ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ..  ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ  ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ ಸೋತಿದ್ದೇನೆ.  ಹುಲು ಮಾನವನಾಗಿ ಅಸಹಾಯಕನಾಗಿ ಆ ನಿರ್ದಯಿ ಸಾವಿನ ಮುಂದೆ ನಿಂತಿದ್ದೇನೆ, ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ, ಆ ನಿರ್ದಯಿ ಸಾವಿನ ಗೆಲುವನ್ನು ಕಂಡಿದ್ದೇನೆ, ನನ್ನ ಬಗ್ಗೆ ನಾನೇ ಅಸಹ್ಯ ಪಟ್ಟುಕೊಂಡಿದ್ದೇನೆ.  ಅದರ ಕೆಲವೊಂದು ಝಲಕುಗಳನ್ನು ನಿಮ್ಮ ಮುಂದಿಡುತ್ತೇನೆ.

ಸಾವು ೧: ಅಂದು, ೧೯೮೭ನೆಯ ಇಸವಿಯ ಒಂದು ಭಾನುವಾರ, ತಿಪಟೂರಿನ ಕಲ್ಪತರು ಕಾಲೇಜಿನ ಮುಂಭಾಗದ, ಬಿ.ಹೆಚ್.ರಸ್ತೆಯ ಪಕ್ಕದಲ್ಲಿನ ದೊಡ್ಡ ಮೈದಾನದಲ್ಲಿ, ಗಂಜಿ ಹಾಕಿ ನೀಟಾಗಿ ಇಸ್ತ್ರಿ ಮಾಡಿದ್ದ ಖಾಕಿ ಸಮವಸ್ತ್ರ ತೊಟ್ಟು ನಮ್ಮ ಕಾಲೇಜಿನ ಎನ್.ಸಿ;ಸಿ.ತಂಡದ ಮುಖಂಡನಾಗಿ, ೧೬೦ ಜನರ ಸಾಲಿನ ಮುಂದೆ ನಿಂತು ಭಾರತೀಯ ಸೈನ್ಯದ ಮೇಜರ್ ರವೀಂದ್ರ ಪಿಳ್ಳೆ ಕೊಡುತ್ತಿದ್ದ ನಿರ್ದೇಶನಗಳ ಅನುಸಾರವಾಗಿ ಕವಾಯತು ಮಾಡುತ್ತಿದ್ದೆವು.  ಸ್ಟೆಲ್ಲಾ ಮೇರಿ ಕಾನ್ವೆಂಟಿನ ಪಕ್ಕದಲ್ಲೇ ಇದ್ದ ಪ್ರಾಟಿಸ್ಟ್ಂಟ್ ಚರ್ಚಿನಲ್ಲಿ ಭಾನುವಾರದ ಪ್ರಾರ್ಥನೆಗೆಂದು ಹೋಗಿದ್ದ "ನನ್ನ ಪ್ರೀತಿಯ ಹುಡುಗಿ" ತನ್ನ ಬೈಸಿಕಲ್ನಲ್ಲಿ ಹಿಂತಿರುಗಿ ಬರುವುದನ್ನೇ ಕಾಯುತ್ತಿದ್ದ ನನ್ನ ಕಣ್ಗಳು ಆ ನೀಳ ಬಿ.ಹೆಚ್.ರಸ್ತೆಯ ಮೇಲೇ ನೆಟ್ಟಿದ್ದವು.  ಅವಳು ಆ ಕಡೆಯಿಂದ ಬರುವ ಹೊತ್ತಿಗೆ ಸರಿಯಾಗಿ ನನ್ನ ಜೊತೆಯಲ್ಲೇ ಪ್ರೌಢಶಾಲೆಯಿಂದ ಪ್ರಥಮ ಪದವಿಯವರೆಗೂ ಓದುತ್ತಿದ್ದ ಹರೇಕೃಷ್ಣ ತನ್ನ ಹೊಸ ಬಜಾಜ್ ಸ್ಕೂಟರಿನಲ್ಲಿ ಆ ಕಡೆಯಿಂದ ವೇಗವಾಗಿ ಬಂದು  ಶಿವಮೊಗ್ಗೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಟಾಟಾ ಬಸ್ಸಿಗೆ ಧಡಾರಂತ ಢಿಕ್ಕಿ ಹೊಡೆದು ಅಂಗಾತ ಬಿದ್ದು ಬಿಟ್ಟಿದ್ದ.  ತಕ್ಷಣ ನಮ್ಮ ಕವಾಯತನ್ನು ಬಿಟ್ಟು ಓಡಿದ ನಾವುಗಳು ಅವನನ್ನು ಒಮ್ಮೆಗೇ ಎತ್ತಿಕೊಂಡು, ಹತ್ತಿರದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ಓಡಿದೆವು.  ಅಲ್ಲಿ ವೈದ್ಯರು ಅವನನ್ನು ಪರೀಕ್ಷಿಸಿ, ತಕ್ಕ ಔಷಧಗಳನ್ನು ನೀಡುವ ಮುಂಚೆಯೇ ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ಬಿಗಿಯಾಗಿ ನನ್ನ ಕೈಗಳನ್ನು ಹಿಡಿದಿದ್ದ ಅವನ ಕೈಗಳಲ್ಲಿನ್ನೂ ಬಿಸಿಯಿತ್ತು, ಆದರೆ ಕಣ್ಗಳು ಮುಚ್ಚಿದ್ದವು, ಹೃದಯ ನಿಂತು ಹೋಗಿತ್ತು.  ಇದು ನನ್ನ ಜೀವನದಲ್ಲಿ ನಾ ಕಂಡ ಮೊದಲ ಸಾವು,  ಈಗಲೂ ಒಮ್ಮೊಮ್ಮೆ ಆ ಪ್ರಸಂಗ ನೆನಪಾಗುತ್ತದೆ, ತುಂಬಾ ಸಾಧು ಸ್ವಭಾವದ ಅವನ ಆ ದುರಂತ ಸಾವು ಕಾಡುತ್ತದೆ.

ಸಾವು ೨:  ಇದು ೧೯೮೮ರಲ್ಲಿ ನಡೆದ ಪ್ರಸಂಗ.  ನನ್ನ ಮತ್ತೊಬ್ಬ ಸ್ನೇಹಿತ ಕೃಷ್ಣಮೂರ್ತಿ, ಪದವಿ ಮುಗಿಸಿ, ಯಾವುದೇ ಕೆಲಸ ಸಿಗದೆ, ಚಿಕ್ಕದೊಂದು ಅಂಗಡಿ ಇಟ್ಟುಕೊಂಡಿದ್ದ, ಅನ್ಯ ಜಾತಿಯ ಹುಡುಗಿಯನ್ನು ಪ್ರೇಮಿಸಿ, ಮನೆಯಲ್ಲಿ ವರದಕ್ಷಿಣೆಗಾಗಿ ಹಾತೊರೆಯುತ್ತಿದ್ದ ಅವರಮ್ಮ ಅಪ್ಪ ಒಪ್ಪದಿದ್ದಾಗ "ಮೆಟಾಸಿಡ್" ಒಂದು ಪೂರ್ತಿ ಬಾಟಲನ್ನೇ ಕುಡಿದು ಬಿಟ್ಟಿದ್ದ.  ಮೂರು ದಿನ ಸಾವು ಬದುಕಿನ ಮಧ್ಯೆ ಒದ್ದಾಡಿ ಕೊನೆಗೆ ಯಾವುದೇ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದ.  ಅಂದು, ಅವನ ಸಾವಿನ ದಿನ, ಅವನು ಮೇಲುಸಿರೆಳೆಯುತ್ತಿದ್ದಾಗ, ಆಗ ಅಲ್ಲಿನ ವೈದ್ಯಾಧಿಕಾರಿಗಳಾಗಿದ್ದ ಶರಭಲಿಂಗಸ್ವಾಮಿಯವರು ಮನೆಯಲ್ಲಿರಲಿಲ್ಲ.  