ಮೀಸೆಯ ಮಹಿಮೆ
ಸಣ್ಣ ವಯಸ್ಸಿನಲ್ಲಿ, ಮೀಸೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ, ಒಂದೆರಡು ವರ್ಷಗಳಿಂದ, ಆಗಾಗ, ನನ್ನ ಮೀಸೆ, ತನ್ನ ಇರುವಿಕೆಯನ್ನು ನೆನಪಿಸುತ್ತಿದೆ. ಕಳೆದ ವರ್ಷ, ನಾನು, ಕಾನ್ಪುರಕ್ಕೆ ಬಂದ ಹೊಸತರಲ್ಲಿ, ಅಲ್ಲಿ, ಮೈಸೂರಿನವನೊಬ್ಬ ಇದ್ದಾನೆ ಎಂದು ತಿಳಿದು, ಅವನಿಗಾಗಿ ಹುಡುಕುತ್ತಿದ್ದೆ. ಎರಡು ತಿಂಗಳಾದರೂ, ನಮ್ಮದೇ ಹಾಸ್ಟಲ್ ನಲ್ಲಿದ್ದ ಆ ಮನುಷ್ಯ ಸಿಗಲೇ ಇಲ್ಲ!
ಒಂದು ದಿನ, ಕಂಪ್ಯೂಟರ್ ಸೆಂಟರ್ ನಿಂದ ಹೊರಬರುತ್ತಿದ್ದಾಗ, ವ್ಯಕ್ತಿಯೊಬ್ಬ ನನ್ನನ್ನು ತಡೆದು ಮಾತನಾಡಿಸಿ, "I'm from mysore, where are you from?" ಎಂದ. ಆಶ್ಚರ್ಯದಿಂದ, "ಹ್ಯಾಗೋ ಡೌಟು ಬಂತು ನಿಂಗೆ, ನಾನು ಕನ್ನಡದವನು ಅಂತ" ಎಂದು ಕನ್ನಡದಲ್ಲೇ ಕೇಳಿದೆ. ಆಗ ಅವನು ಹೇಳಿದ, "ನಿನ್ನ ಮೀಸೆ ನೋಡಿ, ಇರಬಹುದು ಎಂದು ಊಹಿಸಿದೆ" ಎಂದ! ಅಲ್ಲಿಂದ ಶುರುವಾಯಿತು, ನನ್ನ ಮೀಸೆ ಪುರಾಣ.
ಮೂರನೇ ಸೆಮಿಸ್ಟರ್ ಮುಗಿದ ಮೇಲೆ, ರಜಕ್ಕೆಂದು ಬೆಂಗಳೂರಿಗೆ ಬಂದಿದ್ದೆ. ಊರಿಂದೂರಿಗೆ ಓಡಾಡಲು ಅನುಕೂಲವಾಗುತ್ತದೆ ಎಂದು, ಒಂದು ದೊಡ್ಡ ಸೂಟ್ ಕೇಸ್ ಖರೀದಿಸಲು, ಗಾಂಧಿ ಬಜಾರಿಗೆ ಹೋಗಿದ್ದೆ. ಅಂಗಡಿಯವ, ನಾನು ಕೇಳಿದ ಸೂಟ್ ಕೇಸಿನ ಗಾತ್ರ ನೋಡಿ, "ಏನ್ ಸಾರ್, ಮದುವೆನಾ?" ಅಂತ ಕೇಳಿದ. ನಾನು, "ಇಲ್ಲ, ನಾನು ಊರಿಂದೂರಿಗೆ ಓಡಾಡ್ತಾ ಇರ್ತೀನಿ, ಅದಕ್ಕೆ, ಈ ಸೂಟ್ ಕೇಸು" ಅಂದೆ. ಅವನು, "ಹೌದಾ ಸಾರ್, ಯಾವ್ ಕಂಪನಿ? ತಾವು ಕೆಲಸ ಮಾಡೋದು?" ಅಂದ!. ಆಗ ತಿಳಿಯಿತು, ಈ ಎಫೆಕ್ಟ್ ಬರಿಯ ಸೂಟ್ ಕೇಸ್ ನಿಂದಲ್ಲ, ಮೀಸೆಯದೂ ಪಾಲಿದೆ ಎಂದು.
ಇದಾದ ಕೆಲವು ದಿನಗಳ ಮೇಲೆ, ಹಳೆಯ ಗೆಳೆಯರನ್ನು ಭೇಟಿಯಾಗಲು, ನಾನು ಓದಿದ ಕಾಲೇಜಿಗೆ ಹೋಗಿದ್ದೆ. ಆಲ್ಲಿ, ವಾರ್ಷಿಕೋತ್ಸವದ ಪ್ರಯುಕ್ತ, ಹಲವರು ಹಳೆಯ ವಿದ್ಯಾರ್ಥಿಗಳು ಬಂದಿದ್ದರು. ನನ್ನನ್ನು ನೋಡಿದವರೆಲ್ಲಾ, ಗುರುತು ಹಿಡಿಯಲು ೧೦ ನಿಮಿಷ ಹಿಡಿದರು. ೧೩ ವರ್ಷ ನನ್ನೊಂದಿಗೆ ಓದಿದವನೊಬ್ಬ, ನನ್ನ ಪಕ್ಕ ನಿಂತು, ಸುತ್ತ ನಿಂತಿದ್ದವರನ್ನೇಲ್ಲಾ "ಏನೋ ಮಗಾ, ಹೇಗಿದೀಯ?" ಅಂತ ವಿಚಾರಿಸಿಕೊಂಡ. ಆಮೇಲೆ, ನಾನೇ, ಅವನ ಕಡೆ ತಿರುಗಿ "ನಮಸ್ಕಾsರ" ಅಂದೆ. ಅವನು, ನನ್ನನ್ನೇ ದಿಟ್ಟಿಸಿ ನೋಡಿ, "ಯಪ್ಪಾss ಭಟ್ಟಾ(ಅವರೆಲ್ಲಾ ನನ್ನನ್ನು ಕರೆಯೊದು 'ಭಟ್ಟ' ಅಂತ), ಮಗನೆ, ಹೇಗಾಗೋಗಿದಿಯೋ" ಅಂದ! ನನ್ನ ಇನ್ನೊಬ್ಬ ಗೆಳೆಯ, ನನ್ನ ಮೀಸೆ ನೀಡಿ, "ಅದನ್ನ ಬೇಗ ಬೋಳಿಸಿಕೊ; ನಮಗೆಲ್ಲಾ inferiority complex ಬಂದ್ರೆ ಕಷ್ಟ" ಅಂದ. ಮತ್ತೊಬ್ಬ, "ಈ ಸ್ಟೈಲ್ ಚೆನ್ನಾಗಿಲ್ಲ, ಮೀಸೆಯ ತುದಿಯನ್ನ, ತುಟಿಯಿಂದ ಮೇಲಕ್ಕೆ ಎತ್ತು, ಚೆನ್ನಾಗಿರತ್ತೆ" ಅಂದ. ಅವನ ಸಲಹೆಯನ್ನು, ಅಲ್ಲೇ ಪ್ರಯತ್ನಿಸಿದಾಗ, ಎದುರಿಗಿದ್ದವನು, "ಏನೋ ವೀರಪ್ಪನ್" ಅಂದ! ಮೀಸೆ, ತಾನಾಗಿಯೇ ಕೆಳಗಿಳಿಯಿತು!
Comments
ಉ: ಮೀಸೆಯ ಮಹಿಮೆ