ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….

ತುಮಕೂರು ತಲುಪುವುದರಲ್ಲಿ ಮೊದಲ ಅಡೆತಡೆ… ರಸ್ತೆ ಅಗಲೀಕರಣ ಇತ್ಯಾದಿಗೆ ಮುಂದಾಗಿರುವಲ್ಲಿ ಜನ ಸಾಮಾನ್ಯರಿಗೆ ಸರಿಯಾದ ಮಾರ್ಗದರ್ಶಿಗಳನ್ನು ಹಾಕುವ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ನಮ್ಮನ್ನು NH200 ಬದಲಿಗೆ ರಾಜ್ಯಹೆದ್ದಾರಿಯಲ್ಲಿ ತೂರಿಬಿಡುವ ಕಾರ್ಯವನ್ನು ಅಭಿವೃದ್ದಿ ಪ್ರಾಧಿಕಾರಗಳು ಮಾಡಿ ಗೆದ್ದದ್ದಾಗಿತ್ತು… ಅಷ್ಟರಲ್ಲಿ ಜಿ.ಪಿ.ಎಸ್ ಡಿವೈಸ್ ತೋರಿಸುತ್ತಿದ್ದ ದಾರಿಯನ್ನು ಅರ್ಧಂಬರ್ದ ಮನಸ್ಸಿನಿಂದಲೇ ಹೇಳಿದಾಗ, ರವಿ ಇದ್ದಕ್ಕಿದ್ದಂತೆ ಆಕ್ಟೀವ್ ಆಗಿ ನಮ್ಮ ಲೋಕಲ್ ಗೂಗಲ್ ಮುಂದೆ ನಿಮ್ಮದ್ಯಾವ ಗೂಗಲ್ ಹೇಳಿ ಎಂದೆನ್ನುತ್ತಾ ೩:೩೦ – ೪:೦೦ ರ ಆ ತಾಸಿನಲ್ಲಿ ನೆಡೆದಾಡುವ ಮನುಷ್ಯರ ಸುಳಿವಿನಲ್ಲಿ ಕಣ್ಣಾಡಿಸಿದರು… ಅಂತೂ ಇಂತು ನಾವು ಹೋಗುತ್ತಿರುವ ದಾರಿ ಕಡೆಗೂ ನಮ್ಮನ್ನು ಮುಂದೆ ಹಾಸನದ ದಾರಿಗೆ ಸೇರಿಸುತ್ತದೆ ಎಂದು ಅರ್ಥವಾದೊಡನೆ ಹಿಂದಿನ ಸೀಟಿನಲ್ಲಿದ್ದವರೆಲ್ಲ ಮೆಲ್ಲನೆ ನಿದ್ದೆಗೆ ಜಾರುತ್ತಿದ್ದದ್ದು ಕಂಡುಬಂತು.. ಅರವಿಂದ ಎಚ್ಚರ ಇದ್ದ ಅನ್ಕೊಂಳ್ತೀನಿ ;) ಅವನು ಮಲಗಿದ್ದೇ ಬೆಳಗ್ಗೆ ಸ್ವಲ್ಪ ಹೊತ್ತು…..

ಬೆಳಗ್ಗೆ ಸೂರ್ಯ ಕಣ್ಣರಳಿಸಿ ನಮ್ಮನ್ನು ಕದ್ದುಮುಚ್ಚಿ ನೋಡುವುದರೊಳಗೆ ನಾವು ಹಾಸನ ತಲುಪಿ ಕಾಮತ್ ಗೆ ದಾಳಿಯಿಟ್ಟಾಗಿತ್ತು… ಅಲ್ಲಿ ಕಂಡ ಉಯ್ಯಾಲೆ ಇತ್ಯಾದಿ ನನ್ನನ್ನು ಮಗು ಮಾಡಿ, ಅದರಲ್ಲಿ ನನ್ನನಾಡಿಸಿದ್ದಂತೂ ನಿಜ. ಇಡ್ಲಿ ವಡೆ ತಿಂದು, ಚಾ, ಕಾಫಿ ಕುಡಿದು ಹೊರನೆಡೆದ ತಂಡ ಸಂಪೂರ್ಣ ಎಚ್ಚರವಾಗಿದ್ದಂತೂ ಸ್ಪಷ್ಟವಾಗಿ ಕಂಡುಬಂತು… ಇನ್ನೇನು ನಾವು ಸೇರಬೇಕಿರುವ ಜಾಗ ಸೇರಲು ಮತ್ತೊಂದು ಘಂಟೆ ಮಾತ್ರ ಎಂದು ಹೊರಟು ನಿಂತೆವು..

