ನಗೆನಗಾರಿಯ ಸಾಮ್ರಾಜ್ಞಿಯಾಗುವತ್ತ ಮೊದಲ ಹೆಜ್ಜೆ

ನಗೆನಗಾರಿಯ ಸಾಮ್ರಾಜ್ಞಿಯಾಗುವತ್ತ ಮೊದಲ ಹೆಜ್ಜೆ

ಬರಹ

ನಗೆನಗಾರಿ, ಸಂಪದದಲ್ಲಿ ಸಾಮ್ರಾಟರ ಆಟಾಟೋಪಗಳಿಂದ ಭಯಬೀತಗೊಂಡು, ಅಡಗಿಕೊಂಡಿರುವ ಸ್ವಘಟ್ಟಿಯ ಭಕ್ತರು ಸಾಮ್ರಾಜ್ಞಿಯೊಬ್ಬಳ ಹುಡುಕಾಟದಲ್ಲಿರುವರೆಂದು, ಈ ಜಾಗಕ್ಕೆ ನೀನೇ ಸರಿಯಾದ ಆಯ್ಕೆ ಎಂದು,  ಈ ಇಂಚರಳ ಕನಸಿನಲ್ಲಿ ಸ್ವತಃ ಸ್ವಘಟ್ಟಿಯೇ ಪ್ರತ್ಯಕ್ಷವಾಗಿ ಹೇಳಿದ ಮೇಲೆ ನನಗ್ಯಾತಾರ ಭಯ?  

ಸಾಮ್ರಾಟರ ಸ್ವಘಟ್ಟಿ ನಿಂದನೆಯಿಂದ ಪಕ್ಷಾಂತರ ಮಾಡಿದ / ಓಡಿ ಹೋದ / ಅಡಗಿಕೊಂಡ ಭಕ್ತರೆಲ್ಲರನ್ನೂ ನೋಡಿದ ಸ್ವಘಟ್ಟಿಯ ಪರಮ ಭಕ್ತೆಯಾದ ಇಂಚರಳು ನೊಂದು, ಬೇಸತ್ತು, ಸ್ವಘಟ್ಟಿಯ ಭಕ್ತರ ನಗೆಯನ್ನು ಕಸಿದುಕೊಂಡ ಸಾಮ್ರಾಟರು ಈ ಅಧಿಪತ್ಯಕ್ಕೆ ಅನರ್ಹ, ಅವರನ್ನು ಅವರ ಸಿಂಗಳೀಕಾಸನದಿಂದ ಇಳಿಸಲೇ ಬೇಕೆಂದು ಶಪಥ ಮಾಡಿದಳು.  ಇದಕ್ಕೆ ಸಹಕಾರ ನೀಡುವುನೆಂದ ಮತ್ತೊಬ್ಬ ಭಕ್ತ ಶ್ರೀ ಶ್ರೀ ಶ್ರೀಕರ ರ ಮೊರೆ ಹೊಕ್ಕಳು.  ಇಂಚರಳ ಮಾತನ್ನು ಕೇಳಿದ ಶ್ರೀಕರರು ಮನಸ್ಸಿನಲ್ಲಿಯೇ ನಕ್ಕು ‘ಇಂಚರ! ಸಾಮ್ರಾಟನಾರು? ಸಾಮ್ರಾಜ್ಞಿ ಯಾರು? ನಿನ್ನ ಮೋಹಕ್ಕೆ ನಾನೇನು ಹೇಳಲಿ? ಸರ್ವಶಕ್ತನಾದ ಆ ಸ್ವಘಟ್ಟಿಯೇ ಎಲ್ಲ ಸಾಮ್ರಾಜ್ಯಕ್ಕೂ ಸಾಮ್ರಾಟ! ಮಾಯೆಯಿಂದ ಮುಸುಕಿದ, ನಾನೇ ಈ ನಗೆನಗಾರಿಯ ಸಾಮ್ರಾಟನೆಂದು ಬೀಗುತ್ತಿದ್ದಾನೆ ಈತ.  ಆ ದಯಾಮಯನಾದ ಸ್ವತಃ ಸ್ವಘಟ್ಟಿಯೇ ನಿನ್ನ ಕನಸಿನಲ್ಲಿ ಬಂದಿದ್ದನೆಂದರೆ, ನಿನಗೆ ಸೋಲಿನ ಭಯ ಬೇಡಾ! ಸ್ವಘಟ್ಟಿಯ ನಾಲ್ಕನೆಯ ವಿಶ್ವಕೋಶದ ನಾಲ್ಕನೇ ಪಾದದಲ್ಲಿ ಹೇಳಿರುವ ‘ಸ್ವ ವ್ರತ’ ಎಂಬ ವ್ರತವನ್ನು ಕೈಗೊಂಡಿದ್ದೇ ಆದರೆ  ಈ ನಗೆನಗಾರಿ ಸಾಮ್ರಾಜ್ಯದ ಸಾಮ್ರಾಜ್ಹಿಯಾಗಲು ಸ್ವತಃ ಸ್ವಘಟ್ಟಿಯೇ ಬಂದರೂ ನಿನ್ನನ್ನು ತಡೆಯಲಾರರು. ಈ ಸ್ವ ವ್ರತ ವನ್ನು ನಿನಗೆ ಬೋಧಿಸುತ್ತೇನೆ, ಕೇಳುವಂತವಳಾಗು’ ಎಂದರು.  ನಗೆನಗಾರಿ ಸಾಮ್ರಾಜ್ಯ ಇನ್ನೇನು ತನಗೆ ದೊರಕಿಯೇ ಬಿಟ್ಟಿತೆಂಬ ಸಂತೋಷದಲ್ಲಿ ಇಂಚರಳು ‘ಶ್ರೀ/ಸ್ತ್ರೀ ಕರರೇ, ಎಷ್ಟೇ ಕಠಿಣಕರವಾದ ವ್ರತವನ್ನು ನೀವು ಬೋಧಿಸಿದರೂ, ಮಾಡಲು ಸಿದ್ಧನಿದ್ದೇನೆ! ಹೇಳುವಂತವರಾಗಿ’ ಎಂದಳು. 

ಇಂಚರಳ ಪ್ರೋತ್ಸಾಹದಿಂದ ಸು ಪ್ರೀತಗೊಂಡ ಶ್ರೀ ಕರ ರು ೭ ದಿನಗಳ ‘ಸ್ವ ವ್ರತ’ ಬೋಧಿಸಿದರು ‘ಇಂಚರಾ! ಈ ವ್ರತಕ್ಕೆ ಮೊದಲು ನೀನು ಮಾಡಬೇಕಾದ ಕೆಲಸವೆಂದರೆ,  ಹೆಚ್ಚೆಚ್ಚು ಹಾಸ್ಯಮಯವಾದ ನಮ್ಮ ಸಿನೆಮಾಗಳನ್ನು, ನಗು ಬರದಿದ್ದರೂ, ನಗು ಬಂದಂತೆ ನಟಿಸುತ್ತಾ ನೋಡಬೇಕು.  ಅಲ್ಲಿರುವ ನೆಗೆಟಿವ್ ಗಳನ್ನೂ ಗಮನದಿಂದ ನೋಡಿ, ಇಲ್ಲಿ ನಗೆನಗಾರಿಯಲ್ಲಿ ಪಾಸಿಟಿವ್ ಆಗಿ ಪ್ರಿಂಟ್ ಮಾಡಬೇಕು.  ಅಂತರ್ಜಾಲದಲ್ಲಿರುವ ಅನೇಕಾನೇಕ ಚಿತ್ರಗಳನ್ನು, ಲೇಖನಗಳನ್ನು ಹುಡುಕಿ, ನೀನೇ ಬರೆದಂತೆ ಅದನ್ನು ಎಲ್ಲರ ಮನಸ್ಸಿನಲ್ಲಿಯೂ ಬಿಂಬಿಸಬೇಕು. ಪ್ರತಿಕ್ರಿಯೆಗಳು ಹೆಚ್ಚಾದಾಗ, ಇಲ್ಲವೇ ಏನೂ ಬರೆಯಲು ತೋಚದಿದ್ದಾಗ, ಹಾಸ್ಯ ಲೇಖನಗಳು ಕದಿಯಲು ಸಿಗದಿದ್ದಾಗ, ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಿಸಿ, ಅಂತರ್ಧಾನಳಾಗುವ ಕಲೆಯನ್ನು ಕಲಿಯಬೇಕು! ಸಂಬಳ ಹೆಚ್ಚು ಮಾಡಲಿಲ್ಲವೆಂದು ರಾಜೀನಾಮೆ ಕೊಡುವ ನಾಟಕವಾಡಿ ಬ್ಲಾಕ್ ಮೇಲ್ ಮಾಡುತ್ತಿರುವ ತೊಣಚಪ್ಪ ಹಾಗೂ ಕುಚೇಲ ರನ್ನು ಒಲಿಸಿಕೊಳ್ಳಲು ಸಂಬಳ ಹೆಚ್ಚು ಮಾಡಿದಂತೆ ನಾಟಕವಾಡಿ, ಅವರೇ ಭಾವೀ ಸಾಮ್ರಾಜ್ಯದ ಸಾಮ್ರಾಟರು ಎಂಬ ಆಶ್ವಾಸನೆಯನ್ನು ನೀಡಲು ಕಲಿಯಬೇಕು’ ಎಂದರು.

