ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ - ಭಾಗ ೧

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ - ಭಾಗ ೧

ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದಡಿಯಿಳಿದು ಮತ್ತದೇ ದೈನಂದಿನ ಜೀವನದ ಮಾರ್ಗದೆಡೆಗೆ ಮನಸ್ಸೇ ಇಲ್ಲದೆ ನುಗ್ಗಿಬರುವುದಾಗಿತ್ತು....

ಈ ಭಾರಿಯ ಕಥೆಯೇ ಬೇರೆ. ಕಾಲ ಬದಲಾದಂತೆ, ನನಗೂ ಏಕೋ ಈ ತಿಂಗಳು ನಗರದಿಂದಾಚೆ ನನ್ನ ವಾರದ ಕೊನೆಯದಿನಗಳ ಕಳೆದು, ಹೊಸ ಗೆಳೆಯರ ಬಳಗದ ಜೊತೆ ಹೊಸತನ್ನೇನೋ ನೋಡಿಕೊಂಡು ಬರುವಾಸೆ. ಕಳೆದ ವಾರದ ಕೊನೆಯೂ ಅಂತದ್ದೇ ಮತ್ತೊಂದು ಪ್ರವಾಸದ ಸಮಯ... ಮತ್ತೆಲ್ಲಿಗಾದರೂ ಟ್ರೆಕ್ ಮಾಡ್ಲಿಕ್ಕುಂಟಾ ಕೇಳಿದ ಪವಿತ್ರಾಗೆ ಈ ತಿಂಗಳೆಲ್ಲಾ ಅದರದ್ದೇ ಯೋಜನೆ, ಯೋಚನೆ ಅಂತೇಳಿ ತಲೆಯಲ್ಲಿ ತೇಲುತ್ತಿದ್ದ ಅನೇಕ ತಾಣಗಳ ಹೆಸರನ್ನು ಹೇಳಿದಾಗ ಸರಿ ಹೊರಟೇಬಿಡೋಣ ಎಲ್ಲಿಗಾದರೂ ಎಂದು ತೀರ್ಮಾನಿಸಿದ್ದಾಯ್ತು.. ಇದರ ಮಧ್ಯೆ ನಮ್ಮ ಜೊತೆಗೂಡಲು ಅನೇಕರಿಗೆ ಇಷ್ಟವಿದ್ದರೂ ಸಮಾಯಾಭಾವ ಇತ್ಯಾದಿ.. ಕೊನೆಗೆ ನಮ್ಮ್ ರವಿ ಕೆ.ಎಚ್ ಮತ್ತು ಹಳ್ಳಿಮನೆ ಅರವಿಂದ ಸೈ ಎಂದೊಡನೆ ಎಲ್ಲಿಗೆ ಹೋಗುವುದು ಎಂಬ ವಿಷಯಕ್ಕೂ ಕೊನೆ ಸಿಕ್ಕು, ಪವಿತ್ರಾಳ ಸಹೋದ್ಯೂಗಿ ರಾಜೀವ್ ಕೂಡ ನಮ್ಮೊಡನೆ ಸೇರಿದ್ದಾಗಿತ್ತು..

