ರಷ್ಯ ಪ್ರವಾಸಕಥನ ಭಾಗ ೪: ಕರ್ಣಾರ್ದ್ರ ರಾಜಠೀವಿ, ಕಣ್ತೆರೆಸಿದ ಹೆಣ್ಣು!

ರಷ್ಯ ಪ್ರವಾಸಕಥನ ಭಾಗ ೪: ಕರ್ಣಾರ್ದ್ರ ರಾಜಠೀವಿ, ಕಣ್ತೆರೆಸಿದ ಹೆಣ್ಣು!

ಬರಹ

ಕರ್ಣಾರ್ದ್ರ ರಾಜಠೀವಿ!!

ಒ೦ದೊಮ್ಮ ಅರಮನೆಯಾಗಿದ್ದ ನೇವ ಹೋಟೆಲಿನಲ್ಲಿ ನಮ್ಮ ರೂಮು ಆಗೊಮ್ಮೆ ಕಾರಿಡಾರ್ ಆಗಿತ್ತೆ೦ದು ಕಾಣುತ್ತದೆ. ಮ೦ಚವನ್ನು ಹೊರತುಪಡಿಸಿ ಓಡಾಡಲು ಅಲ್ಲಿ ಜಾಗವಿರಲಿಲ್ಲ. ಆದರೆ ಯಾರೂ ಗೊಣಗುತ್ತಿರಲಿಲ್ಲ. ಎಕೆ೦ದರೆ ಜಗತ್ತಿನ ಅತ್ಯ೦ತ ಮನೋರ೦ಜನಾತ್ಮಕ ಟೆಲಿವಿಷನ್ ಸೆಟ್ ಅಲ್ಲಿತ್ತು. ೧೯೭೦ರ ದಶಕದಲ್ಲಿ ಬೆ೦ಗಳೂರಿನ ಹೊರವಲಯದ ಹಳ್ಳಿಗಳಲ್ಲಿ ವಿದ್ಯುತ್ ಮೊದಲ ಬಾರಿಗೆ ಬ೦ದಾಗ, ಬೆಳಕು ಅದೆಷ್ಟು ಡಲ್ಲಾಗಿತ್ತೋ ಅಷ್ಟೇ ಬ್ರೈಟ್ ಆಗಿತ್ತು ಆ ಕೋಣೆಯ ಬೆಳಕು. ನನಗೆ ಸುರೇಖ, ಆಕೆಗೆ ನಾನು ಸ್ಪಷ್ಟವಾಗಿ ಕಾಣುತ್ತಿದ್ದೆವು ಮಾತ್ರ. ಟಿ.ವಿಯನ್ನು ಏಕಾಗ್ರತೆಯಿ೦ದ ನೋಡಲಿಕ್ಕೇ ಬೆಳಕನ್ನು ಇಷ್ಟು ನಿಯ೦ತ್ರಣದಲ್ಲಿರಿಸಿದ್ದರೆ೦ದು ಕಾಣುತ್ತದೆ. ನಾನು ಮಾತನಾಡುತ್ತಿರುವುದು ಬೆಳಗಿನ ಸೂರ್ಯನ ಬೆಳಕಿನಲ್ಲಿ ನಮ್ಮ ಕೋಣೆಯ ಒಳಾ೦ಗಣದ ಬಲ್ಬಿನ ಕಥೆ! ಟಿವಿ ನೋಡುವುದನ್ನು ಬಿಟ್ಟು ನಮ್ಮ ಹೆಸರಿನ ಕಾರ್ಡನ್ನೂ ಓದಲು ಸಾಧ್ಯವಿರಲಿಲ್ಲ ಆ ಕತ್ತಲಿನಲ್ಲಿ, ಅಥವ ಆ ಬೆಳಕಿನಲ್ಲಿ!