ಸೂರ್ಯನ ಕಿರಣಗಳು ತೀಕ್ಷ್ಣವಾಗುತ್ತಿದ್ದಂತೆ ಬೇಗ ಸೇರಬೇಕೆನ್ನುವ ಆಸೆ ಹೆಚ್ಚಾಗುತ್ತಿತ್ತು.. ಬಂಡಾಜೆ ಜಲಪಾತ ಮತ್ತು ಬಲ್ಲಾಳರಾಯನ ದುರ್ಗವಿರುವ ಪಶ್ಚಿಮ ಘಟ್ಟದ ಆ ಶ್ರೇಣಿಯನ್ನು  ಉಜಿರೆಯಿಂದ ೧೩ ಕಿ.ಮಿ ದೂರ ವಿರುವ ಬಂಡಾಜೆ ಗ್ರಾಮದಿಂದ ಅಥವಾ  ಅದರ ಇನ್ನೊಂದು ಮಗ್ಗುಲಲ್ಲಿರುವ ಸುಂಕಸಾಲೆ ಇಂದ ಹತ್ತಬಹುದು.. ಬಂಡಾಜೆಗೆ ಹೊರಟರೆ ಅಲ್ಲಿಂದ ನೇರವಾಗಿ ಜಲಪಾತದ ಕಡೆ ಹೊರಟು ಅಲ್ಲೇ ಟೆಂಟ್ ಹಾಕಬೇಕಾಗುತ್ತೆ ಮತ್ತೆ ನಾಳೆ ವಾಪಸ್ ಬರುವುದಷ್ಟೇ, ಸುಂಕಸಾಲೆ ಇಂದ ಹೊರಟು, ಬಲ್ಲಾಳರಾಯನ ದುರ್ಗಕ್ಕೆ ಸಾಗಿ ಅಲ್ಲಿಂದ ಮುಂದೆ ಜಲಪಾತದ ಸುತ್ತಮುತ್ತ ಎಲ್ಲಾದರೂ ಟೆಂಟ್ ಹಾಕಿ ಊಟ ನಿದ್ರೆ ಮಾಡಿ ಬೆಳಗ್ಗೆ ಜಲಪಾತದ ಬಳಿ ಸಾರಿ ನಂತರ ಇಳಿದು ಬರುವುದು ಎಂದಾಗಿತ್ತು.. ಆದ್ದರಿಂದ ಕಳಸಕ್ಕೆ ಹೊಗುವ ರಸ್ತೆಯಲ್ಲಿ ಮುಂದುವರೆದು ಕೆಳಗೂರು ಕಾಫಿ ಎಸ್ಟೇಟ್ ಮಾರ್ಗವಾಗಿ ಸುಂಕಸಾಲೆ ತಲುಪಿದೆವು… ಮಾರ್ಗಮಧ್ಯದ ತಿರುವುಗಳಲ್ಲಿ ನಾನು ಡ್ರೈವಿಂಗ್ ಆನಂದ ಪಡೆದದ್ದು ಕೆಲವರ ಹಣೆಯಲ್ಲಿ ನೀರು ತರಿಸಿತ್ತಾದರೂ ಖಾಲಿ ಇದ್ದ ರಸ್ತೆಗಳು ಸ್ವಲ್ಪ ಸಮಾಧಾನ ತಂದು ಖುಷಿ ಕೊಟ್ಟಿತು ಎಂದು ಕೊಳ್ತೇನೆ :) .

ರಸ್ತೆ ಕಡಿದಾಗ್ತಾ ಬಂದು ಇನ್ಮುಂದೆ ಕಾರಿನಲ್ಲಿ ಸಾಗೋದು ಕಷ್ಟ ಆಗಬಹುದು ಎಂದೆನಿಸುತ್ತಲೇ ಅಲ್ಲಲ್ಲಿ ಕಂಡು ಬಂದ ಕೊನೆಯ ಒಂದಿಷ್ಟು ಮನೆಗಳ ಸುತ್ತ ಕಣ್ಣಾಡಿಸುತ್ತಾ.. ಇನ್ನೇನು ಇದೇ ಕೊನೆಯ ಮನೆಯಿರಬಹುದೆಂದು ಕೊಂಡು ಅಜ್ಜಿಯ ಮನೆಯೊಂದರಲ್ಲಿ ನಮ್ಮ ಕಾರನ್ನು ಪಾರ್ಕ್ ಮಾಡಿದ್ದಾಯ್ತು.

ಪ್ರೀತಿಯಿಂದ ನಮ್ಮನ್ನು ವಿಚಾರಿಸಿಕೊಂಡ ಅಜ್ಜಿ ಮುಂದೆ ಹೋಗಲಿಕ್ಕೆ ಸ್ವಲ್ಪ ಕಷ್ಟ ಆಗಬಹುದೆಂದೂ, ನಿಮ್ಮ ಕಾರ್ ಬಿಟ್ಟು ಹೋಗಿ, ತೊಂದರೆ ಇಲ್ಲ ಎಂದು ಹೇಳಿ ನಮ್ಮನ್ನು ಮುಂದಿನ ಪಯಣಕ್ಕೆ ಅಣಿಯಾಗಲೆಣಿಸಿದರು.  ಬೆಂಗಳೂರಿನಿಂದ ಹೊತ್ತು ತಂದಿದ್ದ ಬ್ಯಾಗ್ ಗಳ ಜೊತೆ ೩-೪ ಹೊತ್ತಿಗೆ ಬೇಕಿರುವ ಊಟದ ಸಾಮಗ್ರಿಗಳು, ನೀರು ಇತ್ಯಾದಿಗಳನ್ನು ಹೆಗಲಿಗೇರಿಸಿಕೊಂಡು, ಚಾಕೋಲೇಟ್ ಇತ್ಯಾದಿ ಪವಿತ್ರಾಳ ಬ್ಯಾಗಿಗೆ ತುಂಬಿ ಮುಂದಿನ ದಾರಿ ಎಣಿಸಿದೆವು.. ಇಲ್ಲಿಂದ ಮುಂದೆ ಸಿಕ್ಕ ಒಂದಿಬ್ಬರ ಸಲಹೆಯಂತೆ ಹೊರಿಕಾನ್ ಎಸ್ಟೇಟ್ ಬಂಗ್ಲೆ ಅಥವಾ ಕಾಳಬೈರವನ ಗುಡಿಯ ಮೂಲಕ ನಾವು ಬಲ್ಲಾಳರಾಯನ ದುರ್ಗ ಸೇರಬಹುದಾಗಿತ್ತು.. ನಾವು ಹೊರಟದಾರಿ ನಮ್ಮನ್ನು ಸಣ್ಣದೊಂದು ಹೊಳೆಯಗುಂಟ ಹೊರಿಕಾನ್ ಎಸ್ಟೇಟ್ ಬಂಗ್ಲೆಯ ಮಾರ್ಗವಾಗಿ ಕೊಂಡೊಯ್ದಿತು..

ಇಷ್ಟರಲ್ಲಾಗಲೇ ನಮ್ಮ ತಂಡದ ಕ್ಯಾಮೆರಾ ಕಣ್ಣುಗಳು, ಸಂಶೋದಕರ ಕಣ್ಣುಗಳು ಮಲೆನಾಡಿನ ಇಂಚಿಂಚನ್ನೂ ಕ್ಲಿಕ್ಗಳ ಮೂಲಕವೇ ಕಟ್ಟಿಹಾಕುವ ಹುನ್ನಾರ ತೋರಿದ್ದು ನಿಮಗೆ ಈ ಚಿತ್ರದ ಮೂಲಕ ಕಂಡು ಬರುತ್ತದೆ.  ಪವಿತ್ರಾಗೆ ಹೂಗಳ ಮೇಲೆ ಕಣ್ಣೊರಳಿದರೆ, ಅರವಿಂದನಿಗೆ ಚಿಟ್ಟೆ, ಹುಳು ಉಪ್ಪಟೆಗಳ ಚಿತ್ರಗಳನ್ನು ಕಲೆಯಾಕುವ ಕೆಲಸ. ನನಗೆ ಅವರನ್ನೆಲ್ಲಾ ಸೆರೆಹಿಡಿಯುವ ಕಾಯಕ.

ಈಗಾಗಲೇ ಬಂಡಾಜೆಗೆ ಹಲವಾರು ಬಾರಿ ಹೋಗಿ ಬಂದಿದ್ದ ರವಿ ಮತ್ತು ಅರವಿಂದ ನಮ್ಮನ್ನು ಮುನ್ನೆಡೆಸಿದ್ದು, ಗೈಡ್ ಇಲ್ಲದೆ ಹಾದಿ ಕಂಡುಹಿಡಿಯುವ ಪರಿ ನನಗೆ ತೀರಾ ಹೊಸದು. ಮೇಲೆ ಹೋದಂತೆ ಇದು ನನಗೂ ಅಭ್ಯಾಸವಾಯ್ತು…

ಹುರಿಕಾನ್ ಎಸ್ಟೇಟ್ ಮೂಲಕ ಹಾದು ಹೋಗುತ್ತಿದ್ದಂತೆ ನಾವೆಲ್ಲೋ ಕಳೆದು ಹೋದ ಅನುಭವ… ಪೂರಾ ಖುಷಿ ಆಗಿದ್ದು ಪವಿತ್ರಾಗೆ.. ಕಳೆದು ಹೋಗಬೇಕು ಅಂತಿದ್ದದ್ದದ್ದು ಅವಳೇ :)   ಮುಂದೆ ಅಲ್ಲಲ್ಲೇ ಕಂಡು ಬಂದ ಮನುಷ್ಯ ನೆಡೆದಿರಬಹುದಾದ ಹುಲ್ಲು ಹುಟ್ಟದ ಹಾದಿಗಳು ಕಂಡಂತೆಲ್ಲಾ, ಅದನ್ನು ಸರ್ವೇ ಮಾಡಿ ಮುಂದೆ ಎತ್ತ ಸಾಗುತ್ತಿರಬಹುದು ಎಂದೆಣೆಸುತ್ತಾ, ಅದು ಮೇಲೆ ಕೆಳಗೆ ಹೊದಂತೆಲ್ಲಾ ಮತ್ತೆ ನಿಂದು ಸಾವರಿಸಿಕೊಂಡು, ರಾಜೀವ್ ಆಗಾಗ್ಗೆ ಕೊಡುತ್ತಿದ್ದ ನಿಂಬೆ ಹುಳಿಯ ತಿಂದು ಹಂತ ಹಂತವಾಗಿ ಸೆಕೆ ಇಂದ ತೋಯುತ್ತಿದ್ದ ಮೈ ಮನಕ್ಕೆ ಹಿತವಾಗಿ ಬೀಸಿದ ಗಾಳಿಯ ಆಸ್ವಾದಿಸುತ್ತಾ ಮುನ್ನೆಡೆದಂತೆ ನಮ್ಮ ಹಾದಿಯಲ್ಲಿ ಸಿಕ್ಕಿದ್ದು ಸಣ್ಣ ಸಣ್ಣ ನೀರ ಝರಿಗಳು.. ಅಲ್ಲೇ ಮನೆ ಮಾಡಿದ್ದ ಜಿಗಣೆಗಳು ಕಾಲಮೇಲೆ ಹತ್ತಿದಂತೆಲ್ಲಾ ಮೊದಲೊಮ್ಮೆ  ಚಾರಣದಲ್ಲಿ ಜಿಗಣೆಯೊಡನೆ ಆಟವಾಡಿದ್ದ ಪವಿತ್ರಾಗೆ ಅವನ್ನು ಕಂಡರೆ ಕೋಪದ ಜೊತೆ ಭಯವೂ ಇದ್ದದ್ದು ಗೊತ್ತಾಯಿತು..  ಹತ್ತಿ ಹರಿಯುತ್ತಿದ್ದ ಜಿಗಣೆಗಳನ್ನು ಅರವಿಂದ ಮತ್ತು ರವಿ ಕೇರ್ ಮಾಡದೆ ತೆಗೆದು ಎಸೆದರೂ ಕಡೆಗೆ ಅವುಗಳನ್ನು ಸಹಿಸದ ಪವಿತ್ರಾಗೆ ಅಲ್ಲೇ ಸಿಕ್ಕ ದೊಡ್ಡ ಕಡ್ಡಿಯೊಂದನ್ನು ರವಿ ಆಯುಧವಾಗಿ ನೀಡಿದರು.. ನಮ್ಮ ಯಾತ್ರೆ ಮುಂದೆ ಸಾಗಿತು..  ಮಧ್ಯೆ ಕಿತ್ತಳೆ ಹಣ್ಣು ನಮ್ಮ ದಾಹವನ್ನು ಹಿಂಗಿಸಿತ್ತು.

ಇಷ್ಟರಲ್ಲಾಗಲೇ ಮೂರು ಘಂಟೆಯ ಸಮಯ.. ಮಧ್ಯಾನ ಬೇರೇನೂ ತಿಂದದ್ದಿಲ್ಲ..  ಕಾಡಿನ ಮಧ್ಯದ ದಾರಿ ಬಿಟ್ಟರೆ ಬೇರೆ ಕುರುಹುಗಳಿಲ್ಲ.. ಆಗಾಗ ಅಲ್ಲಲ್ಲಿ ತುಂಬಾ ವಿರಳವಾಗಿ ಕಂಡು ಬಂದ ಬಟ್ಟೆ ಇತ್ಯಾದಿ ಮಾತ್ರ ಇಲ್ಲಿ ಮನುಷ್ಯರು ಓಡಾಡಿದ್ದಿರಬಹುದೆಂಬ ಮಾಹಿತಿ ನೀಡುತ್ತಿತ್ತು. ಇನ್ನೇನು ವಾಪಸ್ ಬಂದು ಬಂಡಾಜೆಯ ಮಾಮೂಲಿ ರೂಟ್ ಹಿಡಿಯುವುದೇ ಅಥವಾ ಏನು ಮಾಡುವುದು, ಇನ್ಯಾರಾದರೂ ಸಿಕ್ಕಾರೇ ಎಂದು ಲೆಕ್ಕ ಹಾಕುತ್ತಿದ್ದ ನಮಗೆ, ದೀರ್ಘವಾಗಿ ಮುಂದೆ ಸಾಗುತ್ತಿದ್ದ ಹಾದಿಯೊಂದು ಮುಚ್ಚಿಯೇ ಹೋಗಿದೆ ಎಂದೆನಿಸುತ್ತಿದ್ದ ಕಾಡಿನ ರಸ್ತೆಯ ಮಧ್ಯದಲ್ಲಿನ ಗಿಡಗಂಟಿಗಳನ್ನು ಸರಿಸಿ ನೋಡಿದಾಗ ಕಂಡುಬಂತು… ಹಾಗೆಯೇ ಮುಂದೆ ಸಾಗಿ ನಿಂತಾಗ ಮತ್ತೆರಡು ಜೋಡು ರಸ್ತೆ… ಒಂದು ಮೇಲಕ್ಕೂ, ಮತ್ತೊಂದು ಕೆಳಕ್ಕೂ ಹೊರಟಂತೆ… ಅಲ್ಲೇ ನಿಂತ ಎಲ್ಲರಿಗೂ ಏನು ಮಾಡುವುದೆಂಬ ಸಂದೇಹ.. ಸರಿ ದಣಿವಾರಿಸಿಕೊಳ್ಳಲು ಮತ್ತೊಂದು ನೆವ… ನಿಂತದ್ದಾಯಿತು.. ನಿಲ್ಲಲು ಮನಸ್ಸೇ ಇರದಿದ್ದ ನಾನು ಕೆಳಗೆ ಸರಿಯುವಂತಿದ್ದ ದಾರಿಯಲ್ಲಿ ನೆಡೆದು ನೋಡುವಂತಾಗಿ ಅಲ್ಲೇ ಯಾರೋ ಹಾಕಿದ್ದ ಕ್ಯಾಂಪ್ ಫೈರ್ ನ ಗುರುತು… ಖುಷಿ… ಹಾಗೇ ಮುಂದೆ ಸಾಗಿ ಅಲ್ಲೇ ಕಂಡು ಬಂದ ನಿಸರ್ಗದ ಸುಂದರ ನೋಟ… ಆದ ಸಂತಸಕ್ಕೆ ಪಾರವೇ ಇಲ್ಲ.. ಗಾಳಿ, ಬೆಳಕು ಸುತ್ತ ಸಸ್ಯರಾಶಿ, ಪರ್ವತಗಳು, ಎಡಕ್ಕೆ ಸುಂದರ ಮುಖವಾಡದಂತೆಯೇ ಕಂಡು ಬಂದ ಪರ್ವತ…. ಇನ್ನೇನು ಬೇಕು…. ಎಲ್ಲರನ್ನೂ ಕೂಗಿ ಕರೆದು.. ಅದನ್ನು ತೋರಿಸಿ ಸಿಳ್ಳೇ ಹಾಕಿ ಫೋಟೋ ತೆಗೆದು ಗಾಳಿಗೆ ಮೈಹೊಡ್ಡಿ ನಿಂತದ್ದಾಯ್ತು… ಅಬ್ಬಾ ಎಲ್ಲರ ಮುಖದಲ್ಲೂ ಮುಗುಳ್ನಗೆ…  ಅಲ್ಲೇ ಕಾಡು ಕೋಳಿ ಕಂಡು ಬಂತು…ಹಾಗೇ ಅಲ್ಲೇ ಎರಡಾಗಿದ್ದ ರಸ್ತೆಯ ಪಕ್ಕ ಕಲ್ಲಿನಲ್ಲಿ ಸಣ್ಣದಾಗಿ ಒಂದು ಗೂಡು ಕಟ್ಟಿ ಮುಂದೆ ನೆಡೆದ ನಾವು ಅಂದಿನ ಪಯಣವನ್ನು ಅಂತ್ಯಗೊಳಿಸುವ ಸಮಯ ಹತ್ತಿರ ಬರುವುದನ್ನು ಲೆಕ್ಕಾಚಾರ ಹಾಕುತ್ತಿದ್ದೆವು…

ಮೇಲೆ ಹತ್ತುತ್ತಿದ್ದ ನಮಗೆ ಮೆಟ್ಟಿಲುಗಳ ಮಾದರಿಯಲ್ಲಿ ಮುಂದಿನ ಹಾದಿ ಕಂಡು ಬಂತು.. ಹತ್ತುವ ದಾರಿಯಲ್ಲಿ ಸಣ್ಣದೊಂದು  ನೀರ ಸೆಲೆ. ಈಗಾಗಲೇ ಕುಡಿದು ಮುಗಿಸಿದ್ದ ಪ್ಲಾಸ್ಟಿಕ್ ಬಾಟಲಿಗಳಿಗೆ ತಟ್ಟನೆಯ ನೀರನ್ನು ತುಂಬಿಸಿಕೊಂಡ ನಾವು ಅದರ ಸ್ವಾದವನು ಅಲ್ಲೇ ಆಸ್ವಾದಿಸಿ ಮತ್ತೊಮ್ಮೆ ಬಾಟಿಲುಗಳನ್ನು ತುಂಬಿಸಿಕೊಂಡು ಮೇಲಿನ ಹುಲ್ಲುಗಾವಲು ತಲುಪಿದೆವು… ಘಂಟೆ ೪:೦೦ ಇರಬಹುದು… ಮುಂದಿನ ಶೂಲೆ ಕಂಡು ಇದನ್ನು ಇನ್ನು ದಾಟಲು ಸಾಧ್ಯವಿಲ್ಲವೆಂದೂ ನಾವು ಇಲ್ಲೇ ಟೆಂಟ್ ಹಾಕಬೇಕೆಂದು ಸಲಹೆ ಇತ್ತವರು ನಮ್ಮ ಗುರು ರವಿ… ಅಂತೆಯೇ ಸಿದ್ದತೆ ಮುಂದುವರೆಯಿತು.. ಟೆಂಟ್ ಹಾಕಲು ನಾವು ಸಿದ್ದರಾದೆವು.. ಅದಕ್ಕೂ ಮುಂಚೆ ಶೂ ಬಿಚ್ಚಿ ಜಿಗಣೆಗಳು ಮಾಡಿದ್ದ ಕಿತಾಪತಿಯ ಪರೀಕ್ಷೆ ಆಗಿತ್ತು.. ನನ್ನ ಕಾಲಿಗೂ, ರವಿಯವರ ಕಾಲಿಗೂ ಕಡಿದಿದ್ದ ಜಿಗಣೆಗಳು ಅರವಿಂದನನ್ನು ಮುಟ್ಟದೇ ಇದ್ದದ್ದು ಆಶ್ಚರ್ಯಕರವಾಗಿತ್ತು.. ಪವಿತ್ರಾ ಮತ್ತು ರಾಜೀವ್ ಜಿಗಣೆಯ ಸಾಕ್ಸ್ ಹಾಕಿಕೊಂಡಿದ್ದರಿಂದ ಅವರು ಇದರಿಂದ ತಪ್ಪಿಸಿಕೊಂಡಿದ್ದರು.. ಅದನ್ನು ಕೊಂಡೂ ಹಾಕಿಕೊಳ್ಳದಿದ್ದ ನನ್ನ ಕಾಲನ್ನು ಎಳೆದದ್ದೂ ಮುಗಿದಿತ್ತು..

ಟೆಂಟ್ ಹಾಕುವುದು ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ.. ಕೆಲವೇ ನಿಮಿಷಗಳಲ್ಲಿ ಟೆಂಟ್ ತಯಾರಾಗಿ, ಅಲ್ಲಲ್ಲಿ ಒಣಗಿ ಬಿದ್ದಿದ್ದ ಗಿಡಗಂಟೆಗಳನ್ನು ತಂದು ಒಲೆ ಹಚ್ಚಿ ತಿನ್ನಲಿಕ್ಕೆ ಅಣಿ ಮಾಡಿಕೊಳ್ಳುವಾಗ, ಖಾಲಿಯಾಗಿ ಕೈಗೆ ಸಿಗುತ್ತಿದ್ದ ಪೇಪರ್, ಪ್ಲಾಸ್ಟಿಕ್ ಇತ್ಯಾದಿಗಳನ್ನು ಚೀಲವೊಂದರಲ್ಲಿ ಹಾಕಲು ನಾವು ಮರೆಯಲಿಲ್ಲ.. ಇಲ್ಲಿಗಾಗಲೇ ಸುಸ್ತಾಗಿ ಕುಳಿತ ಎಲ್ಲರಿಗೂ ಮ್ಯಾಗಿ, ಒಣದ್ರಾಕ್ಷಿ  ಇತ್ಯಾದಿ… ಹಾಗೇ ಕತ್ತಲಾಗುತ್ತಾ ಬಂದಂತೆ ಸುತ್ತಲಿನ ಪ್ರಕೃತಿಯ ಮಡಿಲಲ್ಲಿ ಕುಳಿತ ನಾವು ಪಕ್ಕದಲ್ಲೇ ಕಾಣುತ್ತಿದ್ದ ಚಾಲುಕ್ಯರ ದೊರೆ ಬಲ್ಲಾಳರಾಯನ ದುರ್ಗ ಕೈ ಬೀಸಿ ಕರೆಯುತ್ತಿತ್ತು…

ರೆಡಿ ಮೇಡ್ ಊಟ ಬಿಸಿ ಮಾಡಿ ತಿಂದ ನಮಗೆ ಅದೇ ಸಾಕಾಗಿತ್ತು.. ಹಸಿದ ಹೊಟ್ಟೆಗೆ ಸಿಕ್ಕದ್ದೆಲ್ಲಾ ಪಂಚಾಮೃತವೆಂಬಂತೆ.

ಅದಾದ ನಂತರ ನಮ್ಮ ಬರವಣಿಗೆಯ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದು ನಮ್ಮ ರಿಸರ್ಚ್ ಎಕ್ಸ್ಪರ್ಟ್ ಪವಿತ್ರಾ… ಅದರ ಸುತ್ತೊಂದಿಷ್ಟು ಚರ್ಚೆ… ಮತ್ತೊಂದಿಷ್ಟು ಮಾತುಕತೆ… ಚಳಿ ಸಣ್ಣಗೆ ನಮ್ಮನ್ನು ಕಂಪಿಸುವಂತೆ ಮಾಡುತ್ತಿತ್ತು…. ಕತ್ತಲಾದಂತೆ ಆಗಸದಲ್ಲೆಲ್ಲಾ ಕಂಡು ಬಂದ ನಕ್ಷತ್ರಗಳನ್ನು ಕಂಡು ಆಶ್ಚರ್ಯದಿಂದ ಅವುಗಳನ್ನು ಕಂಡು ಹಿಡಿಯುವ ಪ್ರಯತ್ನ ಸಾಗಿತು… ಕೈಲಿದ್ದ ಎಚ್.ಟಿ.ಸಿ ಟ್ಯಾಟೋ ತೆಗೆದು ಅದರಲ್ಲಿದ್ದ ಗೂಗಲ್ ಸ್ಕೈ ಮ್ಯಾಪ್ ಉಪಯೋಗಿಸಿ ಕೆಲವೊಂದು ನಕ್ಷತ್ರ ಪುಂಜಗಳು, ಗ್ರಹಗಳ ಇರುವಿಕೆ, ನಕ್ಷತ್ರಗಳ ಹೆಸರು ಇತ್ಯಾದಿಗಳನ್ನು ಕಂಡೆವು.. ಹಾಗೆ ಹೆಚ್ಚುತ್ತಿದ್ದ ಚಳಿಗೆ ತಾಳದೆ ಪೊಟರೆಗೆ ಸೇರುವ ಹಕ್ಕಿಗಳಂತೆ ಒಬ್ಬೊಬ್ಬರೇ ಟೆಂಟಿನ ಒಳಗೆ ಸೇರಿಯಾಗಿತ್ತು.. ಆರಿ ಹೋಗುತ್ತಿದ್ದ ಬೆಂಕಿಯನ್ನು ಹುರಿಹತ್ತಿಸಿ ಸುತ್ತ ನೋಡಿದವನಿಗೆ ಯಾರೂ ಕಾಣದಿದ್ದದ್ದು ಶಾಕ್ ಕೊಟ್ಟಂತಾಗಿತ್ತು.. ಮತ್ತೇನು ಮಾಡೋದು.. ನಾನು ಒಳಗೆ ನುಸುಳಿದೆ… ಅಲ್ಲೇ ಮತ್ತಷ್ಟು ಕತೆಗಳು ಇತ್ಯಾದಿ ಹೊತ್ತಿಗಿಂತ ಮುಂಚೆ ಮಲಗಿದ್ದೂ ಕೂಡ ಹೊಸತು.. ೮ಕ್ಕೇ ಮಲಗಿದ್ದೇ ಇಲ್ಲ.. ನೆಡೆದು ಸುಸ್ತಾಗಿದ್ದ ಜೀವಕ್ಕೆ ಸಿಕ್ಕ ನೆಲವೇ ಹಾಸಿಗೆಯಾಗಿ ಮಾರ್ಪಟ್ಟಿತ್ತು…

Rating
No votes yet

Comments