’ಇದ್ಯಾವ ನ್ಯಾಯ?’ : ಆಕ್ಷೇಪಕ್ಕೆ ಉತ್ತರ
’ಸಂಪದ’ದಲ್ಲಿ ಪ್ರಕಟವಾಗಿರುವ ’ಇದ್ಯಾವ ನ್ಯಾಯ?’ ಎಂಬ ನನ್ನ ಸುನೀತಕ್ಕೆ ವಿಚಾರಶೀಲ ಪ್ರತಿಕ್ರಿಯೆಗಳು ಬರುತ್ತಿವೆ. ಆ ಪೈಕಿ ಆಕ್ಷೇಪಗಳಿಗೆ ಉತ್ತರವಾಗಿ, ಈ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನನ್ನ ಕೆಲವು ಲೇಖನಗಳ ಆಯ್ದ ಕೆಲ ಭಾಗಗಳನ್ನು ಈ ಕೆಳಗೆ ನೀಡಿದ್ದೇನೆ.
***
(೨೦೦೯ರ ಜುಲೈನಲ್ಲಿ ಪ್ರಕಟವಾದ ಲೇಖನದ ಭಾಗ)
ಬ್ರಿಟಿಷರು ಭಾರತವನ್ನು ಒಡೆದು ಹೊರಟುಹೋದರು. ನಂತರ ನಾವು ಮಾನಸಿಕವಾಗಿ ಒಂದಾಗುವ ಬದಲು ಇನ್ನಷ್ಟು ದೂರವಾಗತೊಡಗಿದೆವು. ಭಾರತ, ಪಾಕ್ ಎರಡೂ ದೇಶಗಳ ರಾಜಕಾರಣಿಗಳು ದ್ವೇಷದ ಬೆಂಕಿಯನ್ನು ಶಮನಗೊಳಿಸುವ ಬದಲು ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪಾಕ್‌ನ ಮಿಲಿಟರಿ ಸರ್ವಾಧಿಕಾರಿಗಳಂತೂ ಭಾರತದ ಮಟ್ಟಿಗೆ ಮಾತ್ರವಲ್ಲ, ತಮ್ಮ ದೇಶದ ಪಾಲಿಗೂ ರಾಕ್ಷಸರೇ ಆದರು! ಇವೆಲ್ಲದರ ಪರಿಣಾಮ, ಸೌಹಾರ್ದಯುತವಾಗಿ ಬಗೆಹರಿಯಬಹುದಾಗಿದ್ದ ಕಾಶ್ಮೀರ ಸಮಸ್ಯೆಯು ಉಲ್ಬಣಗೊಂಡಿತು. ಪಾಕ್ ಪೋಷಿತ ಉಗ್ರರು ಹುಟ್ಟಿಕೊಂಡರು. ಕಾಶ್ಮೀರದ ಹೊರಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ ಇವರು ಇಂದು ಇಡೀ ಭಾರತಕ್ಕೇ ಕಂಟಕಪ್ರಾಯರಾಗಿ ಬೆಳೆದುನಿಂತಿದ್ದಾರೆ.
ಭಾರತದಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆಯೆಂದು ಕೆಲವು ಅನ್ಯೋದ್ದೇಶಭರಿತ ಮಾಧ್ಯಮಗಳು ಸುಳ್ಳು ಚಿತ್ರಣ ನೀಡುತ್ತಿರುವುದರಿಂದಾಗಿ, ಮತ್ತು, ಬಾಬ್ರಿ ಮಸೀದಿಯ ಧ್ವಂಸದ ವಿಷಯವನ್ನೆತ್ತಿಕೊಂಡು ಈ ಮುಸ್ಲಿಂ ಉಗ್ರರನ್ನು ಭಾರತದ ವಿರುದ್ಧ ಇನ್ನಷ್ಟು ವ್ಯಗ್ರಗೊಳಿಸಲಾಯಿತು. ಇದೇ ವೇಳೆ, ಅಧಿಕಾರ, ತುಷ್ಟೀಕರಣ ಹಾಗೂ ರಾಜಕೀಯ ದ್ವೇಷಗಳೇ ಗುರಿಯಾಗಿರುವ ನಮ್ಮ ಆಡಳಿತ ಪಕ್ಷಗಳು ಕಾಲದಿಂದ ಕಾಲಕ್ಕೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸೂಕ್ತವಾಗಿ ಆತ್ಮಸಮರ್ಥನೆಯ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದವು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಉಗ್ರಗಾಮಿ ಸಂಘಟನೆಗಳು ನಮ್ಮ ಮೇಲೆ ಎಲ್ಲ ರೀತಿಯ ದುರಾಕ್ರಮಣವನ್ನೂ ತೀವ್ರಗೊಳಿಸಿದವು. ಅದೀಗ ಮುಂಬಯಿಯಲ್ಲಾದಂತೆ ಅಘೋಷಿತ ಯುದ್ಧದ ಹಂತಕ್ಕೆ ಬಂದು ನಿಂತಿದೆ!
’ಭಾರತದಲ್ಲಿ ಮುಸ್ಲಿಮರು ಹಿಂಸಿಸಲ್ಪಡುತ್ತಿದ್ದಾರೆ’ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವುದೂ ಮುಸ್ಲಿಂ ಉಗ್ರರ ಭೀಕರ ಸ್ವರೂಪಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಅಂಥ ಅಪಕಲ್ಪನೆಯನ್ನು ನಿವಾರಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಮತ್ತು ವಿಚಾರಪರ ಗಣ್ಯರು ಹಾಗೂ ಸಂಘಟನೆಗಳು ಕೈಗೆತ್ತಿಕೊಳ್ಳಬೇಕು. ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟನೆಯ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ಜೊತೆಗೆ, ಕಾಶ್ಮೀರದಲ್ಲಿ ನಮ್ಮ ಸೈನಿಕರು ಇನ್ನೂ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು. ರಾಜಕಾರಣಿಗಳು ಕಾಶ್ಮೀರದ ಜನತೆಗೆ ಉತ್ತಮ ಆಡಳಿತ ನೀಡಿ ಎಲ್ಲರ ವಿಶ್ವಾಸ ಗಳಿಸಬೇಕು.
***
(೨೦೦೮ರ ಡಿಸೆಂಬರ್‌ನಲ್ಲಿ ಪ್ರಕಟವಾದ ಲೇಖನದ ಭಾಗ)
ಬಾಬ್ರಿ ಮಸೀದಿ ಧ್ವಂಸವಾಗುವ ಮೊದಲು ಈ ದೇಶದಲ್ಲಿ ಮುಸ್ಲಿಂ ಭಯೋತ್ಪಾದಕರ ದುಷ್ಕೃತ್ಯಗಳಾಗಲೀ ಹಿಂದು ಮತ್ತು ಮುಸ್ಲಿಮರ ನಡುವೆ ಘರ್ಷಣೆಯಾಗಲೀ ಈ ಮಟ್ಟದಲ್ಲಿ ಇರಲಿಲ್ಲ. ಕಾಶ್ಮೀರದಲ್ಲಿ ಆಗಾಗ ಉಗ್ರರು ನಡೆಸುತ್ತಿದ್ದ ದಾಳಿಗಳ ಬಗ್ಗೆ ಪತ್ರಿಕೆಗಳಲ್ಲಿ ನಾವು ಓದಿ ಮರೆತುಬಿಡುತ್ತಿದ್ದೆವು. ಬಾಬ್ರಿ ಮಸೀದಿ ಧ್ವಂಸವಾಗಿದ್ದೇ ಆಗಿದ್ದು, ದೇಶಾದ್ಯಂತ ಉಗ್ರರ ಅಟ್ಟಹಾಸ ಮೆರೆದಿದೆ, ಕೋಮುಜ್ವಾಲೆ ದೇಶವನ್ನೇ ಸುಡತೊಡಗಿದೆ!
