ನಾಲ್ಕನೇ ಶತಮಾನದ ದೇವಸ್ಥಾನ ಪತ್ತೆ

ನಾಲ್ಕನೇ ಶತಮಾನದ ದೇವಸ್ಥಾನ ಪತ್ತೆ

ಬರಹ

ಮಹತ್ವದ ಐತಿಹಾಸಿಕ ಸಂಶೋಧನೆಯೊಂದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಡಾ. ಆರ್.ಎಂ. ಷಡಾಕ್ಷರಯ್ಯ ಅವರು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಹೊರಗೆ ನಡೆಸಿದ ಉತ್ಖನನದಲ್ಲಿ ಪೂರ್ವ ಕದಂಬ ಕಾಲದ ದೇವಸ್ಥಾನದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಇದು ನಡೆದಿದ್ದು ಸುಮಾರು ಮೂರು ವರ್ಷಗಳ ಹಿಂದೆ.


ಸುಮಾರು ಕ್ರಿ.ಶ. ೪ನೇ ಶತಮಾನದಲ್ಲಿ ನಿರ್ಮಿಸಿದ್ದೆಂದು ಹೇಳಲಾದ ಈ ದೇವಸ್ಥಾನದ ಆವರಣದಲ್ಲಿ ದೊರೆತ ಪಳೆಯುಳಿಕೆಗಳು ಹೊಸ ಶಿಲಾಯುಗದ ತಾಣವೊಂದು ಹತ್ತಿರದಲ್ಲೆಲ್ಲೋ ಇರುವ ಸೂಚನೆ ನೀಡಿವೆ. ಇದರಿಂದಾಗಿ ಪೂರ್ವೇತಿಹಾಸ ಮತ್ತು ಇತಿಹಾಸ ಕಾಲದ ನಡುವಿನ ಕೊಂಡಿ ದೊರೆತಂತಾಗಿದ್ದು, ಇತಿಹಾಸತಜ್ಞರ ಕುತೂಹಲ ಗರಿಗೆದರಿದೆ.

ದೊಡ್ಡ ದೇವಸ್ಥಾನ

ಮರಾಠಿ ಭಾಷಿಕರ ಪ್ರಭಾವ ನಿಚ್ಚಳವಾಗಿರುವ ಹಲಸಿ ಗ್ರಾಮದಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ‘ಬೋಡ್ಕೆ ಟಂಭೆ’ ಎಂಬ ಹೆಸರಿದೆ. ಪ್ರಾರಂಭದ ತಿಂಗಳುಗಳಲ್ಲಿ, ನಡೆಸಲಾದ ಕೆಲ ಉತ್ಖನನ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡತೊಡಗಿದವು. ಉತ್ಖನನ ಒಂದು ಹಂತಕ್ಕೆ ಬಂದಾಗ, ದೇವಸ್ಥಾನದ ರೂಪುರೇಷೆ ಸ್ಪಷ್ಟವಾದವು ಎನ್ನುತ್ತಾರೆ ಡಾ. ಷಡಾಕ್ಷರಯ್ಯ.

ಸುಟ್ಟ ಇಟ್ಟಿಗೆ, ಮಣ್ಣು ಮತ್ತು ಗಾರೆಯಿಂದ ನಿರ್ಮಿಸಲಾಗಿರುವ ದೇವಸ್ಥಾನ ಒಟ್ಟು ೧೦೦ ಹೆಕ್ಟೇರ್ ಹರಡಿಕೊಂಡಿರುವ ಅವಶೇಷಗಳ ಒಂದು ಮೂಲೆಗಿದೆ. ದೇವಸ್ಥಾನದ ಮುಖ್ಯ ಭಾಗದ (ಹೊರಗೋಡೆಯ ನಡುವಿನ) ಅಗಲ ೩.೯೦ ಮೀಟರ್ ಹಾಗೂ ಉದ್ದ ೨೫ ಮೀಟರ್‌ಗಳು. ಭೂಮಿಯ ಮೇಲ್ಪದರದ ೧೦ ಸೆಂ.ಮೀ. ಕೆಳಗಿನಿಂದ ಗೋಡೆಯ ಬುನಾದಿ ಪ್ರಾರಂಭವಾಗುತ್ತದೆ. ಮುಖ್ಯ ಭಾಗದ ಸುತ್ತ ಪ್ರದಕ್ಷಿಣಾ ಪಥವಿದ್ದು, ನಂತರ ೧ ಮೀಟರ್ ದಪ್ಪ ಇರುವ ರಕ್ಷಣಾ ಗೋಡೆ ಪ್ರಾರಂಭವಾಗುತ್ತದೆ. ದೇವಸ್ಥಾನ ಸಾಕಷ್ಟು ಭದ್ರತೆ ಹೊಂದಿತ್ತು ಎಂಬುದು ಇದರಿಂದ ಸ್ಪಷ್ಟ.

