ಮಾತುಗಳೇಕೆ ಸತ್ತು ಹೋದವು?
ಹತ್ತಿರವಿದ್ದರು ನಾವಿಬ್ಬರು
ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ
ನಡುವೆ ಸಾಗರದಷ್ಟು ಮೌನ
ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ
ನಿನ್ನ ಸನಿಹದಲ್ಲೂ ಏನಿದು
ಹೊಸ ತರಹದ ವಿರಹ
ಮಾತುಗಳೇಕೆ ಸತ್ತು ಹೋದವು?
ನಿನ್ನ ತುಟಿಗಳ ಸಿಹಿ ಸ್ಪರ್ಶಕೆ
ಎದೆಯ ಸೀಳಿ
ಚಿಮ್ಮಿ ಪುಟಿ ಪುಟಿದು
ಹೊರಹೊಮ್ಮುತ್ತಿದ್ದ ಸಪ್ತಸ್ವರ
ಇನ್ನೆಲ್ಲಿ ಮುರಿದು ಹೋದ
ಈ ಕೊಳಲಿನ ಚೂರುಗಳಲ್ಲಿ
ಮಾತುಗಳೇಕೆ ಸತ್ತು ಹೋದವು?
ಸಾಕಿನ್ನು ಕಣ್ಣೀರು
ಸತ್ತವರು ಬದುಕಿ ಬರಲಾರರು
ಕಟ್ಟಬೇಕಿದೆ ದೇಹಕ್ಕೊಂದು ಗೋರಿ
ಎದೆಯಲ್ಲಿ ಸೂತಕ
ಮಡಿಯುಟ್ಟು ದೀಪ ಹಚ್ಚಿ
ಬಿಟ್ಟು ಹೋದ ನೆನಪುಗಳ
ಎತ್ತಿ ಮುದ್ದಾಡಿ ಮಾತು ಕಲಿಸಬೇಕಿದೆ
ಮಾತುಗಳೇಕೆ ಸತ್ತು ಹೋದವು?
--
Rating
Comments
ಮಾತುಗಳೇಕೆ ಸತ್ತು ಹೋದವು?