ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ ಬೀಸುತ್ತಾ, ಹೊದ್ದಿಗೆ ಸರಿಯಾಗಿ ಕಾಲಿಗೆ ಹೊದ್ದಿದೆಯೇ ಎಂದು ಪರೀಕ್ಷಿಸಿದ್ದಷ್ಟೇ ಗೊತ್ತು. ಮತ್ತ್ತೆ ಎಚ್ಚರವಾದಾಗ ಮೈಮೇಲೆ ಒಂದಷ್ಟು ಹೆಚ್ಚಿನ ಬಟ್ಟೆಗಳಿದ್ದದ್ದೂ, ಬೇರೆಯವರು ಮಾತನಾಡುತ್ತಿದ್ದ ಕಿರುದನಿ ಕೇಳಿ ಬಂತು. ಕಣ್ಣು ಬಿಡುತ್ತಿದ್ದಂತೆ ಕಂಡಿದ್ದು ಎದ್ದು ಕುಳಿತಿದ್ದ ಪವಿತ್ರಾ, ರವಿ ಮತ್ತು ಅರವಿಂದ. ನಾನು ಎಚ್ಚರವಾದಂತೆ, ನಾವೇನೋನೋ ಕೇಳಿದ್ವಿ ಕೇಳಿಸ್ಲಿಲ್ವೇನೋ? ನೋಡಿಲ್ಲಿ ಸಿಕ್ಕಾ ಪಟ್ಟೆ ನಡುಗ್ತಿದ್ದೆ ಅಂತ ಇದನ್ನೆಲ್ಲಾ ಹೊದಿಸಿದ್ದೇವೆ ಅಂದಾಗ ಹೋ! ಎಂದದ್ದಷ್ಟೇ ಗೊತ್ತು.. ಮತ್ತೆ ಸ್ವಲ್ಪ ಎದ್ದು ಕೂತೆ.
ಮಲಗಲಿಕ್ಕೆ ಇದ್ಯಾವುದೋ ಕಲ್ಲು ಬಿಡಲಿಲ್ಲವೆಂದೂ, ರಾತ್ರಿ ಅದೇನೋ ನಮ್ಮ ಟೆಂಟಿನ ಸುತ್ತಮುತ್ತ ಓಡಾಡಿತೆಂದೂ ಪವಿತ್ರಾ ಹೇಳುತ್ತಿದ್ದದ್ದೂ, ಅದೆಲ್ಲೋ ಸಿಂಹವೋ, ಹುಲಿಯೋ ಇರಬೇಕೆಂದು ರವಿಯೋ, ಅರವಿಂದನೋ ಹೇಳಿದ್ದು ಕೇಳಿ ನಗು ಬಂದು, ಕೊನೆಗೆ ಅದು ಗಾಳಿಯಿರಬೇಕು ಹೆದರಬೇಕಾದ್ದಿಲ್ಲ ಎಂದು ಹೇಳಿದಾಗ ಸಂಪೂರ್ಣ ಎಚ್ಚರವಾಗಿ ಕೂತದ್ದಾಯಿತು. ಅಷ್ಟರಲ್ಲಿ ರಾಜೀವ್ ಕೂಡ ನಮ್ಮೊಡನೆ ಎದ್ದು ಕುಳಿತು ಹೊರನೆಡೆದು ಕೂರುವ ಸಾಹಸ ಮೆರದಿದ್ದರು. ಇದೆಲ್ಲಾ ನೆಡೆದದ್ದು ಮುಂಜಾನೆ ೩ರ ಸಮಯ. ಮತ್ತೊಮ್ಮೆ ಕ್ಯಾಂಪ್ ಫೈರ್ ಹಚ್ಚುವ ಕೆಲಸ ಶುರುವಾಯ್ತು. ಟೆಂಟ್ ಬಾಗಿಲು ತೆರೆದು ಹೊರನೆಡೆದ ರಾಜೀವ್ ಹಾ! ಮಜವಾಗಿದೆ.. ಈಗ ಚಳಿ ಅನ್ನಿಸ್ತಾ ಇಲ್ಲ ಅಂದದ್ದನ್ನು ಕೇಳಿ ಧೈರ್ಯ ಮಾಡಿ ಹೊರ ಬಂದದ್ದಾಯಿತು. ಆಗಲೇ ಮತ್ತೆ ಮೈ ಕೈ ಎಷ್ಟು ನೋವಾಗಿದೆ ಎಂದು ಮತ್ತೊಮ್ಮೆ ಅರಿವಾದದ್ದು. ಚಳಿ ಕಾಸಿ ಎಲ್ಲರೂ ಇನ್ನೊಂದಿಷ್ಟೊತ್ತು ವಿಶ್ರಾಂತಿ ತೆಗೆದುಕೊಂಡು ಮುಂದುವರೆಯಲು ನಿರ್ಧರಿಸಿ ಮತ್ತೆ ಮಲಗಿದವರು ಎದ್ದೇಳಲಿಕ್ಕಾದದ್ದು ೭:೩೦ ಗೆ..ಒಮ್ಮೆ ಓಡಿ ಬೆಟ್ಟದ ಮೇಲಿಂದ ಅದರ ಸುತ್ತಲಿನ ಪರಿಸರದ ನೋಟವನ್ನು ಕಣ್ಣಲೇ ಸೆರೆ ಹಿಡಿದು, ಜೋರಾಗಿ ಬೀಸುತ್ತಿದ್ದ ಗಾಳಿಗೆ ಎದುರಾಗಿ ನಿಂದು, ಗಾಳಿಯನ್ನು ಸೀಳುತ್ತಾ ಒಂದಿಷ್ಟು ದೂರ ಓಡಿ, ಟೆಂಟ್ ನಿಂದ ಸ್ವಲ್ಪ ದೂರದ ಇಳಿಜಾರಿನಲ್ಲಿ ಓಡಾಡುತ್ತಾ ವಾಪಸ್ ಬಂದು ಕುಳಿತೆ.
ಕಾಫಿ ಕುಡಿದು, ತಿಂಡಿ ತಿಂದು ಕೂರುವುದರೊಳಗೆ ಮತ್ತೊಂದು ಫೋಟೋ ಸೆಷನ್, ಟೆಂಟ್ ಒಳಗಿಂದ, ನಮ್ಮ ಟೆಂಟ್ ನ ಹಿಂದಿನ ತುದಿಗೆ ಹೋಗಿ ಅಲ್ಲಿಂದ ಇತ್ಯಾದಿ ಹೀಗೆ ಕ್ಯಾಮೆರಾ ಕೆಲಸ ಸಾಗಿತ್ತು.. ಅರವಿಂದ ಹಾಗೂ ಪವಿತ್ರಾ ಆಲ್ಬಮ್ ಗಳಲ್ಲಿನ ಚಿತ್ರಗಳು ಸೆರೆಹಿಡಿದಿರುವ ಪ್ರಕೃತಿಯ ಪಟಗಳು ಇನ್ನೂ ನನ್ನನ್ನು ಪಶ್ಚಿಮಘಟ್ಟದ ಹಚ್ಚಹಸುರಿನ ಪ್ರದೇಶದಲ್ಲೇ ಹಿಡಿದಿಡುತ್ತವೆ.
