ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ಬರಹ

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!
ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು ಪೂರ್ತಿಯಾಗಿ ಕಂಪ್ಯೂಟರ್ ನಿಯಂತ್ರಣದಲ್ಲಿ ನಡೆಯುತ್ತದೆ.ಚೀಲಗಳನ್ನು ಇಳಿಸುವ,ಉಗ್ರಾಣದಲ್ಲಿ ಕಾಪಿಡುವ ಮತ್ತು ಉಗ್ರಾಣದಿಂದ ಹೊರಗೆ ಕಳುಹಿಸುವ ಚೀಲಗಳನ್ನು ವಾಹನಗಳಿಗೆ ತುಂಬಿಸುವ ಮುಂತಾದ ಕೆಲಸಗಳು ಕಂಪ್ಯೂಟರ್ ಮೂಲಕ ನಿಯಂತ್ರಿಸಲ್ಪಡುತ್ತದೆ.ಸಂಪೂರ್ಣ ವ್ಯವಸ್ಥೆ ಸ್ವಯಂಚಾಲಿ ವ್ಯವಸ್ಥೆಯ ಮೂಲಕ ನಡೆಸಲ್ಪಡುತ್ತದೆ.ಹೀಗಾಗಿ,ಇಲ್ಲಿ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ.ಇದ್ದ ಕೆಲವರೂ,ಕಂಪ್ಯೂಟರ್ ಮುಂದೆ ಕುಳಿತು,ತೆರೆಯನ್ನು ದಿಟ್ಟಿಸಿರುತ್ತಾರೆ.ಆಹಾರ ಧಾನ್ಯಗಳ ಚೀಲಗಳ ಪರೀಕ್ಷೆ,ಗುಣಮಟ್ಟದ ಮೇಲೆ ಕಣ್ಣಿಡುವ ಕೆಲಸವೂ ದೂರನಿಯಂತ್ರಣದಿಂದಲೇ ನಡೆಯುತ್ತದೆ.ಧಾನ್ಯಗಳ ಹಾಳಾಗುವ ಪ್ರಮಾಣ,ಕೇವಲ ಶೇಕಡಾ ಒಂದು.ಸಾಮಾನ್ಯವಾಗಿ ಇದರ ಪ್ರಮಾಣ ಶೇಕಡಾ ಇಪ್ಪತ್ತರಷ್ಟಾಗಿರುತ್ತದೆ.ಉಗ್ರಾಣದ ಸಾಮರ್ಥ್ಯ ಇಪ್ಪತ್ತೈದು ಸಾವಿರ ಟನ್.
-----------------------------------------------
ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ನಿಟ್ಟೆ ಸಂಸ್ಥೆಗೆ
ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಲ್ಲಿ ಅತ್ಯುತ್ತಮ ಪ್ರಾಂಶುಪಾಲರಿಗೆ ಭಾರತೀಯ ವಿದ್ಯಾಭವನ,ಮುಂಬೈಯು ಸ್ಥಾಪಿಸಿರುವ ಪ್ರಶಸ್ತಿಯು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ವೈ.ಕುಲಕರ್ಣಿ ಅವರ ಪಾಲಾಗಿದೆ.ಭಾರತೀಯ ತಾಂತ್ರಿಕ ತಾಂತ್ರಿಕ ವಿದ್ಯಾಭ್ಯಾಸದ ಸಂಘ ಐಎಸ್‌ಟಿಇ ಅವರು ವಾರ್ಷಿಕವಾಗಿ ಈ ನೀಡುವ ಈ ಪ್ರಶಸ್ತಿಯನ್ನು ಮುಂದಿನ ತಿಂಗಳು ಸುರತ್ಕಲ್ಲಿನ ಎನೈಟಿಕೆ ಸಂಸ್ಥೆಯಲ್ಲಿ ನಡೆಯಲಿರುವ ಸಮಾವೇಶದ ವೇಳೆ ಪ್ರದಾನ ಮಾಡಲಾಗುವುದು.
