ವಿಜಯ ಕರ್ನಾಟಕಕ್ಕೆ ಬರೆದ ಸಾಲುಗಳು

ವಿಜಯ ಕರ್ನಾಟಕಕ್ಕೆ ಬರೆದ ಸಾಲುಗಳು

(ಈ ಚುಟುಕು ಬರಹ ಭಾನುವಾರ ಡಿಸೆಂಬರ್ ೨೭ ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. "ಕನಸಿನ ಉದ್ಯೋಗ"ದ ಬಗ್ಗೆ ಬರೆಯಬೇಕೆಂದು ಕೇಳಿದ್ದರು. ನಾನು ಬರೆದದ್ದು ಇಗೋ ನಿಮ್ಮ ಮುಂದಿದೆ)

ನನ್ನ ಕನಸಿನ ಉದ್ಯೋಗ ಕನಸು ಕಾಣುವುದು. ಅರೆ, ಇದೇನು? ಎಂದನಿಸಬಹುದು ನಿಮಗೆ. ಹೊಸತನ್ನು ಕನಸು ಕಾಣುತ್ತ ಅದಕ್ಕೆ ರೂಪ ಕೊಡುವುದು ನನ್ನ ಉದ್ಯೋಗ. ಹಣ ಮಾಡಬೇಕು, ದೊಡ್ಡ ಮನುಷ್ಯನಾಗಬೇಕು ಎಂಬ ಕನಸುಗಳಲ್ಲ. ಬದಲಿಗೆ ಹೀಗೊಂದು ಹೊಸತು - ಅದನ್ನು ಬೇರಾರೂ ಮಾಡಿರಕೂಡದು, ಮುಖ್ಯವಾಗಿ ಎಲ್ಲರಿಗೂ ಅದರ ಉಪಯೋಗವಾಗಬೇಕು!

ಮೈಬಗ್ಗಿಸಿ ಕೆಲಸಮಾಡಲು ಸೋಮಾರಿತನ ಇದ್ದೂ ಏನಾದರೂ ಮಾಡಬೇಕು ಎನ್ನುವ ಮಹದಾಸೆ ಇರುವವರಿಗೆ ವರ - ಕಂಪ್ಯೂಟರ್, ಇಂಟರ್ನೆಟ್ ಮತ್ತು ತಂತ್ರಜ್ಞಾನ. ಎಲ್ಲಿಗೂ ಕದಲದೆ ಕಂಪ್ಯೂಟರ ಮುಂದೆ ಕುಳಿತು ಸೋಮಾರಿತನದ ಪರಮಾವಧಿಯಲ್ಲೇ ಏನೆಲ್ಲ ಬದಲಾವಣೆ ಮೂಡಿಸಬಹುದು! ಕೂತಲ್ಲೇ ಕುಳಿತು ಬೆನ್ನು ನೋವಾಗಿ, ಕಣ್ಣುಗಳು ಮಂಜಾಗಿ, ಕೈ ಕಾಲು ಜವ ಹಿಡಿದರೂ ಸೋಮಾರಿತನ ಬಿಡದ ದೇಹ ಕದಲದೆ ಖಾಯಂ ಜಾಗದಲ್ಲಿದ್ದರೆ, ಮನಸ್ಸೊಂದು ಮಾತ್ರ ಜಗತ್ತನ್ನೆಲ್ಲ ಸುತ್ತಾಡಿ ಇನ್ಯಾರಿಗೂ ಬೇಡವಾದ ತಂತ್ರಜ್ಞಾನದ ಗೋಜಲನ್ನು ಬಿಡಿಸುತ್ತ ಕುಳಿತಿರುತ್ತದೆ. ಪ್ರತಿದಿನ ಪ್ರತಿಕ್ಷಣ ಹರಿಯುವ ಹೊಸ ವಿಷಯಗಳನ್ನು ಅರಗಿಸಿಕೊಳ್ಳುತ್ತ ತನ್ನ ಜಗತ್ತಿನಲ್ಲೇ ಕಳೆದುಹೋಗುತ್ತದೆ. ತಂತ್ರಜ್ಞಾನ ಪ್ರಿಯರಿಗೆ ಇದೊಂದು 'zen' state of mind, ಒಂಥರಾ ಶೂನ್ಯ ಸಂಪಾದನೆ!

ಮೊದಮೊದಲಿಗೆ ಕಬ್ಬಿಣದ ಕಡಲೆ ಎನಿಸುವ ತಂತ್ರಜ್ಞಾನ, ಅರಿದು ಕುಡಿದ ಮೇಲೆ ಸುಲಭ! ಗೋಜಲು ಬಿಡಿಸುತ್ತ ಹೋದಂತೆ ಹೊಸ ಜಗತ್ತೇ ತೆರೆದುಕೊಳ್ಳುತ್ತದೆ. ಎಲ್ಲವೂ ಸಾಧ್ಯವುಂಟು ಈ ಜಗತ್ತಿನಲ್ಲಿ. ಕನಸುಗಳಿಗೆ ಸೀಮೆ ಇಲ್ಲ. ಒಗಟು ಬಿಡಿಸಿದಂತೆ ಒಂದಕ್ಕೊಂದು ಉತ್ತರ ಕಂಡುಕೊಳ್ಳುತ್ತ ಸಾಗುವ ಪಯಣಿಗನಿಗೆ ನಡೆದುಬಂದ ಹಾದಿ ಖುಷಿ ಕೊಡುತ್ತದೆ. ಅಲ್ಲಿ ಅರಿತ ಹೊಸ ವಿಷಯ, ಹೊಸ ವಿಧಾನ ಕಾಲಕ್ರಮೇಣ ಉಪಯೋಗಕ್ಕೂ ಬರುತ್ತದೆ.

ಇನ್ನು ಇದರಲ್ಲಿರುವ ಆಕರ್ಷಣೆ ಎಲ್ಲೆಯಿಲ್ಲದ್ದು! ಕೂತಲ್ಲೇ ಎಲ್ಲ ಕೆಲಸವನ್ನೂ ಮಾಡಬಹುದಾದ ಸುಯೋಗಕ್ಕಿಂತ ಹೆಚ್ಚಿನ ಆಕರ್ಷಣೆ ಬೇಕೆ? ಹೊಗೆ, ಧೂಳು ಕುಡಿಯುತ್ತ ಬಿಸಿಲಲ್ಲಿ ಬೆಂದು ಗಂಟೆಗಟ್ಟಲೆ ಸವೆಸಿದಾಗ ಆಗ(ದೇ ಇರ)ಬಹುದಾದ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಬಿಡುವ ಅವಕಾಶ ಕಲ್ಪಿಸುತ್ತದೆ. ಕಂಡ ಕನಸುಗಳಿಗೆ ರೂಪ ಕೊಡಲು ಬೇಕಿರುವ ಜ್ಞಾನ ಸಂಪತ್ತಿಗೆ ಕಿಟಕಿ ತೆರೆದಿಡುತ್ತದೆ. ಸಂಪನ್ಮೂಲಗಳನ್ನೂ ಹುಡುಕಿಕೊಳ್ಳುವ ಅವಕಾಶ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮತ್ತಷ್ಟು ಕನಸು ಕಾಣಲು ಸಮಯ, ಅವಕಾಶ ಎರಡನ್ನೂ ಒದಗಿಸಿಕೊಡುತ್ತದೆ! ಒಂದು ಪಕ್ಷ ತಂತ್ರಜ್ಞಾನವನ್ನು ಅರಗಿಸಿಕೊಳ್ಳುವ ಶಕ್ತಿ, ಕೈಕಾಲು ಜವ ಹಿಡಿದರೂ ಛಲ ಬಿಡದ ಮನಸ್ಸು, ಕೂತಲ್ಲೇ ಕೂತು ನೋವಾದರೂ ತಡೆದುಕೊಳ್ಳುವ ಬೆನ್ನು, ವರುಣನ ಕೃಪೆ, ಕೆ ಇ ಬಿಯವರ ಅನುಗ್ರಹ ಇವೆಲ್ಲ ನಿಮಗಿದ್ದರೆ ಈ ತಂತ್ರಜ್ಞಾನ ಜಗತ್ತಿನಲ್ಲಿ ಕಂಡ ಕನಸಿಗೊಂದು ರೂಪ ಕೊಟ್ಟು ಮಜ ನೋಡಿ. ಸಿಹಿ ಕಹಿಗಳು ಕೂಡಿದ ಸರಮಾಲೆ ಎಷ್ಟು ಸ್ವಾರಸ್ಯ ತಂದಿಡುತ್ತದೆ ಜೀವನಕ್ಕೆ. ಯಾರಿಗೂ ಬೇಡದ ತಂತ್ರಜ್ಞಾನದ ಗೋಳನ್ನು ಅರಿತ ಸಂತುಷ್ಟಿ, ಹೇಳಿದರೂ ಹೆಚ್ಚು ಜನರಿಗೆ ಅರ್ಥವಾಗದ ವಿಷಯಗಳನ್ನು ತಿಳಿದ ಖುಷಿ ಮತ್ಯಾರಿಗೂ ಸಿಗದು. ಹಾಗೆಯೇ ತಿಳಿಯದವರ ಅಸೂಯೆಯ ನೋಟ, ತಿಳಿದವರ ಅಸಡ್ಡೆ - ಸ್ವಾರಸ್ಯಗಳ ಮೇಳ! ಎಲ್ಲಿಯೂ ಕದಲದೆ ಅರಿವಿನ ಇಟ್ಟಿಗೆಗಳಿಂದ ಕನಸಿನ ಗೋಡೆ ಕಟ್ಟುತ್ತ ಅದರೊಂದಿಗೆ ಫೈಟ್ ಮಾಡುತ್ತ ಸಾಧಿಸಿದ ಗೆಲುವು, ಎದುರಿಸಿದ ಸೋಲು ಎರಡೂ ಮನಸ್ಸಿಗೆ ಬುತ್ತಿ. ಏಳು ಬೀಳುಗಳನ್ನು ಎದುರಿಸುವ ಪಾಠ ಕಲೆಯುವುದೂ ಕುಳಿತಲ್ಲೇ!

***

ವಿಜಯಕರ್ನಾಟಕ ಇ-ಪೇಪರ್ ನಲ್ಲಿ ಓದಲು ಕ್ಲಿಕ್ ಮಾಡಿ: http://short.to/11qq1

- ಹರಿ ಪ್ರಸಾದ್ ನಾಡಿಗ್

Rating
No votes yet

Comments