ತಿಂಡಿ ಆಗುತ್ತಿದ್ದಂತೆಯೇ ರವಿಯವರ ಕ್ಯಾಲ್ಕುಲೇಷನ್ ಶುರುವಾಯ್ತು. ರಾತ್ರಿ ಬೆಂಗಳೂರು ತಲುಪಬೇಕೆನ್ನುವ ನಮ್ಮ ಮೊದಲ ಯೋಜನೆ ಮುಂದಿಟ್ಟುಕೊಂಡು ಏನೆಲ್ಲಾ ಸಾಧ್ಯತೆಗಳಿವೆ ನಮ್ಮ ಮುಂದೆ ಎಂದು ಯೋಚಿಸುತ್ತಾ, ನಮ್ಮಲ್ಲಿದ್ದ ನೀರು ಇತ್ಯಾದಿಗಳ ಆಡಿಟಿಂಗ್ ಮಾಡಿ ಸರಿ ನಾವಿನ್ನು ಕೆಳಗೆ ಇಳಿಯುವ ಎಂದಾಗ ಮನ ಹಪಹಪಿಸುತ್ತಿತ್ತು.. ಹಲವಾರು ಬಾರಿ ಹತ್ತಬಹುದು, ಬೇಗ ಹೋಗಿ ಬಂದೇ ಬಿಡಬಹುದು ಎಂದರೂ, ನೀರು ಇತ್ಯಾದಿ ಎಂದು, ಸಮಯದ ಮುಳ್ಳುಗಳ ತೋರಿಸಿ ಅವುಗಳೊಡನೆ ಇಂದು ಮತ್ತೆ ಯುದ್ದ ಸಾಧ್ಯವಿಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಿ.. ಚಾರಣದ ಕೊನೆ ಹಾಡಲು ಬಯಸಿದರು… ಮನಸ್ಸು ಕೊನೆಗೂ ಅಲ್ಲಿಂದ ವಾಪಸ್ ಹೊರಡಲು ಸಿದ್ದವಾಗಲೇ ಬೇಕಾಯಿತು…
ನಮ್ಮ ತಂಡ
ಚಾರಣ, ಅದರ ಸಫಲತೆ ನಾವೆಂದು ಕೊಂಡ ಘಟ್ಟವನ್ನು ತಲುಪಿದಾಗ ಮಾತ್ರವೇನಲ್ಲ.. ಅಲ್ಲಿಯವರೆಗೂ ನಾವೊಂದು ಬಗೆಯ ಹೊಸ ಅನುಭವವನ್ನು ಪಡೆದಿದ್ದವು. ಕಳೆದು ಹೋಗುವುದು, ಹುಡುಕಾಟ, ಕಾಡ ದಾರಿ, ಬೆಳಕಿಲ್ಲದ ರಾತ್ರಿಯಲ್ಲಿ ಮಿಂಚು ಹುಳ ಮಿನುಗಿದ್ದು, ಆ ಬ್ರಹ್ಮಾಂಡದ ಅಗಾಧ ನಕ್ಷತ್ರಗಳ ನಗರದ ಬೆಳಕಿನ ತೊಂದರೆಯಿಲ್ಲದೆ ನೋಡುವ ಭಾಗ್ಯ, ಚಳಿಯಿಂದ ನಡುಗುವಾಗ, ಗದ್ದಲವಾಗಿ ಎಚ್ಚರಗೊಂಡರೂ ನನ್ನ ಸ್ಥಿತಿ ನೋಡಿ ಬೆಚ್ಚಗಿನ ಹಾಸುಗಳನ್ನ ಹೊದಿಸಿದ್ದ ಗೆಳೆಯರ ಸಾಮೀಪ್ಯದಲ್ಲಿ ಅದೇನೋ ಹೊಸ ಧೈರ್ಯ, ಮತ್ತೊಂದಿಷ್ಟು ದಿನ ಇಲ್ಲೇ ಹೀಗೇ ಇದ್ದು ಬಿಡಬಹುದೆಂಬ ಹುಚ್ಚು ಬಂಡತನ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಪಟ್ಟಿ ತಯಾರಾಗುತ್ತಾ ಹೋಗುತ್ತದೆ. ಮುಂದಿನ ಚಾರಣಕ್ಕೆ ಸಿದ್ದತೆಯಂತೆ ಈಗಲೆ ಒಂದು ಚೆಕ್ ಲಿಸ್ಟ ನಮ್ಮ ಮುಂದೆ ದುತ್ ಎಂದು ಎರಗುತ್ತದೆ.
ಟೆಂಟ್ ಬಿಚ್ಚಿ, ಮಡಿಚಿ ಮತ್ತೆ ಎಲ್ಲ ಬ್ಯಾಗ್ ಗಳನ್ನು ಜೋಡಿಸಿ ಕೊಂಡು, ಪೇಪರ್, ಪ್ಲಾಸ್ಟಿಕ್ ಬಾಟಲಿ, ಕವರ್ ಇತ್ಯಾದಿಗಳನ್ನೆಲ್ಲಾ ಮತ್ತೊಂದೆರಡು ದೊಡ್ಡ ಕವರ್ ಗಳಿಗೆ ತುಂಬಿಕೊಂಡು, ಬೆಂಕಿ ನಂದಿದೆಯೇ ನೋಡಿಕೊಂಡು ಮತ್ತೊಮ್ಮೆ ಅಲ್ಲಿನ ಸ್ವಚ್ಚಂದಗಾಳಿಯನ್ನು ಹೀರಿ ಹೊರಟು ನಿಂತೆವು. ಪ್ಲಾಸ್ಟಿಕ್ ಪೇಪರ್, ಬಾಟಲಿಗಳು, ಅಲ್ಲಿ ಹಚ್ಚಿದ್ದ ಬೆಂಕಿ ಇತ್ಯಾದಿಗಳ ಬಗ್ಗೆ ರವಿ ಮತ್ತು ಅರವಿಂದ ತೋರಿದ ಕಾಳಜಿ ಬಗ್ಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು. ನಾವು ಇದೇ ರೀತಿ ಎಲ್ಲೆಡೆಯೂ, ಎಲ್ಲರೂ ಯೋಚಿಸಿದಲ್ಲಿ ನಮ್ಮ ಪರಿಸರ ಸುಂದರವಾಗಿಯೇ ಇರುವುದಲ್ಲವೇ? ನಾವೇಕೆ ಇದನ್ನು ಚಿಂತಿಸುವುದಿಲ್ಲ ಎಂದೆಂದಿತು ನನ್ನ ಮನ.
ಅದೇ ದಾರಿಯಲ್ಲಿ ಹಿಂತಿರುಗಿ, ಕವಲುದಾರಿಗೆ ಮತ್ತೆ ಬಂದು ನಿಂತೆವು. ಅಲ್ಲಿ ಕಟ್ಟಿದ್ದ ಸಣ್ಣ ಕಲ್ಲಿನ ಗೂಡು ಅಲ್ಲೇ ಇದ್ದದ್ದನ್ನು ಕಂಡು ಕೊಂಚ ನಿಂತು ಬಂದ ದಾರಿಯಲ್ಲಿ ವಾಪಸ್ ಹೋಗುವುದರ ಬದಲು ಅದರ ವಿರುದ್ದದ ದಿಕ್ಕಿನ ಕಡೆ ನೆಡೆಯುವ ಆಲೋಚನೆ ಮಾಡಿದೆವು. ಮತ್ತೊಮ್ಮೆ ನಾವು ಮೊದಲು ನೋಡಿದ ವ್ಯೂವ್ ಪಾಯಿಂಟ್ ನಿಂದ ಸಾಗಿ.. ಆ ದಾರಿ ಕೆಳಗೆ ಸಾಗುತ್ತಿದೆ ಎಂದು ನೋಡುತ್ತಲೇ ಮುಂದೆ ಸಾಗಿದೆವು. ಇಲ್ಲೆಲ್ಲೂ ನೀರು, ಜಿಗಣೆಯ ಕುರುವಿಲ್ಲದ ಸಾಮಾನ್ಯ ದಾರಿ ಇದ್ದದ್ದು ಕಂಡು ಬಂತು. ಕೆಳಗೆ ಇಳಿಯುತ್ತಾ, ಇಳಿಯುತ್ತಾ ಮತ್ತೊಂದು ಕವಲು ದಾರಿ. ಮತ್ತೊಮ್ಮೆ ಅದರಲ್ಲೂ ಒಂದು ಆಯ್ಕೆ, ಮುಂದೆ ಬರುತ್ತಿದ್ದಂತೆ ಕಂಡಿದ್ದು ಕೆರೆ ಇರುವ, ಅಲ್ಲೇ ಪಕ್ಕದಲ್ಲಿ ಗುಡಿಯೊಂದಿರುವ ಪ್ರದೇಶ. ಅಲ್ಲೇ ನಿಂತು ಕೆರೆಯ ನೀರಬಳಿ ಸಾರಿ. ಗುಡಿಯೊಳಗೆ ಯಾರೂ ಇರುವುದಿಲ್ಲವೇನೋ, ಹಬ್ಬಕ್ಕೆ ಮಾತ್ರ ಇಲ್ಲಿ ಜನ ಸೇರಬಹುದೆಂದೂ ಮಾತನಾಡುತ್ತ ಮುಂದೆ ಸಾಗಿದೆವು. ಅದೇ ಸಮಯದಲ್ಲಿ ರವಿ ಭೂತಾರಾಧನೆ ಇತ್ಯಾದಿ ಆಚರಣೆಗಳ ಬಗ್ಗೆ ಒಂದೆರಡು ವಿಷಯಗಳನ್ನು ಅರವಿಂದನೊಡನೆ ಹಂಚಿಕೊಳ್ಳಲು ಶುರು ಮಾಡಿದರು. ಅಲ್ಲಿ ಶುರುವಾಯ್ತೊಂದು ಪಂದ್ಯ.. ಆ ದೇವಾಲಯದ ಮೆಟ್ಟಿಲುಗಳನ್ನು ಮೊದಲು ಏರುವವರಾರು?
