’ಡಿಎನ್‌ಎ’ ಟಾಪ್ ೫೦

’ಡಿಎನ್‌ಎ’ ಟಾಪ್ ೫೦

ಬರಹ

  ಒಂದು ವರ್ಷದ ಕೆಳಗಷ್ಟೇ ಬೆಂಗಳೂರಿಗೆ ಕಾಲಿರಿಸಿ ಸಾಕಷ್ಟು ಓದುಗರನ್ನು ಗಳಿಸಿಕೊಂಡಿರುವ ’ಡಿಎನ್‌ಎ’ ಆಂಗ್ಲ ದಿನಪತ್ರಿಕೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ’ಟಾಪ್ ೫೦ ಪ್ರಭಾವಿ ವ್ಯಕ್ತಿಗಳು’ ಎಂದು ಐವತ್ತು ಮಂದಿಯನ್ನು ಆಯ್ಕೆಮಾಡಿ ಅವರ ಬಗ್ಗೆ ಹನ್ನೆರಡು ಪುಟಗಳ ಆಕರ್ಷಕ ವಿಶೇಷ ಪುರವಣಿ ಹೊರಡಿಸಿದೆ.


  ಸ್ವಂತ ಚಟುವಟಿಕೆಯ ಒಳಗೆ, ಹೊರಗೆ ಮತ್ತು ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಭಾವ, ಹೊಸತನ ತರುವ ಸಾಮರ್ಥ್ಯ ಹಾಗೂ ನಾಯಕತ್ವ ಗುಣ ಇವುಗಳನ್ನು ಪರಿಗಣಿಸಿ ಪ್ರಭಾವಿ ವ್ಯಕ್ತಿಗಳ ಆಯ್ಕೆಮಾಡಲಾಗಿದೆಯೆಂದು ಪತ್ರಿಕೆಯು ಹೇಳಿಕೊಂಡಿದೆ. ಆದರೆ, ಕೆಲವು ಹೆಸರುಗಳನ್ನು ನೋಡಿದಾಗ ಆಯ್ಕೆಗಾರರ ಜ್ಞಾನದ ಬಗ್ಗೆಯೇ ಅನುಮಾನ ಉಂಟಾಗುತ್ತದೆ.


  ’ಸ್ಟೈಲ್ ಗುರು’ ಪ್ರಸಾದ್ ಬಿಡ್ಡಪ್ಪ, ಫ್ಯಾಷನ್ ಡಿಸೈನರ್ ಸಂಚಿತಾ ಅಜ್ಜಂಪುರ್, ರೆಸ್ಟಾರೆಂಟ್ ಮಾಲೀಕ ಪ್ರೇಮ್ ಕೋಶಿ, ಪುಡಿ ರಾಜಕಾರಣಿ ರಾಜೀವ ಗೌಡ ಇವರೆಲ್ಲ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಪ್ರಭಾವಶಾಲಿಗಳು ಮತ್ತು ಇವರಲ್ಲಿ ಯಾವ ನಾಯಕತ್ವ ಗುಣ ಇದೆ ಎಂಬುದನ್ನು ’ಡಿಎನ್‌ಎ’ ಆಯ್ಕೆಮಂಡಳಿಯೇ ವಿವರಿಸಬೇಕು.


  ಯು.ಆರ್.ಅನಂತಮೂರ್ತಿಯವರನ್ನು ಆಯ್ಕೆಮಾಡಿರುವುದು ಸೂಕ್ತವೇ ಆದರೂ, ’ಅನಂತಮೂರ್ತಿಯವರು ಕನ್ನಡದ ಏಳಿಗೆಗಾಗಿ ಬೆಂಗಳೂರಿನ ಬೇರೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ’, ಎಂದು ಪತ್ರಿಕೆಯು ಹೇಳಿರುವುದು ಉತ್ಪ್ರೇಕ್ಷೆಯೇ ಸರಿ.


  ಮನ್ನಾಡೇ ಗಾಯನದ ಪ್ರಭಾವ ಪತ್ರಿಕೆಯ ಪರಿಗಣನೆಗೆ ಬರಲಿಲ್ಲ. ಪ್ರೊಫೆಸರ್ ಸಿ.ಎನ್.ಆರ್.ರಾವ್ ಅವರ ಹೆಸರನ್ನು ಕೈಬಿಟ್ಟದ್ದಂತೂ ಅಕ್ಷಮ್ಯ ಲೋಪ.


  ಇದು ಕೇವಲ ಪತ್ರಿಕೆಯೊಂದರ ಆಯ್ಕೆ ತಾನೆ ಎಂದು ನಾವು ಉಪೇಕ್ಷಿಸಬಹುದು. ಆದರೆ, ಪತ್ರಿಕೆಗಳು ಜನರಮೇಲೆ ಪ್ರಭಾವ ಬೀರುವ ಮತ್ತು ಜನಾಭಿಪ್ರಾಯ ರೂಪಿಸುವ ಪ್ರಬಲ ಮಾಧ್ಯಮ ಎಂಬುದನ್ನು ನಾವು ಮರೆಯಬಾರದು. ಎಂದೇ ಈ ಕಿರುಬರಹ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet