ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿ

ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್
ನಲ್ಲಿ ಗೊಣ್ಣೆ ಒರೆಸೋ ಹುಡುಗ
ಮಾರುವ ತಾಜಾ ತಾಜಾ ಹಣ್ಣುಗಳು
ನಮ್ಮ ಆಟೋ ಹತ್ತಿಯಾನೆಂದು
ಕಾತರಿಸುವ ಕಣ್ಣುಗಳು

ನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲ
ರೋಡು ತುಂಬಾ ಟಾರು
ದಾರಿಯುದ್ದಕೂ ಬಾರು
ಕೊಳಕು ಮೈಯ ಹುಡುಗ
ಹಣ್ಣು ಮಾರುವುದಿಲ್ಲ

ಊರಿಗಿಳಿದೊಡನೇ ಕೈ ಕುಲುಕಿ
ದಾರಿ ತುಂಬಾ ನಗು ಚೆಲ್ಲಿ
ಉಡಿ ತುಂಬಾ ಮಾತು ತುಂಬಿ
ಮನದೊಂದಿಷ್ಟು ಲಗೇಜು ಇಳಿಸುವವರು

ನನ್ನೂರಲ್ಲೀಗ ಡಿಶ್ ಟೀವಿ
ಮಾತೆಲ್ಲಿ ಕಳೆದುಹೋದವು
ಕಾತರಿಸಿವೆ ಕಿವಿ
ಉಡಿ ಖಾಲಿ, ಗುಡಿ ಖಾಲಿ
ಊರ ಮುಂದಿನ ಕಟ್ಟೆ ಖಾಲಿ

ಮನೆ ತಲುಪುವ ಮುನ್ನ
ನಡೆದ ಹಾದಿಯ ಮೇಲೆ
ಸಾಲು ಮರದ ತಂಪು
ಭತ್ತ, ಬೇವಿನ ಕಂಪು

ನನ್ನೂರಲ್ಲೀಗ ಆಮ್ಲಜನಕದ ಕೊರತೆ
ಕೊಳೆತು ಗಬ್ಬೆದ್ದು ನಾರುವ ಜನತೆ
ಊರ ತುಂಬಾ ವಾಹನ
ಮುಗಿಲು ತಬ್ಬಿದ ಕಟ್ಟಡಗಳ ಮೇಲೆ
ಮೆರೆದಿದ್ದ ವಾಮನ

ನನ್ನೂರಲ್ಲೀಗ ನನ್ನ ಮನೆಯಿಲ್ಲ
ಕರೆದು ಕರೆದೊಯ್ಯಲು ಊರಲ್ಲಿ ಯಾರಿಲ್ಲ
ನಡೆದ ಹಾದಿಯ ಮೇಲೆ ಹೆಜ್ಜೆ ಗುರುತಿಲ್ಲ
ಸುಪ್ತ ಮನದೊಳಗೊಂದು ತಪ್ತ ಕನಸು
ಸಪ್ತವರ್ಣದ ಮೀನು ಮಿಂಚಿ ಮರೆಯಾಗಿದ್ದು
ಇನ್ನೂ ಅರಿವಾಗಿಲ್ಲ

Rating
No votes yet

Comments