ಪಶ್ಚಿಮಘಟ್ಟದ ಮಧ್ಯೆ ಬಲ್ಲಾಳರಾಯನ ದುರ್ಗ ಹಾಗೂ ಬಂಡಾಜೆ ಜಲಪಾತ ನೋಡುವ ಪ್ರವಾಸದ ಕ್ಷಣಗಣನೆ ಆರಂಭವಾದಂತೆ ನನಗೆ ಹೊಸದೊಂದು ಅನುಭವ. ಪ್ರವಾಸ ಎಂದೊಡನೆ, ನನ್ನದೊಂದು ಚೀಲಕ್ಕೆ ಒಂದೆರಡು ಜೊತೆ ಬಟ್ಟೆ, ಪ್ರಾತ:ವಿಧಿಗಳ ಸಾಮಗ್ರಿ, ನನ್ನ ಮೊಬೈಲು, ಪರ್ಸು ಅದರೊಳಗೆ ಬೇಕೆನಿಸುವಷ್ಟು (ಕೆಲವೊಮ್ಮೆ ಕಡಿಮೆಯೇ ಅನ್ನುವಷ್ಟು) ಕಾಸಿನ ಜೊತೆ ಒಂದು ಪ್ಲಾಸ್ಟಿಕ್ ಕಾರ್ಡ್ ಇದೆಯೇ ನೋಡಿಕೊಂಡು, ಹಿಂದಿನ ದಿನ ಟೈರಿಗೆ ಗಾಳಿ ಹಿಡಿಸಿ,  ಒಂದಷ್ಟು ಪೆಟ್ರೋಲ್ ಕುಡಿಸಿ ಇರಿಸಿದ್ದ ಕಾರಿನ ಮುಖಮೋರೆ ನೋಡಿ, ಅಮ್ಮ ಕೊಟ್ಟ ಹೂವನ್ನು ಗಣೇಶನ ಮಡಿಲಿಗೇರಿಸಿ ಹೊರಡುತ್ತಿದ್ದವನಿಗೆ ಈ ಭಾರಿ ಅದು ಅಷ್ಟು ಸುಲಭವೆನಿಸಲಿಲ್ಲ.... ಚಾರಣಕ್ಕೆ ಏನೆಲ್ಲಾ ಬೇಕು? ಏನೆಲ್ಲಾ ಇರಬೇಕು? ಇನ್ಯಾರಾದರೂ ನಮ್ಮೊಡನೆ ಬರುವರಿದ್ದಾರೆಯೇ? ಬಂದರೆ ಟೆಂಟ್, ಊಟದ ವ್ಯವಸ್ಥೆ, ಔಷದ,  ಇತ್ಯಾದಿ ಹೀಗೆ ನೂರು ಪ್ರಶ್ನೆಗಳ ಜೊತೆ ಎಲ್ಲಿ, ಹೇಗೆ, ಎತ್ತ.. ಎಲ್ಲವನ್ನೂ ಸುಮಾರು ಹತ್ತಾರು ಬಾರಿ ಚರ್ಚಿಸಿ ಕೊನೆಯ ದಿನದವರೆಗೂ ತುದಿಗಾಲಲ್ಲಿ ನಿಂತು ನಾವೆಲ್ಲಾ ರೆಡಿ ಎಂದು ನಿಟ್ಟುಸಿರು ಬಿಡುವ ಗಳಿಗೆಗೆ ಕಾಯುವಂತೆ ಮಾಡಿದ್ದು ಪವಿತ್ರಾ ಪ್ರಭಾವ :).... ಕೊನೆಗೂ ಕುಡಿಯುವ ನೀರಿನ ಗ್ಲಾಸ್ ಮರೆತು ಹೋಗಿ.... ಮ್ಯಾಗಿ ಕಪ್ಪಿನ ಮಸಾಲ ಚಹಾ ಕುಡಿದದ್ದು, ಆ ಚಳಿಯಲ್ಲಿ ಅದೂ ಕೂಡ ಕಿಕ್ ಕೊಟ್ಟಿದ್ದು ಮುಂದಿನ ಮಾತು.... - ಬ್ಯಾಕ್ ಪ್ಯಾಕಿಂಗ್ ಇಷ್ಟೊಂದು ಸಾಹಸಕರ ವಿಷಯ ಎಂದು ಈಗಲೇ ಅರಿವಾದದ್ದು..

ಕ್ಯಾಮೆರಾ ಸರಿಮಾಡಿಸಿಕೊಳ್ಳಲು ಬ್ರಿಗೇಡ್ ಟವರ್ ಕಡೆ ಹೊರಟವನಿಗೆ ಆಟೋ ಅಣ್ಣ ಸರಿಯಾಗಿ ಕೈಕೊಟ್ಟು ತಪ್ಪು ವಿಳಾಸ ಹೇಳಿ ನನ್ನಿಂದ ಬೈಸಿಕೊಂಡನಾದರೂ ನನ್ನ ಕೆಲಸ ಆಗಲಿಲ್ಲ. ಸರಿ ಅಲ್ಲಿಂದ ವಾಪಸ್ ಹೊರಡುವ ಮುನ್ನ ಪವಿತ್ರಾಗೆ  ಕರೆಯಾಯಿಸಿದಾಗ ಮುಂದಿನ ೧೦ ನಿಮಿಷಗಳಲ್ಲಿ ರಾಜೀವ್ನೊಂದಿಗೆ ಮೊದಲ ಭೇಟಿ. ಅಡ್ವೆಂಚರ್ ಟೂಲ್ ಮಾಡುವ ಅಂಗಡಿಗೆ ಹೋಗಿ ಕಣ್ಣಾಡಿಸಿ ಒಂದಿಷ್ಟು ವಸ್ತುಗಳ ಖರೀದಿ. ನಂತರ ಹೊರಡುವ ಸಮಯವನ್ನು ತಿಳಿಸಿ ಇಬ್ಬರನ್ನೂ ಬೀಳ್ಕೊಟ್ಟು ಅರವಿಂದನನ್ನು ಕಾಣಲು ಮಲ್ಲೇಶ್ವರದ ಕಡೆಗೆ ಹೊರಟೆ. ಎಷ್ಟೇ ಯೋಜನೆ ಮಾಡಿಕೊಂಡಿದ್ದರೂ, ನಗರದ ಸೂಪರ್ ಮಾರ್ಕೆಟ್ ಗಳನ್ನು ಸುತ್ತಿರುವ ಪ್ರಭಾವದಿಂದಾಗಿ, ನಮಗೆ ಬೇಕಾದ ತಿಂಡಿ ಇತ್ಯಾದಿಗಳನ್ನು ಕೊಂಡಿದ್ದು ಹೊರಡುವುದಕ್ಕಿಂತ ೫-೬ ತಾಸುಗಳ ಹಿಂದಷ್ಟೇ. ಅರವಿಂದನ ಜೊತೆ ಮಲ್ಲೇಶ್ವರಂ ಪುಡ್ವರ್ಡ್ ಗೆ ದಾಳಿಯಿಟ್ಟು ಈ ಕೆಲಸ ಮುಗಿಸಿದ್ದಾಯ್ತು.

ಹೊರಡುವಾಗ ಅಮ್ಮ ಮಾಡಿಕೊಟ್ಟ ಚಪಾತಿ ಚಟ್ನಿ ಪುಡಿಯನ್ನು ಅರವಿಂದನೊಡನೆ ತಿಂದು, ಮತ್ತಷ್ಟನ್ನು ಪ್ಯಾಕ್ ಮಾಡಿಕೊಂಡ್ಜು ಹೊರಡುವಾಗಾಗಲೇ ೧೧:೩೦ ರಾತ್ರಿ... ಅಲ್ಲಿಂದ ರವಿಯವರ ಮನೆ ಸೇರಿ ಕೊನೆಯ ಬಾರಿಗೆ ನನ್ನ ಲ್ಯಾಪ್ಟಾಪ್ ತೆರೆದು ನನ್ನ ಕಂಪೆನಿಯ ಹುಡುಗರಿಗೆ ಕೊನೆಯ ಕ್ಷಣಗಳ ಮಾಹಿತಿ/ಕಾರ್ಯ ವಿನಿಮಯ ಮಾಡಿಕೊಂಡು, ಅವರು ತಮ್ಮ ಗೆಳೆಯನಿಂದ ಪಡೆದಿದ್ದ ಟೆಂಟ್ ಇತ್ಯಾದಿಗಳ ಭಾರ ನೋಡಿ, ಕಾರಿನಲ್ಲಿ ಅದಕ್ಕೆ ಬೇಕಾದ ಸ್ಥಳ ವ್ಯವಸ್ಥೆ ಮಾಡಿ ಮತ್ತೆ ಪವಿತ್ರಾಳ ಮನೆಯ ಕಡೆ ಪಯಣ... ಅಷ್ಟರಲ್ಲಾಗಲೇ  ರಾತ್ರಿ ೧:೩೦ ಅಥವಾ ೨  ಆಗಿದ್ದಿರಬಹುದು... ಅಲ್ಲಿಂದ ಹಳೆಯ ಮದ್ರಾಸು ರಸ್ತೆಯಲ್ಲಿ ರಾಜೀವ್ ಮನೆ... ಅದನ್ನೂ ತಲುಪಿ ಜೊತೆಜೊತೆಗೆ ಪಯಣ ಆರಂಭಿಸುವುದರೊಳಗೆ ೪೦ ಕಿ.ಮಿ ಕ್ರಮಿಸಿದ್ದಾಗಿತ್ತು...

ಮುಂದಿನ ಭಾಗದಲ್ಲಿ ನಮ್ಮ ಪ್ರವಾಸ ಹೇಗಿತ್ತು ನೋಡೋಣ.... ಸಧ್ಯಕ್ಕೆ ಕೆಲಸದ ಕರೆ ನನ್ನನ್ನು ಕರೆಯುತ್ತಿದೆ.

Rating
No votes yet

Comments