ನೀ ಅಂಕಲ್ ಎಂದು ಕರೆಯದಿರು ಎನ್ನಾ...
ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ ಮತ್ತು ಮತ್ತಿಬ್ಬರನ್ನೂ ಅಂಕಲ್, ಅಣ್ಣ ಎಂದು ಸಂಬೋಧಿಸಿ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಂಕಲ್ ಅಣ್ಣ ಎನ್ನಲು ಕಾರಣ ನೀಡಿದ ಅವರು ತನಗೆ ತನ್ನ ಅಮ್ಮ ಹಿರಿಯರನ್ನು ಅಂಕಲ್ ಅಣ್ಣ ಎಂದು ಕರೆಯಬೇಕು, ಹಾಗೆ ಮಾಡದಿದ್ದರೆ ಅಮ್ಮ ಬಯ್ಯುತ್ತಾರೆ ಎಂದು ಹೇಳಿದರು. ನನ್ನ ಮಟ್ಟಿಗೆ ಹೇಳುವುದಾದರೆ ನನ್ನನ್ನು ಅಣ್ಣ ಎಂದೋ ಮಾವ ಎಂದೋ ಅಂಕಲ್ ಎಂದೋ ಏನು ಕರೆದರೂ ವ್ಯತ್ಯಾಸವಿಲ್ಲ. ಏಕೆಂದರೆ ಇದು ಭಾರತೀಯರಿಗಿರುವ ಗುಣ. ಹಿರಿಯರನ್ನು ಗೌರವಿಸುವುದರೊಂದಿಗೆ ಅವರಿಗೆ ತಮ್ಮ ವಯಸ್ಸಿನ ಪರಿಕಲ್ಪನೆಯೂ ಇರಲಿ ಎನ್ನುವ ತುಂಟತನ, ಚೇಷ್ಟೆ. ನಮಗೆ ವಯಸ್ಸಿನ ಮೇಲೆ ಒಂದು ತೆರನಾದ ಆಸಕ್ತಿ, ಕುತೂಹಲ. ಏಕೆಂದರೆ ಇದು ಬೇರೆಯವರಿಗೆ ಸಂಬಂದಿಸಿದ್ದಲ್ಲವೇ, ಮತ್ತು ನಮ್ಮ ವಿಷಯಕಿಂತ ಹೆಚ್ಚಾಗಿ ಇತರರ ಬಗ್ಗೆ ಯೋಚಿಸಿ ಕೊರಗುವ ಪರೋಪಕಾರಿಗಳಲ್ಲವೇ ನಾವು? ಹೊರದೇಶಗಳಲ್ಲಿ ಅಂಕಲ್ ಆಂಟಿ ಅಂತ ಸಂಬಂಧಿಕರನ್ನು ಮಾತ್ರ ಕರೆಯುತ್ತಾರೆ. ನಮ್ಮಲ್ಲಿ ಹಾಗಲ್ಲ, ಅಪರಿಚಿತರು, ಪರಿಚಿತರು, ದಾರಿಹೋಕರು, ಕಳ್ಳರು ( "ಆ ಕಳ್ಳ ಅಂಕಲ್ ನನ್ನ ಪರ್ಸ್ ಕದ್ದುಕೊಂಡು ಓಡಿದ ಮಮ್ಮಿ" ಅಂತ ಮೊನ್ನೆ ಎಲ್ಲೊ ಕೇಳಿದ ನೆನಪು ) ಹೀಗೆ ಸಮಾಜದ ವಿವಿಧ ಜೀವಿಗಳಿಗೆ ಸಂಬೋಧಿಸುತ್ತಾರೆ. ಹಾಗೆಯೇ ತಮಗೆ ಆಗದ ವ್ಯಕ್ತಿಗೆ ತಮ್ಮ ಮಕ್ಕಳಿಂದ ಆಂಟಿ ಎಂದು ಕರೆಸಿ ಖುಷಿ ಪಡುವವರೂ ( ಮಹಿಳೆಯರು) ಇದ್ದಾರೆ. ಪಕ್ಕದ ಮನೆಯ ಪದ್ಮಿನಿಯ ಸೊಕ್ಕನ್ನು ಈ ರೀತಿ ಇಳಿಸುವುದೇ ಸೂಕ್ತ, ಅಲ್ಲವೇ?
ಮಹಿಳೆಯರಿಗೆ ವಯಸ್ಸಿನ ಖಯಾಲಿ ( ಖಾಯಿಲೆಯೂ ಸಹ ) ಸ್ವಲ್ಪ ಜಾಸ್ತಿಯೇ. ಇದನ್ನು ಓದುವ ಎಲ್ಲಾ " ಶೀ" ಸಂಪದಿಗರೂ ಸಹಜವಾಗಿಯೇ "ಒಪ್ಪದೇ" ಒಪ್ಪುತ್ತಾರೆ. ಒಮ್ಮೆ ನಮ್ಮ ಮನೆಗೆ ಒಂದಿಷ್ಟು ಜನ ನೆಂಟರು ಬಂದರು. ಅದರಲ್ಲಿ ಒಬ್ಬಾಕೆ ನನ್ನ ತಂಗಿಯನ್ನು " ಆಂಟಿ " ಎಂದು ಉಲಿದು ನನ್ನ ಪ್ರೀತಿಯ ತಂಗಿಯ ಮುಖ "doughnut" ನಂತೆ ಊದಿಕೊಳ್ಳುವಂತೆ ಮಾಡಿದಳು. ನೋಡಣ್ಣಾ, ಎಷ್ಟು ಸೊಕ್ಕು ಅವಳಿಗೆ ನನಗೆ ಅಷ್ಟು ವಯಸ್ಸಾಯಿತಾ ಆಂಟಿ ಎಂದು ಕರೆಸಿಕೊಳ್ಳಲು ಎಂದು ಹಲ್ಲು ಮಸೆದಳು. ಅಮ್ಮ, ನೀವು ಹೆಂಗಳೆಯರಿಗೆ ಎಷ್ಟೆಲ್ಲಾ ತಾಪತ್ರಯ ನೋಡು ಎಂದು ಹೇಳುವ ಮನಸ್ಸಾದರೂ ಅವಳ ಮುಖದ ಮೇಲಿನ ಆವಿ ನೋಡಿ ಸುಮ್ಮನಾದೆ. ನನ್ನನ್ನೂ ಕೆಲವರು ( ನಾನು appearance ನಲ್ಲಿ ನಿಜವಾಗಲೂ ತುಂಬಾ ಚಿಕ್ಕವನಾಗಿ ಕಾಣುತ್ತೀನ್ರೀ ) ಅಂಕಲ್ ಎಂದು ಕರೆಯುತ್ತಾರೆ. ನಾನು ಕೇಳಿಸಿದರೂ ಕೇಳಿಸದಂತೆ ನಟಿಸಿ ಸುಮ್ಮನಾಗುತ್ತೇನೆ. ಎಲ್ಲರಿಗೂ ಅಂಕಲ್ ಆಗಲು ನಾವೇನು ಪಬ್ಲಿಕ್ ಆಸ್ತಿಯೇ? ಅದರಲ್ಲೂ ಯುವತಿಯರು ಅಂಕಲ್ ಎಂದು ಕರೆದಾಗ ಸ್ವಲ್ಪ ಕಸಿವಿಸಿ ಆಗೋದು ನಿಜ ಅನ್ನಿ. ಹೀಗೆ ಹೇಳಿದ್ದಕ್ಕೆ ಇವನ ವಯಸ್ಸೆಷ್ಟಿರಬೇಕು ಎಂದು ಪಂಚಾಗ ಬಿಡಿಸಬೇಡಿ. ನೀವು ಎಂಥದೇ ಲಾಗ ಹಾಕಿದರೂ ಆ ರಹಸ್ಯ ಮಾತ್ರ ನಾನು ಬಿಟ್ಟುಕೊಡಲ್ಲ. ಆ ರಹಸ್ಯ ಬಿಟ್ಟುಕೊಟ್ಟು ಅಂಕಲ್ ಬದಲಿಗೆ ಅಜ್ಜ ಎಂದು ಕರೆಸಿಕೊಳ್ಳುವ ಶಕ್ತಿಯೂ ನನ್ನಲ್ಲಿಲ್ಲ. ಅದು ನನ್ನ closely guarded ಸೀಕ್ರೆಟ್ಟು. you look amazingly young ಎಂದು ಹೇಳುವುದನ್ನು ಕೇಳುವಾಗ ನನ್ನಲ್ಲಿ ಆಗುವ ಪುಳಕ ಇಲ್ಲಿ ವರ್ಣಿಸಿ ಪ್ರಯೋಜನವಿಲ್ಲ. ತುಂಬಾ ಜನ ( ವಿರುದ್ಧ ಲಿಂಗದವರು) ತಪ್ಪು ಲೆಕ್ಕ ಹಾಕಿ ಮೋಸ ಹೋದದ್ದೂ ಇದೆ.