ಭಾರದ ಬ್ಯಾಗನ್ನು ಹೊತ್ತಿದ್ದರೂ, ಎಲ್ಲರಿಗೂ ಮೊದಲು ಮೇಲೇರುವಾಸೆ. ಆದರೆ ಈ ಪಂದ್ಯಕ್ಕೆ ಮುಂದೆ ಬಂದವರು ನಾನು, ಪವಿತ್ರ ಮತ್ತೆ ಅರವಿಂದ ಮಾತ್ರ…. ಅವರನ್ನೆಲ್ಲಾ ಹಿಂದಿಕ್ಕಿ ಮುಂದೆ ಓಡಿದ ನಾನು ಅವರನ್ನೆಲ್ಲಾ ಮತ್ತೆ ಮತ್ತೆ ಬೇಗ ಬರಲು ಹೇಳುವಷ್ಟರಲ್ಲಿ, ದೇವಾಲಯದ ಒಳಗಿಂದ ಒಂದಿಬ್ಬರು ಮಾತನಾಡುವ ಧ್ವನಿಯನ್ನು ನಾನು ಮತ್ತು ಅರವಿಂದ ಕೇಳಿದೆವು. ಎಲ್ಲರೂ ಒಟ್ಟಿಗೆ ಒಳಗೆ ಹೋಗಿ ದೇವರ ದರ್ಶನ ಮಾಡಿದೆವು. ಇದು ಕಾಳ ಭೈರವನ ದೇವಾಲಯ. ೯೦೦ ವರ್ಷಗಳೆಂದು ನಮಗೆ ದೇವರ ಪ್ರಸಾದ ನೀಡಿದ ಅಲ್ಲಿನ ಅರ್ಚಕರು ಹೇಳಿದರು.
ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಹೊತ್ತು ತಂಗಿದ್ದು, ಅಲ್ಲಿಂದ ಸುಂಕಸಾಲೆಗೆ ಹೋಗುವ ದಾರಿ ಕೇಳಿದಾಗ, ಅಲ್ಲಿಗೆ ೨ ಕಿ.ಮಿ ಕಡಿಮೆಯಾಗುವ ಕಡಿದಾದ ಮಾರ್ಗವೊಂದನ್ನು ಅಲ್ಲೇ ಇದ್ದವರೊಬ್ಬರು ತಿಳಿಸಿ ನಮ್ಮನ್ನು ಆ ರಸ್ತೆ ಶುರುವಾಗುವವರೆಗೆ ಬಿಟ್ಟು ನೆಡೆದರು.
ನಾವು ದೇವಸ್ಥಾನದಲ್ಲಿದ್ದ ಸಮಯದಲ್ಲಿ ಅಲ್ಲಿವರೆಗೆ ಬಂದ ಜೀಪ್ ಒಂದು ನಮಗೆ ಆಶ್ಚರ್ಯ ತಂದಿತ್ತು. ಅದು “ಘಾಟಿ ಕಲ್ಲು” ತಂಡದವರದ್ದಾಗಿದ್ದು, ಬಲ್ಲಾಳರಾಯನ ದುರ್ಗ ಇತ್ಯಾದಿಗೆ ಜನರನ್ನು ಚಾರಣಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು. ನಾವು ಅಲ್ಲಿಗೆ ಹೋಗಲಿಕ್ಕಾಗದ್ದು ಇತ್ಯಾದಿ ತಿಳಿಸಿ, ಅವರ ವಿಳಾಸ ಪಡೆದು, ಅಲ್ಲಿನ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕಿದೆವು. ಮುಂದೆ ಬರುವಾಗ ಜೀಪ್ ಓಡಿಸಿಕೊಂಡು ಬರುವುದೆಂದು ರವಿಗೆ ಈಗಾಗಲೇ ೨-೩ ಬಾರಿ ಹೇಳಿದ್ದೆ.