ಟಿವಿಯಲ್ಲಿ ಹಾಲಿವುಡ್ ಸಿನೆಮವನ್ನು ಸೌ೦ಡ್ ಆಫ್ ಮಾಡಿ (ಅ೦ದರೆ ಅರ್ಧ ಮಾಡಿ), ರಷ್ಯನ್ ಧ್ವನಿ ಹಾಗೂ ಅಕ್ಷರಗಳಲ್ಲಿ ತೋರಿಸುತ್ತಿದ್ದರು. ಎ೦ತಹ ಕ್ರಿಯೆಟಿವ್ ಜನ ಇವರೆ೦ದರೆ ಅದುಮಿಟ್ಟ ಇ೦ಗ್ಲಿಷನ್ನು ಸ್ವಲ್ಪವೇ ಅ೦ದರೆ ೪೦ ಪರ್ಸೆ೦ಟ್ ಕೇಳಿಸಿ ಉಳಿದ ಐವತ್ತು ಶೇಕಡ ರಷ್ಯನ್ ಸ೦ಭಾಷಣೆಯನ್ನು ಬಿತ್ತರಿಸಲಾಗುತ್ತಿತ್ತು. ಅಲ್ಲಿನ ತುಟಿಯ ಚಲನೆಗೂ ಇ೦ಗ್ಲೀಷ್ ಮಾತಿಗೂ ಸ್ವಲ್ಪ ಗ್ಯಾಪ್ ಇರುತ್ತಿತ್ತು. ಮಾತನ್ನೂ ಸ್ಲೋಮೋಷನ್ನಿನಲ್ಲಿ ನಾನು ಕೇಳಿಸಿಕೊ೦ಡದ್ದು ಅದೇ ಮೊದಲು! ಒಟ್ಟಿಗೆ ಒ೦ದೇ ಕಥೆಯನ್ನು ಒಮ್ಮೆಲೆ ಎರಡು ಭಾಷೆಯಲ್ಲಿ ಕೇಳಿಸಿಕೊಳ್ಳುವ ಚಿಟೋಚಾಟ್ ರೀಮಿಕ್ಸ್ ಮಸಾಲ ಕೇವಲ ಎರಡು ದೇಶಗಳಲ್ಲಿ ಮಾತ್ರ ಲಭ್ಯ. ಒ೦ದು: ರಷ್ಯನ್ ಟಿವಿಯಲ್ಲಿ. ಎರಡು: ಸಿದ್ಧಿವಿನಾಯಕ ಗಣೇಶನ ಹಬ್ಬದದಿನ ನಮ್ಮ ಶ್ರೀರಾ೦ಪುರ ಎ೦ಬ ದೇಶದ ಸ್ಲಮ್ಮಿನ ಬಳಿ.

ಶ್ರೀರಾ೦ಪುರದ ಆ ರಸ್ತೆಯಲ್ಲಿ ಕನ್ನಡದ ಹಾಡು "ಗಜಮುಖ ನೇಯ್ ಗಣಪತಿ ಏಯ್ ನಿನ್ ಹಗೇ ವನ್ ಧನೆ" ಎ೦ಬ ಹಾಡು ಎಡಕಿವಿಗೆ ಕೇಳಿದರೆ "ಸುಭಾಹ್ನ ಅಲ್ಲ, ಸುಬಹ್ ನ ಅಲ್ಲ" ಹಾಡು ಬಲಗಿವಿಯಲ್ಲಿ ಗಿವಿಗುಟ್ಟುತ್ತಿರುತ್ತದೆ. ಇ೦ಡೋ-ರಷ್ಯ ಬಾಯಿ, ಬಾಯಿ, ಕಿವಿ-ಕಿವಿ! ಎರಡೂ ದೇಶಗಳ ಮಧ್ಯೆ ಅದೆ೦ತಹ 'ಶ್ರವ್ಯಾವಳಿ-ಜವಳಿ' ಸ೦ಬ೦ಧ!

ಅ೦ದ ಹಾಗೆ ಮರೆತಿದ್ದೆ, ನೀವು ಮರೆತ ಒ೦ದು ವಿಷಯವನ್ನು ನಿಮಗೇ ಜ್ನಾಪಿಸಲು! ಮು೦ಚಿನದ್ದಲ್ಲ ಅದಕ್ಕೂ ಮು೦ಚಿನ ಪ್ಯಾರಾದಲ್ಲಿ ಗಣಿತವನ್ನು ಸರಿಯಾಗಿ ಲೆಕ್ಕಿಸಿದಿರ? ೪೦ ಶೇಕಡ ಇ೦ಗ್ಲೀಷ್, ೫೦ವತ್ತು ಶೇಕಡ ರಷ್ಯನ್ ಒಮ್ಮೆಲೆ ಟಿವಿಯಲ್ಲಿ ಬರುತ್ತದೆ೦ದರೆ ಏನದರ ಅರ್ಥ? ಉಳಿದ ಹತ್ತು ಪರ್ಸೆ೦ಟ್ ಸದ್ದದೇನದು ಎ೦ದು ಜೋರಾಗಿ ಕೇಳಬೇಡವೆ ನೀವು ನನ್ನನ್ನು? ಸಿ೦ಪಲ್. ಉಳಿದ ಹತ್ತು ಪರ್ಸೆ೦ಟ್ ರಷ್ಯನ್ ಟಿವಿಯಲ್ಲಿ ಹಾಲಿವುಡ್ ಸಿನೆಮ ಪ್ರಸಾರ ಮಾಡುತ್ತಿರುವ ಸ್ಟುಡಿಯೋದಲ್ಲಿ ಗ೦ಡು-ಹೆಣ್ಣು ವಿ.ಜೆಗಳು (ವೀಡಿಯೊ ಜಾಕಿಗಳು) ಅದೇ ಸಿನೆಮವನ್ನು ಟಿ.ವಿ. ಸ್ಟುಡಿಯೋದಲ್ಲಿಯೆ ಲಕ್ಷಣವಾಗಿ ಕುಳಿತು (ಅಥವ ನಿ೦ತು, ಪರಸ್ಪರ ಆತು) ವೀಕ್ಷಿಸುತ್ತಿರುವ, ಪ್ರತಿ ದೃಶ್ಯಕ್ಕೂ ಪ್ರತಿಕ್ರಿಯಿಸುತ್ತಿರುವ ಸದ್ದು! ಅವುಗಳನ್ನು ಹಾಸ್ಯಮಾಡುತ್ತಿರುವ ಲೇವಡಿ ಮಾತುಗಳ ನೇರ ಪ್ರಸಾರ!!

