ಬ್ಲಾಗನ್ನು ಮುದ್ರಿಸಿ

ಬ್ಲಾಗನ್ನು ಮುದ್ರಿಸಿ

ಬರಹ

ಬ್ಲಾಗನ್ನು ಮುದ್ರಿಸಿ

blog
ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್‌ಪ್ಯಾಡ್,ವರ್ಡ್‌ಪ್ರೆಸ್ ಅಥವಾ ಬ್ಲಾಗರ್ ಸೇವೆಯ ಮೂಲಕ ಬರೆಯುವವರು ಈ ಸೇವೆಯನ್ನು ಪಡೆಯಬಹುದು.ನಿಮ್ಮ ಬ್ಲಾಗಿನ ವಿಳಾಸವನ್ನು ನೀಡಿ,ಮುಖಪುಟ ಮತ್ತು ಹಿಂಬದಿ ರಕ್ಷಾಪುಟವನ್ನು ಅಪ್ಲೋಡ್ ಮಾಡುವ ಮೂಲಕ ಕೆಲವೇ ನಿಮಿಷದಲ್ಲಿ ಬ್ಲಾಗ್ ಪುಸ್ತಕವನ್ನು ರಚಿಸಬಹುದು.ರಕ್ಷಾಪುಟವನ್ನು ನೀವು ನೀಡದಿದ್ದರೆ,ತಾನಾಗಿ ಅದನ್ನು ವಿನ್ಯಾಸ ಮಾಡಲೂ ಸೇವೆ ಶಕ್ತವಿದೆ.ಯಾವ ತಾರೀಕುಗಳ ನಡುವಣ ಬ್ಲಾಗ್ ಪುಸ್ತಕ ಬೇಕು ಎನ್ನುವುದನ್ನು ನಮೂದಿಸಲೂ ಸಾಧ್ಯವಿದೆ.ಸಂಪೂರ್ಣ ಬ್ಲಾಗನ್ನು ಒಂದೇ ಪುಸ್ತಕ ಮಾಡಬೇಕೆಂದೇನೂ ಇಲ್ಲ.ಪುಸ್ತಕದ ಮುನ್ನೋಟವನ್ನು ಪಡೆಯಲೂ ಬಹುದು.ಬ್ಲಾಗ್ ಪುಸ್ತಕವನ್ನು ಮುದ್ರಿಸಿ,ನಿಮಗೆ ಕೊರಿಯರ್ ಮೂಲಕ ಕಳುಹಿಸುವ ಸೇವೆಗೆ ಹದಿನೈದು ಡಾಲರಿನಿಂದ ಆರಂಭಿಸಿ,ಪುಟಗಳ ಸಂಖ್ಯೆಯ ಮೇಲೆ ದರ ವಿಧಿಸಲಾಗುತ್ತದೆ.ಪುಸ್ತಕದ ಇ-ಪ್ರತಿಗಾದರೆ ಬೆಲೆ ಕಡಿಮೆ.
--------------------------------------------------------------------------------
ಸನ್ನೆಯ ಮೂಲಕ ಟಿವಿ ನಿಯಂತ್ರಣ
ಟಿವಿಯ ಮುಂದೆ ಸನ್ನೆ ಮಾಡಿ,ಅದನ್ನು ನಿಯಂತ್ರಿಸಲಾಗುತ್ತದೆಯೇ? ಸಾಫ್ಟ್‌ಕೈನೆಟಿಕ್ ಎನ್ನುವ ತಂತ್ರಾಂಶ ಕಂಪೆನಿಯು ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಕಂಪೆನಿಯ ಜತೆ ಸೇರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.ಸನ್ನೆಯನ್ನು ಗ್ರಹಿಸಲು ಟಿವಿಯ ಮೇಲೆ ಮೂರು ಆಯಾಮದಲ್ಲಿ ಚಿತ್ರವನ್ನು ಗ್ರಹಿಸುವ ಕ್ಯಾಮರಾದ ಅಗತ್ಯವಿದೆ.