------------------------------------------------------------------------------------------
ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ


blogಕನ್ನಡದ ಟ್ವಿಟರ್ ತಾಣವಾಗಿ,ಇಂಚರ inchara.net ಅಂತರ್ಜಾಲದಲ್ಲಿ ಲಭ್ಯವಾಗಿದೆ.ಈ ತಾಣವನ್ನು ಕಂಪ್ಯೂಟರ್ ಇಂಜಿನಿಯರ್ ವಸಂತ್ ಕಜೆ ಅವರು ಆರಂಭಿಸಿದ್ದಾರೆ.ಈ ತಾಣದಲ್ಲಿ ಕನ್ನಡಿಗರು ನೂರನಲುವತ್ತು ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಪ್ರಕಟಿಸಿ,ಚಿಲಿಪಿಲಿಗುಟ್ಟಬಹುದು.ಜನಪ್ರಿಯ ತಾಣ ಟ್ವಿಟರಿನ ತಾಣ,ಈ ತಾಣಕ್ಕೆ ಪ್ರೇರಣೆ.ಸಂದೇಶದ ಜತೆಗೆ ಸೂಕ್ತ ಐಕಾನ್(ಕಿರುಚಿತ್ರ) ಸೇರಿಸಲು ಅವಕಾಶ ಇರುವುದು,ಇಲ್ಲಿನ ವಿಶೇಷ.ಸಂದೇಶ ಟೈಪಿಸುವಾಗ.ಅಕ್ಷರಗಳು ಕನ್ನಡದಲ್ಲೇ ಮೂಡುವಂತೆ ರೂಪಿಸಿರುವುದು,ಸಂದೇಶವನ್ನು ಕನ್ನಡದಲ್ಲಿ ರಚಿಸುವುದನ್ನು ಸುಲಭವಾಗಿಸಿದೆ.ನಿಮ್ಮ ಜತೆ ಸಂಪರ್ಕವಿರುವ ಮಂದಿಯ ಪಟ್ಟಿಯ ಜತೆಗೆ,ನಿಮ್ಮ ಹಿಂಬಾಲಕರ ಪಟ್ಟಿಯನ್ನು ತಾಣ ಪ್ರತ್ಯೇಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.ಎಸೆಮ್ಮೆಸ್ ಮೂಲಕವೂ ಸಂದೇಶಗಳನ್ನು ಸೇರಿಸುವ ಸೌಲಭ್ಯವಿದೆ.ಜುಕಿಎಂಜಿನ್ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ,ಈ ಸೇವೆಯನ್ನು ನೀಡಲಾಗುತ್ತಿದೆ.
----------------------------------------------------------------------------
ಗೂಗಲ್ ಗಂಟಿನಲ್ಲಿ ಕನ್ನಡದ ನಿಘಂಟು
ಗೂಗಲ್ ಕೈಯಾಡಿಸದ ಕ್ಷೇತ್ರವೇ ಇಲ್ಲವೇನೋ.ಮಿಂಚಂಚೆಯಿಂದ ಹಿಡಿದು,ಗೂಗಲ್ ವೇವ್ ತನಕ ಗೂಗಲ್ ಜನಸಮುದಾಯಕ್ಕೆ ಒದಗಿಸುವ ಸೇವೆಗಳ ಪಟ್ಟಿ ಹನುಮಂತನ ಬಾಲವಾಗುತ್ತಿದೆ.ಈ ಪಟ್ಟಿಗೆ ಒಂದು ಸೇರ್ಪಡೆಯೆಂದರೆ ನಿಘಂಟು ಸೇವೆ.ಗೂಗಲ್ ನಿಘಂಟು ಹಲವು ಭಾಷೆಗಳಲ್ಲಿ ಲಭ್ಯವಿದ್ದು,ಅದರಲ್ಲಿ ಕನ್ನಡವೂ ಒಂದು.ಬಳಸಲು ಸುಲಭವಾದ ಈ ನಿಘಂಟು,ಇಂಗ್ಲೀಷ್-ಕನ್ನಡ ಹಾಗೂ ಕನ್ನಡ-ಇಂಗ್ಲೀಷ್ ಹೀಗೆ ಎರಡೂ ವಿಧದಲ್ಲಿ ಬಳಕೆಗೆ ಅವಕಾಶ ನೀಡುತ್ತದೆ.ಇಂಗ್ಲೀಷ್ ಪದದ ಉಚ್ಛಾರವೂ ಸಿಗುವುದು ತಾಣದ ಹೆಚ್ಚುಗಾರಿಕೆ.ಮೂವತ್ತು ಭಾಷೆಗಳಲ್ಲಿ ನಿಘಂಟು ಸೇವೆ ಲಭ್ಯವಿದೆ.