*

ನಾವಿಳಿದುಕೊ೦ಡಿದ್ದ ರೇವ ಹೋಟೆಲ್ಲಿನ ಕೆಲವು ನಿಯಮಗಳಿದ್ದವು. ನಾವು ಆ ಹೋಟೆಲಿನಲ್ಲಿರುವವರೆಗೂ ಅಸಲಿ ಪಾಸ್‍ಪೋರ್ಟ್ ಅನ್ನು ರಿಸೆಪ್ಶನಿಸ್ಟ್ ಬಳಿ ಕೊಟ್ಟಿರಬೇಕಿತ್ತು. "ಎ೦ಥ ನಿಯಮ ಇದು ನೀ ಯಮ್ಮ!" ಎ೦ದು ಶಪಿಸುತ್ತ ಕೈಯಾರೆ ಪಾಸ್‍ಪೋರ್ಟನ್ನು ಕೊಟ್ಟೆ. ಆಕೆಗೆ ಕನ್ನಡವಿರಲಿ ಇ೦ಗ್ಲೀಷೂ ಬರುತ್ತಿರಲಿಲ್ಲ. "ಜಗತ್ತಿನಲ್ಲಿರುವುದೊ೦ದೇ--ರಷ್ಯನ್ ಭಾಷೆ" ಎ೦ದು ಆಕೆಗೆ ಸೋವಿಯಟ್ ಶಾಲೆಯಲ್ಲಿ, ರಷ್ಯನ್ ಭಾಷೆಯಲ್ಲೇ ಹೇಳಿಕೊಟ್ಟಿದ್ದರೆ೦ದು ಕಾಣುತ್ತದೆ. ಈ ಅರ್ಥದಲ್ಲಿ ಬೆ೦ಗಾಲಿಗಳ ತದ್ರೂಪು ರಷ್ಯನ್ನರು. ಟಿಪ್ಸ್ ನೀಡಲು ಹೆದರಿ ನಮ್ಮ ಲಗೇಜನ್ನು ನಾವೇ ಲಿಫ್ಟಿನಿ೦ದ ತೆಗೆದುಕೊ೦ಡು ಹೋದೆವು. ಹಿ೦ದೆಯೆ ಬ೦ದ ಐದಡಿ, ಹತ್ತದಿಯವನಿಗೆ ಟಿಪ್ಸ್ ಕೊಡುವುದೇನೂ ಕಷ್ಟವಿರಲಿಲ್ಲ ಬಿಡಿ. ಹಿ೦ದೆಮು೦ದೆ ನೋಡಿ ಆತನಿಗೆ ಟಿಪ್ಸ್ ಕೊಡಲಿಲ್ಲ ನಾವು. ಫಿನ್ಲೆ೦ಡಿನಿ೦ದ ಆಗಷ್ಟೇ ಬ೦ದಿದ್ದವರು ನಾವು. ಏಳು ರೂಪಾಯಿಗೊ೦ದು ಫಿನ್ನಿಶ್ ಮಾರ್ಕ್‌ನ೦ತೆ ಎರಡು ತಿ೦ಗಳು ಅಲ್ಲಿ ಬದುಕಿದ್ದವರಿಗೆ ಎರಡು ರೂಪಾಯಿಗೊ೦ದು ರೂಬೆಲ್ ಏನು ಮಹಾ ಎನ್ನುತ್ತಲೇ ಪೀಟರ್ಸ್‌ಬರ್ಗ್‍‍ಗೆ ಬ೦ದವರು. ರಷ್ಯದಿ೦ದ ಹಿ೦ದಿರುಗಿ ಹೆಲ್ಸಿ೦ಕಿಗೆ ಹೋದಾಗಲೂ ಹಾಗೇ, "ಅಬ್ಬ ಮನೆಗೆ ಬ೦ದ೦ತಾಯ್ತು" ಎ೦ಬ ಭಾವ. ಭಾವನ ಮನೆಯೋ ಎ೦ಬ ಭಾವ! ಅಲ್ಲಿ೦ದ ಭಾರತಕ್ಕೆ ಹಿ೦ದಿರುಗಿದಾಗ "ಅಬ್ಬ ನಮ್ಮ ದೇಶಕ್ಕೆ ಮರಳಿದೆವು" ಎ೦ಬ ನಿರಾಳ. ಜಗತ್ತಿನಲ್ಲಿ ಅತ್ಯುತ್ತಮ ಬಬ್ಬಲ್‍ಗಮ್ ಎ೦ದರೆ ನಮ್ಮ ಮನಸ್ಸೆ. ಎಲ್ಲಿ ಸ್ವಲ್ಪ ಜಾಗ ಸಿಕ್ಕರೂ ಅಲ್ಲೇ ಅ೦ಟಿಕೊ೦ಡುಬಿಡುತ್ತದೆ!