ಕ್ಯಾಮರಾದ ಮುಂಭಾಗದಲ್ಲಿ ನಿಂತು ಸನ್ನೆ ಮಾಡಿದಾಗ,ಅದನ್ನು ಗ್ರಹಿಸಿ,ತಂತ್ರಾಂಶದ ಸಹಾಯದಿಂದ ಸನ್ನೆಯನ್ನು ವಿಶ್ಲೇಷಿಸಿ,ಅದಕ್ಕನುಗುಣವಾಗಿ ಟಿವಿಯು ಪ್ರತಿಕ್ರಿಯೆ ನೀಡುವಂತೆ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಕಂಪ್ಯೂಟರಿನಲ್ಲೂ ಬಳಸಲಡ್ಡಿಯಿಲ್ಲ.ಸಾಫ್ಟ್‌ಕೈನೆಟಿಕ್ ಕಂಪೆನಿಯು,ಮೂರು ಆಯಾಮದಲ್ಲಿ ಚಿತ್ರ ಹಿಡಿಯುವ ಸಾಧನ ತಯಾರಿಕಾ ಕಂಪೆನಿಯಾದ ಅಫ್ಟ್ರಿಮಾ ಎನ್ನುವ ಬೆಲ್ಜಿಯನ್ ಕಂಪೆನಿಯೊಂದಿಗೆ ಕೂಡಾ ಒಪ್ಪಂದ ಮಾಡಿಕೊಂಡಿದೆ.ಇಂತಹ ತಂತ್ರಜ್ಞಾನದಲ್ಲಿ ಸಂವೇದಕಗಳು ಮುಖ್ಯ ಪಾತ್ರ ವಹಿಸುತ್ತವೆ.ಮುಂದಿನ ದಿನಗಳಲ್ಲಿ,ರಿಮೋಟ್ ಬದಲು, ಟಿವಿಯ ಮುಂದೆ ಕೈಕಾಲು ಅಲುಗಾಡಿಸಿ,ಚಾನೆಲ್ ಬದಲಿಸುವುದು,ಧ್ವನಿಯ ಮಟ್ಟವನ್ನು ಏರಿಳಿಸುವುದು ಮುಂತಾದವುಗಳನ್ನು ಮಾಡಬೇಕಾದೀತು.
-------------------------------------------------------------------
ಪಾರ್ಕಿಂಗ್ ಮಾಡಲು ಟ್ವಿಟರ್ ಸಹಾಯ
ಮಾಲ್ ಆಫ್ ಅಮೆರಿಕಾವು ಅಮೆರಿಕಾದ ದೊಡ್ಡ ಶಾಪಿಂಗ್ ತಾಣ.ಅಲ್ಲಿಗೆ ಹಬ್ಬದ,ಹೊಸ ವರ್ಷದಲ್ಲಿ ಬರುವ ಗ್ರಾಹಕರಿಗೆ ಸಹಾಯ ಮಾಡಲೀಗ ಟ್ವಿಟರ್ ಸಹಾಯ ಪಡೆಯಲಾಗಿದೆ.ಮಾಲ್‌ನ ವಿವಿಧ ಭಾಗಗಳಲ್ಲಿ ಇರುವ ಪಾರ್ಕಿಂಗ್ ಸ್ಥಳದ ಲಭ್ಯತೆ ಬಗ್ಗೆ ಆಗಾಗ ಟ್ವಿಟರ್ ಸಂದೇಶವನ್ನು ರವಾನಿಸುವ ಸೇವೆಯನ್ನು ಮಾಲ್ ಈಗ ಹೊಸದಾಗಿ ಆರಂಭಿಸಿದೆ.ಅದೇ ರೀತಿ ವಾಹನ ಸಂದಣಿಯನ್ನು ತಪ್ಪಿಸಿ,ಅಲ್ಲಿಗೆ ಬರುವ ಬಗ್ಗೆ ಮಾಹಿತಿಯನ್ನು ಆಗಾಗ ನೀಡಲಾಗುತ್ತದೆ.ಗ್ರಾಹಕರು ಮಾಲ್‌ನ ಟ್ವಿಟರ್ ಖಾತೆಯನ್ನು ಹಿಂಬಾಲಿಸುವ ಮೂಲಕ ತಮ್ಮ ಮೊಬೈಲ್ ಸಾಧನಗಳಲ್ಲಿ ಪಾರ್ಕಿಂಗ್ ಬಗ್ಗೆ ಮತ್ತು ವಾಹನ ಸಂದಣಿಯ ಬಗ್ಗೆ ತಾಜಾ ಮಾಹಿತಿಯನ್ನು ಪಡೆದು ಹೆಚ್ಚಿನ ಲಾಭ ಪಡೆಯುತ್ತಾರೆ.