ಮಸೀದಿ ಕೆಡವಿಸಿದವರಿಗೆ, ದೇಶದ ಜನಸಂಖ್ಯೆಯ ಶೇಕಡಾ ೧೪ರಷ್ಟಿರುವ ಮುಸ್ಲಿಮರನ್ನು ಕೆರಳಿಸಿ ಈ ದೇಶ ಶಾಂತಿಯಿಂದ ಜೀವಿಸಲಾರದೆಂದು ಗೊತ್ತಿರಲಿಲ್ಲವೆ? ಮಸೀದಿ ಧ್ವಂಸದ ಪ್ರಕರಣವನ್ನು ಪಾಕ್ ಪ್ರೇರಿತ ಉಗ್ರರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆಂಬ ಅರಿವು ಅವರಿಗೆ ಇರಲಿಲ್ಲವೆ?
ಪ್ರಜೆಗಳಾದ ನಮಗಾದರೂ ಆ ಸಂದರ್ಭದಲ್ಲಿ ಈ ಬಗ್ಗೆ ಕೊಂಚ ಪರಿಜ್ಞಾನ ಬೇಕಿತ್ತು. ಧರ್ಮದ ಅಫೀಮು ಸೇವಿಸಿದವರಂತೆ ನಾವು ಶ್ರೀರಾಮನ ಇಟ್ಟಿಗೆ ಹೊತ್ತೆವು. ರಾಮಮಂದಿರವಾದರೂ ನಿರ್ಮಾಣವಾಯಿತೇ? ಅದೂ ಇಲ್ಲ. ದೇಶಾದ್ಯಂತ ಇಟ್ಟಿಗೆಯ ಮೆರವಣಿಗೆ ನಡೆಯುತ್ತಿದ್ದಾಗ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಅಂಥದೊಂದು ಸಮಾವೇಶಕ್ಕೆ ವೀಕ್ಷಕನಾಗಿ ಹೋಗಿದ್ದ ನಾನು ಮುಂದಿನ ಘೋರ ದಿನಗಳ ಬಗ್ಗೆ ಅಲ್ಲಿ ನೆರೆದಿದ್ದವರಿಗೆ ತಿಳಿಹೇಳಲು ಯತ್ನಿಸಿ ಪೆಟ್ಟು ತಿಂದಿದ್ದೆ! ಪೆಟ್ಟು ಕೊಟ್ಟವರಲ್ಲಿ ನನ್ನ ಪರಿಚಿತರೂ ಇದ್ದರು! ದೇಶದ ಇಂದಿನ ಸ್ಥಿತಿ ಕಂಡು ಅವರೀಗ ಪಶ್ಚಾತ್ತಾಪ ಪಡುತ್ತಿದ್ದಾರೆ!
ಹಿಂದು-ಮುಸ್ಲಿಂ ಉಭಯರಲ್ಲೂ ಪರಸ್ಪರ ವಿಶ್ವಾಸ ಮೂಡಿಸುವುದೊಂದೇ ಈಗ ಉಳಿದಿರುವ ದಾರಿ. ಈ ಕೆಲಸವನ್ನು ಯಾವ ರಾಜಕೀಯ ಪಕ್ಷವೂ ಮಾಡುವುದಿಲ್ಲ. ಜನರೇ ಮಾಡಬೇಕಾಗಿದೆ. ತಳಮಟ್ಟದಿಂದ ಈ ಕಾರ್ಯ ಆರಂಭವಾಗಬೇಕಾಗಿದೆ. ಸ್ವಯಂಸೇವಾ ಸಂಘಟನೆಗಳು ಹಾಗೂ ಧಾರ್ಮಿಕ ಮುಖಂಡರು ಈ ದಿಸೆಯಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದೆ. ದೇಶದೊಳಗೆ ಸೌಹಾರ್ದ ನೆಲಸಿತೆಂದರೆ ಆಗ ವಿದೇಶೀ ಶಕ್ತಿಗಳಿಗೂ ಇಲ್ಲಿ ಕುಕೃತ್ಯ ನಡೆಸುವುದು ಕಷ್ಟವಾಗುತ್ತದೆ. ಕಾಲಾಂತರದಲ್ಲಿ ಸಂಪೂರ್ಣ ಶಾಂತಿ ಮನೆಮಾಡುತ್ತದೆ.