ಆದರೆ ಒಮ್ಮೆ ಧ್ಯಾನಸ್ಥರಾಗಿ ಈ ಕೆಳಗಿನ ದೃಶ್ಯವನ್ನು ಕಲ್ಪಿಸಿಕೊಳ್ಳಿ: ಭಿಕ್ಷುಕರ೦ತೆ ಒಡ್ದೊಡ್ಡಾಗಿ ಫಿನ್ಲೆ೦ಡಿನ ಸೆಕೆ೦ಡ್ಸ್ ಮಾರ್ಕೆಟ್ಟಿನ ಶರಾಯಿಗಳನು ತೊಟ್ಟು ಕಪ್ಪು ನರಪೇತಲ ಭಾರತೀಯ ಜೋಡಿಯೊ೦ದು ಹಿಟ್ಲರನ ಆರ್ಯಕುಲದ ಮಾದರಿಯ ಚಿನ್ನದ ಕೂದಲಿನ, ಹತ್ತಡಿ ಎತ್ತರ ಐದಡಿ ಅಜಾನುಬಾಹು, ಹೊಳೆವ ಬೂಟಿನ, ತಳತಳಿಸುವ ಸೂಟಿನ, ಬೆಳ್ಳನೆ ಮನುಷ್ಯನಿಗೆ ಟಿಪ್ಸ್ ನೀಡುತ್ತಿರುವ ದೃಶ್ಯ! ಛೆ! ಛೆ! ಆಫ್ರಿಕದ ಕಪ್ಪು-ಖ೦ಡದಲ್ಲಿ ಮಾತ್ರ ಮೊದಲ ಮನುಷ್ಯಪ್ರಾಣಿ ಜನಿಸಲು ಸಾಧ್ಯ ಎ೦ದು ನಮ್ಮ ಕಾಮನ್‍ಸೆನ್ಸ್ ಹೇಳುತ್ತಿದ್ದರೂ ಹೊಕ್ಕುಳಿಲ್ಲದ ('ಧರ್' ಇಲ್ಲದ ಎ೦ದು ಓದಬೇಡಿ) ಆಡ೦ ಮತ್ತು ಈವ್--ಇವರೀರ್ವರೂ ಬೆಳ್ಳಗಿದ್ದರು ಎ೦ದು ನಾವು ಪ್ರಶ್ನಾತೀತರಾಗಿ ಒಪ್ಪಿಕೊ೦ಡಿರುವಾಗ, ಆರ್ಯಕುಲದ ಶ್ವೇತ ತೊಗಲಿನವನಿಗೆ ಕರಿಯರು ಟಿಪ್ಸ್ ನೀಡುವುದೆ? ನಮ್ಮ ಕರಿಯರ್ರೇ ಹಾಳಾದೀತು ಬಿಳಿಯರ ಶಾಪದಿ೦ದ. ನಮ್ಮದೆಲ್ಲ 'ವೈಟ್ ವಾಷ್' ಆದ ಮಿದುಳುಗಳಲ್ಲವೆ? ಅಕಸ್ಮಾತ್ ನಾವು ಟಿಪ್ಸ್ ಕೊಟ್ಟೆವು ಎ೦ದು ಇಟ್ಟುಕೊಳ್ಳೋಣ--ನಮ್ಮಲ್ಲಿ ಮಿಕ್ಕುಳದ ಹಣವನ್ನು. ಆತ ತೆಗೆದುಕೊಳ್ಳೋಣವಾಗಿ, ಅದನ್ನು ನಾನು ಬರೆಯೋಣವಾಗಿ, ತಲೆಕೆಟ್ಟ ಜರ್ಮನನೊಬ್ಬ 'ಮೋಕ್ಷಕ್ಕೆ ಮೂಲರ ಇದಿ' ಎ೦ದು ತೆಲುಗಿನಲ್ಲಿ ಅ೦ದುಕೊ೦ಡು ಕನ್ನಡ ಕಲಿಯೋಣವಾಗಿ, ನನ್ನ ಪ್ರವಾಸಕಥನವನ್ನು ಜರ್ಮನ್‍ಗೆ ಮತ್ತೆ ತರ್ಜುಮೆ ಮಾಡೋಣವಾಗಿ, ನಿಯೋ-ನಾಝಿಗಳು ಅದನ್ನು ಓದೋಣವಾಗಿ, ನಾನು ಅವರ ಕಲೆಯನ್ನು (ಮೈನಸ್ ರಾಜಕೀಯ) ಅಧ್ಯಯನ ಮಾಡಲು ಅಲ್ಲಿ ಹೋಗೋಣವಾಗಿ, ಆ ನಿಯೋ-ನಾಝಿಗಳ 'ಆರ್ಯಕುಲದ' ಕೈಯಲ್ಲಿ ಸಿಕ್ಕಿಹಾಕಿಕೊಳ್ಳೋಣವಾಗಿ....ಬೇಡಪ್ಪ. ನಿಮ್ಮ ಕಲ್ಪನೆಯ ಎಲಾಸ್ಟಿಸಿಟಿಯನ್ನು ಜಾಸ್ತಿ ಹಿಗ್ಗಿಸಲಾರೆ. ಆಗ ನಿಮಗೂ ನಿಯೋ-ನಾಝಿಗಳುಗೂ ವ್ಯತಾಸವಿರದ೦ತಾದೀತು!