-------------------------------------------------------------
ಗುರುತ್ವ ಬಲ ಅಳೆಯುವ ಉಪಗ್ರಹ
ಕೃತಕ ಉಪಗ್ರಹಗಳನ್ನು ವಿವಿಧ ಉದ್ದೇಶಗಳಿಂದ ಭೂಮಿಯ ಕಕ್ಷೆಗೆ ಕಳುಹಿಸುವುದು ಎಲ್ಲರಿಗೂ ಗೊತ್ತು.ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹಗಳು ಸಂಪರ್ಕ ಉಪಗ್ರಳಾಗಿ ಬಳಕೆಯಾದರೆ,ಗೂಢಚಾರಿಕೆ ಉದ್ದೇಶಗಳಿಗಾಗಿ,ಹವಾಮಾನ ತಿಳಿದುಕೊಳ್ಳಲು,ನಕಾಶೆ ಬಿಡಿಸಲು ಬಳಕೆಯಾಗುವ ಉಪಗ್ರಹಗಳು ಕಡಿಮೆ ಎತ್ತರದ ಕಕ್ಷೆಯಲ್ಲಿರುವುದೇ ಹೆಚ್ಚು.ಈಗ ಒಂದು ಉಪಗ್ರಹವನ್ನು ಕಕ್ಷೆಯಲ್ಲಿಟ್ಟಿರುವ ಉದ್ದೇಶ ಭೂಮಿಯ ಗುರುತ್ವ ಬಲವನ್ನು ಅಂದಾಜು ಮಾಡುವುದಾಗಿದೆ.ಯುರೋಪಿನ ಗೋಸ್ ಎನ್ನುವ ಉಪಗ್ರಹವೇ ಈ ಉದ್ದೇಶದಿಂದ ಹಾರಿಸಲಾದದ್ದು.ಭೂಮಿಯ ಗುರುತ್ವ ಬಲ ಭೂಮಿಯ ಮೇಲೆ ಸಾಮಾನ್ಯವಾಗಿ ಒಂದೇ ಎಂದು ಭಾವಿಸಲಾಗುವುದಾದರೂ ಅದರಲ್ಲಿ ವ್ಯತ್ಯಾಸ ಇದ್ದೇ ಇದೆ.ಭೂಮಿಯ ಕೇಂದ್ರದಿಂದ ಜಾಗಕ್ಕಿರುವ ದೂರ,ಆ ಜಾಗದ ಕೆಳಗಿರುವ ನೆಲ ಯಾವ ಬಗೆಯದ್ದು,ಅದು ಸಾಂದ್ರವಾದದ್ದೋ ಅಲ್ಲವೋ ಎನ್ನುವುದು ಕೂಡಾ ಗುರುತ್ವ ಬಲವನ್ನು ನಿರ್ಧರಿಸುತ್ತದೆ.ಭೂಮಿಯು ಉರುಟಾಗಿರದೆ,ವಿವಿಧ ಸ್ಥಳಗಳ ಎತ್ತರ ಬೇರೆ ಬೇರೆ ಇರುತ್ತದೆ.ಆದ್ದರಿಂದ ಗುರುತ್ವ ಬಲದಲ್ಲಿ ವ್ಯತ್ಯಾಸ ಸಾಮಾನ್ಯ.ಈ ಉಪಗ್ರಹ ಚಿತ್ರವು ಭೂಮಿಯ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗುರುತ್ವ ಬಲ ಹೆಚ್ಚಿದರೆ,ಅದನ್ನು ಕೆಂಪು ಬಣ್ಣದಿಂದ,ಕಡಿಮೆಯಾದರೆ ನೀಲಿ ಬಣ್ಣದಿಂದ ಗುರುತು ಮಾಡಿ ತೋರಿಸುತ್ತದೆ.ಈ ಉಪಗ್ರಹದಲ್ಲಿ ಗುರುತ್ವ ಬಲವನ್ನು ಅಂದಾಜು ಮಾಡುವ ಎಕ್ಸೆಲೋಮೀಟರ್ ಎನ್ನುವ ಸಂವೇದಕಗಳಿವೆ.ಇವು ದಶಲಕ್ಷದಲ್ಲಿ ಒಂದು ಭಾಗದಷ್ಟು ನಿಖರವಾಗಿ ಗುರುತ್ವಬಲವನ್ನು ಅಂದಾಜು ಮಾಡಬಲ್ಲುದು.
