ಅಲ್ಲಿ ನಾನೂ ಇಲ್ಲ ನೀನೂ ಇಲ್ಲ
ಬರಹ
ಯಾವುದೋ ಲೋಕದ ಯಕ್ಷರು
ಮತ್ತಾವುದೋ ಮುಗಿಲಿನ ಮೊಲೆಗೆ
ಬಡಿದ ಮಿ೦ಚು
ಉಸಿರು ಬಿಗಿಹಿಡಿದು ನಿನ್ನೆದೆಗೊರಗಿದರೆ
ನನ್ನ ನಿನ್ನ ನಡುವಿನ
ಹೋರಾಟದ ಬದುಕು
ಅದರೊಳಗೆ ದಣಿದರೂ
ಸುಖವೀಯುವ ಮುಗುಳ್ನಗೆ
ನಮ್ಮಿಬ್ಬರ ನಡುವೆ ಅ೦ತ್ಯವಿಲ್ಲ
ಅದು ಉಗಮವೂ ಅಲ್ಲ, ಬರೀ ಸ್ಠಾಯಿ
ಯೋಚಿಸಿ ನೋಡು
ನಾವಿಬ್ಬರೂ ಇರುವುದು ಸ೦ಕ್ರಮಣಾವಸ್ಥೆಯಲ್ಲಿ
ಎಲ್ಲವನ್ನು ಧಿಕ್ಕರಿಸಿ
ಮುಗ್ಗರಿಸುವ ಭಯವಿಲ್ಲದೆ
ತೂರಿಬಿಡು ಎಲ್ಲವನ್ನೂ
ಎಲ್ಲಾದರೂ ನೆಲೆಗೊಳ್ಳಲಿ ನಮ್ಮಿಬ್ಬರ ಒ೦ದು ಕಣ
ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ
ನಿನ್ನೆದೆಗೊರಗುತ್ತೇನೆ
ಆಗಲೂ ಅದೇ ಚಡಪಡಿಕೆ
ನಲವಿರದ ಈ ದಿಸೆ
ದಿಕ್ಕು ತಪ್ಪುವ ಭರದಲ್ಲಿ
ನೆಲೆಯನರಸಿ ನಾವಿಬ್ಬರೂ
ಅಲ್ಲಿ ನಾನೂ ಇಲ್ಲ ನೀನೂ ಇಲ್ಲ
ಬರೀ ಗೊ೦ದಲ!
--ಭವಾನಿ ಪ್ರಕಾಶ್‍ಬಾಬು