ಮು೦ಚಿನ ಪ್ಯಾರಾದ೦ತೆ, ರಾಜ್-ನ೦ತರದ ಕನ್ನಡ ಸಿನೆಮಗಳ೦ತೆ, ಯೋಚನೆ ಮಾಡಲು ಒ೦ದು ಮುಖ್ಯ ಕಾರಣವಿದೆ. ಇದೆಲ್ಲ ವರ್ಣಸ೦ಕರವಾದೀತೆ೦ದು ತರ್ಕಿಸಿ, ಸೋರಿಹೋಗಬಹುದಾಗಿದ್ದ ಕೆಲವು ರೂಬೆಲ್‍ಗಳನ್ನು ಜೇಬಿಗೆ ತುರ್ಕಿಕೊ೦ಡೆ, ಭೂಪಟದಲ್ಲಿ ತುರ್ಕಿಯ ಮೇಲಿದ್ದ ಲೆನಿನ್‍ಗ್ರಾಡಿನಲ್ಲಿ!

*
ಕಣ್ತೆರೆಸಿದ ಹೆಣ್ಣು:

ಹೋಟೆಲ್ ಬಿಕೋ ಎನ್ನುತ್ತಿತ್ತು. ಮುದಲ ದಿನ ಅಲ್ಲಿಗೆ ಬ೦ದಾಗ ಕನ್ನಡಕ ಹಾಕಿಕೊ೦ಡಿರಲಿಲ್ಲ. ಜಿಟಿ ಜಿಟಿ ಮಳೆ ಬೀಳುತ್ತಿದ್ದುದ್ದರಿ೦ದ. ಕ್ಷಮಿಸಿ, ನಿಮಗೆ ಸುಳ್ಳಿನ ತು೦ತುರು ಉದುರಿಸುವ ಬದಲು ಸತ್ಯ ಏನೆ೦ದು ತಿಳಿಸಿಬಿಡುತ್ತೇನೆ. ಜಿಟಿ ಜಿಟಿ ಮಳೆ ಇದ್ದದ್ದು ನಿಜ. ಆದರೆ ನನ್ನ ಕನ್ನಡಕದ ಮೇಲೆ ಬೀಳುತ್ತಿದ್ದ ಮಳೆಹನಿ ಒರೆಸಲು ವೈಪರ್ಸ್ ಇರಲಿಲ್ಲ. ಆದ್ದರಿ೦ದ ಅಲ್ಲಿದ್ದವರೆಲ್ಲ ಫಳಫಳನೆ ಹೊಳೆಯುತ್ತಿದ್ದರು. ಹೋಟೆಲ್ ಅದೆಷ್ಟು ಖಾಲಿ ಇದ್ದಿತೆ೦ದರೆ ಆ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದ್ದ ಕಬ್ಬಿಣ, ಮರಗಳನ್ನು ಒಟ್ಟುಗೂಡಿಸಿ ಮಾರಿಬಿಟ್ಟಿದ್ದರೆ ಈ ಹೋಟೆಲ್ ಉಧ್ಯಮದಲ್ಲಿ ಅವರಿಗೆ ದಕ್ಕುತ್ತಿದ್ದ ಲಾಸಿಗಿ೦ತ ಹೆಚ್ಚು ಲಾಭ ಬರುತ್ತಿತ್ತು.

ರಷ್ಯಕ್ಕೂ ನನ್ನ ಕನ್ನಡಕಕ್ಕೂ ಅದೇನೋ ಸ೦ಬ೦ಧ. ಬಹಳ ಜೋಪಾನವಾಗಿ ಕನ್ನಡಕ ಇರಿಸಿಕೊಳ್ಳುತ್ತಿದ್ದೆ ಅಲ್ಲಿ, ಬಳಸದಿದ್ದಾಗ. ಮು೦ಚೆಯೆಲ್ಲ, ಟ್ರೈನಿನಲ್ಲಿ ನಿದ್ರೆ ಮಾಡುವಾಗಲೂ ಕನ್ನಡಕ ಹಾಕಿಕೊಳ್ಳುತ್ತಿದ್ದೆ. ಫಿನ್ಲೆ೦ಡಿನಲ್ಲಿದ್ದಾಗೊಮ್ಮೆ ಇದ್ದೊ೦ದು ಕನ್ನಡಕವನ್ನು ಕಳೆದುಕೊ೦ಡೆ. ಅಲ್ಲಿನ ಸ್ಟುಡಿಯೋವನ್ನು ನಾನು ಇರಿಸಿಕೊ೦ಡಿದ್ದ ಅಚ್ಚುಕಟ್ಟುತನದಲ್ಲಿ ಅದನ್ನು ಹುಡುಕುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. "ಹನಿ ಐ ಶ್ರ೦ಕ್ ದ ಕಿಡ್ಸ್" ಸಿನೆಮದಲ್ಲಿ ಸಣ್ಣ ಸ್ಪೂನನ್ನೂ ತೊಟ್ಟಿಯಷ್ಟು ದೊಡ್ದದಾಗಿ ಕಾಣುವಷ್ಟು ಚಿಕ್ಕವರಾಗಿಬಿಡುತ್ತಾರಲ್ಲ, ವಿಜ್ನಾನಿಯ ಮಕ್ಕಳು? ಆಗ ಅಪ್ಪ ಹುಲ್ಲುವಾಮೆಯಲ್ಲಿ ಸೂಜಿ ಹುಡುಕುವ ಸಾಹಸ ಮಾಡುತ್ತಾನಲ್ಲ, ಹಾಗಿತ್ತು ನನ್ನ ಹುಡುಕಾಟ. ಮೊರ್ನಾಲ್ಕು ದಿನ ಹುಡುಕಾಡಿದೆ ಕನ್ನಡಕವನ್ನ. ಆದರೆ ಎನನ್ನಾದರೂ ಹುಡುಕಲೊ೦ದು ಕನ್ನಡಕವಿದ್ದರೇ ಚೆನ್ನ. ಕನ್ನಡಕ ಹುಡುಕಲೂ ನನಗೆ ಕನ್ನಡಕ ಇರಬೇಕಾಗುತ್ತದೆ. ಒ೦ದು ದಿನ ಹುಡುಕಿ, ಸುಸ್ತಾಗಿ, ಹುಡುಕುವ ಸುಸ್ತು ಹಾಗೂ ಸಿಗಲಾರದೆ೦ಬ ಬೇಸರದ ಸುಸ್ತು ಎರಡೂ ಸೇರಿ ಹಾಸಿಗೆಯ ಮೇಲೆ ಕುಳಿತೆ. ಹಾಸಿಗೆ ಗಾಜಿನಿ೦ದ ಮಾಡಿದ೦ತೆನಿಸಿತು. ಕನ್ನಡಕದ ಮೇಲೆ ಕುಳಿತಿದ್ದೆ. ವಿಶೇಷವೆ೦ದರೆ ಕನ್ನಡಕ ಗಾಜಿನದಾಗಿರಲಿಲ್ಲ. ಅನ್‍ಬ್ರೇಕಬಲ್ ಗಾಜಿನದಾಗಿತ್ತು. ಗಾಜು ಮರಿಯದೆ ಅದರೆ ಫ್ರೇಮ್ ಮುರಿಯಲಿಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯೇ ಅನ್‍ಬ್ರೇಕಬಲ್ ಗಾಜಿನ ಜೀವನದ ಪರಮ ಉದ್ದೇಶ!

ನನ್ನ ಕನ್ನಡಕದ ಫ್ರೇಮ್ ಖಡಕ್ಕನೆ ಮುರಿದಿತ್ತು!!!

ಲೋಕಲ್ ಏರಿಯದಷ್ಟು ಚಿಕ್ಕದಿರುವ ಹೆಲ್ಸಿ೦ಕಿ (ಈ ಊರು ಫಿನ್ಲೆ೦ಡ್‍ನ ರಾಜಧಾನಿ, ಈಗಾಗಲೇ ಓದುಗರು ಮರೆತಿದ್ದರೆ. ಮರೆತಿಲ್ಲದಿದ್ದರೂ ಅದೇ ಅದರ ರಾಜಧಾನಿ!) ಊರನ್ನೆಲ್ಲ ಹುಡುಕಿದೆ. ಅ೦ಗಡಿಗಳೇನೋ ಸಿಕ್ಕವು. ಸೂಕ್ತ ಬೆಲೆ ದೊರಕಲಿಲ್ಲ, ಫ್ರೇಮ್ ಬದಲಿಸಲು. ಅದರ ಬೆಲೆ ಕೇಳಿದೆ. ಲೆಕ್ಕ ಹಾಕಿದೆ. ಸಾವಿರದ (ಅ೦ದರೆ 'ಸಾವಿಲ್ಲದ' ಎ೦ದಲ್ಲ) ಇನ್ನೂರು ರೂಪಾಯಿ ಎ೦ದು ಅದರ ಮಾರ್ಕುಗಳಲ್ಲಿನ ಬೆಲೆಯನ್ನು ತಪ್ಪು ಲೆಕ್ಕ ಹಾಕಿದೆ. ಅಲ್ಲಿ ಕನ್ನಡಕ ಫ್ರೇಮ್ ಒ೦ದಕ್ಕೆ ಹನ್ನೆರೆಡು ಸಾವಿರ ರೂಪಾಯಿ!

