ಹಿರಿಯನಾದರೆ ಏನು ಶಿವಾ..

ಹಿರಿಯನಾದರೆ ಏನು ಶಿವಾ..

೨೦೧೦!


ನಂಬಲಿಕ್ಕೇ ಆಗುತ್ತಿಲ್ಲಾ!!


೨ಕೆ-೨ಕೆ ಅನ್ನುತ್ತಿದ್ದೆವು.. ಆಗಲೇ ೨೦೧೦...ಸಾಧ್ಯವೇ ಇಲ್ಲ!!


ಲೆಕ್ಕದಲ್ಲಿ ಜಾಣರಿರುವವರು, ಈ "ಲೀಪ್ ಇಯರ್"ನಿಂದಾಗಿ ಯಾವ ಯಾವ ಇಯರ್‌ಗಳನ್ನೆಲ್ಲಾ ಬಿಟ್ಟಿದ್ದಾರೆಂದು ಒಮ್ಮೆ ನೋಡಿ ಹೇಳುವಿರಾ?


ಎರಡು ಲೈನ್..ಬರೀ ಎರಡು ಲೈನ್, ನನ್ನಾಕೆಗೆ-ನೆನಪಿಡಿ ನನ್ನಾಕೆಗೇ, ಲವ್ ಲೆಟರ್ ಬರೆಯಲು ಶಬ್ದಗಳು ಸಿಗದೇ ಒದ್ದಾಡುತ್ತಿದ್ದುದು ನಿನ್ನೆ ಮೊನ್ನೆ ಆದಂತೆ ಇದೆ! ಆಗಲೇ ಮದುವೆಯಾಗಿ, ಮಕ್ಕಳಾಗಿ..ಮುದುಕನಾಗುವತ್ತ....ನಂಬಕ್ಕಾಗುತ್ತಿಲ್ಲ..


ಬಹುಷ:..


ಹೆಚ್ಚಿನಂಶ...


ಅಲ್ಲ.. ಗ್ಯಾರಂಟೀ.. "ಹಿಪ್"ನಾಟಿಸಂ ಮಾಡಿ ಹಿಂದೆ ಹೋಗುವ ತರಹ, ಯಾರೋ ನನ್ನ ಮೇಲೆ "ಮುಪ್ಪ್"ನಾಟಿಸಂ ಮಾಡಿದ್ದಾರೆ.


ಹಾಗೆಂದು ಮುಪ್ಪು ಬರುತ್ತಿರುವುದಕ್ಕೆ ಬೇಸರವೇನಿಲ್ಲ. ಚಿಕ್ಕವನಿದ್ದಾಗಿನಿಂದಲೇ ಬಯಸುತ್ತಿದ್ದೆ:


ಬಿಳಿ ತಲೆಕೂದಲು ಹಿಂದೆ ಬಾಚಿ, ಬಿಳಿ ಮೀಸೆ ತಿರುಗಿಸಿ, ಪಂಚೆ ಎಡಕೈಯಲ್ಲಿ ಎತ್ತಿ ಹಿಡಿದು, ನಾನೂ ಹುಡುಗರಿಗೆ ಜೋರುಮಾಡಬೇಕೆಂದು....


ನಾನು ಹುಡುಗನಾಗಿದ್ದಾಗ, ಯಾವುದೇ ಸಮಾರಂಭಕ್ಕೆ ಹೋದರೂ, ಈ ಹಿರಿಯರ ಕಣ್ಣಿಗೆ ಬಿದ್ದರೆ ಸಾಕು, ಕೆಲಸಗಳೆಲ್ಲಾ ನನ್ನ ತಲೆಗೇ :(


-"ಗಣೇಶ ಬಂದ್ಯಾ, ಬಾಳೆಹಣ್ಣು ಮುಗಿದಿದೆ. ಬೇಗ ಮಾರ್ಕೆಟ್‌ಗೆ ಹೋಗಿ ಒಂದು ಗೊನೆ ತಾ "


-"ಗಣೇಶಾ..ಬೇಗ ಬೇಗ ಮನೆ ಮೇಲೆ ಹತ್ತಿ ಈ ದಾರವನ್ನು ಮನೆ ಸುತ್ತಾ ಸುತ್ತಿ ಬಿಡು.."