ನಮ್ಮ ಕೆಳಗಿಳಿಯುವ ಆಟ ಸಾಗಿತ್ತು. ಕಲ್ಲುಗಳೇ ಹೆಚ್ಚಿದ್ದ ಆ ರಸ್ತೆ ಬೇಗ ಬೇಗ ನಮ್ಮನ್ನು ಕೆಳಗೆ ಕರೆದೊಯ್ಯುವ ಸೂಚನೆಯನ್ನೂ ತೋರಿತ್ತು.. ಮುಂದೆ ಅಲ್ಲಲ್ಲಿ ಕೇಳ ಸಿಕ್ಕ ಹಕ್ಕಿಗಳ ಹಾಡು ಕೇಳುತ್ತಾ, ಹೂ, ಗಿಡ ಮರ ನೋಡುತ್ತಾ ಮುಂದೆ ಸಾಗಿದೆವು. ಒಂದರ್ಧ ಘಂಟೆ ಆಗಿರಬಹುದು ನಂತರ ಒಂದಿಷ್ಟು ಮನೆಗಳು ಅಲ್ಲಲ್ಲಿ ಕಂಡು ಬಂದವು., ಅಲ್ಲಿ ಸಿಕ್ಕ ಹುಡುಗರನ್ನು ಮಾತಾಡಿಸುತ್ತಾ, ಮುಂದೆ ನೆಡೆಯುವಾಗ ಕಾಲಿನಡಿಯ ಒಂದು ಕಲ್ಲು ಜಾರಿ ನನ್ನ ಬಲಗೈ ಸರಿಯಾಗಿ ನೋವಾಯಿತು.. ಇಂದೇ ನನಗೆ ಆ ನೋವಿ ಮಾಯಾವಾಗಿರುವಂತನಿಸುತ್ತಿರುವುದು. ಅಬ್ಬಾ… ರೆಲಿ ಸ್ಪ್ರೇ ಇತ್ಯಾದಿಗಳು ಏನೂ ಪರಿಣಾಮ ಬೀರದಿದ್ದರೂ, ಅವುಗಳನ್ನು ಸೋಕಿಸಿದಾಗ ಕೊಂಚ ನೋವು ಕಡಿಮೆ ಆದಂತನಿಸಿತ್ತಷ್ಟೇ.
ಮಧ್ಯಾನ್ಹ ೧ರ ಹೊತ್ತಿಗೆ ಅಜ್ಜಿ ಮನೆಗೆ ಸೇರಿದ ನಾವು, ಅಜ್ಜಿಗೆ ನಮ್ಮ ಚಾರಣದ ಬಗ್ಗೆ ಹೇಳಿ, ಅವರೊಡನೆ ಸ್ವಲ್ಪ ಮಾತನಾಡಿ ನೀರು ಕುಡಿದು ಬೆಂಗಳೂರಿನ ಕಡೆಗೆ ಹೊರಡಲು ತಯಾರಿ ನೆಡೆಸಿದೆವು. ಹೋಗುವಾಗ ಹೇಮಾವತಿ ನದಿಯ ಉಗಮ ಸ್ಥಾನ ನೋಡುವ ಯೋಜನೆ ಕೂಡ ಇತ್ತು. ಅಜ್ಜಿಗೆ ಮತ್ತು ಅವರ ಸೊಸೆಗೆ ವಿಧಾಯ ಹೇಳಿ ನಮ್ಮ ಲಗ್ಗೇಜ್ ಗಾಡಿಗೆ ಹೇರಿ ಹೊರಟ ನಾವು ಮತ್ತೆ ನಿಂತದ್ದು ಕೆಳಗೂರು ಕಾಫಿ ಎಸ್ಟೇಟ್ ನ ಅಂಗಡಿಯ ಬಳಿಯಲ್ಲೇ. ಅಲ್ಲಿ ಬಂದು ಒಂದಿಷ್ಟು ತಾಜಾ ಕಾಫಿ, ಟೀ ಇತ್ಯಾದಿ ಕುಡಿದು ಅಲ್ಲೇ ತಯಾರಿಸಿ ಪ್ಯಾಕ್ ಮಾಡಿದ್ದ ಪುಡಿ, ಮಸಾಲೆ, ನೆಲ್ಲಿಯ ಸಿಹಿ ತಿಂಡಿ ಇತ್ಯಾದಿ ಕೊಂಡು, ಇಡ್ಲಿ ತಿಂದು ಹೊರಡುವಾಗ ಸುಸ್ತಾಗಿ ರಾಜೀವ್ ಗೆ ನನ್ನ ಕಾರ್ ಕೀ ಕೊಟ್ಟಿಯಾಗಿತ್ತು. ಅಲ್ಲಿಂದ ನನಗೆ ಮತ್ತೆ ಸ್ವಲ್ಪ ವಿಶ್ರಾಂತಿ.. ಸಂಜೆ ೮-೯ ಘಂಟೆಗೆ ಬೆಂಗಳೂರು ತಲುಪಲೇ ಬೇಕೆಂದು ನಿರ್ಧರಿಸಿದ್ದ ರಾಜೀವ್ ಬರ್ಜರಿಯಾಗಿ ಕಾರ್ ಚಲಾಯಿಸಲಿಕ್ಕೆ ಶುರು ಮಾಡಿದರು.
