯಾವುದೇ ಕಾರ್ಯಕ್ರಮಕ್ಕೂ ತಪ್ಪದೆ ಬರುವ, ಬಂದು ಯಾವುದೇ ಮೂಲೆಯಲ್ಲಿ ಕೂತು ಕಾರ್ಯಕ್ರಮ ಆಸ್ವಾದಿಸುವ ಚಟ ಬೆಳೆಸಿಕೊಂಡಿರುವ ಶಾಮಣ್ಣ ಸಹ ಬರುತ್ತಾರೆ.
ಇಷ್ಟು ಜನ ಒಟ್ಟಿಗೆ ಸೇರಿದರೆ ಮತ್ತೊಮ್ಮೆ ‘ಆ ದಶಕ’ ನಮ್ಮೆದುರು ಬಂದು ನಿಲ್ಲುವುದರಲ್ಲಿ ಸಂಶಯವಿಲ್ಲ, ಅಲ್ಲವೇ...?