ಯಾವ ವಿಷಯದ ಬಗ್ಗೆ ಮರೆವನ್ನು ಪ್ರದರ್ಶಿಸಿದರೂ ವಯಸ್ಸಿನ ನೆನಪು ( ಇತರರ ) ಮಾತ್ರ ಹೆಣ್ಣು ಮಕ್ಕಳಿಗೆ ಚೆನ್ನಾಗಿ ಇರುತ್ತದೆ. ಅದೊಂಥರಾ photographic memory. ನೀವೆಂಥದ್ದೆ ರೇಶಿಮೆ ಸೀರೆ ಕೊಡಿಸಿದರೂ, ಒಳ್ಳೆ romantic ಸ್ಥಳಕ್ಕೆ ಕರೆದುಕೊಂಡು ಹೋದರೂ ಅದರ ಮಜಾ ಮುಗಿದ ಕೂಡಲೇ ಮರೆತು ಬಿಡುತ್ತಾರೆ. ಅಷ್ಟು ಮಾತ್ರ ಅಲ್ಲ, ಜಗಳ ಶುರು ಆದಾಗ ನೀವೇನು ಮಹಾ ಕೊಡಿಸಿ ಬಿಟ್ಟಿದ್ದೀರ ನನಗೆ ಎನ್ನುವ ಮೂದಲಿಕೆ ಬೇರೆ. ಆದರೆ ಇದು ಪರರ ವಯಸ್ಸಿಗೆ ಅನ್ವಯ ಆಗೋದಿಲ್ಲ. d
ನೆಂಟರಿಷ್ಟರೊಂದಿಗೆ ಮಾತನಾಡುವಾಗ ವಯಸ್ಸಿನ ಟಾಪಿಕ್ ಬಂದಾಗ ನಾನು ನನ್ನ ವಯಸ್ಸನ್ನು ಎಲ್ಲಿ ಹೇಳಿ ಬಿಡುವೆನೋ ಎಂದು ನನ್ನ ಸೋದರಿಯರು ಆತಂಕದಿಂದ ನನ್ನತ್ತಲೇ ನೋಡುತ್ತಾರೆ. ಅಣ್ಣ ಚಿರನೂತನನಾಗಿ ಇರಲಿ ಎನ್ನುವ ಭಾವನೆಯಿಂದಲ್ಲ, ಬದಲಿಗೆ ಅಣ್ಣ ತನ್ನ ವಯಸ್ಸು ಹೇಳಿಬಿಟ್ಟರೆ ಎರಡ್ ಎರಡ್ಲೆ ನಾಕು ಅಂತ ಗುಣಾಕಾರ ಭಾಗಾಕಾರ ಮಾಡಿ ನಮ್ಮ ವಯಸ್ಸನ್ನು ಅಳೆದು ಬಿಡುವರೋ ಎನ್ನುವ ಭೀತಿಯಿಂದ ನಮ್ಮನ್ನು ಉಳಿಸಪ್ಪಾ ದೊರೆ ಎಂದು ಕರುಣಾಜನಕ ನೋಟ ಬೀರುತ್ತಾರೆ.
ಇದನ್ನು ಓದುತ್ತಿದ್ದಂತೆ ನಿಮ್ಮ ತಲೆಯಲ್ಲಿ ಏನು ಕುಟುಕುತ್ತಾ ಇದೆ ಎಂದು ನನಗೆ ಗೊತ್ತು. ಯಾಕೆ ಈ ಹೆಂಗಸರು ಹೀಗೆ ಅಂತ ಅಲ್ಲವೇ? ಬನ್ನಿ ಸ್ವಲ್ಪ ಹತ್ತಿರ ಹೇಳುತ್ತೇನೆ.
ನಾವು ಗಂಡಸರು ಚಿರಜವ್ವನರು, ಎವರ್ ಗ್ರೀನು. ಒಂಥರಾ ಹುಣಸೆ ಹಣ್ಣಿನಂತೆ. ಹುಣಸೆ ಮರ ಮುಪ್ಪಾದರೂ ಹುಣಸೆ ಹಣ್ಣಿನ ಹುಳಿಗೆ ಉಂಟೆ ಮುಪ್ಪು?