ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

ಸಖೀ,


ಅಬ್ಬಬ್ಬಾ ಅಂತೂ ಇಂತೂ ೨೦೦೯ರ ವರುಷ


ಮುಗಿಯಿತಲ್ಲಾ ಎನ್ನುವುದಕೇ ನಮಗೆ ಹರುಷ


 


ಆರ್ಥಿಕ ಹಿಂಜರಿತದಿಂದ ಬೆನ್ನಿಗೆ ಬಿದ್ದ ಪೆಟ್ಟು


ತಿಂದು ನಡೆಯುತ್ತಿದ್ದೆವಲ್ಲಾ ನಾವು ಕಷ್ಟಪಟ್ಟು


 


ವರುಷದ ಮೊದಲ ನಾಲ್ಕು - ಐದು ತಿಂಗಳು


ಕಾಡಿದವು ಮಗಳ ಪರೀಕ್ಷೆ - ಫಲಿತಾಂಶಗಳು


 


ಆಕೆ ಭರ್ಜರಿ ಫಲಿತಾಂಶ ಪಡೆದು ಗೆದ್ದುಬರಲು


ಮನೆ ಮನಗಳ ತುಂಬೆಲ್ಲಾ ಹರುಷದ ಹೊನಲು


 


ಆಕೆಯನು ದೂರದೂರಿಗೆ ಕಳುಹಿಸಿ ನೊಂದು


ಮೆತ್ತಗೆ ಚೇತರಿಸಿ ಕೊಂಡೆವು ನಾವಿಬ್ಬರಂದು


 


ನೆನೆದು ಬೇಸರಿಸಿದರೂ ಮನದಲ್ಲಿ ಸಂತೃಪ್ತಿ


ದಿನವೂ ಮಾತನಾಡಿಸಿದರಷ್ಟೇ ನಮಗೆ ತೃಪ್ತಿ


 


ಆ ನೂರ ಇಪ್ಪತ್ತೇಳು ದಿನಗಳಲಿ ನಮ್ಮ ಮನೆ


ಚಂದ್ರನಿಲ್ಲದ ಬಾನು ನಾ ಹೇಳುತ್ತಿಲ್ಲ ಸುಮ್ಮನೆ


 


ಒಂದು ದಿನ ಕರೆ ಮಾಡಲಾಗದೇ ನೊಂದಾಗ


ನನಗಾ ಮಾತಾಪಿತರ ನೋವಿನರಿವಾಯ್ತಾಗ


 


ನನ್ನನ್ನು ಸಾವಿರ ಮೈಲಿ ದೂರ ಕಳಿಸಿದ್ದರವರು


ಪತ್ರಗಳಿಗೆ ವಾರ ವಾರ ಕಾಯುತ್ತಿದ್ದವರವರು


 


ಎಂಥಾ ನೋವ ನುಂಗಿ ಹರಸಿರಬಹುದು ನನ್ನ


ದೂರವಿದ್ದರೂ ದೂರ ಮಾಡಲೇ ಇಲ್ಲ ಅವರೆನ್ನ


 


ಅದು ಅಂದಿನ ಮಾತು ಕೇಳು ನೀ ಇಂದಿನದನು


ಇದಿರು ನೋಡುತ್ತಿದ್ದೆವು ನಾವು ಈ ಸುದಿನವನು


 


ಇಂದು ಮತ್ತೀಗ ನಮ್ಮ ಮನೆ ತುಂಬಿದೆ ನಲಿವಿನಲಿ


ಸಿಮಿ ಬಂದಿದ್ದಾಳೆ ಮಂಗ್ಳೂರಿಂದೀ ಮುಂಜಾವಿನಲಿ!!!


***************************


 


- ಆತ್ರಾಡಿ ಸುರೇಶ ಹೆಗ್ಡೆ.


 

Rating
No votes yet

Comments