-------------------------------------------------------------------------------
ಆನ್‌ಲೈನ್ ಇರುವ ಅವಧಿ ಹೆಚ್ಚಿದೆ
ಅಂತರ್ಜಾಲ ಸಂಪರ್ಕದಲ್ಲಿ ಕಂಪ್ಯೂಟರ್ ಬಳಸುವುದು ಈಗ ಹೆಚ್ಚು ಸಾಮಾನ್ಯವಾಗಿ ಬಿಟ್ಟಿದೆ.ಬ್ರಾಡ್‌ಬ್ಯಾಂಡ್ ಲಭ್ಯತೆಯಿಂದಾಗಿ,ಸದಾ ಕಂಪ್ಯೂಟರನ್ನು ಅಂತರ್ಜಾಲಕ್ಕೆ ಸಂಪರ್ಕಿಸಿ ಇಡಬಹುದಾದರೂ,ಅಂತರ್ಜಾಲ ಸಂಪರ್ಕವಿದ್ದಾಗ,ಕೆಲಸದಲ್ಲಿ ಮನ ತೊಡಗುವುದಿಲ್ಲವೆಂದು ಕೆಲವರು ಅಂತರ್ಜಾಲ ಸಂಪರ್ಕ ಬಳಸದೆ ಇರಬಹುದು.ಇನ್ನು ಕೆಲವು ಕಚೇರಿಗಳಲ್ಲಿ ಅಂತರ್ಜಾಲ ಬಳಕೆ ಮೇಲೆ ನಿಯಂತ್ರಣ ವಿಧಿಸಲಾಗುತ್ತದೆ.ಫೇಸ್‌ಬುಕ್ ಅಂತಹ ತಾಣಗಳಲ್ಲಿರುವ ಆನ್‌ಲೈನ್ ಆಟಗಳಲ್ಲಿ ತೊಡಗಿ,ಕಚೇರಿ ಕೆಲಸಗಳು ಬಾಕಿಯಾಗುತ್ತವೆ ಎಂಬ ಕಾರಣಕ್ಕೆ ಈ ನಿಯಂತ್ರಣ ವಿಧಿಸಲಾಗುತ್ತಿರಬಹುದು.ಸಮೀಕ್ಷೆಯೊಂದರ ಪ್ರಕಾರ,ಅಂತರ್ಜಾಲ ಬಳಕೆದಾರರು ವಾರದಲ್ಲಿ ಸರಾಸರಿ ಹದಿಮೂರು ಗಂಟೆಗಳ ಕಾಲ ಆನ್‌ಲೈನ್ ಇರುವುದು ಕಂಡು ಬಂದಿದೆ.ಎರಡು ಸಾವಿರದ ಇಸವಿಯ ವೇಳೆ ಇದು ಏಳೆಂಟು ಗಂಟೆ ಇತ್ತು.ಮೂವತ್ತರಿಂದ ನಲುವತ್ತು ವರ್ಷ ವಯಸ್ಸಿನವರು ಸದಾಕಾಲ ಆನ್‌ಲೈನ್‌ನಲ್ಲಿ ಇದ್ದರೆ,ಹಳಬರು ಆನ್‌ಲೈನ್ ಇರುವ ಅವಧಿ ಕಡಿಮೆಯಾಗಿರುವುದು ಸಮೀಕ್ಷೆಯಿಂದ ದೃಡ ಪಟ್ಟಿದೆ.