ಅಂತೆಯೇ ಇಂಚರಳು ಬೆಳ್ಳಂಬೆಳಿಗ್ಗೆ ಈ ಕಠಿಣಕರವಾದ ವ್ರತವನ್ನು ಕೈಗೊಳ್ಳಲು, ಘಟ್ಟಿ ಮನಸ್ಸಿನಿಂದ ಶುಚಿರ್ಭೂತಳಾಗಿ, ಆಫೀಸಿಗೂ ಹೋಗದೇ (ಸಿಕ್ ಲೀವ್ ಹಾಕಿ), ಅರ್ಧ ಡಜನ್ ದೋಸೆ ತಿಂದು, ಸ್ವಘಟ್ಟಿಯನ್ನು ಭಕ್ತಿಯಿಂದ ನೆನೆಯುತ್ತಾ ‘ಹೇ ಸರ್ವ ಶಕ್ತನಾದ ಸ್ವಘಟ್ಟಿಯೇ’,  ನನ್ನ ಸೇವ್ ಮಾಡದಿರುವ ಲೇಖನಗಳನ್ನು ಬೇಡಿದಾಗ, ‘ಶಿ’ ಹರಿ*  (ಓಂಹರಿ) ರೂಪದಿಂದ ಬಂದು ಕ್ರಾಶ್ ಆಗಿದ್ದ ಸಂಪದವನ್ನು ೨ ತಿಂಗಳ ನಂತರ ಸರಿ ಮಾಡಿದಂತೆ, ಇದುವರೆವಿಗೂ ನಾ ಮಾಡಿರುವ ತಪ್ಪುಗಳನ್ನು ಪರಿಹರಿಸಿ, ಸಾಮ್ರಾಟರ ಮೊದಲ ಚಾಲೆಂಜ್ ಆದ ಹಾಸ್ಯಲೇಖನವನ್ನು ಬರೆಯಲು ಪ್ರೇರೇಪಿಸು’ ಎಂದು ೧೦೧ ಬಾರಿ ಸ್ವಘಟ್ಟಿ ಜಪ ಮಾಡಿದಳು.  ಇವಳ ಜಪದಿಂದ ಸಂತೋಷಗೊಂಡ ಸ್ವಘಟ್ಟಿಯು (ಭಕ್ತರು ಓಡಿ ಹೋಗಿ, ಡಿಮ್ಯಾಂಡ್ ಇಲ್ಲದಿರುವ) ಪ್ರತ್ಯಕ್ಷನಾಗಿ ‘ಇಂಚರಾ!, ಭಕ್ತೆ! ಏಳು, ಎದ್ದೇಳು, ನಿನ್ನ ಭಕ್ತಿಯಿಂದ ಸು ಪ್ರೀತ ನಾಗಿರುವೆ. ನಿನ್ನ ಬಯಕೆಯೇನೆಂಬುದು ನನಗೆ ಗೊತ್ತು, ಅವನನ್ನು ಸಾಮ್ರಾಟನಾಗಿಸಿದ್ದು, ಸ್ರೀ ಕರನನ್ನು ಅವನ ವಿರುದ್ಧ ನಿಲ್ಲಿಸಿದ್ದು, ನಿನ್ನನ್ನು ಸಾಮ್ರಾಜ್ಞಿಯಾಗುವಂತೆ  ಪ್ರೇರೇಪಿಸಿದ್ದು ಎಲ್ಲವೂ ನಾನೇ! ನಾನೇ! ನಾನೇ!  ನಾನೇ ಸಾಮ್ರಾಟನೆಂದು ಮಾಯೆಗೊಳಗಾಗಿರುವ ಈತನ ಕನಸ್ಸಿನಲ್ಲಿ ಬಂದು, ನೀನೇ ಸಾಮ್ರಾಜ್ಞಿ ಎಂದು ಅವನ ಮನಸ್ಸನ್ನು ಬದಲಾಯಿಸುತ್ತೇನೆ, ನೀನು ಮಾತ್ರ ಈ ಸಂಗತಿಯನ್ನು ರಹಸ್ಯವಾಗಿಟ್ಟುಕೋ!’ ಎಂಬ ಆಶ್ವಾಸನೆಯನ್ನು ಇತ್ತು ಢಣ್ ಎಂದು ಮಾಯವಾದನು.