ದೊಡ್ಡ ಅಗ್ನಿಕುಂಡ

ಗರ್ಭಗುಡಿಯ ಮುಂಭಾಗದಲ್ಲಿ, ಕೊಂಚ ಅಂತರದಲ್ಲಿ ಕಂಡು ಬಂದಿದೆ. ಅಗ್ನಿಕುಂಡ ೨ ಮೀ. ಉದ್ದ, ೧ ಮೀ. ಅಗಲ ಹಾಗೂ ಅರ್ಧ ಮೀಟರ್‌ ಆಳವಾಗಿದ್ದು ಇಟ್ಟಿಗೆಯಿಂದ ನಿರ್ಮಾಣವಾಗಿದೆ. ಸಾಕಷ್ಟು ಪ್ರಮಾಣದ ಬೂದಿ ಇಲ್ಲಿ ಪತ್ತೆಯಾಗಿದೆ. ದೇವಸ್ಥಾನದ ಗೋಡೆಗಳು ೧ ಮೀಟರ್ ದಪ್ಪವಾಗಿದ್ದು, ಇಟ್ಟಿಗೆ ನಿರ್ಮಿತ ಆಯತಾಕಾರದ ಆಧಾರಸ್ಥಂಭಗಳ ಅವಶೇಷಗಳನ್ನು ಹೊಂದಿದೆ. ಆದರೆ ಇಲ್ಲಿ ಯಾವ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ರಕ್ಷಣಾಗೋಡೆಯ ಹೊರಭಾಗದಲ್ಲಿ ಕೈಯಿಂದ ಮಾಡಿದ ಹೆಂಚಿನ ಚೂರುಗಳು ಹಾಗೂ ಇಟ್ಟಿಗೆ ತುಂಡುಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿವೆ. ಸಾಕಷ್ಟು ಎತ್ತರವಾಗಿದ್ದ ದೇವಸ್ಥಾನ ಶಿಥಿಲಗೊಂಡು ಬಿದ್ದಾಗಿನ ಅವಶೇಷಗಳಿವು ಎಂಬುದು ತಜ್ಞರ ಅಭಿಪ್ರಾಯ. ದೇವಸ್ಥಾನದ ಮೇಲ್ಭಾಗದಲ್ಲಿ ಕಟ್ಟಿಗೆ ತೊಲೆಗಳ ಆಧಾರ ನೀಡಿ ಹೆಂಚುಗಳನ್ನು ಹೊದಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟ. ಇದಕ್ಕೆ ಪೂರಕವಾಗಿ, ಕಟ್ಟಿಗೆಗೆ ಹೊಡೆದಿರಬಹುದಾದ ಕಬ್ಬಿಣದ ದಪ್ಪ ಮೊಳೆಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆತಿವೆ.

