ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?
ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.
ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.
ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.
ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್ ಸಿನಿಮಾ ಥೇಟರ್‌ನ ಗೇಟ್‌ಕೀಪರ್ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್‌ಕೀಪರ್‌ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.
ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.
ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್‌ಫೋರ್ಸ್ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್‌ಮನ್ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.
ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.
ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.
ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.
ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.
ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.
- ಚಾಮರಾಜ ಸವಡಿ
Comments
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by manju787
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by asuhegde
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by thej
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಕುಳ್ಳನೆಂಬ ಸಮಸ್ಯೆ
In reply to ಕುಳ್ಳನೆಂಬ ಸಮಸ್ಯೆ by sinchana
ಉ: ಕುಳ್ಳನೆಂಬ ಸಮಸ್ಯೆ
In reply to ಉ: ಕುಳ್ಳನೆಂಬ ಸಮಸ್ಯೆ by Chamaraj
ಉ: ಕುಳ್ಳನೆಂಬ ಸಮಸ್ಯೆ
In reply to ಉ: ಕುಳ್ಳನೆಂಬ ಸಮಸ್ಯೆ by sinchana
ಉ: ಕುಳ್ಳನೆಂಬ ಸಮಸ್ಯೆ
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by ನೇತ್ರಾ
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by ನೇತ್ರಾ
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by hariharapurasridhar
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by palachandra
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by sujata
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by mahalakshmihar…
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by rasikathe
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
In reply to ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು by mahalakshmihar…
ಉ: ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು