ಅಪರೂಪದ ಕವಿತೆ ಸಿಕ್ಕಿತು !
ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ.
ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ್ಲ ಆಗೀಗ ನೆನಪಾಗಿ ಕಾಡಿದ್ದುಂಟು. ತಮ್ಮ ಈ ಕವಿತೆಯಿಂದ ಈಶ್ವರ ಎಷ್ಟು ಜನಪ್ರಿಯರಾಗಿದ್ದರೆಂದರೆ, ಸಿಡಿಮಿಡಿಗೊಂಡ ದ.ರಾ. ಬೇಂದ್ರೆ, ’ನಾನು ಬೇಂದ್ರೆ, ಅವನು ಸಣ(ಸಣ್ಣ)ಕಲ್ಲ’ ಎಂದು ಗೇಲಿ ಮಾಡಿದ್ದೂ ಉಂಟು.
ಇಂಥ ಕುಟುಕು ಹೇಳಿಕೆ ನೀಡುವುದರಲ್ಲಿ ಬೇಂದ್ರೆ ತಮ್ಮ ಕವನಗಳಷ್ಟೇ ಸುಪ್ರಸಿದ್ಧರು ಎಂಬುದು ಬೇರೆ ಮಾತು. ಆದರೆ, ಈಶ್ವರ ಸಣಕಲ್ಲರ ಆ ಸುಪ್ರಸಿದ್ಧ ಗೀತೆ ಹತ್ತಿಪ್ಪತ್ತು ವರ್ಷಗಳ ನನ್ನ ಅಲೆದಾಟದಲ್ಲಿ ಮರೆತೇಹೋಗಿತ್ತು. ಮೊದಲ ಒಂದೆರಡು ಸಾಲುಗಳು ಮಾತ್ರ, ನಾಲಿಗೆಗೆ ಅಂಟಿದ ದ್ರವದಂತೆ ಗಟ್ಟಿಯಾಗಿ ಉಳಿದಿದ್ದವು.
ಮೊನ್ನೆ ನನ್ನ ಪುಸ್ತಕ ಸಂಗ್ರಹದಲ್ಲಿದ್ದ ಕವನ ಸಂಗ್ರಹವೊಂದನ್ನು ತಿರುವುತ್ತಿದ್ದಾಗ, ಹಠಾತ್ತನೇ ಈಶ್ವರ ಸಣಕಲ್ಲರ ಈ ಕವಿತೆ ಕಣ್ಣಿಗೆ ಬಿದ್ದಿತು. ನನಗಾದ ಆನಂದ ಹೇಳತೀರದು. ಇನ್ನೇನು ಕಂಪ್ಯೂಟರ್ ಆಫ್ ಮಾಡಿ ಮಲಗಬೇಕೆಂದು ಸಿದ್ಧನಾದವ, ಅವರ ಕವಿತೆ ಹಾಕಲೇಬೇಕು ಎಂದು ಕೂತೆ.
ಈ ಕವಿತೆ ಬಗ್ಗೆ ವಿವರಣೆ ಬರೆಯುವುದೇ ವ್ಯರ್ಥ. ಏಕೆಂದರೆ, ಎಲ್ಲವೂ ಸ್ವಯಂವೇದ್ಯ. ಸರಳ. ಸ್ಪಷ್ಟ. ನೀವೇ ಓದಿ:
ಕೋರಿಕೆ
ಜಗವೆಲ್ಲ ನಗುತಿರಲಿ,
ಜಗದಳವು ನನಗಿರಲಿ!
ನಾನಳಲು ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?
ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?
ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?
ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’, ಎನಲೆನ್ನನವನೆ ಕಾವಂ?
- ಈಶ್ವರ ಸಣಕಲ್ಲ
(ಪೊಡವಿ - ಭೂಮಿ; ಸೈಪು - ಪುಣ್ಯ, ಅದೃಷ್ಟ; ಸೈತು - ನೇರ, ದಿಟ್ಟ, ಸರಿ)
- ಚಾಮರಾಜ ಸವಡಿ