ಮನೆ ನೋಡಿದರೇ ತಲೆ ಸುತ್ತುವುದು.ಮೇಲೆಹತ್ತಿ ದಾರಸುತ್ತುವ ಕೆಲಸ..


ಹಿರಿಯರು ಹೇಳಿದ ಮೇಲೆ ಮುಗಿಯಿತು.ಅವರ ಮಾತು ಧಿಕ್ಕರಿಸಿದ ಉದಾಹರಣೆಯೇ ಇಲ್ಲ.


ನಾನು ಬಯಸುತ್ತಿದ್ದಂತೆ ಈಗ ನಾನು "ಹಿರಿಯರ" ಶ್ರೇಣಿಯಲ್ಲಿದ್ದೇನೆ!!


ಆದರೆ...................


ಈಗ ಮದುವೆ ಸಮಾರಂಭಗಳಲ್ಲಿ ಸ್ವಾಗತ,ಪೂಜೆಯಿಂದ ಹಿಡಿದು ಅಡುಗೆ, ಬೀಳ್ಕೊಡುಗೆವರೆಗೆ ಎಲ್ಲದಕ್ಕೂ ವಹಿಸಿಕೊಡುವುದರಿಂದ, ಹುಡುಗರಿಗೇನು ಕೆಲಸ ಹೇಳುವುದು? ಆದರೆ ಬಾಯಿ ಸುಮ್ಮನಿರುತ್ತಾ? ನಮ್ಮ ಕಾಲದ ವಿಷಯಗಳನ್ನು ರಸವತ್ತಾಗಿ ಸುತ್ತಲಿದ್ದವರಿಗೆ ವಿವರಿಸುತ್ತಿದ್ದೆ. ಅವರಲ್ಲಿ ಒಬ್ಬ "ಶುರುವಾಯಿತು, ಇವರ ಗೊಡ್ಡು ಪುರಾಣ" ಅನ್ನೋದೆ!


ಕೋಪ ನೆತ್ತಿಗೇರಿತು.


ಗರ್ಜಿಸಿ : "ಯಾರನ್ನೋ ಗೊಡ್ಡು ಅನ್ನುತ್ತಿ? ನಾನಾದ್ದರಿಂದ ಆಯಿತು. ಬೇರೆಯವರಾಗಿರುತ್ತಿದ್ದರೆ ನಿನ್ನ ಭೂತ ಬಿಡಿಸುತ್ತಿದ್ದರು" ಅಂದೆ.


ಅದಕ್ಕಾತ "ತಾತ, ನಮ್ದು ಭವಿಷ್ಯ. ಭೂತವೇನಿದ್ದರೂ ನಿಮ್ದು. ಭೂತಬಿಡಿಸಬೇಕಾದ್ದು ನಿಮ್ಗೇ" ಅನ್ನೋದೆ!


ಅಬ್ಬಾ..ಈ ಕಾಲದ ಹುಡುಗರೋ..


ಹುಡುಗೀರೇನು ಕಮ್ಮಿನಾ..ನೋಡಿ:


ನನ್ನ ಪರಿಚಿತರೊಬ್ಬರ ಮಗನ ಮದುವೆ ಮಾತುಕತೆ ನಡೆದು, ಆಮಂತ್ರಣ ಪತ್ರಿಕೆ ಪ್ರಿಂಟ್ ಆಗಬೇಕು ಅನ್ನುವಷ್ಟರಲ್ಲಿ ಹುಡುಗಿ ಮದುವೆ ಬೇಡ ಎಂದಳು.