-----------------------------------------------------------------------------------------------------
ಮಾರಾಟದ ರೀತಿ ಬದಲಾಗಿದೆ
ಕ್ರಿಸ್ಮಸ್ ಸಮೀಪ ಬರುತ್ತಿದೆ.ಆರ್ಥಿಕ ಹಿನ್ನಡೆಯಿಂದ ಕಂಗೆಟ್ಟಿರುವ ಅಮೆರಿಕಾದ ವ್ಯಾಪಾರಿಗಳು ತಮ್ಮ ವ್ಯಾಪಾರ ವ್ಯವಹಾರ,ಈ ಹಬ್ಬದ ಕಾರಣದಿಂದಲಾದರೂ ತುಸು ಸಾಮಾನ್ಯವಾದೀತು ಎನ್ನುವ ಆಶೆ ಹೊತ್ತಿದ್ದಾರೆ.ಅದನ್ನು ಖಚಿತ ಪಡಿಸಿಕೊಳ್ಳಲು ಅವರಿಗೆ ಅಂತರ್ಜಾಲದ ಟ್ವಿಟರ್ ಸಾಕಷ್ಟು ಪ್ರಯೋಜನಕಾರಿಯಾಗಿದೆ.ಟ್ವಿಟರಿನ ತಮ್ಮ ಖಾತೆಯ ಮೂಲಕ,ಕಡಿತದ ಮಾರಾಟ,ಹೊಸ ಸರಕುಗಳ ಬಗ್ಗೆ ಜನರಿಗೆ ತಿಳಿಸಲು ವ್ಯಾಪಾರ ಮಳಿಗೆಗಳು ಪ್ರಯತ್ನಿಸುತ್ತಿವೆ.ಜನರೂ ಮಳಿಗೆಗಳ ಖಾತೆಗಳನ್ನು ಹಿಂಬಾಲಿಸುವ ಮೂಲಕ ವಿವರಗಳನ್ನು ಪಡೆಯಲು ಸಮರ್ಥರಾಗಿದ್ದಾರೆ.ಅವರು ಕೂಡಾ ತಮ್ಮ ಅನಿಸಿಕೆಗಳನ್ನು,ಸಲಹೆಗಳನ್ನು,ಪ್ರಶ್ನೆಗಳನ್ನು ಕಳುಹಿಸಿ,ಅವುಗಳಿಗೆ ಮಳಿಗೆಗಳಿಂದ ಸೂಕ್ತ ಉತ್ತರ ಅಥವಾ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಮಿಂಚಂಚೆ ಅಥವಾ ದೂರವಾಣಿ ಕರೆಯಾದರೆ,ಮಿಂಚಂಚೆ ಬರೆದವನಿಗೆ ಅಥವಾ ಕರೆ ಮಾಡಿದವನಿಗೆ ಮಾತ್ರಾ ಈ ಬಗ್ಗೆ ಗೊತ್ತಾದರೆ,ಟ್ವಿಟರಿನಲ್ಲಿ ಎಲ್ಲರೂ ಈ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವುದು ಟ್ವಿಟರಿನ ಹೆಚ್ಚುಗಾರಿಕೆ.ಈ ಸಂದೇಶಗಳ ಮೇಲೆ ಗಮನವಿಡಲೇ ಕೆಲವು ಉದ್ಯೋಗಿಗಳನ್ನು ಮಳಿಗೆಗಳವರು ಬಳಸಬೇಕಾಗಿ ಬಂದಿದೆ.
---------------------------------------------------------------------------------
ಮಿಂಚಿನ ಸಂಚಿನ ಮೇಲೆ ಕಣ್ಣಿಡಲು ಜಾಲ!
ಜಗತ್ತಿನಲ್ಲಿ ಪ್ರತಿ ಸೆಕೆಂಡಿಗೆ ಅರುವತ್ತಮೂರು ಮಿಂಚುಗಳು ಮೂಡಿ ಮರೆಯಾಗುತ್ತವೆ.ಈ ಮಿಂಚುಗಳು ಎಲ್ಲಿ ಹೊಡೆದುವು ಎಂದು ಗಮನಿಸಿ,ಬಿರುಗಾಳಿ,ಮಳೆ ಇತ್ಯಾದಿಗಳ ತೀವ್ರತೆಯನ್ನು ಅರಿಯುವುದು ಸುಲಭವಂತೆ.ಜಗತ್ತಿನಲ್ಲಿ ಬೇರೆ ಬೇರೆ ಕಡೆ ಮಿಂಚುಗಳನ್ನು ಪತ್ತೆ ಹಚ್ಚಲು ಸಂವೇದಕಗಳನ್ನು ಸ್ಥಾಪಿಸಿ,ಆ ಜಾಲದ ಮೂಲಕ ಹವಾಮಾನ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿಸಲು ಸಂಶೋಧಕರು ಗಮನವಿತ್ತಿದ್ದಾರೆ.ಪ್ರತಿ ಮೂರುಸಾವಿರ ಕಿಲೋಮೀಟರಿಗೆ ಸಂವೇದಕವನ್ನು ಸ್ಥಾಪಿಸುವುದು ಅಗತ್ಯವೆಂದು ಕಂಡುಬಂದಿದೆ.ವಿಮಾನಗಳ ಹಾರಾಟ ಸುರಕ್ಷಿತವೇ ಅಲ್ಲವೇ ಎನ್ನುವುದನ್ನು ತಿಳಿಯಲು ಮಿಂಚಿನ ಸ್ಥಾನದ ಬಗೆಗಿನ ಅರಿವು ಸಹಾಯ ಮಾಡುತ್ತದೆ.ಮಿಂಚು ಹೊಡೆದಾಗ,ವಾತಾವರಣದ ಗಾಳಿಯಲ್ಲಿ ನೈಟ್ರಸ್ ಆಕ್ಸೈಡ್ ಹೆಚ್ಚುವುದರಿಂದ,ಗಾಳಿಯ ಗುಣಮಟ್ಟವನ್ನು ತಿಳಿಯಲೂ ಮಿಂಚಿನ ಸ್ಥಾನ ತಿಳಿಯುವುದು ಅಪರೋಕ್ಷವಾಗಿ ಸಹಾಯ ಮಾಡುತ್ತದೆ.ಜಗತಿನಲ್ಲಿ   ಒಟ್ಟು ಅರುವತ್ತು ಕೇಂದ್ರಗಳು ಕೆಲಸ ಮಾಡಲಿವೆ.ಮುಂದಿನ ವರ್ಷದಲ್ಲಿ ಈ ಕೇಂದ್ರಗಳು ಕೆಲಸ ಮಾಡಲು ಶುರು ಮಾಡಬಹುದು.