***
(೨೬ ೮ ೦೯ರಂದು ಪ್ರಕಟಗೊಂಡ ಲೇಖನ)
ನನ್ನೊಡನೆ ಯಾವ ಸಂಪರ್ಕವನ್ನೂ ಹೊಂದಿರದಿದ್ದ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಈಚೆಗೆ ನನಗೊಂದು ಪತ್ರ ಬರೆದು ’ಅಸಹಾಯಕ ಬಿ.ಜೆ.ಪಿ. ಸರಕಾರ’ದ ವಿಚಾರವಾಗಿ ’ಸಮಾಲೋಚನೆ ಹಾಗೂ ಪರಿಹಾರ ಮಾರ್ಗ’ ಚರ್ಚಿಸಲು ತಾನು ನನ್ನನ್ನು ಭೇಟಿಯಾಗಲು ಇಚ್ಛಿಸಿರುವುದಾಗಿಯೂ ಇದೇ ದಿನಾಂಕ ೨೦ ಮತ್ತು ೨೪ರಂದು ತಾನು ಬೆಂಗಳೂರಿಗೆ ಬರುತ್ತಿರುವುದಾಗಿಯೂ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದೂ ವಿನಂತಿಸಿದರು. ಈ ಪತ್ರ ಸಾಮಾನ್ಯ ಅಂಚೆಯ ಮೂಲಕ ನನಗೆ ದಿನಾಂಕ ೨೨ರ ಸಂಜೆ ತಲುಪಿತು. ಮರುದಿನ ಬೆಳಗ್ಗೆ ನಾನು ಮುತಾಲಿಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ೨೪ರ ಭೇಟಿಗೆ ಸಮ್ಮತಿ ವ್ಯಕ್ತಪಡಿಸಿದೆ. ೨೪ರಂದು ತಾನು ಬೆಂಗಳೂರಿಗೆ ಬಂದವನು ನನ್ನನ್ನು ಪುನಃ ಸಂಪರ್ಕಿಸುವುದಾಗಿ ಅವರು ಉತ್ತರಿಸಿದರು.
೨೪ರಂದು ನಾನು ನನ್ನೆಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮುತಾಲಿಕ್‌ಗಾಗಿ ಕಾದೆ. ಆದರೆ ಅವರು ನನ್ನನ್ನು ಸಂಪರ್ಕಿಸಲೂ ಇಲ್ಲ, ಆ ಬಗ್ಗೆ ಮಾಹಿತಿಯೇನನ್ನೂ ನನಗೆ ತಲುಪಿಸಲೂ ಇಲ್ಲ! ೨೬ರ ಮಧ್ಯಾಹ್ನದ ಈ ಹೊತ್ತಿನವರೆಗೂ ಅವರಿಂದಾಗಲೀ ಅವರ ಕಡೆಯವರಿಂದಾಗಲೀ ಯಾವ ಸುದ್ದಿಯೂ ಇಲ್ಲ! ಇದು ಮುತಾಲಿಕ್ ಅವರು ನನಗೆ ಮಾಡಿರುವ ಅವಮಾನವೆಂದೇ ನಾನು ಭಾವಿಸಬೇಕಾಗುತ್ತದೆ.