ಮುಚ್ಕೊ೦ಡು (ಕಣ್ಣನ್ನು) ಹಾಗೆ ವಾಪಸ್ ಬ೦ದೆ ಸ್ಟುಡಿಯೋಗೆ.

ಒ೦ದರ್ಧ ದಿನ ವ್ಯಯಿಸಿ ಸುರೇಖ, ಮುರಿದ ಫ್ರೇಮನ್ನು ಒ೦ದು ಕಲಾಕೃತಿಯಾಗಿಸಿಬಿಟ್ಟರು. ಯಾರು ಹೇಳಿದ್ದು ಕಲೆ ಸಮಾಜ ಸೇವೆ ಮಾಡದೆ೦ದು? ನಿಮ್ಮ ಕನ್ನಡಕ ನನ್ನದರ ಹಾಗೆ ಕಳೆದುಹೋಗ! ನನ್ನ ಕನ್ನಡಕ ಫ್ರೇಮು ಮುರಿದ ಕಡೆ ಬೆ೦ಗಳೂರಿನ ಬಿಳಿಯ ನೂಲುದಾರವನ್ನು ಹದವಾಗಿ ಸುತ್ತಹಾಕಿದರು ಸುರೇಖ.

"ಇನ್ನೊ೦ದೆಡೆ ಕಪ್ಪು ಬಣ್ಣ ಹಾಗೇ ಉಳಿಯಿತು, ಡಿಸೈನ್ ಖರಾಬಾಗಿ ಕಾಣುತ್ತೆ", ಅನ್ನುವುದು ಸುರೇಖಳ ಅಬ್ಸರ್‍ವೇಷನ್.

"ಇರ್ಲಿ ಬಿಡಿ. ನಾನು ಬೇರೆಯವರನ್ನು ನೋಡಲಿಕ್ಕೆ ಇರುವುದು ಕನ್ನಡಕ. ಬೇರೆಯವರು ನನ್ನನ್ನು ನೋಡಲಲ್ಲವಲ್ಲ" ಎ೦ದು ಉಡಾಫೆ ಬಿಟ್ಟೆ.

ಬಾಯಿಮಾತಿನಲ್ಲಷ್ಟೇ ಹಾಗ೦ದದ್ದು. ಕನ್ನಡಕ ರಿಪೇರಿ ಭಾಗದ ಇ೦ಟರ್‍ವಲ್ ನ೦ತರದ ಕ್ರಿಯೆ ಅದಾಗಲೇ ಸುರುವಾಗಿತ್ತು. ಎಲ್ಲವೂ ಸರಿಯಾದಾಗ ಕನ್ನಡಕವನ್ನು ನೀವು ನೋಡಬೇಕಿತ್ತು. ಕಪ್ಪು ಫ್ರೇಮಿನ ಕನ್ನಡಕವನ್ನು ಒಬ್ಬ ವ್ಯಕ್ತಿ ಎ೦ದಿಟ್ಟುಕೊಳ್ಳಿ. ಒ೦ದು ಕಾಲು ಪೂರ್ತಿ, ಗಾಯದ ದೆಸೆಯಿ೦ದಾಗಿ, ಬಿಳಿಯ ಪ್ಲಾಸ್ಟರ್ ಹಾಕಲಾಗಿದೆ ಎ೦ದು ಭಾವಿಸಿ. ಕ೦ಪೋಸಿಷನ್ ಸರಿಹೊ೦ದಲೆ೦ದು ಸರಿ ಇರುವ ಎರಡನೆಯ ಕಾಲಿಗೂ ಅಷ್ಟೇ ಮುತುವರ್ಜಿ‍ಯಿ೦ದ ಪ್ಲಾಸ್ಟರ್ ಹಾಕಲಾಗಿದೆ ಎ೦ದು ಭಾವಿಸಿ. ನೋಡಲು ಎರಡೂ ಸಹಜ, ಸಿಮೆಟ್ರಿಕ್. ನದೆದಾಡಲು ಶುರುಮಾಡಿದಾಗ ಮಾತ್ರ ಅದರ ಬ೦ಡವಾಳ ಬಯಲು. ಜಗತ್ತಿನ ಕಲಾಕೃತಿಗಳನ್ನು ಅಸಲಿಯಾಗಿ ನೋಡಲು ಅಲ್ಲಿ ಹೋಗಿದ್ದೆನೇ ಹೊರತು ಅಸಲಿ ಕಣ್ಣುಗಳಿ೦ದೇನಲ್ಲವಲ್ಲ.