ರಸ್ತೆ ಮಧ್ಯದಲ್ಲಿ ಮತ್ತೆ ಮಾತು ಶುರು, ಚಾರಣ ಹೇಗಿತ್ತು ಇಂದ ಶುರು ಮಾಡಿ, ಮತ್ತೊಮ್ಮೆ ನನ್ನನ್ನು ಬಲ್ಲಾಳರಾಯನ ದುರ್ಗ ಮತ್ತು ಬಂಡಾಜೆ ಜಲಾಶಯಕ್ಕೆ ಕರೆದು ಕೊಂಡೇಬರಬೇಕು, ನಾವದನ್ನೆಲ್ಲಾ ನೋಡಲೇ ಬೇಕು ಹಾಗೂ ಇದೇ ತಂಡ ಬರಬೇಕು ಎಂದು ವಚನ ತೆಗೆದು ಕೊಂಡ ಪವಿತ್ರಾ, ಎಲ್ಲರ ಬಾಯಿಂದ ಒಂದಿಷ್ಟು ಮಾತುಗಳನ್ನು ಎಳೆಯದೆ ಬಿಡಲಿಲ್ಲ. ಮಾತು ಸಾಗುತ್ತಲೇ ಇತ್ತು.. ನಡುವೊಮ್ಮೆ ಕಾಫಿಗೆ ನಿಲ್ಲಿಸಿ, ಮತ್ತೆ ಕಾರ್ ನನ್ನ ಸುಪರ್ದಿಗೆ ತೆಗೆದು ಕೊಂಡು ಅದೇ ವೇಗದಲ್ಲಿ ಬೆಂಗಳೂರಿಗೆ ದೌಡಾಯಿಸಿದರೂ ನಮ್ಮ ರಸ್ತೆ ಅಭಿವೃದ್ದಿ ಪ್ರಾಧಿಕಾರದ ಕೃಪೆಗೆ ಮತ್ತೆ ಪಾತ್ರರಾಗಿ, ತುಮಕೂರಿನ ಬೋರ್ಡ್ ಕಂಡಾಗಲೇ ನಾನು ಮತ್ತು ರವಿ ರಸ್ತೆಯ ಬಗ್ಗೆ ಮತ್ತೊಮ್ಮೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದು..
ಅಂತೂ ಇಂತೂ ಚಾರಣ ಕೊನೆಯ ಹಂತಕ್ಕೆ ಬಂದಿತ್ತು.. ಎಲ್ಲರನ್ನೂ ಮನೆಗೆ ಸೇರಿಸಿ ನಾನು ಮನೆ ಸೇರಿದ್ದು ೧.೩೦ರ ಬೆಳಗ್ಗೆ…. ನಾನಿನ್ನೂ ಅಲ್ಲೇ ಇದ್ದೇನೆಯೇ? ಡ್ರೈವ್ ಮಾಡ್ತಾ…..
Comments
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by ಗಣೇಶ
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by ASHOKKUMAR
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by anil.ramesh
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by anil.ramesh
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by ASHOKKUMAR
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ
In reply to ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ by ASHOKKUMAR
ಉ: ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