ಧಾರವಾಡದ ‘ಹಸಿರು ಮಾನವ’ ಪಂಡಿತ ಮುಂಜಿ ಬದುಕಿಸಿದ ಪುನಗು.

ಧಾರವಾಡದ ‘ಹಸಿರು ಮಾನವ’ ಪಂಡಿತ ಮುಂಜಿ ಬದುಕಿಸಿದ ಪುನಗು.

ಬರಹ

ಆಕಾಶದೆತ್ತರಕ್ಕೆ ಕ್ಯಾಕ್ಟಸ್ ಬೆಳೆದು ೨ ಬಾರಿ ಗಿನ್ನಿಸ್ ದಾಖಲೆ ಮಾಡಿದವರು ಧಾರವಾಡದ ಪರಿಸರವಾದಿ ಪಂಡಿತ ಮುಂಜಿ. ಸಾಧನಕೇರಿ ಬಳಿಯ ಜಮಖಂಡಿಮಠ ಲೇಔಟ್ ನಲ್ಲಿ ಅವರು ಸಮುದಾಯದ ಸಹಭಾಗಿತ್ವದಲ್ಲಿ ಬೆಳೆಸಿದ ‘ಜನರ ಉದ್ಯಾನ’ ಅವರ ಕತೃತ್ವ ಶಕ್ತಿಗೆ, ಪರಿಸರ ಪ್ರೀತಿಗೆ ಸಾಕ್ಷಿ. ಕರೆದೆಡೆ ಬಂದು, ಪ್ರೀತಿಯಿಂದ ಎರಡು ಗಿಡಗಳನ್ನು ಉಡುಗೊರೆಯಾಗಿ ನೀಡಿ ಅಥವಾ ನೀವು ಹೇಳಿದಲ್ಲಿ ನೆಟ್ಟು ಹೋಗುವ ಈ ಆಪತ್ಭಾಂಧವ ಪಂಡಿತ ಮುಂಜಿ ಅವರ ಮನೆಗೆ ಇಂದು ಬೆಳಿಗ್ಗೆ ಆಗಂತುಕ ಅತಿಥಿಯೊಬ್ಬ ಭೇಟಿ ನೀಡಿದ್ದ.

ಆ ಅತಿಥಿಯ ದಿಢೀರ್ ಆಗಮನ ಆಕಸ್ಮಿಕವೋ? ಕಾಕತಾಳಿಯವೋ? ಅಥವಾ ಆಘಾತಕಾರಿಯೋ?

ಇನ್ನೂ ಚುಮುಚುಮು ಬೆಳಕು ಹರಿಯುತ್ತಿದ್ದ ನಸುಕಿನ ಹೊತ್ತಿನಲ್ಲಿ ಪಂಡಿತ ಮುಂಜಿ ತಮ್ಮ ಮನೆ ಅಂಗಳದ ಉದ್ಯಾನಕ್ಕೆ ನೀರುಣಿಸಲು ಸನ್ನದ್ಧರಾಗುತ್ತಿದ್ದರು. ಮನೆಯ ಎದುರಿನ ಗಟಾರಿನಲ್ಲಿ ಯಾವುದೋ ಪ್ರಾಣಿಯ ವಿಚಿತ್ರ ಕೀರಲು ಧ್ವನಿ ಕೇಳಿಸಿತು. ಗಿಡಗಳನ್ನು ಮುಟ್ಟಿ ಮಾತನಾಡಿಸಬಲ್ಲ ಈ ಹಸಿರು ಮನುಷ್ಯ, ತುಸು ಅಧೀರರಾಗಿಯೇ ಪ್ರಾಣಿಯನ್ನು ಮಾತನಾಡಿಸಲು ಮುಂದಾದರು!