ಭೇಟಿಗಾಗಿ ವಿನಂತಿಸಿಕೊಂಡು, ಸಂಪರ್ಕಿಸುತ್ತೇನೆಂದು ತಿಳಿಸಿ, ಅನಂತರ ಸಂಪರ್ಕಿಸುವುದಿರಲಿ, ಕನಿಷ್ಠಪಕ್ಷ ಆ ಬಗ್ಗೆ ಮಾಹಿತಿ ತಲುಪಿಸುವ ಸಂಸ್ಕೃತಿಯನ್ನೂ ಹೊಂದಿರದ ಈ ವ್ಯಕ್ತಿ ತಾನು ಈ ನಾಡಿನ ಧರ್ಮ-ಸಂಸ್ಕೃತಿಯ ರಕ್ಷಣೆ ಮಾಡುತ್ತೇನೆಂದು ಹೊರಟಿರುವುದನ್ನು ನೋಡಿದರೆ ನನಗೆ ಸೋಜಿಗವೆನಿಸುತ್ತದೆ!
ನಿಗದಿಯನುಸಾರ ೨೪ರಂದು ಮುತಾಲಿಕ್ ನನ್ನನ್ನು ಭೇಟಿಯಾಗಿದ್ದರೆ ನಾನು ಅವರಿಗೆ ಅಂದು ಈ ಕೆಳಗಿನ ಮಾತುಗಳನ್ನು ಹೇಳುವವನಿದ್ದೆ:
’ದ್ವೇಷ ಮತ್ತು ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸಂಸ್ಕೃತಿಯಲ್ಲ. ಅಂಥವರನ್ನು ಸಮಾಜ ಎಂದೂ ಒಪ್ಪದು. ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿದಾಗ ಎಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತವೆ. ಆದ್ದರಿಂದ ಇಂದಿನ ಪೀಳಿಗೆಗೆ ಈ ನೆಲದ ಸಂಸ್ಕೃತಿಯ ಬಗ್ಗೆ ವಿಸ್ತೃತ ತಿಳಿವಳಿಕೆ ನೀಡಬೇಕಾದ್ದು ಇಂದಿನ ಅಗತ್ಯ. ಹಾಗೆ ತಿಳಿವಳಿಕೆ ಹೊಂದಿದವರ ಸಂಖ್ಯೆ ಕ್ರಮೇಣ ಹೆಚ್ಚುತ್ತ ಸಾಗಿ ಮುಂದೊಂದು ದಿನ ಅವರೇ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವಂಥ ಸನ್ನಿವೇಶ ಸೃಷ್ಟಿಯಾದಾಗ ಅಸಹಾಯಕ-ಭ್ರಷ್ಟ-ದುಷ್ಟ ಸರ್ಕಾರಗಳಿಂದ ನಮಗೆ ಮುಕ್ತಿ ದೊರೆಯುತ್ತದೆ. ಅಲ್ಲಿಯತನಕ ನಮಗೆ ತಾಳ್ಮೆ ಬೇಕು ಮತ್ತು ಅನವರತ ಇತ್ಯಾತ್ಮಕ ಪ್ರಯತ್ನ ಸಾಗಿರಬೇಕು.’
ಈ ಮಾತುಗಳನ್ನು ನಾನು ಮುತಾಲಿಕ್ ಅವರಿಗೆ ಸಕಾರಣ ವಿವರಿಸುವವನಿದ್ದೆ.
ಈ ಪತ್ರವನ್ನೀಗ ಮುತಾಲಿಕ್ ಗಮನಿಸಿರುತ್ತಾರೆ. ಆದ್ದರಿಂದ ಇನ್ನು ಅವರಿಗೆ ನಾನು ಹೇಳುವ ಅಗತ್ಯವಿಲ್ಲ.