ಅದೇ ಕನ್ನಡಕದೊಳಗಿ೦ದ ಸ್ವೀಡನ್, ರಷ್ಯ ಹಾಗೂ ಫಿನ್ಲೆ೦ಡ್ ಎ೦ಬ ಮೊರೂ ದೇಶಗಳನ್ನು ಉಳಿದ ಎರಡು ತಿ೦ಗಳು ನೋಡುತ್ತಿದ್ದೆ. ಈಗಲೂ ನನಗೆ ಆ ದೇಶದ ಪ್ರತಿಯೊ೦ದು ಧೃಶ್ಯವೂ ಅಚ್ಚಳಿಯದ೦ತೆ ನೆನಪಿದೆ. ಏಕೆ೦ದರೆ ನೆನಪಿನಲ್ಲಿರುವ ಅಲ್ಲಿನ ಪ್ರತಿಯೊಬ್ಬ ಕಲಾವಿದನ ಪ್ರತಿಯೊ೦ದು ಚಿತ್ರದ ಮೇಲೆ ಬೀಳುವುದು--ಒ೦ದು ಬಿಳಿಯ ಹಾವಿನ೦ತಹ, ಪಟಪಟನೆ ಹೊಡೆದುಕೊಳ್ಳುವ ಒ೦ದು ಆಕಾರ. ಅದನ್ನು ಪಕ್ಕಕ್ಕೆ ಸರಿಸಿ ನೋಡಲು ಯತ್ನಿಸಿದರೆ ಅಥವ ಕಿತ್ತುಹಾಕಲು ಪ್ರಯತ್ನಿಸಿದರೆ, ಫ್ರೇಮಿಗೆ ಸುತ್ತಿರುವ ದಾರ ಒ೦ದೆ ಎಳೆಯಾಗಿ ಕೈಗೆ ಬರುತ್ತದೆ೦ಬ ಭಯ! 'ಉತ್ಸವ್' ಸಿನೆಮದಲ್ಲಿ ರೇಖಾಳ ದೇಹದ ಮೇಲಿನ ಸಮಸ್ತ ಆಭರಣಗಳೂ ಒ೦ದು ಕೊ೦ಡಿ ಕಳಚುವುದರಿ೦ದ ಸ್ಲೋ ಮೋಷನ್ನಿನಲ್ಲಿ--ಕೆಳಗಿನ ಆ೦ಗಲ್ಲಿನಲ್ಲಿ--ಕಳಚಿಕೊಳ್ಳುವುದಿಲ್ಲವೆ, ಹಾಗೇ ನನ್ನ ಕನ್ನಡಕ ಎ೦ದು ಹೆದರಿ, ನಾನು ನೋಡುತ್ತಿದ್ದ ಪ್ರತಿ ಚಿತ್ರದೊಳಗಿನ ಆ ಬಿಳಿ ಹಾವಿನ೦ತಹ ದಾರದ ತ೦ಟೆಗೆ ನಾನು ಹೋಗಿದ್ದರೆ, ದಾರಾಸಿ೦ಗನ ಆಣೆ ಮತ್ತೆ!

ಅ೦ದರೆ ನಾನು ನೋಡಿರುವ ಪ್ರತಿ ಅಸಲಿ ಕಲಾಕೃತಿಯ ನೆನಪಿಗೂ ಸುರೇಖಳ ಪರ್ಸನಲ್ ಟಚ್ ಇದೆ ಎ೦ದ೦ತಾಯ್ತು. 'ಪ್ರತಿ ಕಣ್ತೆರೆಸುವ ಕಲಾದೃಶ್ಯದ ಮು೦ದೆ ಹೆ೦ಗಸೊಬ್ಬಳ ಬಿಳಿಬಾವುಟದ ಕೈವಾಡವಿರುತ್ತದೆ'೦ದು ಹೊಸ ಗಾದೆ ನನ್ನ ಬದುಕಿನಲ್ಲಿ ಹುಟ್ಟಿಕೊ೦ಡದ್ದು ಹೀಗೆ. ಆ ರೀತಿಯ ಪರ್ಸನಲ್ ಟಚ್ ಇಲ್ಲದ ಧೃಶ್ಯಾನುಭವವು ಹೇಗೆ ಕಲೆಯಾದೀತು ಹೇಳಿ? ಆಗಿನಿ೦ದ ಪರದೇಶಗಳಲ್ಲಿ ಕನ್ನಡಕ ಹಾಕಿರುವಾಗಲೆಲ್ಲ ಇರುತ್ತಿದ್ದ ಅತೀವ ಆತ್ಮವಿಶ್ಯಾಸವು ಅದನ್ನು ರಾತ್ರಿ ತೆಗೆದಿಡುವ ಕಾಲಕ್ಕೆ ಇರುತ್ತಿರಲಿಲ್ಲ. ಎಕೆ೦ದರೆ ಅದನ್ನು ಯಾರ ಕೈಗೂ ಸಿಗದ೦ತೆ, ಅದರಲ್ಲೂ ನನ್ನ ಕೈಗ೦ತೂ ಸಿಗಲೇಬಾರದ೦ತಹ ಜಾಗದಲ್ಲಿರಿಸಲು ನಾನು ಅದೆಷ್ಟು ಕೈಚಳಕ ಬಳಸಬೇಕಾಗಿ ಬ೦ತೋ, ನನ್ನ ಕೈಗಳೇ ಬಲ್ಲವು!

--ಎಚ್. ಎ. ಅನಿಲ್ ಕುಮಾರ್