ಪೂರ್ವೇತಿಹಾಸ

ಹೆಂಚಿನ ಚೂರುಗಳು, ಸಮಾಕಾರದ ಇಟ್ಟಿಗೆಗಳು, ದಪ್ಪ ಕಬ್ಬಿಣದ ಮೊಳೆಗಳು, ಸಾಧಾರಣ ಮೌಲ್ಯದ ಹರಳುಗಳು, ರಂಧ್ರ ಇರುವ ಮಣಿಗಳು ಕಟ್ಟಡ ನಿರ್ಮಾಣವಾಗಿರಬಹುದಾದ ವಿಧಾನವನ್ನು ಸ್ಪಷ್ಟಪಡಿಸುತ್ತವೆ. ಗರ್ಭಗುಡಿಯಲ್ಲಿ ಚೆನ್ನಾಗಿ ಅಗೆತ ಮಾಡಲಾಗಿದೆಯಾದರೂ ಬೆಲೆ ಬಾಳುವ ಯಾವ ವಸ್ತುವೂ ದೊರೆತಿಲ್ಲ. ಹೀಗಾಗಿ, ಯಾವ ದೇವತೆಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 
ಆದರೆ, ದೇವಸ್ಥಾನದ ಮಾದರಿ ಹಾಗೂ ದೊರೆತ ವಸ್ತುಗಳನ್ನು ನೋಡಿದರೆ ಇದು ಇತಿಹಾಸ ಪೂರ್ವದ ಹಾಗೂ ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪದ ಮಾದರಿಗಳನ್ನು ಹೋಲುತ್ತದೆ ಎನ್ನುತ್ತಾರೆ ತಜ್ಞರು. ಮಥುರಾ, ಬನವಾಸಿ ದೇವಳಗಳ ಮಾದರಿ ಒಂದೆಡೆಯಾದರೆ, ಹಳೆ ಮಹಾಕೂಟದ ಶಿವ ದೇವಳ ಹಾಗೂ ಐಹೊಳೆಯ ದುರ್ಗಾ ದೇವಾಲಯಗಳ ಮಾದರಿಗಳನ್ನೂ ಹಲಸಿ ದೇವಸ್ಥಾನ ಹೋಲುತ್ತದೆ.

ಸ್ಥಳದಲ್ಲಿ ದೊರೆತ ಕೆಲವು ಮಣಿಗಳು ಶಾತವಾಹನಪೂರ್ವ ಕಾಲದವು. ಆದರೆ, ಪೂರ್ವ ಕದಂಬ ಕಾಲದ ವಸ್ತುಗಳೂ ಹೇರಳವಾಗಿ ಸಿಕ್ಕಿವೆ. ಇಲ್ಲಿ ದೊರೆತಿರುವ ಮಡಿಕೆ ಚೂರುಗಳು ೪ರಿಂದ ೬ನೇ ಶತಮಾನದವು. ಇದರಿಂದಾಗಿ ಹಲಸಿ ದೇವಸ್ಥಾನ ಶಾತವಾಹನ ಹಾಗೂ ಬಾದಾಮಿ ಚಾಲುಕ್ಯರ ನಡುವಿನ ಅವಧಿಯಲ್ಲಿ ನಿರ್ಮಿತವಾದುದು ಎಂದು ಹೇಳಬಹುದು.

ಎಲ್ಲಕ್ಕಿಂತ ಮುಖ್ಯ, ಇಲ್ಲಿ ದೊರೆತಿರುವ ಚೂಪುಗಲ್ಲಿನ ಕೆಲ ರಚನೆಗಳು ಹೊಸ ಶಿಲಾಯುಗದ ವಾಸಸ್ಥಳ ಹತ್ತಿರದಲ್ಲೆಲ್ಲೋ ಇರಬಹುದು ಎಂಬುದರ ಸೂಚನೆ ನೀಡುತ್ತವೆ. ಈ ಪ್ರದೇಶದಲ್ಲಿ ಕಬ್ಬಿಣ ಯುಗದ ನಾಗರೀಕತೆ ಇತ್ತು ಎಂದು ಖ್ಯಾತ ಇತಿಹಾಸತಜ್ಞ ಡಾ. ಅ. ಸುಂದರ ಹೇಳಿದ್ದು, ಅದೇನಾದರೂ ಪತ್ತೆಯಾದರೆ, ಶಿಲಾಯುಗದಿಂದ ಹಿಡಿದು ಇತಿಹಾಸ ಕಾಲದವರೆಗಿನ ಎಲ್ಲ ನಾಗರಿಕತೆಗಳು ಉತ್ತರ ಕರ್ನಾಟಕದಲ್ಲಿ ದೊರೆತಂತಾಗುತ್ತದೆ. ಜತೆಗೆ ಉತ್ತರ ಭಾರತದ ಕುಶಾಣ-ಗುಪ್ತರ ಕಾಲಕ್ಕೂ ಹಿಂದಿನ ಐತಿಹಾಸಿಕ ದಾಖಲೆಗಳನ್ನು ಕರ್ನಾಟಕ ಹೊಂದಿದಂತಾಗುತ್ತದೆ.