***
(೨೦೦೯ರ ಸೆಪ್ಟೆಂಬರ್‌ನಲ್ಲಿ ಪ್ರಕಟವಾದ ಲೇಖನದ ಭಾಗ)
ಭಾರತ ಜಾತ್ಯತೀತ ರಾಷ್ಟ್ರ, ನಿಜ. ಆದರೆ, ಮತಾಂತರದಿಂದ, ವೋಟಿಗಾಗಿ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ನೀತಿಯಿಂದ ಮತ್ತು ಧಾರ್ಮಿಕ ಪಕ್ಷಪಾತದಿಂದ ಕಾಲಕ್ರಮದಲ್ಲಿ ಭಾರತದ ಜಾತ್ಯತೀತ ಭೂಮಿಕೆಗೇ ಧಕ್ಕೆ ಎಂಬುದನ್ನು ನಾವು ಅರಿಯಬೇಕು.
ಮತಾಂತರದ ಪಿಡುಗಂತೂ ಎಷ್ಟರಮಟ್ಟಿಗೆ ಬಲಿಷ್ಠವಾಗಿದೆಯೆಂದರೆ, ನಮ್ಮ ಈಶಾನ್ಯದ ರಾಜ್ಯಗಳು ಬಹುತೇಕ ಕ್ರಿಸ್ತೀಕರಣ ಆಗಿಬಿಟ್ಟಿವೆ! ಕೇರಳದಿಂದ ಮೊದಲ್ಗೊಂಡು ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಕ್ರಿಸ್ತೀಕರಣ ಭರದಿಂದ ಸಾಗಿದೆ! ೧೯೭೦ರ ಮತ್ತು ೧೯೮೦ರ ದಶಕಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಕ್ರಿಸ್ತೀಕರಣ ಭರದಿಂದ ಸಾಗಿದ ಪರಿಣಾಮ ಇಂದು ಆ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮತಾಂತರಿತ ಕ್ರಿಶ್ಚಿಯನ್ನರು! ಆ ದೇಶದ ಮತಾಂತರಿತ ಕ್ರಿಶ್ಚಿಯನ್ ಮಿಷ’ನರಿ’ಗಳೇ ಈಗ ’೧೦/೪೦ ವಿಂಡೋ’ದ ಅತಿನಿಷ್ಠ ಕಾರ್ಯಕರ್ತರಾಗಿ, ಉಳಿದವರಿಗಿಂತ ಹೆಚ್ಚಿನ ಜೋಷ್‌ನಿಂದ, ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಮತಾಂತರದ ಕಾರ್ಯ ನಡೆಸುತ್ತಿದ್ದಾರೆ! ಹೀಗೇ ಮುಂದುವರಿದರೆ ಮುಂದೊಂದು ದಿನ ಈ ನಮ್ಮ ಜಾತ್ಯತೀತ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿಗೇ ಭದ್ರ ನೆಲೆಯಿಲ್ಲದಂತಾಗುತ್ತದೆ! ಈ ಅಪಾಯವನ್ನು ಮನಗಂಡೇ ಇಂದಿನ ಹಿಂದೂ ಯುವಜನತೆ ಕೆರಳಿದೆ.
ಆದರೆ, ಯಾರೇ ಆಗಲಿ ಕೆರಳಿ ಘರ್ಷಣೆ ಮತ್ತು ಹಿಂಸಾಚಾರಕ್ಕಿಳಿಯುವುದು ದೇಶಕ್ಕೆ ಒಳ್ಳೆಯದಲ್ಲ. ಜನತೆ ಕೆರಳದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ, ನಮ್ಮ ಸರ್ಕಾರಗಳು ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಕೈಬಿಡಬೇಕು. ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸಬಾರದು. ಧರ್ಮದೊಳಗಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರಿಗೆ, ಮೀಸಲಾತಿ, ಚಿಲ್ಲರೆ ಯೋಜನೆಗಳು ಮತ್ತು ಹಣ ಇವುಗಳ ಆಮಿಷ ತೋರುವ ಬದಲು ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡಬೇಕು. ದೇಶದ ಮುಖ್ಯವಾಹಿನಿಯಲ್ಲಿ ಅವರನ್ನು ಸೇರಿಸಿಕೊಳ್ಳಬೇಕು, ಅವರು ಸೇರಬೇಕು. ಅಂದಾಗ ಮಾತ್ರ ಧಾರ್ಮಿಕ ಮತ್ತು ಸಾಮಾಜಿಕ ಶಾಂತಿ ನೆಲಸಲು ಸಾಧ್ಯ. ಆದರೆ, ವೋಟೆಂಬ ಸ್ವಾರ್ಥ ಮತ್ತು ಆ ಕ್ಷಣದ ಲಾಭವನ್ನಷ್ಟೇ ಗುರಿಯಾಗಿಟ್ಟುಕೊಂಡು ಸಾಗುವ ನಮ್ಮ ರಾಜಕೀಯ ಪಕ್ಷಗಳಿಂದ ಇಂಥ ಆದರ್ಶದ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ?
