’ತರಕಲಾಂಡಿ’ ಇತ್ಯಾದಿ
’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’ ಎಂಬ ಪದಪ್ರಯೋಗ ಕಂಡು ಭಟ್ಟರು, ’ಅದು ಥರಕಲಾಂಡಿನೋ? ತಡಕಲಾಂಡಿನೋ?’ ಎಂದು ತಿಳಿಯಬಯಸಿದ್ದಾರೆ. ಭಟ್ಟರ ಪ್ರಶ್ನೆಗೆ ಈ ಶಾಸ್ತ್ರಿಯ ಉತ್ತರ ಇಂತಿದೆ:
’ತರಕಲಾಂಡಿ’ ಎಂಬುದು ಸೂಕ್ತ ಪ್ರಯೋಗ. ’ತರಕಲು’ ಎಂದರೆ ’ಒರಟು’ ಎಂದರ್ಥ. ’ತರಕಲಾಂಡಿ’ ಎಂದರೆ ’ಒರಟ’.
’ತರ್ಕಟ್ಲಾಂಡಿ’ (’ತರ್ಕಟ್ಲಾಂಡಿ’) ಎಂಬ ಪದಪ್ರಯೋಗವೂ ಇದೆ. ’ತರಕಟಾಲು’ ಎಂದರೆ ’ನಿಷ್ಪ್ರಯೋಜಕ’ ಎಂದರ್ಥ. (ಗುಣವಾಚಕವಿದು; ’ಕೆಲಸಕ್ಕೆ ಬಾರದ’ ಎಂಬರ್ಥದಲ್ಲಿ.) ’ತರ್ಕಟ್ಲಾಂಡಿ’ ಎಂದರೆ ’ನಿಷ್ಪ್ರಯೋಜಕನಾದಂಥವನು’ (’ಕೆಲಸಕ್ಕೆ ಬಾರದವನು’) ಎಂದು ಅರ್ಥೈಸಬಹುದು.
ಇದೇ ರೀತಿ, ’ಹೇತ್ಲಾಂಡಿ’ ಎಂಬ ’ಪ್ರಶಂಸೆ’ಯೂ ಚಾಲ್ತಿಯಲ್ಲಿದೆ. ಇಲ್ಲಿ ಅಮೇಧ್ಯದ ಬಳಕೆ, ಕ್ಷಮಿಸಿ, ಹೋಲಿಕೆ ಮಾಡಲಾಗಿದೆ. ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಕೈಲಾಗದೆ ಒದ್ದಾಡಿ, ಹೇಲಾಟ ಅನುಭವಿಸಿ, ಮಿದುಳೂ ಸಗಣಿಯಾಗಿ, ಕೊನೆಗೂ ಕಾರ್ಯವಿಮುಖನಾಗಿ ಹೇಡಿಯಂತೆ ಓಡಿಹೋಗುವವ ’ಹೇತ್ಲಾಂಡಿ’!
ಇನ್ನು, ’ಮಿಟುಕ್ಲಾಂಡಿ’ ಎಂಬ ತಪ್ಪು ಪದಪ್ರಯೋಗವನ್ನು ಕೆಲವರು ಮಾಡುತ್ತಾರೆ. ಸರಿಯಾದ ಪ್ರಯೋಗ ’ಮಿಟಕಲಾಡಿ’. ಇದರರ್ಥ ’ಸೋಗಲಾಡಿ’ (’ಒಯ್ಯಾರಿ’, ’ವಯ್ಯಾರಿ’) ಎಂದು. ’ಮಿಟಕಲಾಡಿ ಮೀನಾಕ್ಷಿ’ ಎಂಬ ನುಡಿಗಟ್ಟನ್ನು ಬರಹಗಾರರು ಬಳಸುವುದನ್ನು ನೀವು ಗಮನಿಸಿರಬಹುದು.
’ತರಕಲಾಂಡಿ’, ’ತರ್ಕಟ್ಲಾಂಡಿ’, ’ಹೇತ್ಲಾಂಡಿ’.....ಇಂಥ ಆಕರ್ಷಕ ಮತ್ತು ಅರ್ಥಗರ್ಭಿತ(!) ’ಪ್ರಶಂಸಾ’ ಪದಗಳ ಬಳಕೆ ಕೇಳಲು ಎಷ್ಟು ಚೆನ್ನ!
ಇತಿ, ಪದಜಿಜ್ಞಾಸೆ, ಏಮಂಡಿ.