ಪ್ರೀತಿ ಮತ್ತು ಗುಂಡುಕಲ್ಲು !

ಪ್ರೀತಿ ಮತ್ತು ಗುಂಡುಕಲ್ಲು !

ಬರಹ

ಒಂದಾನೊಂದು ಊರಿನಲ್ಲಿ


ಒಬ್ಬಾನೊಬ್ಬ ರಾಜನಿದ್ದ


ರಾಜ ಅವನ ಹೆಸರು ಮಾತ್ರ ರಾಜ್ಯ ಸೊನ್ನೆಯೇ


ಅವನು ಕುಡಿವ ನೀರ ಲೋಟ ಒಂದು ದೊನ್ನೆಯೇ!


 


ಆದಿ ಎಂಬ ಹುಡುಗಿಯನ್ನು


ಅಂತ್ಯವಿರದೆ ಪ್ರೀತಿಸುತ್ತ


ಹಂತಹಂತವಾಗಿ ಅವನು ತನ್ನ ಮರೆತನು


ಸದಾ ಅವಳ ಚಿಂತೆಯಲ್ಲೆ ರಾಜ ನಿರತನು


 


ವಶೀಕರಣ ಕಲಿಯಲೆಂದು


ಕಾಡು ದಾರಿ ಹಿಡಿದು ಹೊರಟ


ಮಲೆಯಾಳಿ ಮಾಂತ್ರಿಕನಲಿ ಮಂತ್ರ ಕಲಿತನೇ


ಸಿದ್ಧಪುರುಷರಿಂದ ತಕ್ಕ ಮಂತ್ರ ಕಲಿತನೇ


 


ಮಂತ್ರ ಕಲಿತು ತಂತ್ರ ಕಲಿತು


ಸ್ವತಂತ್ರನಾದೆ ನಾನು ಎಂದು


ಆದಿ ಪಡೆವ ಕ್ನಸಿನಲ್ಲಿ ದಾರಿ ಮೆಟ್ಟಿದ


ನದಿಯ ದಂಡೆ ಮೇಲೆ ಪುಟ್ಟ ಮನೆಯ ಕಟ್ಟಿದ


 


ಮೈಗೆ ಕಾವಿ ಬಟ್ಟೆ ಧರಿಸಿ


ಮುಖವ ಗಡ್ಡದಲ್ಲಿ ಮರೆಸಿ


ಗುಡ್ಡಹತ್ತಿ ಬೆಟ್ಟವಿಳಿದು ಮನೆಗೆ ಬಂದನು


"ಯೋಗಿಗಿಷ್ಟು ಭಿಕ್ಷೆ ಹಾಕೆ, ಆದಿ" ಎಂದನು


 


ಹೆಸರು ಹಿಡು ಕರೆವ ಇವನ


ಯೋಗ ಶಕ್ತಿ ಮೆಚ್ಚಿಕೊಂಡು


ಆದಿ ಮುಷ್ಟಿ ಅಕ್ಕಿ ಹಿಡಿದು ಹೊರಗೆ ಬಂದಳು


"ಜೋಳಿಗೆಯನು ಬಿಚ್ಚಿ ಮಹಾ ಸ್ವಾಮಿ" ಎಂದಳು


 


ಜೋಳಿಗೆಯನು ಬಿಚ್ಚಲಿಲ್ಲ


ಬಿಟ್ಟ ಕಣ್ಣು ಮುಚ್ಚಲಿಲ್ಲ


"ನಿನ್ನ ಭಕ್ತಿ ಮೆಚ್ಚಿ ಕೊಂಡು ಇಲ್ಲಿ ಬಂದೆನು;


ಇಷ್ಟಾರ್ಥದ ವರವ ನಿನಗೆ ಕೊಡುವೆ"ನೆಂದನು


 


ಎದೆಯನೊಮ್ಮೆ ಒತ್ತಿಕೊಂಡು


ಜೋಗಿ ಮುಷ್ಟಿ ಹಿಂಡಿದಾಗ


ಸ್ಫಟಿಕದಂಥ ನೀರು ನೆಲದ ಹೆಜ್ಜೆಯಾಯಿತು


ನೋಡುತಿದ್ದ ಹಾಗೇ ಎರಡು ಗೆಜ್ಜೆಯಾಯಿತು!