"ನೀವು ಹೇಳಿದರೆ ಹುಡುಗಿ ಒಪ್ಪಿಯಾಳು, ಕೊನೇ ಪಕ್ಷ ನಿರಾಕರಿಸಲು ಕಾರಣವೇನೆಂದಾದರೂ ಕೇಳಿ ಬನ್ನಿ" ಎಂದು ಎಲ್ಲರೂ ಒತ್ತಾಯಿಸಿದ್ದಕ್ಕೆ ಹೋದೆ..........


"ನೋಡಿ ಅಂಕ್‌ಲ್, ಇದು ನಮ್ಮಿಬ್ಬರ ನಡುವಿನ ವಿಷಯ, ನಿಮ್ಮ ಬಿಸಿನೆಸ್ ನೀವು ನೋಡಿಕೊಳ್ಳಿ"


ಎಂದು ಸುಂದರ ಇಂಗ್ಲೀಷಲ್ಲಿ ಹೇಳಿದಳು :(


ಉತ್ತರ ದಿಕ್ಕಿಗಾದರೂ ತಲೆಹಾಕಿ ಮಲಗಿಯೇನು, ಆದರೆ ಮದುವೆ ವಿಷಯಕ್ಕೆ ತಲೆ ಹಾಕುವುದಿಲ್ಲ. ಮದುವೆಗೆ ಹೋದರೂ- ಊಟ ಮಾಡುವಾಗ ಮಾತ್ರ ಬಾಯಿ ತೆರೆಯುವುದು.


ಮೊನ್ನೆ ಮಗುವಿನ ನಾಮಕರಣಕ್ಕೆ ಹೋಗಿದ್ದೆ. ಮಗುವಿನ ಹೆಸರು ವಿಚಿತ್ರವಾಗಿತ್ತು. ಆದರೂ ಸೌಜನ್ಯಕ್ಕೆ ಮಗುವಿನ ಹೆಸರು ಚೆನ್ನಾಗಿದೆ ಎಂದೆ.ಸರೀ ಅರ್ಧ ಘಂಟೆ ಆತ ಆ ಹೆಸರಿಗಾಗಿ ಪಟ್ಟ ಕಷ್ಟ ವಿವರಿಸಿದ: ಹೆಸರಾಂತ ಜ್ಯೋತಿಷಿಯ ಅಪಾಂಯ್ಟ್‌ಮೆಂಟ್‌ಗಾಗಿ ಓಡಾಡಿದ್ದು ಇತ್ಯಾದಿ..


ನಾನು ಸುಮ್ಮನಿರಬಾರದಿತ್ತಾ? "ಈ ಕಷ್ಟ ಪಡುವ ಬದಲು ನೀವೇ ಒಂದು ಸುಂದರ ಹೆಸರಿಟ್ಟರಾಗುತ್ತಿತ್ತು." ಅಂದೆ.


"ಅಂಕ್‌ಲ್, ಮದುವೆ,ಪ್ರಸ್ಥ, ಸೀಮಂತ.. ಎಲ್ಲದಕ್ಕೂ ದಿನ ನಿಗದಿ ಪಡಿಸಲು ಜ್ಯೋತಿಷಿಗಳ ಬಳಿ


ಓಡುವುದನ್ನು ನಿಲ್ಲಿಸಿ.........."


ಬೇಡ..ಬೇಡವೇ ಬೇಡ..ಈ ಹಿರಿತನ..ಬಿಳಿತಲೆ...ಬಿಳೀ ಮೀಸೆ..ಬಿಳೀ ಪಂಚೆ...


೨೦೧೦ರಲ್ಲಿ ಪತ್ನಿ ಜತೆ ವಾ(ಪಾಸ್)ನಾಪ್ರಸ್ಥಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ.(ಜ್ಯೋತಿಷಿಗಳ ಬಳಿ ಕೇಳದೇ..)


-ಗಣೇಶ.


 


 


 


 


 


 

Rating
No votes yet

Comments