`ಭೂತ' ಬಂಗಲೆಗಳ ಕಥೆ - ವ್ಯಥೆ!!
`ಭೂತ' ಬಂಗಲೆಗಳ ಕಥೆ - ವ್ಯಥೆ!!
ಈಗ ನಾನು ಪ್ರಸ್ತಾಪಿಸುತ್ತಿರುವುದು ತುಂಬಾ ವಿಚಿತ್ರ ಸಂಗತಿಯೇ ಆದರೂ, ಆರ್ಥಿಕವಾಗಿ ತುಂಬಾ ಹೊಡೆತ ಕೊಡುವಂತಹುದಾಗಿದೆ! 21ನೇ ಶತಮಾನದಲ್ಲೂ ಈಗ ಪ್ರಚಲಿತವಿರುವ ಸಂಗತಿ (ನಂಬಿಕೆ) ಯೇ ಇದಾಗಿದೆ!!
ಇಲ್ಲಿ ನಾನು ಹೇಳುವ 2 ಪ್ರಕರಣಗಳಿಗೆ ಸಂಬಂಧಿಸಿದ ಊರು, ಹೆಸರು ಅನಗತ್ಯ ಎನಿಸಿರುವುದರಿಂದ ಅದನ್ನು ಕೈಬಿಟ್ಟು, ಪ್ರಕರಣಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮವನ್ನು ಮಾತ್ರ ಹೇಳಲಿಚ್ಛಿಸುತ್ತೇನೆ:
1) ಒಂದು ದೊಡ್ಡ ಹೊಸ ಕಲ್ಯಾಣ ಮಂಟಪ. ಕೋಟ್ಯಾಂತರ ರೂ. ವೆಚ್ಚಮಾಡಿ, ಅತ್ಯಾಧುನಿಕವಾಗಿ ಕಟ್ಟಿಸಿದ ಈ ಭವನದಲ್ಲಿ ಒಂದು ಮದುವೆ ಮಾಡಲು 30 ಸಹಸ್ರ ರೂ. ಮೇಲ್ಪಟ್ಟು ಬಾಡಿಗೆ! ಆರಂಭದಲ್ಲಿ ಕಲ್ಯಾಣ ಮಂಟಪ ಸುಸ್ಥಿತಿಯಾಗಿಯೇ ನಡೆಯುತ್ತಿತ್ತು. ವರ್ವದ ಹಿಂದಷ್ಟೆ ಈ ಕಲ್ಯಾಣ ಮಂಟಪದಲ್ಲಿ ವಿವಾಹವಾದ ನವ ದಂಪತಿ, ಸಮಾರಂಭ ಮುಗಿದ ಬಳಿಕ ಅದೇ ದಿನ ಸಂಜೆ ವಾಪಸಾಗುವಾಗ ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಸರಿ! ಇನ್ನು ಹೇಳುವುದೇನಿದೆ!? ಯಾರೋ ಕೆಲವರು, ``ಈ ಕಲ್ಯಾಣ ಮಂಟಪದಲ್ಲಿ ಮದುವೆಯಾದವರು ಯಾರೂ ಉಳಿಯುವುದಿಲ್ಲ...ಸತ್ತು ಹೋಗುತ್ತಾರೆ; ಅಪಶಕುನದ ಭವನವಿದು'' ಎಂದು ಗುಲ್ಲು ಎಬ್ಬಿಸಿದರು. ಅದಾದ ಬಳಿಕ ಆ ಭವನದಲ್ಲಿ ಹೆಚ್ಚು ಕಡಿಮೆ ಮದುವೆಗಳೇ ನಿಂತುಹೋದವು. ಕೋಟ್ಯಾಂತರ ರೂ. ಬಂಡವಾಳ ಹಾಕಿದ ಮಾಲೀಕರು ಈಗ ತಲೆ ಮೇಲೆ ಬಟ್ಟೆ ಹಾಕಿಕೊಂಡು ಕುಳಿತಿದ್ದಾರೆ!!
2) ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಬಡಾವಣೆಯೊಂದರಲ್ಲಿ ಕಟ್ಟಿಸಿದ್ದ ಜೈನರ ಒಂದು ವಾಸದ ಬಂಗಲೆ ಇದೆ. ಮಾಲೀಕರು ಅದನ್ನು ಸುಸ್ಥಿತಿಯ ಕುಟುಂಬವೊಂದಕ್ಕೆ ಬಾಡಿಗೆಗೆ ಕೊಟ್ಟಿದ್ದರು. ಕಾರಿನಲ್ಲಿ ಪ್ರಯಾಣಿಸುವಾಗ ಈ ಕುಟುಂಬ ಅಪಘಾತಕ್ಕೆ ಈಡಾಗಿ ದುರ್ಮರಣಕ್ಕೆ ತುತ್ತಾಯಿತು. ಊರಿನ ಜನಗಳ ಪ್ರಕಾರ, ``ಆ ಬಂಗಲೆಯಲ್ಲಿ ಅವರೆಲ್ಲ ಇದೀಗ ದೆವ್ವಗಳಾಗಿ ಸುತ್ತುತ್ತಿದ್ದಾರಂತೆ''!! ಸುಮಾರು ನಾಲ್ಕೈದು ವರ್ವವೇ ಆಯಿತೇನೋ ಆ ಬಂಗಲೆ ಈಗ ಪಾಳುಬಿದ್ದಿದೆ. ಕೋಟ್ಯಾಂತರ ರೂ. ಬಂಡವಾಳ ಹಾಕಿ ಅದನ್ನು ನಿರ್ಮಿಸಿದ್ದ ಅದರ ಮಾಲೀಕರೂ ಸಹ ಈಗ ಅತ್ತ ಸುಳಿಯುತ್ತಿಲ್ಲವೇನೋ! ಬಂಗಲೆ ಸುತ್ತ ಗಿಡಗಂಟಿಗಳು ಬೆಳೆದುಕೊಂಡು ಕಾಂಪೌಂಡು ಕುಸಿಯುತ್ತಾ ಅದೀಗ ಹಾಳುಸುರಿಯುತ್ತಿದೆ!!
ಆರ್ಥಿಕವಾಗಿ ಭಾರಿ ಹೊಡೆತ ಕೊಡುವ ಇಂತಹ ನಂಬಿಕೆಗಳು ಹಾಗೂ ಅವುಗಳ ಪ್ರಚಾರದಿಂದ ಎಂತಹ ಅನಾಹುತಗಳಾಗುತ್ತಿವೆ ಅಲ್ಲವೆ?