***
ಇವು, ನನ್ನ ಕೆಲ ಪ್ರಕಟಿತ ಲೇಖನಗಳ ಆಯ್ದ ಭಾಗಗಳು. ಸುನೀತದಲ್ಲಿ ನಾನು ಮುಸ್ಲಿಮರ ವಿರುದ್ಧವಾಗಿ ಏನೂ ಬರೆದಿಲ್ಲ. ಅವರ ಬಗ್ಗೆ ಕುಹಕವಾಡಿಲ್ಲ. ದಶಕಗಳಿಂದ ನಾನು ಮಸ್ಲಿಮರೊಡನೆ ಸಂಪರ್ಕ ಇಟ್ಟುಕೊಂಡಿದ್ದು ಅವರಿಗೆ ಅನೇಕ ನೆರವುಗಳನ್ನು ನೀಡಿದ್ದೇನೆ. ಸುನೀತದಲ್ಲಿ ನಾನು ಸರ್ಕಾರಗಳ ವೋಟು ರಾಜಕಾರಣವನ್ನು ಚಿತ್ರಿಸಿ, ಕೆಲವು ಮಾಧ್ಯಮಸಂಸ್ಥೆಗಳ ಪೂರ್ವಗ್ರಹದ ಬಗ್ಗೆ/ ಗುಪ್ತ ಕಾರ್ಯಸೂಚಿಯ ಬಗ್ಗೆ ಓದುಗರ ಗಮನ ಸೆಳೆದು, ಅಂಥ ಸರ್ಕಾರ ಮತ್ತು ಮಾಧ್ಯಮ ಸಂಸ್ಥೆಗಳಿಂದ ದೇಶದ ಜಾತ್ಯತೀತ ಭೂಮಿಕೆಗೆ ಉಂಟಾಗಬಹುದಾದ ಧಕ್ಕೆಯ ಬಗ್ಗೆ ಸೂಚ್ಯವಾಗಿ ತಿಳಿಸಿದ್ದೇನೆ ಅಷ್ಟೆ. ನಾನೇನೂ ಹೊಸ ಸಂಶೋಧನೆ ಮಾಡಿಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿಯನ್ನೇ ಬರೆದಿದ್ದೇನೆ. ಆದ್ದರಿಂದ ಸುನೀತವು ದ್ವೇಷವನ್ನು ಹೆಚ್ಚಿಸುತ್ತದೆಂಬ ಭಯ ಅನವಶ್ಯ. ವೋಟು ರಾಜಕಾರಣದ ವಿಷಯವು ಜ್ವಲಂತವಾದುದಾಗಿರುವುದರಿಂದ ಸುನೀತದ ವಿಷಯವನ್ನು ಹಳಸಲು ಎಂದು ಹೀಗಳೆಯುವುದೂ ತರವಲ್ಲ. ಕಾಲಕಾಲಕ್ಕೆ ನಮ್ಮಲ್ಲಿ ಅರಿವು ಜಾಗೃತವಾಗಬೇಕಾಗಿದೆ. ಇಷ್ಟಕ್ಕೂ ಸತ್ಯ ಹೇಳಲು ನಾನೇಕೆ ಹಿಂಜರಿಯಬೇಕು?