ಹುಡುಕಿಕೊಂಡು ಹೋದ ನನಗೆ ಅವರು ಸಿಕ್ಕಿದ್ದು, ಪ್ರವಾಸಿ ಮಂದಿರದ ಮುಂದಿದ್ದ ಕಾಸ್ಮೊಪಾಲಿಟನ್ ಕ್ಲಬ್ಬಿನಲ್ಲಿ, ನಾನು ಬನ್ನಿ ಸಾರ್, ಸಾಯುತ್ತಿರುವ ನನ್ನ ಸ್ನೇಹಿತನನ್ನು ಒಮ್ಮೆ ನೋಡಿ, ಅವನನ್ನು ಉಳಿಸಿ ಕೊಡಿ ಎಂದಾಗ ನಿರ್ಭಾವುಕರಾಗಿ ಅವರು " ಅವನ ಹೊಟ್ಟೆಯೊಳಗಿನ ಸಕಲ ಅಂಗಗಳೂ ಸುಟ್ಟು ಹೋಗಿವೆ, ಅವನು ಉಳಿಯುವುದಿಲ್ಲ ಕಣಯ್ಯಾ" ಅಂದಾಗ ನಖಶಿಖಾಂತ ಉರಿದು ಹೋಗಿ ಬಹುತೇಕ ಅವರನ್ನು ಆ ಕ್ಲಬ್ಬಿನಿಂದ ಆಚೆಗೆ ಎಲ್ಲರೆದುರಿಗೆ ಎಳೆದುಕೊಂಡೇ ಬಂದು ಬಿಟ್ಟಿದ್ದೆ.  ನನ್ನ ಉಗ್ರರೂಪಕ್ಕೆ ಸೋತು ಬಂದ ಅವರು ಏನೆಲ್ಲಾ ಚಿಕಿತ್ಸೆ ಮಾಡಿದರೂ ಆ ನನ್ನ ಗೆಳೆಯ ಉಳಿಯಲಿಲ್ಲ, ಅವನು ಸಾಯುವ ಮುನ್ನ ನನ್ನ ಕೈ ಹಿಡಿದು "ಮಂಜು, ನಾನು ತಪ್ಪು ಮಾಡ್ಬಿಟ್ಟೆ ಕಣೋ, ನಾನು ಬದುಕಬೇಕು, ಹೇಗಾದ್ರೂ ಮಾಡಿ ನನ್ನನ್ನು ಉಳಿಸಿಕೊಳ್ಳೋ" ಅಂತ ಹೇಳುತ್ತಲೇ ಪ್ರಾಣ ತ್ಯಾಗ ಮಾಡಿದ್ದ.  ಹಿಡಿದ ಕೈಗಳು, ತೆರೆದ ಕಂಗಳು ಹಾಗಯೇ ಇದ್ದವು, ಚೈತನ್ಯವಿರಲಿಲ್ಲ.  ಅವನು ಈಗಲೂ ಆಗಾಗ ನನ್ನನ್ನು ಕಾಡುತ್ತಾನೆ.

ಸಾವುಗಳು ೩:  ಇದು ೧೯೮೯ರಲ್ಲಿ ನಡೆದ ಪ್ರಸಂಗ, ಗುಬ್ಬಿಯ ಒಂದು ಮುಸ್ಲಿಂ ಕುಟುಂಬದ ಫಾರೂಕ ಎಂಬ ಯುವಕ ತುಮಕೂರು-ತಿಪಟೂರಿನ ನಡುವೆ ಆಗಿನ ಮೆಟಡಾರ್ ವ್ಯಾನ್ ಓಡಿಸುತ್ತಿದ್ದ.  ಸರ್ಕಾರಿ ಕೆಂಪು ಬಸ್ಸು ತಿಪಟೂರಿನಿಂದ ತುಮಕೂರು ತಲುಪಲು ಒಂದೂವರೆ ಘಂಟೆ ತೆಗೆದುಕೊಂಡರೆ ಅವನು ತನ್ನ ವ್ಯಾನಿನಲ್ಲಿ ಕೇವಲ ಒಂದು ಘಂಟೆಯಲ್ಲಿ ತಲುಪಿಸುತ್ತಿದ್ದ.  ಅವನು ಆ ವ್ಯಾನು ಓಡಿಸುತ್ತಿದ್ದ ರೀತಿ, ತಿರುವುಗಳಲ್ಲಿ ತುಂಬಾ ವಿಚಿತ್ರವಾದ ರೀತಿಯಲ್ಲಿ ಅವನು ತನ್ನ ಸ್ಟಿಯರಿಂಗ್ ವ್ಹೀಲ್ ತಿರುಗಿಸುತ್ತಾ ತನ್ನ ಪ್ರೇಯಸಿಗೆ ಹೇಳುವಂತೆ ಪ್ರಿಯವಾದ ಮಾತುಗಳನ್ನು ಹೇಳುತ್ತಾ ಗಾಡಿ ಓಡಿಸುತ್ತಿದ್ದ ಠೀವಿಗೆ ಮರುಳಾಗಿದ್ದ ನಾವೊಂದಷ್ಟು ಜನ ಯಾವಾಗಲೂ ಅವನ ಗಾಡಿಯಲ್ಲೇ ತುಮಕೂರಿಗೆ ಹೋಗುತ್ತಿದ್ದೆವು.  