ಕಿದ್ದಾರ ಪದದ ಸಮಸ್ಯೆಗೆ ಈ ಉತ್ತರ ಸರಿಯೆ?
ಕಿದ್ದಾರ ಪದದ ನಿಷ್ಪತ್ತಿ ಮತ್ತು ಅರ್ಥ ಬಯಸಿ ನಾನು ಸಂಪದದಲ್ಲಿ ಚರ್ಚೆ ಆರಂಭಿಸಿದೆ. http://www.sampada.net/forum/23036
ಕೆಲವರು ನನ್ನ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಸಮರ್ಪಕ ಎನ್ನಬಹುದಾದ ಪರಿಹಾರ ದೊರೆಯಲಿಲ್ಲ. ಸಮಸ್ಯೆಯನ್ನು ನಿಮ್ಮ ಮುಂದಿಟ್ಟು ನಾನು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಹಲವಾರು ಪದಕೋಶಗಳನ್ನು, ಒಂದಿಬ್ಬರು ವಿದ್ವಾಂಸರನ್ನು ಎಡತಾಕಿ ಸಮಾಧಾನಕರ ಎನ್ನಬಹುದಾದ ಪರಿಹಾರವನ್ನು ಶೋಧಿಸಿದ್ದೇನೆ. ಇದು ಸಮಂಜಸವೇ ಎನ್ನುವುದನ್ನು ಆತ್ಮೀಯ ಬ್ಲಾಗಿಗರು ಹೇಳಬೇಕು.
ಬಯಲುಸೀಮೆಯಲ್ಲಿ (ನನ್ನದು ಹಾಸನ ಜಿಲ್ಲೆ) ಕಿದ್ದಾರ ಪದವನ್ನು ಕೆಳಮಟ್ಟದ ಜಮೀನು ಅಥವಾ ಮಟ್ಟಸವಲ್ಲದ ಜಮೀನಿನಲ್ಲಿನ ಕೆಳಭಾಗ, ಅಥವಾ ಮೇಲಿನಿಂದ ನೀರು ಹರಿದು ಬಂದು ನಿಂತುಕೊಳ್ಳುವ ಜಾಗ ಎಂಬರ್ಥದಲ್ಲಿ ಬಳಸುತ್ತಾರೆ.
ಕಿದ್ದಾರ ಎಂಬ ಪದವನ್ನು ಬಿಡಿಸಿದಾಗ ಕಿಳ್ ಅಥವಾ ಕಿೞ್ ಹಾಗೂ ಕೀಳ್ (ಕೆಳಮಟ್ಟ) ಅಥವಾ ಕೀೞ್ (ಕೆಳಮಟ್ಟ) ಎಂಬ ಪೂರ್ವಪದ ದೊರೆಯುತ್ತದೆ.
ತಾರ (ಇಳಿಯುವುದು) ಅಥವಾ ದಾರ (ಸೂತ್ರ, ಬಾಗಿಲು) ಅಥವಾ ಧಾರೆ/ಧಾರ (ಹರಿಯುವುದು, ಮೇಲಿನಿಂದ ಹರಿದುಬರುವ ನೀರು) ಎಂಬರ್ಥದ ಉತ್ತರ ಪದಗಳು ದೊರೆಯುತ್ತವೆ.
ಕೀಳ್(ೞ್) + ತಾರ (ಧಾರ) = ಕೀಳ್ದಾರ > ಕಿಳ್ದಾರ > ಕಿದ್ದಾರ ಎಂಬುದಾಗಿ ಪದ ರೂಪಗೊಂಡಿರಬಹುದು.
ಕೆಳಮಟ್ಟದ ಜಮೀನು, ಇಳಿಜಾರಿನ ಕೊನೆ, ಕೆಳಮಟ್ಟದಲ್ಲಿ ನೀರು ನಿಲ್ಲವ ಜಾಗ ಇತ್ಯಾದಿ ಅರ್ಥ ದೊರೆಯುತ್ತದೆ.