ಹೆದರಿದಂತೆ ಕಂಡು ಬಂದ ಅದು ಮೋರಿಯ ಒಳಗೆ ತೂರಿಕೊಳ್ಳಲು ಹವಣಿಸಿತು. ಬೆಳಕು ಹರಿಯುವ ವರೆಗೆ ಕಾಯ್ದ ಮುಂಜಿ ಅವರು ನಂತರ ಅದನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾದರು. ಮುಂಜಿ ಅವರು ಬೆಳಿಗ್ಗೆ ಎದ್ದು ಹೀಗೆ ಗಟಾರಿನ ಸಂಶೋಧನೆಯಲ್ಲಿ ತೊಡಗಿದ್ದು ನೋಡಿ ಬಡಾವಣೆಯ ಹತ್ತಾರು ಕಣ್ಣುಗಳು ಅತ್ತ ಹೊರಳಿದವು. ಅವು ಮನೆಯ ಬಾಗಿಲಿಗೆ ನೀರು ಸಿಂಪಡಿಸಿ, ರಂಗೋಲಿ ಹಾಕಲು ಬಂದ ಮನೆಗಳ ಯಜಮಾನಿಯರ ಕಣ್ಣುಗಳಾಗಿದ್ದರಿಂದ ಸುದ್ದಿ ಆಕಾಶವಾಣಿಯ ತೆರದಿ ಕೆಲವೇ ಸೆಕೆಂಡುಗಳಲ್ಲಿ ಬೆಳಕಿನ ವೇಗದಲ್ಲಿ ಪ್ರವಹಿಸಿ ದೊಡ್ಡ ಜನಜಂಗುಳಿಯೇ ಅಲ್ಲಿ ನೆರೆಯುವಂತಾಯಿತು. ಗಟಾರಿನಲ್ಲಿ ಬಗ್ಗಿ ನೋಡಿದ ಕೆಲವರು ಅದನ್ನು ‘ಮುಂಗುಸಿ’ಗೆ ಹೋಲಿಸಿದರೆ, ಇನ್ನು ಕೆಲವರು ‘ಇರುವೆ ಭಕ್ಷಕ ಪ್ಯಾಂಗೋಲಿನ್’, ಮತ್ತೆ ಕೆಲವರು ‘ನೀರು ನಾಯಿ’, ಉಳಿದವರು ‘ಚಿಪ್ಪು ಹಂದಿ’ಎಂದು ವಿಶ್ಲೇಷಿಸಿದರು. ಜೊತೆಗೆ ಅದು ‘ಅವುಗಳ ಮರಿ’ ಎಂಬುವುದನ್ನು ಸೇರಿಸಲು ಮರೆಯಲಿಲ್ಲ.

ಆದರೆ ಪಂಡಿತ ಮುಂಜಿ ನಿಖರವಾಗಿ ಹೇಳಿದರು. ಇದು ಪುನಗು ಬೆಕ್ಕು. ಗುಂಪುಗೂಡುತ್ತಿದ್ದ ಜನರನ್ನು ಕೂಡಲೇ ಚದುರಿಸಿ ಮನೆಯೊಳಗಿಂದ ಕೆಲ ಹಣ್ಣುಗಳನ್ನು ತಂದು ಅದಕ್ಕೆ ನೀಡಿದರು. ಅರೆ ಜೀವವಾಗಿದ್ದ ಬೆಕ್ಕು ಬದುಕಿದೆಯಾ ಬಡಜೀವವೇ ಎಂಬಂತೆ ಪ್ರಯಾಸಪಟ್ಟು ಹೊರಬಂದು ಹಣ್ಣನ್ನು ತಿಂದಿತು. ಮುಂಜಿ ಅವರು ಹೇಗೋ ಸ್ನೇಹ ಸಂಪಾದಿಸಿ ತಮ್ಮ ಮನೆಯ ಆವರಣದೊಳಗೆ ಅದನ್ನು ಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಸಾಕಿದ ಬೆಕ್ಕಿನಂತೆ ಮುಂಜಿ ಅವರ ಮನೆ ಮಂದಿಯೊಂದಿಗೆ ಬೆರೆತು ಸುಮಾರು ೬ ತಾಸುಗಳ ಕಾಲ ಆಡಿಕೊಂಡಿತ್ತು.

ಆದರೆ ಕಾಡು ಪ್ರಾಣಿಯನ್ನು ಮನೆಯಲ್ಲಿ ಸಾಕಿಕೊಳ್ಳುವಂತಿಲ್ಲ ಎಂಬ ಸತ್ಯದ ಅರಿವಿದ್ದ ಮುಂಜಿ ಅವರು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಅದನ್ನು ಸುರಕ್ಷಿತವಾಗಿ ಹಿಡಿದುಕೊಂಡು ಕಾಡಿಗೆ ಸಾಗಿಸಿದರು.

ಹಾಗಾದರೆ ಏನಿದು ಪುನಗು ಬೆಕ್ಕು? ಪುನುಗು ಇಲಿ: ಬೆಕ್ಕಲ್ಲ! -ವಾಸ್ತವದಲ್ಲಿ ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಬೆಕ್ಕಿನ ಕುಟುಂಬಕ್ಕೆ ಸೇರಿದ್ದಲ್ಲ. ಇಲಿಯ ಜಾತಿಗೆ ಸೇರಿದ ಪುನುಗು ಇಲಿ.

ರಾತ್ರಿಯ ವೇಳೆ ಮಾತ್ರ ಆಹಾರ ಹೆಕ್ಕಲು ಹೊರಡುವ ಈ ಪುನುಗು ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ ಕಣ್ಣು ಎರಡೂ ಹೊತ್ತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ. ಮಳೆ ಕಾಡುಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಇದು ಬದುಕುತ್ತದೆ.

ಹಿಂದಿ ಭಾಷೆಯಲ್ಲಿ ಈ ಬೆಕ್ಕನ್ನು ‘ಸ್ಮಶಾನ ಚೇಳು’ ಎಂದು ಸಹ ಕರೆಯಲಾಗುತ್ತದೆ. ಜನ ವಸತಿಯಿಂದ ಹಾಗು ಇತರೆ ಪ್ರಾಣಿಗಳ ಆವಾಸದಿಂದ ತೀರ ದೂರ ಇರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚದ ಹಾಗು ನಾಚಿಕೆ ಸ್ವಭಾವದ್ದು. ಹಣ್ಣುಗಳೆಂದರೆ ಪುನುಗಿಗೆ ತೀರ ಇಷ್ಟ. ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ತೀರ ಅಚ್ಚುಮೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪುನಗು ಬೆಕ್ಕುಗಳು ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿ ಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನ್ನುತ್ತವೆ.

ಭೂಮಿ ಹಾಗು ಗಿಡ ಎರಡರ ಮೇಲೂ ವಾಸ ಮಾಡಬಲ್ಲ ಈ ಬೆಕ್ಕು ಶಾಖಾ ಹಾಗು ಮಾಂಸಾಹಾರಿ. ಪುನಗು ಬೆಕ್ಕಿನ ಬೆವರಿನಲ್ಲಿ ಸುವಾಸನೆ ಇದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಬೆವರು ಜೇನುತುಪ್ಪದಂತೆ ಗೋಚರಿಸುತ್ತದೆ. ಇದನ್ನು ಸುವಾಸನೆ (ಸೇಂಟ್) ದ್ರವ್ಯಗಳಲ್ಲಿ ಸುವಾಸನೆಯನ್ನು ಸ್ಥಿರಗೊಳಿಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾಮ ಪ್ರಚೋದಕ ಔಷಧಿಯಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾಗಿ ಅದನ್ನು ತೀವ್ರ ಹಿಂಸೆಗೂ ಒಳಪಡಿಸಿ ಬೆವರಿನ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಸಹ ಹೇರಲಾಗುತ್ತದೆ. ಸದ್ಯ ವಿನಾಶದ ಅಂಚಿಗೆ ಪುನುಗು ಬೆಕ್ಕು/ಇಲಿ ಹೋಗಲು ಬಲವಾದ ಕಾರಣ ಇದು. ‘ವಿವಿರಿಡೇ’ ಕುಟುಂಬಕ್ಕೆ ಸೇರಿದ ಪುನುಗಿಗೆ ಆಂಗ್ಲ ಭಾಷೆಯಲ್ಲಿ ‘ಸಿವೆಟ್ ಕ್ಯಾಟ್’ (Civet Cat) ಎಂದು ಕರೆಯಲಾಗುತ್ತದೆ. ಪ್ರಾಯಕ್ಕೆ ಬಂದ ಪುನುಗು ಬೆಕ್ಕು ೧ ರಿಂದ ೩ ಅಡಿ ಉದ್ದವಿರುತ್ತದೆ. ೮ ರಿಂದ ೯ ಪೌಂಡ್ ತೂಗಬಲ್ಲುದು ಎನ್ನುತ್ತಾರೆ ವನ್ಯ ಪ್ರಾಣಿ ತಜ್ಞರು. ಕಪ್ಪು ಬಣ್ಣದಿದ್ದು ಪ್ರಾಯಕ್ಕೆ ಬರುತ್ತ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ಅದರ ದೇಹ ಹಾಗು ತುಪ್ಪಳ ಬಣ್ಣ ತಿರುಗುತ್ತದೆ.

ಆದರೆ ಈ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳಿಲ್ಲ. ಆದರೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಆದರೂ ಪುನಗು ಇಲ್ಲಿಗೆ ಭೇಟಿ ನೀಡಿತ್ತು ಎಂಬುದು ಸೋಜಿಗ. ಇಲ್ಲಿನ ವಸತಿ ಗೃಹಗಳಲ್ಲಿ ವಾಸ ಮಾಡುವ ಮಕ್ಕಳ ಪ್ರಕಾರ ಹಲವಾರು ಬಾರಿ ಈ ಪುನಗು ಬೆಕ್ಕುಗಳು ರಾತ್ರಿಯ ವೇಳೆ ರಸ್ತೆಗಿಳಿದು ಆಹಾರ ಹೆಕ್ಕುತ್ತ ಕುಳಿತಿರುತ್ತವೆ.

ಇನ್ನಾದರೂ ನಮ್ಮ ಮನೆಗಳ ಸುತ್ತ ಹಣ್ಣಿನ ಗಿಡಗಳನ್ನು ನೆಡೋಣ. ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸೋಣ. ಅಲ್ಲಲ್ಲಿ ಕಾಳು ಕಡಿಗಳ ಪೊಟ್ಟಣ ಕಟ್ಟಿ ಬಹುತೇಕ ನಮ್ಮನ್ನೇ ಆಶ್ರಯಿಸುವ ಅನಿವಾರ್ಯ ಸ್ಥಿತಿ ತಲುಪಿರುವ ಅಸಹಾಯಕ ಮೂಕ ಪ್ರಾಣಿಗಳ ಮೂಕ ರೋದನಕ್ಕೆ ದನಿಯಾಗೋಣ.