----------------------------------------------------------------------------------------------
ಪಾಚಿಯಿಂದ ಬ್ಯಾಟರಿಗಳು
ಕ್ಲಾಡೋಫೋರಾ ಎನ್ನುವ ಪಾಚಿಗಳು ನೀರಿಗೆ ದುರ್ವಾಸನೆ ಉಂಟು ಮಾಡುವ ಪಾಚಿಗಳು.ಇವುಗಳ ಮೇಲ್ಮೈ ವಿಸ್ತೀರ್ಣ ಬಹಳ ಹೆಚ್ಚು.ಇವುಗಳನ್ನು ಮುಂದಿನ ತಲೆಮಾರಿನ ಬ್ಯಾಟರಿಯಲ್ಲಿ ಬಳಸಬಹುದು ಎನ್ನುವುದು ಸ್ವೀಡನ್ ವಿವಿಯ ಸಂಶೋಧಕರ ಅಧ್ಯಯನ ತಿಳಿಸಿದೆ.ಇವುಗಳನ್ನು ಬಳಸಿ ಬ್ಯಾಟರಿ ತಯಾರಿಸಿದಾಗ,ಅವುಗಳು ಪರಿಸರಪ್ರಿಯ ಬ್ಯಾಟರಿಗಳಾಗಲಿವೆ.ಬ್ಯಾಟರಿಗಳು ಹಗುರ,ವಿಷಮುಕ್ತ ಮತ್ತು ಮಡಚಬಲ್ಲ ಶಕ್ತಿಯ ಮೂಲಗಳಾಗಲಿವೆ.ಈ ಬ್ಯಾಟರಿಗಳು ವಿದ್ಯುಚ್ಛಕ್ತಿಯನ್ನು ಹೆಚ್ಚು ಕಾಲ ಹಿಡಿದಿಡಲು ಸಫಲವಾಗುವ ನಿರೀಕ್ಷೆಯಿದೆ.
------------------------------------------------------------------
ಪರೀಕ್ಷೆಯೇ ಫೇಲು
ಮೊದಲಬಾರಿಗೆ ಕಂಪ್ಯೂಟರ್ ಮೂಲಕ ನಡೆಯುತ್ತಿರುವ ಕ್ಯಾಟ್ ಪ್ರವೇಶ ಪರೀಕ್ಷೆಗಳಿಗೆ ಮೊದಲ ದಿನವಾದ ಶನಿವಾರವೇ ವಿಘ್ನ ಬಂತು.ಸರ್ವರ್‌ಗಳು ಕೈಕೊಟ್ಟದ್ದೇ ಈ ವೈಫಲ್ಯಕ್ಕೆ ಕಾರಣವೆಂದೂ,ವೈರಸ್ ಕಾರಣವೆಂದೂ ವಿಶ್ಲೇಷಣೆಗಳು ಬಂದಿವೆ.ಈ ವರ್ಷದ ಪರೀಕ್ಶೆಗಳನ್ನು ಕಂಪ್ಯೂಟರ್ ಮುಂದೆಯೇ ಕುಳಿತು ಬರೆಯಬೇಕಾದ ಅಗತ್ಯವಿದೆ.ಹತ್ತು ದಿನಗಳು ಸತತವಾಗಿ ನಡೆವ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವಾಗ ತೆಗೆದುಕೊಳ್ಳಲು ಬಯಸುವುದಾಗಿ ಮೊದಲೇ ನಿಗದಿಯಾಗಿದೆ.ಮೊದಲ ದಿನ ಪರೀಕ್ಷೆ ತೆಗೆದುಕೊಳ್ಳಬೇಕಾದವರು ಈಗ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ.


udayavani

*ಅಶೋಕ್‌ಕುಮಾರ್ ಎ