 


ರಾತ್ರಿ ಮಲಗುವಾಗ ನೀನು


ಗೆಜ್ಜೆಕಟ್ಟಿ ಮಲಗಿಕೊಳ್ಳೆ


ನಿನ್ನ ಮನದ ಆಸೆಯೆಲ್ಲ ಹಣ್ಣು ತಿಳಿದುಕೋ


ಜೋಗಿಮಾತಿನರ್ಥವನ್ನು ಹೆಣ್ಣೆ ತಿಳಿದುಕೋ


 


ಪುಟ್ಟ ಹುಡುಗಿ ಆದಿ ಎರಡು


ಗೆಜ್ಜೆಕೊಂಡು ಒಳಗೆ ಬಂದು


ಅಡಿಗೆ ಮನೆಯ ರುಬ್ಬುಗುಂಡ ಮೇಲಕಿಟ್ಟಳು


ಮರುಕ್ಷಣವೇ ಎಲ್ಲವನ್ನೂ ಮರೆತುಬಿಟ್ಟಳು


 


ಅರ್ಧರಾತ್ರಿ ಊರಿನಾಚೆ


ನದಿಯ ದಡದ ಪುಟ್ಟ ಮನೆಯ


ಬಾಗಿಲಲ್ಲಿ ರಾಜ ನಿಂತು ಕಾಯುತ್ತಿದ್ದನು


ಒಳಗುದಿಗೆ ಒಳಗೊಳಗೇ ಬೇಯುತ್ತಿದ್ದನು


 


ಕೈಯಲೊಂದು ದೊಂದಿ ಹಿಡಿದು


ಕಣ್ಣಲೆರಡು ಹಣತೆಯುರಿಸಿ


ಇಡೀ ರಾತ್ರಿ ಯೋಗಿರಾಜ ದಾರಿ ಕಾದನು


ಆದಿ ಇರದಬದುಕನವನು ನೆನೆಯದಾದನು


 


ಕಾರ್ಗತ್ತಲ ರಾತ್ರಿಯಲ್ಲಿ


ಬೆಳ್ಳಿಚಂದ್ರ ಮೂಡಿ ಬಂದ


ತಾರೆಗಳು ಮಿನುಗಿ ಮಿನುಗಿ ಮುಗುಳು ನಕ್ಕವು


ಕೈ ಚಾಚಲು ಆಗಸಕ್ಕೆ ತಾರೆ ದಕ್ಕವು


 


ಅದೋ ಅಲ್ಲಿ ದೂರದಲ್ಲಿ


ಕಲ್ಲು ಕುಪ್ಪಳಿಸಿ ಬಂತು


ಘಲ್ಲು ಘಲ್ಲು ಘಲ್ಲು ಗೆಜ್ಜೆ ಸದ್ದು ಮಾಡುತ


ರಾಜನಿರುವ ಮನೆಯ ಕಡೆಗೆ ಓಡುತೋಡುತ


 


ಮುಗಿಲಿನಾಚೆ ಮಿನುಗುತಾರೆ


ಜೊಗಿ ಎದೆಯ ಸುಡುವ ಚಂದ್ರ


ಅವನ ಪ್ರೀತಿ ಗೆಜ್ಜೆಯೊಂದು ಗುಂಡುಕಲ್ಲಿಗೆ


 


ಆದಿ ಮಲಗಿ ನಿದ್ರಿಸುವಳು


ತನ್ನ ಸ್ವಪ್ನರಾಜ್ಯದಲ್ಲಿ


ಕನಸಿನಲ್ಲು ನಗುವಳವಳು ಮೆಲ್ಲಮೆಲ್ಲಗೆ


ಆದಿ ಇರದ ಜೋಗಿ ಕಥೆಯ ಅಂತ್ಯವೆಲ್ಲಿಗೆ ?