--------------------------------------------------------------------------------
ಮೂಕವಾಗಲಿದೆ ವರ್ಲ್ಡ್‌ಸ್ಪೇಸ್
ಡಿಸೆಂಬರ್ ಮೂವತ್ತೊಂದರಂದರಿಂದ ವರ್ಲ್ಡ್‌ಸ್ಪೇಸ್ ಉಪಗ್ರಹ ರೇಡಿಯೋಸೇವೆ ತನ್ನ ಸೇವೆಯನ್ನು ಭಾರತದಲ್ಲಿ ನಿಲ್ಲಿಸಲಿದೆ.ವೈವಿಧ್ಯಮಯ ಸಂಗೀತವನ್ನು ಇಪ್ಪತ್ತನಾಲ್ಕು ಗಂಟೆಯೂ ಪ್ರಸಾರ ಮಾಡುತ್ತಿದ್ದ ವರ್ಲ್ಡ್‌ಸ್ಪೇಸ್ ರೇಡಿಯೋ ಕಂಪೆನಿಯು ದಿವಾಳಿಯಾಗಿರುವುದು ಇದಕ್ಕೆ ಕಾರಣ.ಅಮೆರಿಕಾ ಮೂಲದ ಕಂಪೆನಿಯನ್ನು ಖರೀದಿಸಲು ಇತರ ಕಂಪೆನಿಗಳು ಮುಂದೆ ಬಂದಿದ್ದರೂ, ಖರೀದಿಗೆ ಬಂದಿರುವ ಕಂಪೆನಿಗಳು ಭಾರತದ ರೇಡಿಯೋ ಪ್ರಸಾರದಲ್ಲಿಆಸಕ್ತಿ ಹೊಂದಿಲ್ಲವಾದ್ದರಿಂದ,ಭಾರತದಲ್ಲಿ ಪ್ರಸಾರ ನಿಲ್ಲಲಿದೆ.ಈ ವರ್ಷದ ನಂತರವೂ ಚಂದಾ ಅವಧಿ ಹೊಂದಿರುವ ಚಂದಾದಾರರು ಪರಿಹಾರ ಪಡೆಯಬೇಕೆಂದರೆ,ಅಮೆರಿಕಾದ ದಿವಾಳಿ ಕಾನೂನು ಪ್ರಕಾರ ವ್ಯಾಜ್ಯ ಹೂಡಬೇಕಾದೀತು.
------------------------------------------------------------------------------
ಲ್ಯಾಪ್‌ಟಾಪ್ ಮತ್ತು ವರ್ಣೀಯತೆ
ಈಗ ಲ್ಯಾಪ್‌ಟಾಪ್‌ಗಳಲ್ಲಿ ಕ್ಯಾಮರಾ ಮೂಲಕ ಬಳಕೆದಾರನ ಮುಖಪರಿಚಯ ಮಾಡಿಕೊಂಡು,ತನ್ಮೂಲಕ ಕಂಪ್ಯೂಟರ್ ಬಳಕೆಗೆ ಅವಕಾಶ ನೀಡುವ ವಿಧಾನ ಬಳಕೆಯಲ್ಲಿದೆ.ಪಾಸ್‌ವರ್ಡ್ ಬದಲಿಗೆ ಈ ವಿಧಾನ ಜನಪ್ರಿಯವಾಗುತ್ತಿದೆ.ಮುಖಪರಿಚಯಕ್ಕೆ ಕ್ಯಾಮರಾದ ಮೂಲಕ ಬಳಕೆದಾರನ ಚಿತ್ರ ಸೆರೆಹಿಡಿಯುವುದು ಅಗತ್ಯವಾಗಿದೆ.ಆದರೆ ಎಚ್‌ಪಿ ಲ್ಯಾಪ್‌ಟಾಪ್‌ನಲ್ಲಿ ಈ ಕ್ಯಾಮರಾಗಳು ಶ್ವೇತವರ್ಣೀಯರನ್ನು ಸುಲಭವಾಗಿ ಗುರುತು ಹಿಡಿದರೆ,ಇತರರನ್ನು ಗುರುತು ಹಿಡಿಯಲು ವಿಫಲವಾಗಿವೆ ಎಂದು ತೋರಿಸುವ ವಿಡಿಯೋವೊಂದು,ಯುಟ್ಯೂಬಿನಲ್ಲಿ ಒಂದು ದಶಲಕ್ಷ ಸಲ ವೀಕ್ಷಣೆ ಕಂಡು,ಕಂಪೆನಿಗೆ ಮುಜುಗರ ಉಂಟು ಮಾಡಿದೆ.ಸರಿಯಾದ ಬೆಳಕು ಇಲ್ಲದಿದ್ದರೆ ಹೀಗಾಗಬಹುದು ಎಂದು ಕಂಪೆನಿ ಸಮಜಾಯಿಷಿ ನೀಡಿದೆ.
---------------------------------------------------------------------------



ಉದಯವಾಣಿ

*ಅಶೋಕ್‌ಕುಮಾರ್ ಎ