ಅಂದು ತುಮಕೂರಿನ ಬಟವಾಡಿಯ ಅಡಿಕೆ ಮಂಡಿಯೊಂದಕ್ಕೆ ಹೋಗಬೇಕಿದ್ದ ನಾನು ಬಸ್ ನಿಲ್ದಾಣಕ್ಕೆ ಬರುವ ಕೇವಲ ಐದು ನಿಮಿಷ ಮುಂಚೆ ಅವನ ವ್ಯಾನು ಹೊರಟು ಹೋಗಿತ್ತು.  ವಿಧಿಯಿಲ್ಲದೆ ಕೆಂಪುಮೂತಿಯ ಸರ್ಕಾರಿ ಬಸ್ಸು ಹತ್ತಿದೆ.  ಕೇವಲ ತಿಪಟೂರಿನಿಂದ ಐದು ಕಿ.ಮೀ.ಬರುವಷ್ಟರಲ್ಲಿ ಹಿಂಡಿಸ್ಕೆರೆ ಗ್ರಾಮಕ್ಕಿಂತ ಸ್ವಲ್ಪ ಮುಂಚೆ ಒಂದು ದೊಡ್ಡ ಅಪಘಾತವಾಗಿತ್ತು.  ಇಳಿದು ನೋಡಿದರೆ, ಅದು ನಮ್ಮ ಫಾರೂಕನ ವ್ಯಾನು, ೧೫ ಜನ ಕೂರುವ ಕಡೆ ೨೨ ಜನರನ್ನು ತುಂಬಿಕೊಂಡು ತನ್ನ ಎಂದಿನ ವೇಗದಲ್ಲಿ ತುಮಕೂರಿಗೆ ಹೊರಟಿದ್ದ ಫಾರೂಕ, ತನ್ನ ಮುಂದಿದ್ದ ಲಾರಿಯನ್ನು ಹಿಂದಿಕ್ಕುವ ಅವಸರದಲ್ಲಿ, ಎದುರಿನಿಂದ ವೇಗವಾಗಿ ಬರುತ್ತಿದ್ದ ಕೋಲಾರ-ಧರ್ಮಸ್ಥಳ ಬಸ್ಸಿಗೆ ಮುಖಾಮುಖಿಯಾಗಿ ಗುದ್ದಿಬಿಟ್ಟಿದ್ದ.  ಆ ವ್ಯಾನಿನಲ್ಲಿದ್ದ ೨೨ ಜನರ ಪೈಕಿ ೧೮ ಜನ ಸ್ಥಳದಲ್ಲಿಯೇ ಸತ್ತಿದ್ದರು.  ಆ ಸಿಮೆಂಟು ರಸ್ತೆಯ ಮೇಲೆ ವ್ಯಾನಿನ ತೈಲದ ಜೊತೆಗೆ ರಕ್ತವೂ ಕೋಡಿಯಾಗಿ ಹರಿಯುತ್ತಿತ್ತು.  ಸಾಹಸ ಮಾಡಿ ಸುಮಾರು ೧೨ ದೇಹಗಳನ್ನು ಹೊರತೆಗೆದ ನಾನು ಮತ್ತು ಕೆಲವು ಸಹಪ್ರಯಾಣಿಕರು ಅದೆಷ್ಟೇ ಪ್ರಯತ್ನಿಸಿದರೂ ಅವರ ಜೀವ ಉಳಿಯಲಿಲ್ಲ, ನಮ್ಮ ಕಣ್ಮುಂದೆಯೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.  ಆ ಸಾವಿನ ಅನಂತ ಶಕ್ತಿಯ ಮುಂದೆ ನಾವು ತುಂಬಾ ಕುಬ್ಜರಾಗಿ ನಿಂತಿದ್ದೆವು.  ಚೈತನ್ಯದ ಚಿಲುಮೆಯಾಗಿ ಆ ವ್ಯಾನು ಓಡಿಸುತ್ತಿದ್ದ ಫಾರೂಕನ ದೇಹ ಲೆಕ್ಕವಿಲ್ಲದಷ್ಟು ಹೋಳುಗಳಾಗಿ ಆ ಗಾಡಿಯ ಅಳಿದುಳಿದ ಅವಶೇಷಗಳ ಜೊತೆ ಅಂಟಿ ಹೋಗಿತ್ತು.  ನಂಬಲಸಾಧ್ಯವಾದ ಸಾವಿನ ರಕ್ತದೋಕುಳಿ ಅಲ್ಲಿ ನಡೆದು ಹೋಗಿತ್ತು.  ಆಗಾಗ ನೆನಪಾಗಿ ಈ ಪ್ರಸಂಗ ನನ್ನ ನಿದ್ದೆಗೆಡಿಸುವುದುಂಟು.

ಇನ್ನೂ ಇದೆ......

Rating
No votes yet

Comments