ಕುದುರಿದ ಆಸಕ್ತಿ

ಹಲಸಿ ತಾಣ ಈಗಾಗಲೇ ಇತಿಹಾಸತಜ್ಞರ ಭೇಟಿಯ ಸ್ಥಳವಾಗಿ ಮಾರ್ಪಟ್ಟಿದೆ. ಡಾ. ಷಡಾಕ್ಷರಯ್ಯನವರ ಸಂಶೋಧನೆಗೆ ಮೈಸೂರಿನ ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಡಾ. ಆರ್. ಗೋಪಾಲ, ಕವಿವಿಯ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನ ವಿಭಾಗದ ಅಧ್ಯಕ್ಷ ಡಾ. ಎಸ್.ವಿ. ಪಾಡಿಗಾರ, ಹಂಪಿ ವಿವಿಯ ಖ್ಯಾತ ಇತಿಹಾಸತಜ್ಞ ಡಾ. ಅ. ಸುಂದರ ಮುಂತಾದವರೆಲ್ಲ ಭೇಟಿ ನೀಡಿ ಶ್ಲಾಘಿಸಿದ್ದಾರೆ. ಹಣಕಾಸು ನೆರವು ಹೆಚ್ಚೆಚ್ಚು ದೊರೆತಂತೆ, ಉತ್ಖನನ ವಿಸ್ತೃತವಾಗಿ ನಡೆಯಲಿದೆ. ಆಗ, ಇನ್ನಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.

ಒಂದು ವೇಳೆ ನೀವು ಹಲಸಿಗೆ ಹೋಗುವುದಾದರೆ, ದಾರಿಯಲ್ಲಿ ಸಿಗುವ ಮರವೊಂದನ್ನು ಗಮನಿಸಬೇಕು. ಈ ಕುರಿತು ಸ್ಥಳೀಯರೂ ಮಾಹಿತಿ ನೀಡುತ್ತಾರೆ. ಕಿತ್ತೂರು ಚೆನ್ನಮ್ನನ ಬೆಂಗಾವಲಿಕ ವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಸಾರ್ವಜನಿಕವಾಗಿ ನೇಣು ಹಾಕಿದ್ದು ಇದೇ ಮರದಲ್ಲಿ.

ದುರಂತವೆಂದರೆ, ಅದನ್ನೊಂದು ಇತಿಹಾಸ ಸ್ಮಾರಕವಾಗಿ ಅಭಿವೃದ್ಧಿಪಡಿಸಿಲ್ಲ. ಆ ಕುರಿತ ಆಸಕ್ತಿಯೂ ಕಂಡುಬರುತ್ತಿಲ್ಲ. ಹಲಸಿ ಕ್ಷೇತ್ರದ ಅಧ್ಯಯನಕ್ಕಷ್ಟೇ ಹಣ ಬಿಡುಗಡೆಯಾಗುತ್ತಿದೆಯೇ ಹೊರತು, ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ಮರ ಮತ್ತು ಪ್ರದೇಶದ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ.

- ಚಾಮರಾಜ ಸವಡಿ
(ಚಿತ್ರಗಳು: ಬಿ.ಎಂ. ಕೇದಾರನಾಥ)